ಅಪೂರ್ವವಾದ ಜಾನಪದ ಅನುಭವಗಳು

Update: 2019-09-07 18:27 GMT

ಇದರಲ್ಲಿ ಮೂರು ಕಥನಗಳಿವೆ. ಈ ಮೂರು ಕಥನಗಳ ಮೂಲ ಸೆಲೆ ಇರುವುದು ಜನಪದದಲ್ಲಿ ಹಾಗೂ ಶಿಷ್ಟ ಸಂವೇದನೆಯಲ್ಲಿ. ಈ ಮೂರು ಧಾರೆಗಳಲ್ಲಿ, ಮೊದಲನೆಯದು ಕ್ವಚಿತ್ತಾಗಿ ಲೇಖಕರ ಜೀವನ ವಿವರಗಳನ್ನೊಳಗೊಂಡ ಕಥನವಾದರೆ, ಉಳಿದೆರಡು ಜಾನಪದ ಹಾಡುಗಾರ್ತಿ ಸಿರಿಯಜ್ಜಿಯದು ಹಾಗೂ ಚಲಿಸುವ ವಿಸ್ಮಯ ಚೇತನದಂತಿದ್ದ ಬೆಳಗೆರೆ ಕೃಷ್ಣ ಶಾಸ್ತ್ರಿಗಳದು, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳದು. ಈ ಮೂರು ಧಾರೆಗಳಲ್ಲೂ ಜಾನಪದವಿದೆ, ಶಾಸ್ತ್ರೀಯ ಅಧ್ಯಯನದ ಆಧುನಿಕ ಆಯಾಮಗಳಾದ ಸಂಸ್ಕೃತಿ ಚಿಂತನೆ, ಮಾನವ ಶಾಸ್ತ್ರ ಮೊದಲಾದ ವೈಜ್ಞಾನಿಕ ಆಲೋಚನಾಪರವಾದ ಒಳನೋಟಗಳಿವೆ. ಎಂದೇ ಇದು ಜನಪದದೊಂದಿಗೆ ಹಲವು ಇತರ ಆಸಕ್ತಿಗಳನ್ನು ತಣಿಸುವಂಥ, ಪ್ರಚೋದಿಸುವಂಥ ಒಂದು ಅಪೂರ್ವ ಕೃತಿಯಾಗಿದೆ.



ಕನ್ನಡ ಜನಪದ ಸಾಹಿತ್ಯ ಶ್ರೀಮಂತವಾದದ್ದು, ವೈವಿಧ್ಯದಿಂದ ತುಂಬಿದ್ದು. ಶಿಷ್ಟ ಸಾಹಿತ್ಯದ ಮೇಲೆ ಜನಪದ ಸಾಹಿತ್ಯದ ಪ್ರಭಾವವೂ ದೊಡ್ಡದು. ನವೋದಯದಿಂದ ಇಲ್ಲಿಯವರೆಗಿನ ಕನ್ನಡದ ಎಲ್ಲ ಸಾಹಿತ್ಯ ಮಾರ್ಗಗಳಲ್ಲೂ ಈ ಪ್ರಭಾವವನ್ನು ಗುರುತಿಸಬಹುದಾಗಿದೆ. ಜಾನಪದ ಕ್ಷೇತ್ರಕಾರ್ಯದಲ್ಲಿ ತನ್ಮಯವಾಗಿ ತೊಡಗಿಸಿಕೊಂಡು ಅಪೂರ್ವವಾದಂಥ ಜನಪದ ಕೃತಿಗಳನ್ನು ನೀಡಿ, ಸ್ವತ: ಕಾವ್ಯ, ಕಥೆ, ನಾಟಕ ಮೊದಲಾದ ಪ್ರಕಾರಗಳಲ್ಲಿ ಸೃಜನೀಯವಾಗಿ ಗಣನೀಯ ಸಾಧನೆ ಮಾಡಿದಂಥ ಸೃಜನಶೀಲ ಲೇಖಕರ ವಿರಳ ವರ್ಗವೂ ಉಂಟು. ಇಂಥ ವಿರಳ ಲೇಖಕರ ಸಾಲಿನಲ್ಲಿ ಎದ್ದುಕಾಣುವ ಲೇಖಕರು ಕೃಷ್ಣ ಮೂರ್ತಿ ಹನೂರು. ‘ಕಾಲುದಾರಿ ಕಥನಗಳು’ ಅವರ ಇತ್ತೀಚಿನ ಒಂದು ವಿಶಿಷ್ಟ ಕೃತಿ.ಜಾನಪದ ಕ್ಷೇತ್ರಕಾರ್ಯದ ಅನುಭವ ಕಥನವಾದ ಇದು ಜನಪದ ಮತ್ತು ಶಿಷ್ಟದ ಮಧುರ ಸಂಯೋಗದಿಂದಾಗಿ ಹಲವು ದೃಷ್ಟಿಗಳಿಂದ ಅಪೂರ್ವ ಕೃತಿಯಾಗಿದೆ.

