ಗಾಂಧಿ-ನೂರೈವತ್ತಕ್ಕೆ ಪದಚ್ಯುತಿ

Update: 2019-09-29 07:24 GMT

ಟ್ರಂಪ್ ಅವರ ಮೋದಿಯ ಬಗೆಗಿನ ‘ಫಾದರ್ ಆಫ್ ಇಂಡಿಯಾ’ ಪ್ರಶಂಸೆ ಭಾರತೀಯರು ಹೆಮ್ಮೆ ಪಡುವಂಥದ್ದಲ್ಲ, ಇದರಿಂದ ಮಹಾತ್ಮಾ ಗಾಂಧಿಯವರಿಗೆ ಅವಮಾನಮಾಡಿದಂತಾಗಿದೆ. ಟ್ರಂಪ್ ಹೇಳಿದ್ದೆಲ್ಲ ವೇದವಾಕ್ಯವೇ? ಜಿತೇಂದ್ರಸಿಂಗ್‌ರ ಮಾತುಗಳಿಂದ ಮಹಾತ್ಮಾಗಾಂಧಿಯವರ ಅನುಯಾಯಿಗಳನ್ನು ಹೀನಾಯವಾಗಿ ಕಂಡಂತಾಗಿದೆ ಎಂಬಂತಹ ಪ್ರತಿಕ್ರಿಯೆಗಳು ಗಾಂಧಿಯವರನ್ನು ರಾಷ್ಟ್ರಪಿತನೆಂದು ನಂಬಿರುವ ಕೋಟಿಕೋಟಿ ಭಾರತೀಯರ ನೊಂದ ಭಾವನೆಗಳ ಅನುರಣನೆಯೇ ಆಗಿದೆ.


ಬೆಳಗಾದರೆ ಗಾಂಧಿ ಜಯಂತಿ. ಪ್ರತಿ ವರ್ಷದಂತೆ ಒಂದು ಶುಷ್ಕ ಆಚರಣೆಯಲ್ಲ ಈ ವರ್ಷದ ಗಾಂಧಿ ಜಯಂತಿ. ಈ ವರ್ಷ ಅಕ್ಟೋಬರ್ 2, ರಾಷ್ಟ್ರಪಿತ ಗಾಂಧೀಜಿಯವರ ನೂರ ಐವತ್ತನೇ ಜನ್ಮದಿನೋತ್ಸವ.
     
  ‘‘ತಾತ, ಬಾಪೂ ಅಂದ್ರೆ ಯಾರು?’
-ಮೊಮ್ಮಗಳ ಪ್ರಶ್ನೆ.
‘‘ಅವರು ಮಹಾತ್ಮಾ ಗಾಂಧಿ..’’.
 
‘‘ಅಂದ್ರೆ..’’ ‘‘ಅಂದ್ರೆ ನಮಗೆ ಸ್ವಾತಂತ್ರ್ಯ ತಂದುಕೊಟ್ಟೋರು...ರಾಷ್ಟ್ರಪಿತ’’
‘‘ರಾಷ್ಟ್ರಪಿತ ಅಂದ್ರೆ?’’
‘‘ಫಾದರ್ ಆಫ್ ದಿ ನೇಶನ್
‘‘ಹೋಗಿ ತಾತ ಯೂ ಆರ್ ಲೈಯಿಂಗ್’’
‘‘ಹೇಗೆ?’’
‘‘ಮೋದಿ ಇಸ್ ದಿ ಫಾದರ್ ಆಫ್ ದಿ ನೇಶನ್’’
‘‘ಯಾರೆ ಹೇಳ್ದೋರು?’’
‘‘ಟ್ರಂಪ್ ಅಂಕಲ್’’
  
