'ರಕ್ತ ಗುಂಪು' ದಾಖಲಿಸುವಾಗ ಉದಾಸೀನ ಬೇಡ

Update: 2019-09-16 04:37 GMT

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವೈಯಕ್ತಿಕ ದಾಖಲೆಗಳ ಅರ್ಜಿ ನಮೂನೆ‌ಗಳಲ್ಲಿ ‘ರಕ್ತ ಗುಂಪು’ ಎಂಬ ಒಂದು ಕಾಲಂ ಕಡ್ಡಾಯಗೊಳಿಸಲಾಗಿದೆ. ರಕ್ತ ಗುಂಪು ಪರೀಕ್ಷೆ ಅತ್ಯಂತ ಸುಲಭ ಮತ್ತು ಅತ್ಯಂತ ಕಡಿಮೆ ಕ್ರಯದ ಪರೀಕ್ಷೆಯೂ ಹೌದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಈ ಪರೀಕ್ಷೆ ಮಾಡಿಕೊಡಲಾಗುತ್ತದೆ. ರಕ್ತ ಗುಂಪು ಪರೀಕ್ಷೆಗೆ ಎರಡರಿಂದ ಮೂರು ನಿಮಿಷ ಸಾಕಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನೆಲ್ಲಾ ಪ್ರಯೋಗಾಲಯಗಳಲ್ಲಿ ರಕ್ತ ಗುಂಪು ಪರೀಕ್ಷೆಗೆ ಐವತ್ತು ರೂಪಾಯಿ ಚಾರ್ಜ್ ಮಾಡುತ್ತಾರೆ.

ಅದಾಗ್ಯೂ ಅನೇಕ ದಾಖಲೆಗಳಿಗೆ ಖೊಟ್ಟಿ ರಕ್ತ ಗುಂಪನ್ನು ನಮೂದಿಸಲಾಗುತ್ತಿರುವುದು ಖೇದಕರ.

ಉದಾಹರಣೆಗೆ ವಿದ್ಯಾರ್ಥಿಗಳ ಗುರುತು ಪತ್ರದಲ್ಲಿ ರಕ್ತ ಗುಂಪು ಎಂಬ ಕಾಲಂ ಇರುತ್ತದೆ. ಅನೇಕ ಹೆತ್ತವರು ತಮ್ಮ ಮಕ್ಕಳ ರಕ್ತ ಗುಂಪು ಪರೀಕ್ಷೆ ಮಾಡಿಸದೇ ಯಾವುದಾದರೊಂದು ಗುಂಪಿನ ಹೆಸರು ಹೇಳಿ ಅದನ್ನೇ ಅರ್ಜಿ ನಮೂನೆಗಳಲ್ಲಿ ನಮೂದಿಸಿ ಬಿಡುತ್ತಾರೆ. ಕೆಲವು ಶಾಲಾ ಸಿಬ್ಬಂದಿ ರಕ್ತ ಗುಂಪು ಪರೀಕ್ಷೆಯ ವರದಿ ಕೇಳದೇ ಅವರಂದದ್ದನ್ನೇ ನಮೂದಿಸುತ್ತಾರೆ. ಹಾಗೆ ನಮೂದಿಸಿದ್ದೇ ಮಕ್ಕಳ ಶಾಲಾ ಗುರುತುಪತ್ರದಲ್ಲಿ ದಾಖಲಾಗುತ್ತದೆ.