 ಹನೂರು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಒಂದು ಹಳ್ಳಿ. ಇಲ್ಲಿ 1950ರ ಆಗಸ್ಟ್ 28ರಂದು ಹುಟ್ಟಿದ ಕೃಷ್ಣಮೂರ್ತಿಯವರ ಹೆಸರಿಗೆ ಹುಟ್ಟಿದೂರು ಪ್ರತ್ಯಯವಾಗಿ ಸೇರಿಕೊಂಡು ಜಾನಪದ ಸೊಗಡು ಅವರೊಂದಿಗೆ ಅವಿನಾಭಾವವಾಗಿ ಬೆಳೆದುಕೊಂಡು ಬಂದಿದೆ. ಶಾಲೆಗೆ ಚಕ್ಕರ್ ಹೊಡೆದು ದನಗಾಹಿಗಳೊಂದಿಗೆ ಅವರ ಕಾಡಿನ ಕಥೆಗಳನ್ನು ಕೇಳುತ್ತಾ, ಜನಪದ ಕಥೆ-ಪ್ರಸಂಗಗಳನ್ನು ಹೇಳುತ್ತಿದ್ದ ಶಿವನಲಿಂಗಪ್ಪಮೇಷ್ಟ್ರ ತರಗತಿಗಳಿಗೆ ತಪ್ಪದೆ ಹಾಜರಾಗುತ್ತಾ, ಕೊಳ್ಳೇಗಾಲದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು ಪಾಸು ಮಾಡಿದ ಕೃಷ್ಣ ಮೂರ್ತಿಯವರ ಮುಂದಿನ ವಿದ್ಯಾಭ್ಯಾಸವೆಲ್ಲ ನಗರ ಜನಪದದ ಟಾರುಭೂಮಿ ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಚಳ್ಳಕೆರೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಅಧ್ಯಾಪನ ವೃತ್ತಿ ಪ್ರಾರಂಭಿಸಿದರು. 1973ರಿಂದ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ರಾಜ್ಯದ ವಿವಿಧೆಡೆ ಕಾಲೇಜುಗಳಲ್ಲಿ ಬೋಧಿಸುತ್ತಾ 1999ರಲ್ಲಿ ಅಧ್ಯಾಪನ ವೃತ್ತಿಯ ಕೊನೆಯ ನಿಲ್ದಾಣವಾದ ಮಾನಸ ಗಂಗೋತ್ರಿ ತಲುಪಿದರು.

2012ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ನಿವೃತ್ತರಾದ ಕೃಷ್ಣ ಮೂರ್ತಿ ಹನೂರು ನಲವತ್ತಕ್ಕೂ ಹೆಚ್ಚು ಕೃತಿಗಳ ಕರ್ತೃ. ಇದರಲ್ಲಿ ಹದಿನೈದು ಕೃತಿಗಳು ಜಾನಪದ ಕಥೆ-ಕಾವ್ಯ-ಬುಡಕಟ್ಟು ಸಂಸ್ಕೃತಿ ಸಂಶೋಧನೆ. ಉಳಿದವು ಅವರ ಸೃಜನಶೀಲತೆಯ ಹೆಗ್ಗುರುತಾದ ಕಥೆ-ಕಾದಂಬರಿಗಳು, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆಗಳು. ‘ಗೆಂಡಗಯ್ಯ ಒಳವು’, ರಾಮಚಂದ್ರದೇವರ ಕೃತಿಗಳನ್ನು ಕುರಿತ ‘ದೇವ ಸಾಹಿತ್ಯ’, ಗಿರೀಶ್ ಕಾರ್ನಾಡರ ನಾಟಕಗಳು ವಿಮರ್ಶಾ ಕೃತಿಗಳು. ಟಿಪ್ಪು ಸುಲ್ತಾನ್ ಮತ್ತು ಅವನ ಕಾಲದ ಬದುಕನ್ನು, ವಿಶೇಷವಾಗಿ ಸೈನಿಕ ಜೀವನದ ವೃತ್ತಾಂತವನ್ನು ನಿರೂಪಿಸುವ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಅವರ ಇತ್ತೀಚಿನ ಕಾದಂಬರಿ. ಜಾನಪದ ಸಂಗ್ರಾಹಕರಾಗಿ, ಸಂಶೋಧಕ ರಾಗಿ ಹಾಗೂ ಕತೆ-ಕಾದಂಬರಿಗಳಿಂದ ಸೃಜನಶೀಲ ಲೇಖಕರಾಗಿ ಖ್ಯಾತರಾಗಿರುವ ಕೃಷ್ಣ ಮೂರ್ತಿ ಹನೂರರ ‘ಕಾಲುದಾರಿಯ ಕಥನಗಳು’ ಜಾನಪದ ಮತ್ತು ಶಿಷ್ಟ ಮಾರ್ಗಗಳ ಒಂದು ಮಧುರ ಸಂಯೋಗವೆಂದು ಆಗಲೇ ಹೇಳಿರುವುದು ಸರಿಯಷ್ಟೆ. ಇದರಲ್ಲಿ ಮೂರು ಕಥನಗಳಿವೆ. ಈ ಮೂರು ಕಥನಗಳ ಮೂಲ ಸೆಲೆ ಇರುವುದು ಜನಪದದಲ್ಲಿ ಹಾಗೂ ಶಿಷ್ಟ ಸಂವೇದನೆಯಲ್ಲಿ. ಈ ಮೂರು ಧಾರೆಗಳಲ್ಲಿ, ಮೊದಲನೆಯದು ಕ್ವಚಿತ್ತಾಗಿ ಲೇಖಕರ ಜೀವನ ವಿವರಗಳನ್ನೊಳಗೊಂಡ ಕಥನವಾದರೆ, ಉಳಿದೆರಡು ಜಾನಪದ ಹಾಡುಗಾರ್ತಿ ಸಿರಿಯಜ್ಜಿಯದು ಹಾಗೂ ಚಲಿಸುವ ವಿಸ್ಮಯ ಚೇತನದಂತಿದ್ದ ಬೆಳಗೆರೆ ಕೃಷ್ಣ ಶಾಸ್ತ್ರಿಗಳದು, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳದು.

