ಟ್ರಂಪ್ ಕುಟುಂಬದ ಮಾಹಿತಿ ಪತ್ರಕರ್ತರಿಗೆ ನೀಡಿದ ಆಪ್ತ ಕಾರ್ಯದರ್ಶಿ ರಾಜೀನಾಮೆ

Update: 2019-08-30 15:52 GMT

 ವಾಶಿಂಗ್ಟನ್, ಆ. 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕುಟುಂಬದ ಕುರಿತ ಮಾಹಿತಿಯನ್ನು ಹೊರಗೆ ಬಿಟ್ಟುಕೊಟ್ಟ ಬಳಿಕ, ಅವರ ಆಪ್ತ ಕಾರ್ಯದರ್ಶಿ ಮ್ಯಾಡಲೀನ್ ವೆಸ್ಟರ್‌ಹೌಟ್ ಗುರುವಾರ ರಾಜೀನಾಮೆ ನೀಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ಅಧ್ಯಕ್ಷರು ರಜೆಯಲ್ಲಿ ನ್ಯೂಜರ್ಸಿಯಲ್ಲಿದ್ದಾಗ, ವೆಸ್ಟರ್‌ಹೌಟ್ ಪತ್ರಕರ್ತರೊಂದಿಗೆ ಅಧ್ಯಕ್ಷರ ಕುಟುಂಬ ಮತ್ತು ಶ್ವೇತಭವನದ ಸಂಗತಿಗಳ ಬಗ್ಗೆ ಆಫ್-ದ-ರೆಕಾರ್ಡ್ (ಅನಧಿಕೃತವಾಗಿ) ಮಾತನಾಡಿದ್ದರು ಎನ್ನಲಾಗಿದೆ. ಇದು ಅಧ್ಯಕ್ಷರಿಗೆ ಗೊತ್ತಾದ ಬಳಿಕ, ವೆಸ್ಟರ್‌ಹೌಟ್ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಬಳಿಕ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಯ ನಿರ್ಗಮನದ ಬಗ್ಗೆ ಸಿಎನ್‌ಎನ್ ಮತ್ತು ಪೊಲಿಟಿಕೊ ಸೇರಿದಂತೆ ಇತರ ಮಾಧ್ಯಮಗಳೂ ವರದಿ ಮಾಡಿವೆ.

ಪತ್ರಕರ್ತರೊಂದಿಗೆ ತಾನು ಮಾತನಾಡುತ್ತಿರುವುದು ಅನಧಿಕೃತ ಎನ್ನುವುದನ್ನು ಆಗ ವೆಸ್ಟರ್‌ಹೌಟ್ ಸ್ಪಷ್ಟಪಡಿಸಿರಲಿಲ್ಲ ಹಾಗೂ ಓರ್ವ ಪತ್ರಕರ್ತ ಈ ಮಾತುಕತೆಯನ್ನು ಶ್ವೇತಭವನದ ಗಮನಕ್ಕೆ ತಂದಿದ್ದಾರೆ ಎಂದು ಸಿಎನ್‌ಎನ್ ಹೇಳಿದೆ.

ವೆಸ್ಟರ್‌ಹೌಟ್‌ರ ಕಚೇರಿ ಶ್ವೇತಭವನದ ಓವಲ್ ಕಚೇರಿಯ ಎದುರುಗಡೆ ಇತ್ತು. ಅವರನ್ನು ಅಮೆರಿಕದ ಮಾಧ್ಯಮಗಳು ಟ್ರಂಪ್‌ರ ‘ಗೇಟ್‌ಕೀಪರ್’ ಎಂಬುದಾಗಿ ಬಣ್ಣಿಸಿದ್ದವು.

ಟ್ರಂಪ್ ಅಧ್ಯಕ್ಷರಾದಂದಿನಿಂದಲೂ ಮ್ಯಾಡಲೀನ್ ವೆಸ್ಟರ್‌ಹೌಟ್, ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News