ಗ್ಲೋಬಲ್‌ ಗೋಲ್‌ಕೀಪರ್ ಪ್ರಶಸ್ತಿ ಸ್ವೀಕರಿಸಿದ ಮೋದಿಯಿಂದ ಗಾಂಧಿ ಗುಣಗಾನ

Update: 2019-09-25 03:39 GMT

ನ್ಯೂಯಾರ್ಕ್, ಸೆ.25: ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇನ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಗ್ಲೋಬಲ್ ಗೋಲ್‌ಕೀಪರ್ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗುಣಗಾನ ಮಾಡಿದರು.

ಸ್ವಚ್ಛ ಭಾರತ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಮೋದಿಯವರಿಗೆ ಈ ಪ್ರಶಸ್ತಿ ಸಂದಿದ್ದು, ಗಾಂಧೀಜಿಯವರ 150ನೇ ಜಯಂತಿಯ ನೆನಪಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಬಗೆಗೆ ವಿಚಾರ ಸಂಕಿರಣ ನಡೆಯಿತು. ಗಾಂಧೀಜಿ ನೆನಪಿನ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಯಿತು.

"ಗಾಂಧೀಜಿ ಭಾರತೀಯ; ಆದರೆ ಕೇವಲ ಭಾರತದ ಸ್ವತ್ತಲ್ಲ. ಇಂದು ಈ ವೇದಿಕೆಯು ಇದಕ್ಕೆ ಜ್ವಲಂತ ನಿದರ್ಶನ" ಎಂದು ಮೋದಿ ಬಣ್ಣಿಸಿದರು. ಗಾಂಧೀಜಿಯವರು ಭೇಟಿ ಮಾಡದ ಜನರ ಮೇಲೂ ಗಾಂಧೀಜಿಯವರ ಜೀವನ ಹೇಗೆ ಸ್ಫೂರ್ತಿ ನೀಡಿದೆ ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬಹುದು ಎಂದು ಹೇಳಿದರು. ಗಾಂಧೀಜಿ ಯಾರ ಮೇಲೂ ಪರಿಣಾಮ ಸೃಷ್ಟಿಸಲು ಪ್ರಯತ್ನಿಸಿಲ್ಲ. ಆದರೆ ಪ್ರೇರಣೆಯ ಮೂಲವಾಗಿದ್ದರು. "ಪ್ರಭಾವ ಬೀರುವುದು ಹೇಗೆ" ಎಂಬ ಯುಗದಲ್ಲಿ ನಾವು ಇಂದು ಬದುಕುತ್ತಿದ್ದರೆ, "ಸ್ಫೂರ್ತಿ ತುಂಬುವುದು ಹೇಗೆ" ಎನ್ನುವುದು ಗಾಂಧೀಜಿಯವರ ದೃಷ್ಟಿಯಾಗಿತ್ತು ಎಂದು ಹೇಳಿದರು.

ಶಾಂತಿಪ್ರಿಯ ಬಂಗಾಳಿಗಳ ಮೇಲೆ ಪಾಕಿಸ್ತಾನಿ ಆಡಳಿತಗಾರರು ನಡೆಸುತ್ತಿದ್ದ ದಬ್ಬಾಳಿಕೆ ಹಾಗೂ ನಿರಂಕುಶ ಪ್ರಭುತ್ವದ ವಿರುದ್ಧ ಬಂಗಬಂಧು ಶೇಖ್ ಮುಜೀಬ್ ಅವರ ಶಾಂತಿಯುತ ಮತ್ತು ಅಸಹಕಾರ ಚಳವಳಿಯನ್ನು ರೂಪಿಸಲು ಗಾಂಧೀಜಿಯವರ ಅಹಿಂಸಾ ತತ್ವಗಳು ಹಾಗೂ ಜನಸಾಮಾನ್ಯರ ಬಗ್ಗೆ ಗಾಂಧೀಜಿಯವರಿಗೆ ಇದ್ದ ಪ್ರೀತಿ ಪ್ರೇರಣೆ ನೀಡಿದ್ದವು ಎಂದು ವಿವರಿಸಿದರು.

"ಈ ಪುರಸ್ಕಾರ ನನಗಲ್ಲ; ಸ್ವಚ್ಛ ಭಾರತದ ಕನಸು ನನಸುಗೊಳಿಸುವ ಜತೆಗೆ ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡ ಕೋಟ್ಯಂತರ ಭಾರತೀಯರಿಗೆ ಸಲ್ಲಬೇಕು" ಎಂದರು. ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಹೆಣ್ಣುಮಕ್ಕಳು ಶಾಲೆಯಿಂದಲೇ ದೂರ ಉಳಿಯುತ್ತಿದ್ದರು. ಆದರೆ ಸ್ವಚ್ಛ ಭಾರತ ಮಿಷನ್, ಗ್ರಾಮೀಣ ಭಾಗಗಳ ಬಡವರಿಗೆ ನೆರವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News