ಈ ಮೂರು ಧಾರೆಗಳಲ್ಲೂ ಜಾನಪದವಿದೆ, ಶಾಸ್ತ್ರೀಯ ಅಧ್ಯಯನದ ಆಧುನಿಕ ಆಯಾಮಗಳಾದ ಸಂಸ್ಕೃತಿ ಚಿಂತನೆ, ಮಾನವ ಶಾಸ್ತ್ರ ಮೊದಲಾದ ವೈಜ್ಞಾನಿಕ ಆಲೋಚನಾಪರವಾದ ಒಳನೋಟಗಳಿವೆ. ಎಂದೇ ಇದು ಜನಪದದೊಂದಿಗೆ ಹಲವು ಇತರ ಆಸಕ್ತಿಗಳನ್ನು ತಣಿಸುವಂಥ, ಪ್ರಚೋದಿಸುವಂಥ ಒಂದು ಅಪೂರ್ವ ಕೃತಿಯಾಗಿದೆ. ಮೊದಲ ಕಥನದಲ್ಲಿ ಲೇಖಕರ ಬಾಲ್ಯ ಮತ್ತು ಪರಿಸರದ ವಿವರಗಳಿವೆ. ವಿಶೇಷವಾಗಿ ಈ ಪರಿಸರದಲ್ಲಿ ರಿಂಗಣಗುಣಿವ ಕಂಸಾಳೆ ಗುಡ್ಡರ ಹಾಡುಗಬ್ಬಗಳು, ಜಾನಪದ ಕಥೆಗಳು, ಗೋವಿನಹಾಡು, ಭಾರತ ಕಥಾ ಮಂಜರಿ ಇತ್ಯಾದಿಗಳು ಜನ್ಮತಃ ಕೃಷ್ಣ ಮೂರ್ತಿಯವರ ಸುಪ್ತಚೇತನದಲ್ಲಿ ಅಡಗಿದ್ದು, ಮುಂದೆ ಬೆಳೆದ ಪರಿಸರ ಹಾಗೂ ಶಿವಲಿಂಗಪ್ಪಮೇಷ್ಟ್ರ ಕಥೆಗಳಿಂದಾಗಿ ದಾಂಗುಡಿ ಇಟ್ಟು ಅವರ ಜನಪದ ಸಾಹಿತ್ಯದ ಒಲವಿನ ದೊಡ್ಡ ಶಕ್ತಿಯಾಗಿ ಪ್ರಕಟಗೊಂಡಿರುವುದನ್ನು ಅವರ ಕೃತಿಗಳ ಅಧ್ಯಯನದಿಂದ ನಾವು ಕಾಣಬಹುದಾಗಿದೆ. ವಿದ್ಯಾರ್ಥಿ ದಿನಗಳಲ್ಲಿ ಕೃಷ್ಣಮೂರ್ತಿಯವರ ಒಂದೆರಡು ಕಥೆ, ಬರಹಗಳು ಪ್ರಕಟಗೊಂಡಿದ್ದುಂಟು. ಉಪನ್ಯಾಸಕರಾಗಿ ಚಳ್ಳಕೆರೆ ತಲುಪಿದ ನಂತರ ಕೃಷ್ಣ ಮೂರ್ತಿಯವರ ಜಾನಪದ ಸಾಹಿತ್ಯಾಸಕ್ತಿ ಪೂರ್ತಿಯಾಗಿ ಗರಿಗೆದರುತ್ತದೆ. ಹಗಲು ರಾತ್ರಿ ಎನ್ನದೆ ಹಳ್ಳಿಹಳ್ಳಿ ಸುತ್ತಿ ಜಾನಪದ ಕಲಾವಿದರಿಂದ ಹಾಡಿಸುತ್ತ, ಕಥಾ ಶ್ರವಣ ಮಾಡುತ್ತಾ ಸಂಪೂರ್ಣವಾಗಿ ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ಕಥೆ, ಜಾನಪದ ಕಥೆ, ಕಾವ್ಯಗಳನ್ನು ಪ್ರಕಟಿಸುತ್ತಾರೆ. ಅವರೇ ಹೇಳಿರುವಂತೆ ಚಾಮರಾಜನಗರದ ಜಾನಪದ ಪರಿಸರ ಮುಂದೆ ಚಳ್ಳಕೆರೆಗೆ ಬಂದಾಗ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜಾನಪದ ಅಧ್ಯಯನಕ್ಕೆ ಬೆನ್ನೆಲುಬಾಗಿ ನಿಲ್ಲುತ್ತದೆ. ಚಿತ್ರದುರ್ಗ ಸೀಮೆಯಲ್ಲಿ ಕೋನಸಾಗರದ ಪಾಪನಾಯಕನ ಇನಿಯಳು ಇನಿಯನನ್ನು ಕುರಿತು ಪದಕಟ್ಟಿ ಹಾಡುತ್ತಿದ್ದ ಹಾಡನ್ನು ಕೇಳುತ್ತಾರೆ, ಆ ಕಡೆಯ ಪ್ರಸಿದ್ಧ ದೇವರಾದ ತಿಪ್ಪೇಸ್ವಾಮಿಯನ್ನು ಕುರಿತ ಕಥೆಗಳನ್ನು, ತ್ರಿಪದಿ ರೂಪದ ಹಾಡುಗಳನ್ನು ಕೇಳುತ್ತಾರೆ. ತ.ರಾ.ಸು.‘ದುರ್ಗಾಸ್ತಮಾನ’ ಬರೆದ ಹಿನ್ನೆಲೆಯನ್ನು, ಧೀರ ಮದಕರಿ ಸೆರೆಸಿಕ್ಕಿದ್ದನ್ನು ದಾಖಲಿಸಲಾಗದ ಹಿನ್ನೆಲೆಯನ್ನು ತಿಳಿಸುತ್ತಾರೆ. ಈ ಪರಿಯ ಕ್ಷೇತ್ರ ಕಾರ್ಯದ ಮಧ್ಯೆ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು, ಜನಪದ ಸಾಹಿತ್ಯದ ಸಂಪತ್ತಿನ ಗಣಿಯಾದ ಸಿರಿಯಜ್ಜಿ, ಅಸಾಧಾರಣ ಸಾಹಿತ್ಯಾಸಕ್ತಿಯ ಬಿಸಿನೀರು ಬಸಣ್ಣ ಮೊದಲಾದವರ ಪರಿಚಯವಾಗುತ್ತದೆ. ಪಂಪ, ರನ್ನರನ್ನೂ, ದೇವನೂರ ಮಹಾದೇವರನ್ನೂ ಕುರಿತು ಏಕಕಾಲಕ್ಕೆ ಮಾತಾಡುತ್ತಿದ್ದ ವ್ಯಾಪಾರಿ ಬಸಣ್ಣನವರು ‘‘ನನಗೆ ದೇವರ, ತೀರ್ಥ ಯಾತ್ರೆ, ಬಂಧು-ಬಳಗದ ಮೇಲೆ ಯಾವ ಮೋಹವೂ ಇಲ್ಲ. ನನ್ನ ಕಡೆಯ ದಿನಗಳ ಆಸೆ ಇಷ್ಟೆ...ನನಗೆ ಪ್ರಿಯರಾದ ಎಲ್ಲ ಸಾಹಿತಿಗಳನ್ನೂ ನೋಡಬೇಕು, ಮಾತನಾಡಿಸಬೇಕು’’ ಎಂದು ಕಾರು ಮಾಡಿಕೊಂಡು ಕರ್ನಾಟಕದ ಮೂಲೆಮೂಲೆ ತಿರುಗಿ ಕೊನೆಯುಸಿರೆಳೆದದ್ದು-ಇಂಥ ಕ್ಷೇತ್ರ ಪರ್ಯಟನದ ಅನುಭವಗಳ ಸಂಪದ ‘ಕಾಲುದಾರಿಯ ಕಥನಗಳು’ ಕೃಷ್ಣ ಮೂರ್ತಿಯವರ ಜನಪದ ಸಂಗ್ರಹದ ಇನ್ನೊಂದು ವೈಖರಿ.