   -ಇದು ನೂರೈವತ್ತನೇ ಗಾಂಧಿ ಜಯಂತಿಪೂರ್ವ ವ್ಯಂಗ್ಯ, ವಿಪರ್ಯಾಸ. ***

 ಮುತ್ಸದ್ದಿ ಎನ್ನಿಸಿಕೊಂಡ ಯಾವ ರಾಷ್ಟ್ರ ನಾಯಕನೂ ಮತ್ತೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಭೂಮಂಡಲದ ಇಬ್ಬರು ಅದ್ವಿತೀಯ ನಾಯಕರೆನ್ನಿಸಿಕೊಂಡವರು ಇಂತಹ ಒಂದು ಅಪ್ರಬುದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಪರಸ್ಪರ ಪ್ರೀತಿಅನುರಾಗಗಳಿಂದ ಕೈಕೈಹಿಸುಕಿ ಆನಂದತುಂದಿಲರಾದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಅನುರಾಗದ ಅಮಲಿನಲ್ಲೋ ಎಂಬಂತೆ ಪರಸ್ಪರ ಹಿತರಕ್ಷಣೆಗೆ ಧಾವಿಸಿರುವುದು ರಾಜತಾಂತ್ರಿಕ ವಲಯಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಮೋದಿಯವರು ರಾಷ್ಟ್ರದ ನಾಚಿಕೆ ಮಾನಮರ್ಯಾದೆಗಳನ್ನೆಲ್ಲ ಮೂರಾಬಟ್ಟೆ ಮಾಡಿ, ಮುಂದಿನ ಅವಧಿಗೆ ಟ್ರಂಪ್ ಅವರನ್ನೇ ಚುನಾಯಿಸಿ(ಅಬ್ ಕಿ ಬಾರ್ ಟ್ರಂಪ್ ಸರಕಾರ್) ಎಂದು ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಅವರು ಮೋದಿಯವರನ್ನು ‘ಭಾರತದ ರಾಷ್ಟ್ರಪಿತ’ ಎಂದು ಅಟ್ಟಕ್ಕೇರಿಸಿದ್ದಾರೆ. ಬಹುಶ: ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಮುತ್ಸದ್ದಿತನ ಎಂಬುದು ಹೀಗೆ ಅದಃಪಾತಾಳಕ್ಕೆ ಕುಸಿದಿರುವುದು ಇದೇ ಮೊದಲಿರಬೇಕು. ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಬಹಿರಂಗವಾಗಿ ಚುನಾವಣಾ ಪ್ರಚಾರ ನಡೆಸಿದ ಮೋದಿಯವರ ನಡತೆಯಿಂದ ಅನ್ಯ ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ಭಾರತ ಸರಕಾರಗಳ ಈ ವರೆಗಿನ ನೀತಿಯ ಉಲ್ಲಂಘನೆಯಾಗಿರುವುದು ಸ್ಪಷ್ಟ. ಭಾರತ-ಅಮೆರಿಕ ನಡುವಣ ನಲುಗಿರಬಹುದಾದ ಬಾಂಧವ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಟ್ರಂಪ್ ಅವರನ್ನು ಕುರಿತು ಪ್ರಶಂಸಾತ್ಮಕವಾದ ಮಾತುಗಳನ್ನಾಡಿರುವುದು ಮೋದಿಯವರ ದೃಷ್ಟಿಯಲ್ಲಿ ಸರಿ ಇರಬಹುದು. ಆದರೆ ಮುಂದಿನ ಅಧಿಕಾರಾವಧಿಗೂ ಟ್ರಂಪ್ ಅವರನ್ನೇ ಚುನಾಯಿಸುವಂತೆ ಭಾರತೀಯ ಹಾಗೂ ಅಮೆರಿಕನ್ ಸಮುದಾಯಗಳಿಗೆ ನೇರವಾಗಿ ಕರೆ ನೀಡುವ ಬಹಿರಂಗ ಪ್ರಚಾರ ಅಮೆರಿಕದ ಒಳಾಡಳಿತ ರಾಜಕಾರಣದಲ್ಲಿ ಹಾಡಹಗಲೇ ನಡೆಸಿರುವ ಹಸ್ತಕ್ಷೇಪವೇ ಸರಿ. ‘ಹೌಡಿ ಮೋದಿ’ ಸಮಾರಂಭದಲ್ಲಿ ಭಾಗವಹಿಸುವುದಾಗಿ ಟ್ರಂಪ್ ಪ್ರಕಟಿಸಿದಾಗಲೇ ಅಮೆರಿಕ ನಿವಾಸಿ ಭಾರತೀಯರು ಮೋದಿಯವರ ಬಗ್ಗೆ ಹೊಂದಿರುವ ಪ್ರೀತ್ಯಾದರಗಳ ಲಾಭ ಪಡೆದುಕೊಳ್ಳುವ ಹುನ್ನಾರ ಬಯಲಾಗಿತ್ತು. ಟ್ರಂಪ್ ಅವರು ಭಾಗವಹಿಸಿದ್ದು ಮೋದಿಯವರಿಗೆ ತೋರಿದ ವಿಶೇಷ ಗೌರವ ಎಂದು ಬಿಜೆಪಿ ಮತ್ತು ಕೇಂದ್ರ ಸರಕಾರ ಭಾವಿಸಿರಬಹುದು. ಆದರೆ ಟ್ರಂಪ್ ಅವರ ಭಾಗವಹಿಸುವಿಕೆಯ ಹಿಂದಿನ ಮೋದಿ ಜನಪ್ರಿಯತೆಯ ರಾಜಕೀಯ ಲಾಭ ಪಡೆವ ಹುನ್ನಾರ ಭಾರತೀಯ ವೀಕ್ಷಕರಿಗೆ ಹಾಗೂ ಅಮೆರಿಕ ವಾಸಿ ಭಾರತೀಯರಿಗೆ ಅರ್ಥವಾಗದಂತಹ ನಿಗೂಢ ವಿಚಾರವೇನಲ್ಲ. 2016ರ ಚುನಾವಣೆಯಲ್ಲಿ ಅಲ್ಪ ಬಹುಮತದಿಂದ ವಿಜಯ ಸಾಧಿಸಿದ ಟ್ರಂಪ್ ಅವರು ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆಂಬ ಖಾತರಿ ಏನಿಲ್ಲ. 2020ರ ಚುನಾವಣೆಯಲ್ಲಿ ಟೆಕ್ಸಾಸ್ ಮತದಾರರ ಒಲವು ಟ್ರಂಪ್ ಅವರ ಸೋಲುಗೆಲುವುಗಳಲ್ಲಿ ನಿರ್ಣಾಯಕವಾಗಲಿದೆ ಎನ್ನುವ ಕಾರಣದಿಂದ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಟೆಕ್ಸಾಸ್‌ನಲ್ಲಿ ಏರ್ಪಡಿಸಿದ್ದು, ಮೋದಿಯವರಿಂದ ಪ್ರಚಾರ ಮಾಡಿಸಿದ್ದು ಎಲ್ಲವೂ ಪೂರ್ವನಿಶ್ಚಿತದಂತೆ ತೋರುತ್ತದೆ ಎನ್ನುತ್ತಾರೆ ರಾಜಕೀಯ ವೀಕ್ಷಕರು.

