ಬಲಪಂಥೀಯ ಸರಕಾರ ರಚಿಸಲು ಬಯಸಿದ್ದೆ,ಆದರೆ ಅದು ಅಸಾಧ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2019-09-19 14:28 GMT

ಜೆರುಸಲೇಮ್, ಸೆ. 19: ಇಸ್ರೇಲ್‌ನಲ್ಲಿ ಮಂಗಳವಾರ ನಡೆದ ಚುನಾವಣೆಯ ಬಳಿಕ ಅತಂತ್ರ ಸಂಸತ್ತು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಎಲ್ಲರನ್ನೂ ಒಳಗೊಂಡ ಏಕತಾ ಸರಕಾರವೊಂದನ್ನು ರಚಿಸುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಪ್ರಧಾನ ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಝ್‌ರಿಗೆ ಗುರುವಾರ ಕರೆ ನೀಡಿದ್ದಾರೆ.

ಯಾವುದೇ ಮೈತ್ರಿಕೂಟ ಬಹುಮತ ಗಳಿಸಲು ವಿಫಲವಾದ ಬಳಿಕ ಈ ಬೆಳವಣಿಗೆ ನಡೆದಿದೆ.

“ನಾನು ಬಲಪಂಥೀಯ ಮೈತ್ರಿ ಸರಕಾರವೊಂದನ್ನು ರಚಿಸಲು ಬಯಸಿದ್ದೇನೆ, ಆದರೆ ಅದು ಸಾಧ್ಯವಿಲ್ಲ ಎನ್ನುವುದನ್ನು ಫಲಿತಾಂಶ ತೋರಿಸಿದೆ” ಎಂದು ವೀಡಿಯೊ ಸಂದೇಶವೊಂದರಲ್ಲಿ ನೆತನ್ಯಾಹು ಹೇಳಿದ್ದಾರೆ.

ವರ್ಷದಲ್ಲಿ ನಡೆದ ಎರಡನೇ ಚುನಾವಣೆಯಲ್ಲೂ ನೆತನ್ಯಾಹುರ ಲಿಕುಡ್ ಪಕ್ಷದ ನೇತೃತ್ವದ ಮೈತ್ರಿಕೂಟವಾಗಲಿ, ಅವರ ಎದುರಾಳಿ ಬೆನ್ನಿ ಗಾಂಟ್ಝ್‌ರ ಬ್ಲೂ ಆ್ಯಂಡ್ ವೈಟ್ ಪಾರ್ಟಿ ನೇತೃತ್ವದ ಕಹೋಲ್ ಲಾವನ್ ಒಕ್ಕೂಟವಾಗಲಿ ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿವೆ.

120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ ಗಾಂಟ್ಝ್ ನೇತೃತ್ವದ ಮಧ್ಯ-ಎಡಪಂಥೀಯ ಮೈತ್ರಿಕೂಟ 57 ಕ್ಷೇತ್ರಗಳಲ್ಲಿ ಮುಂದಿದೆ ಹಾಗೂ ನೆತನ್ಯಾಹು ನೇತೃತ್ವದ ಬಲಪಂಥೀಯ ಮತ್ತು ಧಾರ್ಮಿಕ ಪಕ್ಷಗಳ ಒಕ್ಕೂಟ 55ರಲ್ಲಿ ಮುಂದಿದೆ. ಹಾಗಾಗಿ, ಈ ಎರಡೂ ಮೈತ್ರಿಕೂಟಗಳಿಗೆ ಬಹುಮತದ ಸರಕಾರ ರಚಿಸಲು ಸಾಧ್ಯವಿಲ್ಲ. ಇಸ್ರೇಲ್ ಬೈಟೀನು ಪಕ್ಷವು 9 ಸ್ಥಾನಗಳಲ್ಲಿ ಮುಂದಿದ್ದು, ಕಿಂಗ್ ಮೇಕರ್ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಆದರೆ, ಅದರ ನಾಯಕ ಅವಿಗ್ಡರ್ ಲೈಬರ್‌ಮನ್ ‘‘ವಿಶಾಲ ತಳಹದಿಯ, ಉದಾರವಾಗಿ’ ಏಕತಾ ಸರಕಾರವೊಂದನ್ನು ರಚಿಸುವಂತೆ ಕರೆ ನೀಡಿದ್ದಾರೆ.

ನಾಯಕತ್ವ ಸಮರ?

 ಏಕತಾ ಸರಕಾರವನ್ನು ರಚಿಸಲು ತಕ್ಷಣ ಸಂಧಾನ ಆರಂಭಿಸುವಂತೆ ಪ್ರಧಾನಿ ನೆತನ್ಯಾಹು ಬೆನ್ನಿ ಗಾಂಟ್ಝ್‌ರನ್ನು ಒತ್ತಾಯಿಸಿದ್ದಾರೆ.

ಏಕತಾ ಸರಕಾರಕ್ಕೆ ನನ್ನ ಒಪ್ಪಿಗೆಯಿದೆ, ಆದರೆ ಅದು ನನ್ನ ನಾಯಕತ್ವದಲ್ಲಿ ಇರಬೇಕು ಎಂದು ಗಾಂಟ್ಝ್ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ನೆತನ್ಯಾಹು ನೇತೃತ್ವದ ಮೈತ್ರಿ ಸರಕಾರದಲ್ಲಿ ಭಾಗಿಯಾಗಲು ಅವರ ಪಕ್ಷ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News