 ‘ಕಾಲು ದಾರಿಯ ಕಥನಗಳು’ ಕಟ್ಟುಕಥೆಯಲ್ಲ, ಅದೊಂದು ಜನಪದ ಪಯಣ. ಎಂದೇ ಇಲ್ಲಿ ಓದುಗರಿಗೆ ಮುಖಾಮುಖಿಯಾಗುವವರೆಲ್ಲರೂ ನಿಜಜೀವನದಿದಂದ ಎದ್ದುಬಂದವರು. ಸಿರಿಯಜ್ಜಿ, ಚಂದ್ರಶೇಖರ ಶಾಸ್ತ್ರಿಗಳು, ಕೃಷ್ಣ ಶಾಸ್ತ್ರಿಗಳು, ಗಿರಿಯಪ್ಪ, ದಾನಮ್ಮ, ಎ.ಕೆ.ರಾಮಾನುಜನ್, ಶೇಷ ಶಾಸ್ತ್ರಿ ಇತ್ಯಾದಿ ಎಲ್ಲರೂ ನಮ್ಮನಿಮ್ಮಾಳಗಿನವರು. ಪ್ರಧಾನ ಭೂಮಿಕೆಯಲ್ಲಿ ಸಿರಿಯಜ್ಜಿ, ಚಂದ್ರಶೇಖರ ಶಾಸ್ತ್ರಿ ಮತ್ತು ಕೃಷ್ಣ ಶಾಸ್ತ್ರಿಗಳೇ. ಇವರೆಲ್ಲ ನವನಾಗರಿಕತೆ ಮಾನವನನ್ನು ಭ್ರಷ್ಟಗೊಳಿಸುವುದಕ್ಕೆ ಪೂರ್ವದ ಮೂಲ ಮಾನವನ ಮಾದರಿ ರೂಪಿಗಳಾಗಿ ಕಾಣುತ್ತಾರೆ. ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಈ ಕೃತಿ ಪ್ರಕಟವಾಗುವ ವೇಳೆಗೆ ಪೂರ್ವದಲ್ಲೇ ‘ಹಳ್ಳಿ ಚಿತ್ರ’, ‘ಹಳ್ಳಿ ಮೇಷ್ಟ್ರು’ ನಾಟಕಗಳಿಂದ ಕನ್ನಡಿಗರಿಗೆ ಪರಿಚಿತರಾಗಿದ್ದು ಇತ್ತೀಚಿನ ದಿನಗಳಲ್ಲಿ ‘ಯೇಗ್ಗದಾಗೆಲ್ಲಾ ಐತೆ’ ಕೃತಿಯಿಂದ ಸುಪರಿಚಿತರಾದವರು. ಅವರು ಬೆಳಗೆರೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಸ್ಥಾಪಿಸಿ ಬೆಳೆಸಿದ್ದು ಒಂದು ರೋಚಕ ಪುರಾಣವೇ. ಕ್ರಷ್ಣ ಶಾಸ್ತ್ರಿಗಳ ತಂದೆ ಚಂದ್ರಶೇಖರ ಶಾಸ್ತ್ರಿಗಳು. ಮರಣಕ್ಕೆ ಮುನ್ನ ಮಗನಿಗೆ ಹೇಳುತ್ತಾರೆ:

‘‘ನಿನ್ನ ಅಣ್ಣನಿಗೆ ತಿಳಿಸು. ಈ ಪಾಂ್ರತದ ಹಳ್ಳಿಯ ಮಕ್ಕಳು ಅಕ್ಷರ ಕಲಿಕೆಯಲ್ಲಿ ಹಿಂದಿದ್ದಾರೆ. ಅ ಆ ಇ ಈ, ಕ ಕಾ ಕಿ ಕೀ ಇಲ್ಲ. ಈ ಕಾಲಕ್ಕೆ ಒಂದು ಎಸೆಸೆಲ್ಸಿ ಮಾಡಿಕೊಂಡರೆ ನಾಲ್ಕು ಅಕ್ಷರ ಕಲಿತಂತೆ. ಈ ಊರಿನಲ್ಲಿ ಒಂದು ಹೈಸ್ಕೂಲು ಮಾಡಿಸು ಅಂತ ಹೇಳು. ಅವನಲ್ಲಿ ಹಣವಿದೆ. ತಾನು ಹುಟ್ಟಿದ ಊರಿಗಾಗಿ ಒಂದಿಷ್ಟು ಕೊಡಲಿ’’

ತಂದೆಯ ಕೊನೆಯಾಸೆಯಂತೆ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಹುಟ್ಟಿದೂರಿನಲ್ಲಿ ಅಣ್ಣ ಸೀತಾರಾಮ ಶಾಸ್ತ್ರಿಯವರ ನೆರವಿನಿಂದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳನ್ನು ಪ್ರಾರಂಭಿಸುತ್ತಾರೆ. ಊರಾಚೆ ಇರುವ ಈ ಶಾಲೆಯ ಬಾಗಿಲಿಲ್ಲದ ಗುಡಿಸಲೇ ಬೆಳಗೆರೆ ಕೃಷ್ಣ ಶಾಸ್ತ್ರಿಯವರ ನಿವಾಸ.ಚಂದ್ರಶೇಖರ ಶಾಸ್ತ್ರಿಯವರು ಮರಣಕ್ಕೆ ಮುನ್ನ ಮಗನಿಗೆ ಹೇಳಿರುವ ಕೆಳಗಿನ ಈ ಮಾತುಗಳಂತೂ ಆಧುನಿಕ ಚಿಂತನೆಗೆ ಸಮಾನಾಂತರ ಹರಿಯುತ್ತಿರುವ ವಿಚಾಧಾರೆಯಂತೆ ತೋರುತ್ತದೆ:

‘‘ನೋಡು ನಾನು ಸತ್ತ ಮೇಲೆ ಇದಕ್ಕೆ ಬೆಂಕಿ ಇಟ್ಟುಬಿಡು, ಅಷ್ಟೆ. ಆ ಮೇಲೆ ಉತ್ತರಕ್ರಿಯೆ ಎಂದು ಗೊಡ್ಡು ಶಾಸ್ತ್ರಗಳನ್ನು ಹಚ್ಚಿಕೊಳ್ಳಬೇಡ.ಹೇಗಿದ್ದರೂ ನೀನು ಆಗಾಗ ಯಾತ್ರೆ ಹೋಗುತ್ತಿರುತ್ತೀಯೆ. ಹಾಗೆಯೇ ಒಂದು ಸಾರಿ ಗೋಕರ್ಣಕ್ಕೋ ಇನ್ನಾವ ಮನ ಬಂದಲ್ಲಿಗೆ ಹೋಗಿ ವಿನೋದವಾಗಿ ಸ್ನೇಹಿತರೊಂದಿಗೆ ಸುತ್ತಾಡಿಕೊಂಡು ಬಾ. ಕೇಳಿದವರಿಗೆ ಅಲ್ಲಿ ದೂರದ ಪುಣ್ಯ ಕ್ಷೇತ್ರದಲ್ಲಿ ನಮ್ಮಪ್ಪನ ಉತ್ತರ ಕ್ರಿಯೆ ಮಾಡಿ ಬಂದೆ ಎಂದು ಹೇಳಿ ಬಿಡು’’

