ಉಕ್ರೇನ್ ಹಗರಣ: ಟ್ರಂಪ್ ವಿರುದ್ಧ ವಾಗ್ದಂಡನೆ ವಿಚಾರಣೆ

Update: 2019-09-25 04:10 GMT

ವಿಶ್ವಸಂಸ್ಥೆ, ಸೆ.25: ರಾಜಕೀಯ ವಿರೋಧಿಗಳಿಗೆ ಕಳಂಕ ಹಚ್ಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ನೆರವು ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ವಿಧಿಸಬೇಕೇ ಎಂಬ ಬಗ್ಗೆ ಅಧಿಕೃತ ತನಿಖೆಯನ್ನು ಅಮೆರಿಕದ ಪ್ರತಿನಿಧಿ ಸಭೆ ಆರಂಭಿಸಲಿದೆ.

ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿಯವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಡೆಮಾಕ್ರಟಿಕ್ ಪಕ್ಷದ ಹಿರಿಯ ಸಂಸದ ರಿಚರ್ಡ್ ನೀಲ್ ಪ್ರಕಟಿಸಿದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಿಗೆ ವಾಗ್ದಂಡನೆ ವಿಧಿಸುವ ಸಂಬಂಧದ ಈ ವಿಚಾರಣೆ ಹೇಗಿರುತ್ತದೆ ಎಂಬ ಬಗ್ಗೆ ವಿವರ ನೀಡಲು ಅವರು ನಿರಾಕರಿಸಿದರು.

ಈ ಪ್ರಕರಣದಲ್ಲಿ ವಿವಾದದ ಕೇಂದ್ರ ಬಿಂದು ಎನಿಸಿದ ಉಕ್ರೇನ್ ಅಧ್ಯಕ್ಷರ ಜಯೆಗಿನ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ತಾವು ಸಿದ್ಧ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ವಾಗ್ದಂಡನೆ ವಿಧಿಸುವ ಪ್ರಯತ್ನಗಳಿಗೆ ಹಲವು ತಿಂಗಳುಗಳಿಂದ ಸ್ಪೀಕರ್ ಪೆಲೋಸಿ ಅವಕಾಶ ನೀಡಿರಲಿಲ್ಲ. ವಿಚಾರಣೆ ನಿರ್ಧಾರದ ಬಗ್ಗೆ ಸಂಜೆ ಪೆಲೋಸಿ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ. ಡೆಮಾಕ್ರಟಿಕ್ ಪಕ್ಷ ಸದನವನ್ನು ನಿಯಂತ್ರಿಸುತ್ತಿದೆ.

ಉಕ್ರೇನ್‌ಗೆ ನೀಡಲು ಉದ್ದೇಶಿಸಿದ್ದ 400 ದಶಲಕ್ಷ ಡಾಲರ್ ನೆರವನ್ನು ತಾವು ತಡೆಹಿಡಿದಿದದ್ದು ನಿಜ; ಆದರೆ 2020ರ ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ಜೋಯ್ ಬಿಡೆನ್ ವಿರುದ್ಧ ತನಿಖೆ ಆರಂಭಿಸುವಂತೆ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನೊಸ್ಕಿ ಮೇಲೆ ಪ್ರಭಾವ ಬೀರುವ ಕಾರಣಕ್ಕಾಗಿ ನೆರವು ತಡೆಹಿಡಿಯಲಾಗಿದೆ ಎಂಬ ಆರೋಪ ನಿರಾಧಾರ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News