ಇನ್ನೊಂದು ಉದಾಹರಣೆ, ಹೆಚ್ಚಿನೆಲ್ಲರೂ ಚಾಲನಾ ಪರವಾನಿಗೆ ಮಾಡಿಸುವುದು ಡ್ರೈವಿಂಗ್ ಸ್ಕೂಲ್‌ಗಳ ಮುಖಾಂತರವೇ ಆಗಿದೆ. ಡ್ರೈವಿಂಗ್ ಸ್ಕೂಲ್‌ನವರು ಚಾಲನಾ ಪರವಾನಿಗೆಗೆ ಸಲ್ಲಿಸುವ ಅರ್ಜಿ ನಮೂನೆ ಭರ್ತಿ ಮಾಡುವಾಗ ಅಭ್ಯರ್ಥಿಯ ರಕ್ತದ ಗುಂಪು ಕೇಳುತ್ತಾರೆ. ಕೆಲವರಿಗೆ ತಮ್ಮ ರಕ್ತ ಗುಂಪು ಯಾವುದೆಂದು ಗೊತ್ತಿರುತ್ತದೆ. ಅಂತವರು ತಮ್ಮ ಅಸಲಿ ರಕ್ತ ಗುಂಪನ್ನೇ ಹೇಳುತ್ತಾರೆ. ಇನ್ನು ಕೆಲವರು ಯಾವುದಾದರೊಂದು ಗುಂಪು ಹೇಳಿ ಭರ್ತಿ ಮಾಡಿಸಿ ಬಿಡುತ್ತಾರೆ. ಕೆಲವರು ರಕ್ತ ಗುಂಪು ಗೊತ್ತಿಲ್ಲ ಎನ್ನುತ್ತಾರೆ. ಆಗ ಪರೀಕ್ಷೆ ಮಾಡಿಸಿ ಬನ್ನಿ ಎಂದರೆ ಕೆಲವರು ಮಾಡಿಸುತ್ತಾರೆ. ಇನ್ನು ಕೆಲವರು ಉದಾಸೀನ ತೋರುತ್ತಾರೆ. ಉದಾಸೀನ ತೋರಿದರೆ ಕೆಲವು ಡ್ರೈವಿಂಗ್ ಸ್ಕೂಲ್‌ನವರು ಯಾವುದಾದರೊಂದು ಗುಂಪಿನ ಹೆಸರು ನಮೂದಿಸಿ ಬಿಡುತ್ತಾರೆ. ಅವರ ಯಾವ ಗುಂಪನ್ನು ನಮೂದಿಸುತ್ತಾರೋ ಅದೇ ಅವರ ಚಾಲನಾ ಪರವಾನಿಗೆಯಲ್ಲೂ ದಾಖಲಾಗುತ್ತದೆ. ಆದುದರಿಂದ ಯಾವುದೇ ಇಲಾಖೆಯಿರಲಿ, ರಕ್ತ ಗುಂಪು ಪರೀಕ್ಷೆಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಕೇಳಿ ಪಡೆಯಬೇಕು. ಅದು ಸಾಧ್ಯವಿಲ್ಲವೆಂದರೆ ರಕ್ತ ಗುಂಪು ಎಂಬ ಕಾಲಂ ಭರ್ತಿ ಮಾಡುವುದು " ಐಚ್ಚಿಕ" ಎಂದು ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು. ಕಡ್ಡಾಯವೆಂದರೆ ಲ್ಯಾಬೋರೇಟರಿ ರಿಪೋರ್ಟ್‌ನ ಪ್ರತಿಯ ಹೊರತಾಗಿ ಅಂತಹ ಅರ್ಜಿಯನ್ನು ಸ್ವೀಕರಿಸಬಾರದು.

ಈ ವಿಷಯದಲ್ಲಿ ಡ್ರೈವಿಂಗ್ ಮಾಸ್ಟರ್ ಆಗಿದ್ದ ವ್ಯಕ್ತಿಯೊಬ್ಬರಲ್ಲಿ ವರ್ಷದ ಹಿಂದೆ ನಾನು ಚರ್ಚಿಸಿದಾಗ "ಜನ ಉದಾಸೀನ ತೋರುತ್ತಾರೆ. ಆದುದರಿಂದ ನಾವು ಒತ್ತಡ ಹೇರಲು ಹೋಗುವುದಿಲ್ಲ" ಎಂದಿದ್ದರು.

ಆತ ಮತ್ತೂ ಮುಂದುವರಿದು ಅಪಘಾತದ ಸಂದರ್ಭದಲ್ಲಿ ರಕ್ತ ನೀಡಬೇಕಾದ ಪರಿಸ್ಥಿತಿ ಎದುರಾದರೆ ಹೇಗೂ ಆಸ್ಪತ್ರೆಯವರು  ಪರೀಕ್ಷೆ ಮಾಡಿಯೇ ರಕ್ತ ಪೂರೈಸುತ್ತಾರೆ. ಹಾಗಿರುವಾಗ ನಾವು ಚಾಲನಾ ಪರವಾನಿಗೆಯಲ್ಲಿ ಯಾವ ಗುಂಪು ದಾಖಲಿಸಿದರೇನು....? ಎಂದು ನನಗೆ ಮರು ಪ್ರಶ್ನೆ ಹಾಕಿದ.

ಏನೇ ಇರಲಿ, ಯಾವುದಾದರೊಂದು ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ರಕ್ತ ಗುಂಪು ಪರೀಕ್ಷಿಸದೇ ಗಾಯಾಳುವಿನ ದಾಖಲೆ ನೋಡಿ ಇದು ಸಾಕೆಂದು ನೇರವಾಗಿ ರಕ್ತ ಪೂರೈಸಿದರೆ ಜೀವಹಾನಿಯೂ ಆಗಬಹುದು.

ಇಂತಹ ಸಾಧ್ಯತೆಗಳು ತೀರಾ ವಿರಳವಾದರೂ ತಪ್ಪಾಗಿ ದಾಖಲಿಸಲೇಬಾರದು.

ಅದಕ್ಕಿಂತ ಆ ಕಾಲಂ ಅನ್ನು ಖಾಲಿ ಬಿಡುವುದೊಳಿತು.

Writer - -ಇಸ್ಮತ್ ಪಜೀರ್

contributor

Editor - -ಇಸ್ಮತ್ ಪಜೀರ್

contributor

Similar News