 ಸನಾತನ ಸಂಪ್ರದಾಯ, ಪದ್ಧತಿಗಳಿಗೆ ಬೆಂಕಿ ಹಚ್ಚುವ, ಪುರೋಹಿತರ ಕಣ್ಣು ಕೆರಳಿಸುವ ಈ ಮಾತುಗಳು ಚಂದ್ರಶೇಖರ ಶಾಸ್ತ್ರಿಗಳ ವ್ಯಕ್ತಿತ್ವ ಮತ್ತು ಚಿಂತನವನ್ನು ಸೂಚಿಸುವುದರೊಂದಿಗೆ ಒಂದು ಸಮುದಾಯದ ಮುಂದಿನ ಹೆಜ್ಜೆಗಳಿಗೆ ಮಾರ್ಗದರ್ಶಿಯೂ ಅಗಿ ಕಾಣುತ್ತದೆ. ಮುಂದೆ ಶಾಲೆಯನ್ನು ಆಡಳಿತ ಮಂಡಲಿಯ ಭಿನ್ನಾಭಿಪ್ರಾಯಗಳ ಮಧ್ಯೆಯೂ ಬೆಳೆಸಿದ, ತೋಟಗಾರಿಕೆ ಮಾಡಿಕೊಂಡು ಶಿಸ್ತುಬದ್ಧವಾಗಿ ಆದರ್ಶಪ್ರಾಯವಾದ ಜೀವನವನ್ನು ನಡೆಸಿದ ಕೃಷ್ಣಶಾಸ್ತ್ರಿಯವರ ಬದುಕಿನ ವಿವರಗಳು ಹೊಸತೊಂದು ‘ಜನಪದ’ ಜೀವನ ಕ್ರಮಕ್ಕೆ ಸೂಚಿಯಾಗುತ್ತದೆ. ಕೃಷ್ಣ ಶಾಸ್ತ್ರಿಗಳಿಗೆ ಆದರ್ಶ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ದೊರೆಯುತ್ತದೆ. ಆದರೆ ಶಾಲೆಯ ಬಿಕ್ಕಟ್ಟನ್ನು ಬಗೆಹರಿಸುವುದರಲ್ಲಿ ಕೆಲಸಕ್ಕೆ ಬಾರದ ಈ ಪ್ರಶಸ್ತಿ ಪತ್ರ ಗುಡಿಸಲಿಗೆ ಹೊದಿಸಿದ್ದ ಮಟ್ಟಾಳೆ ಸಂದಿಯನ್ನು ಸೇರುತ್ತದೆ.

ಈ ನಮೂನೆಯ ಕೃಷ್ಣ ಶಾಸ್ತ್ರಿಗಳು ‘‘ಅಲ್ಲಿ ಸಿರಿಯಜ್ಜಿ ಅಂತ ಒಬ್ಬ ಹಾಡುಗಾರ್ತಿ ಇದ್ದಾಳೆ ನೋಡಿ ಬರುವ’’ ಎಂದು ಹನೂರರನ್ನು ಅವಳ ಹಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಸಿರಿಯಜ್ಜಿಗೆ ಮೈಲಿಗೆಯವನಾದ ಆಗಂತುಕನ ಮುಂದೆ ಹಾಡಲು ಇಷ್ಟವಿರಲಿಲ್ಲ. ಆದರೆ ಕೃಷ್ಣ ಶಾಸ್ತ್ರಿಗಳು ಚಾತುರ್ಯದಿಂದ ಸಿರಿಯಜ್ಜಿಯ ಬಾಯಿ ಬಿಡಿಸುತ್ತಾರೆ. ಬಹುಶ: ಅದು ಹನೂರರ ಅದೃಷ್ಟ ಖುಲಾಯಿಸಿದ ದಿನವಿರಬೇಕು. ಸಿರಿಯಜ್ಜಿ ಹೆಸರಿಗೆ ಅನ್ವರ್ಥವೆಂಬಂತೆ ಜಾನಪದ ಕಥೆ-ಕಾವ್ಯಗಳ ಸಂಪದ್ಭರಿತ ಭಂಡಾರವೇ ಸರಿ. ಈ ಸಿರಿಯಜ್ಜಿಯ ಆಚಾರವಿಚಾರಗಳೂ ಮೂಢ ನಂಬಿಕೆಗಳಿಂದ ಗಾವುದ ದೂರ ಇದ್ದವು. ಆಕೆ ಗಂಡನನ್ನು ಕಳೆದುಕೊಂಡಿದ್ದರೂ ತಾನು ವಿಧವೆಯಲ್ಲ ಎಂದೇ ತಿಳಿದಿದ್ದರಂತೆ. ಅಲ್ಲದೆ ಸೂತಕದ ಹೆಣ್ಣುಮಕ್ಕಳನ್ನು ಹಟ್ಟಿಯಾಚೆ ಕೂರಿಸುವ ಪದ್ಧತಿಯನ್ನು ವಿರೋಧಿಸುತ್ತಿದ್ದರಂತೆ. ಸಿರಿಯಜ್ಜಿ ಕೃಷ್ಣ ಮೂರ್ತಿ ಹನೂರರ ಕ್ಷೇತ್ರ ಕಾರ್ಯದಲ್ಲಿ ಅನಿರೀಕ್ಷಿತವಾಗಿ ದೊರೆತ ಅಮೂಲ್ಯ ಎಂದರೆ ಉತ್ಪ್ರೇಕ್ಷೆಯಾಗದು. ಹನೂರರಿಗೆ ಈ ಅಜ್ಜಿ ತನ್ನ ಸಿರಿಯನ್ನೆಲ್ಲ ಕೊಟ್ಟಿದ್ದಾಳೆ.

‘ಸಾವಿರದ ಸಿರಿ ಬೆಳಗು’ ಸಿರಿಯಜ್ಜಿ ಹಾಡಿದ ಜನಪದ ಕಾವ್ಯಸಂಗ್ರಹವನ್ನು ಹನೂರರು ನಾಡಿನ ಜನತೆಗೆ ಅರ್ಪಿಸಿದ್ದಾರೆ. ಕೃಷ್ಣ ಮೂರ್ತಿ ಹನೂರರ ‘ಕಾಲು ದಾರಿಯಲ್ಲಿ....’ ಸಿರಿಯಜ್ಜಿ ದೊಡ್ಡ ಸಾಧನೆಯಾದರೆ, ಅವರು ಕ್ಷೇತ್ರ ಕಾರ್ಯದಲ್ಲಿ ಕ್ರಮಿಸಿದ ಹಾದಿ ತುಂಬ ಸಂಪದ್ಯುಕ್ತವಾದದ್ದು ಎನ್ನುವುದಕ್ಕೆ ಈ ಗ್ರಂಥದಲ್ಲಿ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ದಾರಿ ಸಾಗಿದಂತೆ ಹಸಿವು ಬಾಯಾರಿಕೆ ತಣಿಸಲು ಅರವಂಟಿಕೆಗಳು ಸಿಗುತ್ತಿದ್ದಂತೆ ‘ಕಾಲುದಾರಿಯ ಕಥನ’ಗಳಲ್ಲಿ ಜನಪದ ಕಲಾವಿದರು, ಜನಪದ ಕಥೆ ಕಾವ್ಯಗಳು, ವ್ಯಕ್ತಿ ವೈಶಿಷ್ಟ್ಯಗಳು ಇಲ್ಲಿ ವಿಪುಲವಾಗಿ ನಮಗೆ ಎದುರಾಗುತ್ತವೆ. ಕ್ಯಾತನಹಳ್ಳಿ ಗಿರಿಯಯ್ಯನ ಗಾದೆಗಳ ಕಥನ, ಲೀಲಾವತಿ-ಪದ್ಮಾವತಿ ಕಥೆಗಳು, ಗೊಲ್ಲರ ಹಟ್ಟಿಯಲ್ಲಿ ಎ.ಕೆ.ರಾಮಾನುಜನ್ ಅವರೊಂದಿಗೆ ಕಂಡ ಕೋಲಾಟದ ಸೊಗಸು, ಕತ್ತೆ ಕಾಯಕದ ನರಸಜ್ಜನ ಕಥೆ, ತತ್ವಪದಗಳ ಕಣಜವಾದ ಬುಡೇನ್ ಸಾಬರ ನೋಟ್ ಬುಕ್ಕು, ಹನುಮಜ್ಜಿಯ ‘ಗುಣಸಾಗರಿಕಥೆ’, ದಾನಮ್ಮನ ‘ಮದಗದ ಕೆಂಚವ್ವನ ಕಥೆ, ಚನ್ನಬಸವಣ್ಣ ಪದ, ದಾನಮ್ಮಳೊಡನೆ ನಡೆಸಿದ ಸಂಭಾಷಣೆ, ಬಿಸಿನೀರಿನ ಬಸಣ್ಣ, ಕತ್ತೆ ಕಾಯಕದ ನರಸಜ್ಜ, ಪರಂಗಿಯವರು ನಮ್ಮ ಅರಣ್ಯ ಸಂರಕ್ಷಿಸಿದ ಕಥ ಹೇಳುವ ಓಬಜ್ಜ, ಇಂದ್ರಾಗಾಂದಿ ಬಸಪ್ಪ, ಬೇಡರ ಕನ್ನಯ್ಯ, ಬೊಮ್ಮಣ್ಣನ ಕಥನಗಳು...ಓದುಗರ ಬುದ್ಧಿ ಹೃದಯಗಳಿಗೆ ಲಗ್ಗೆ ಇಡುತ್ತವೆ.

ಹನೂರರ ಈ ಕಥನದ ಹೆದ್ದಾರಿಯಲ್ಲಿ ಜನಪದ ಕಲೆಯಷ್ಟೇ ಆ ಜನಪದದ ಜೀವನ ಕ್ರಮ, ಆಚಾರ ವಿಚಾರಗಳೂ ಢಾಳವಾಗಿಯೇ ಕಾಣಿಸಿಕೊಳ್ಳುತ್ತವೆ. ಮ್ಯಾಸ ಬೇಡ ಬುಡಕಟ್ಟಿನ ಮೂಲ ಕಥೆ ಹಾಗೂ ಅವರ ಜೀವನ ಕ್ರಮ ಕುರಿತ ಅಧ್ಯಯನ, ಹಿರಿಯಡ್ಕದ ಜಾತ್ರೆ, ಬಿಳಿಗಿರಿ ರಂಗನ ವಕ್ಕಲಾದ ಸೋಲಿಗರು, ನಾಯಕರು ಮೊದಲಾದವರ ಭಕ್ತಿ ಆಚರಣೆಗಳು, ಪೂಜೆಗಳು ಮಾನವ ಶಾಸ್ತ್ರದ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಹನೂರರು ಕಥೆ ಪ್ರಸಂಗಗಳನ್ನು ಹೇಳುವುದರ ಜೊತೆಗೆ ಅವುಗಳ ವೈಜ್ಞಾನಿಕ ವಿಶ್ಲೇಷಣೆಯ ಪ್ರಯತ್ನವನ್ನು ಮಾಡುವುದರಿಂದ ಕೃತಿಯ ವ್ಯಾಪ್ತಿ ಅನ್ಯ ಅಧ್ಯಯನಗಳ ವರೆಗೆ ಚಾಚಿಕೊಳ್ಳುತ್ತದೆ. ಕೊನೆಯಲ್ಲಿ ಜಾನಪದರಲ್ಲಿನ ಮುಕ್ತ ಲೈಂಗಿಕ ಸಂಬಂಧವನ್ನು ಶಿವರಾಮ ಕಾರಂತರು, ಪೆರುಮಾಳ್ ಮುರುಗನ್ ಅವರ ಕಾದಂಬರಿಗಳೊಂದಿಗೆ ತೌಲನಿಕವಾಗಿ ನೋಡುತ್ತಾರೆ.

(ಮ್ಯಾಸ ಬೇಡರ ಸಂಸ್ಕೃತಿ ಕುರಿತು ಹನೂರರು ಬರೆದಿರುವ ಗ್ರಂಥ ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ.) ಜನಪದ ಕ್ಷೇತ್ರ ಕಾರ್ಯದ ಹಾದಿ ಸುಗಮವೇನಲ್ಲ. ಹಾಡುವವರನ್ನು, ಕಥೆ ಹೇಳುವವರನ್ನು ಒಲಿಸಿಕೊಂಡು ಅವರ ಬಾಯಿ ಬಿಡಿಸುವ ಮಾನಸಿಕ ಸಾಮರಸ್ಯದ ಕಷ್ಟದ ಜೊತೆಗೆ ಹಳ್ಳಿಗಾಡಿನ ಕಾಡುಮೇಡಿನ ಪಯಣ, ಅಶನವಸತಿಯಂಥ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಹನೂರರನ್ನೂ ಇವು ಬಿಟ್ಟಿಲ್ಲ. ಕ್ಷೇತ್ರ ಕಾರ್ಯದಲ್ಲಿ ಇವರ ಜೊತೆ ಮಿತ್ರರು, ಶಾಸ್ತ್ರಿಗಳಂಥವರು ಇದ್ದಾಗ್ಯೂ ದೇವಸ್ಥಾನದ ಜಗುಲಿಯ ಮೇಲೆ, ಗುಡಿಸಿಲುಗಳಲ್ಲಿ, ಪಾಳುದೇಗುಲಗಳಲ್ಲಿ ಅವರು ರಾತ್ರಿಗಳನ್ನು ಕಳೆದಿದ್ದಿದೆ. ಹೀಗೆ ಚಿರತೆಯ ಬಾಯಿಗೆ ಸಿಕ್ಕಿ ಪಾರಾಗಿ ಬಂದದ್ದೂ ಇದೆ. ಈ ಪರಿಯ ಕ್ಷೇತ್ರ ಕಾರ್ಯದಲ್ಲಿನ ಕೃಷ್ಣಮೂರ್ತಿ ಹನೂರರ ಶ್ರದ್ಧೆ, ಜನಪದ ಪ್ರೀತಿ ಮೆಚ್ಚುವಂಥದ್ದು. ಅವರ ಕ್ಷೇತ್ರ ಕಾರ್ಯದ ಅನುಭವಗಳ ನಿರೂಪಣೆಯ ಕುತೂಹಲಭರಿತ ಕಥನದ ರಸಾಸ್ವದದೊಂದಿಗೆ ಜನಪದ ಸಾಹಿತ್ಯವನ್ನು ಮಾನವಿಕ ವಿಜ್ಞಾನ ಮೊದಲಾಗಿ ಹಲವು ನಿಟ್ಟಿನಿಂದ ಅಧ್ಯಯನಮಾಡಲು ಪ್ರೇರಣೆ ನೀಡುವಂಥ ಈ ಕೃತಿಯನ್ನು ಕೊಟ್ಟಿರುವ ಹನೂರರು ಅಭಿನಂದನಾರ್ಹರು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75