 ಮೋದಿಯವರ ಈ ಬಹಿರಂಗ ಪ್ರಚಾರದಿಂದ ಟ್ರಂಪ್ ಅವರು ವಿಜಯದ ಗುರಿ ಮುಟ್ಟುವರೋ ಇಲ್ಲವೋ ಈಗಲೇ ಹೇಳಲಾಗದು. ಒಂದು ವೇಳೆ 2020ರ ಚುನಾವಣೆಯಲ್ಲಿ ಅವರು ಗೆದ್ದರೂ ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರತಕ್ಕೆ ಡೆಮಾಕ್ರಟರ ನೆರವು-ಬೆಂಬಲ ಅಗತ್ಯವಿದೆ ಎಂಬುದನ್ನು ಅಲ್ಲಗಳೆಯಲಾಗದು. ಮೋದಿಯವರ ಟ್ರಂಪ್ ಚುನಾವಣಾ ಪ್ರಚಾರ ಖಂಡಿತವಾಗಿಯೂ ಡೆಮಾಕ್ರಟರಿಗೆ ಪ್ರಿಯವಾದ ಸಂಗತಿಯಲ್ಲ.ಇದರಿಂದಾಗಿ ಡೆಮಾಕ್ರಟರು ಭಾರತದ ವಿಷಯಗಳಲ್ಲಿ ಕಠಿಣ ನಿಲುವು ತಾಳಬಹುದು. ಇನ್ನೂ ಹೆಚ್ಚಿನ ಅಪಾಯಕಾರಿ ಪರಿಣಾಮವೆಂದರೆ ಮೋದಿಯವರ ಈ ನಡೆಯಿಂದ ಅಮೆರಿಕಕ್ಕೆ ಭಾರತದ ಆಂತರಿಕ ವಿದ್ಯಮಾನಗಳಲ್ಲಿ ಮಧ್ಯಪ್ರವೇಶಿಸಲು ಪರವಾನಿಗೆಯನ್ನೂ ಪೂರ್ಣ ಅಧಿಕಾರವನ್ನೂ ಕೊಟ್ಟಂತಾಗಿದೆ. ಡೊನಾಲ್ಡ್ ಟ್ರಂಪ್‌ರೂ ಮೋದಿಯವರ ಋಣ ತೀರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮೋದಿಯವರನ್ನು ಹಾಡಿ ಹೊಗಳಿರುವುದಷ್ಟೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಕರೆದು ರಾಷ್ಟ್ರಪಿತನ ಪದವಿಗೇರಿಸಿದ್ದಾರೆ. ಇದರಿಂದ ನರೇಂದ್ರ ಮೋದಿಯವರಿಗೆ ನಾಚಿಕೆ, ಸಂಕೋಚ ಏನೂ ಆದಂತೆ ಕಾಣುವುದಿಲ್ಲ. ಆದರೆ, ಉತ್ಸಾಹದಿಂದಲೋ ಉದ್ದೇಶಪೂರ್ವಕವಾಗಿಯೋ ಟ್ರಂಪ್ ಅವರು ಆಡಿರುವ ಈ ಮಾತು ಮಹಾತ್ಮಾ ಗಾಂಧಿಯವರನ್ನು ರಾಷ್ಟ್ರಪಿತ ಎಂದು ಆರಾಧಿಸುವ ಕೋಟ್ಯಂತರ ಮಂದಿ ಭಾರತೀಯರ ಮನಸ್ಸಿಗೆ ನೋವುಂಟುಮಾಡಿದೆ. ಅದೇ ಅಮೆರಿಕದ ನೆಲದಲ್ಲೇ ಗಾಂಧಿಯವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವ ಮೋದಿಯವರು ಸೌಜನ್ಯಕ್ಕಾದರೂ ಟ್ರಂಪ್ ಅವರು ಉದಾರವಾಗಿ ನೀಡಿದ ರಾಷ್ಟ್ರಪಿತ ಸ್ಥಾನವನ್ನು ವಿನಯಪೂರ್ವಕ ನಿರಾಕರಿಸಬಹುದಿತ್ತು. ಆದರೆ ಅಂತಹ ಸೌಜನ್ಯವನ್ನೂ ಅವರು ಮೆರೆದಿಲ್ಲ. ಟ್ರಂಪ್ ಅವರ ಈ ಮಾತುಗಳನ್ನು ಗಾಂಧಿಯವರ ನೂರೈವತ್ತನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಒಂದು ತಮಾಷೆ ಎಂದು ಭಾರತೀಯರು ನಿರ್ಲಕ್ಷಿಸುವುದೇ ಸರಿಯಾದ ಪ್ರತಿಕ್ರಿಯೆಯಾದೀತು. ಭಾರತೀಯರು ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಆದರೆ ಬಿಜೆಪಿಯಲ್ಲಿನ ಮೋದಿ ಆರಾಧಕರು ಕೆಲವರು ಗಂಭೀರವಾಗಿ ತೆಗೆದುಕೊಂಡಿರುವಂತಿದೆ. ‘‘ಅಮೆರಿಕದ ಅಧ್ಯಕ್ಷರ ನಿಷ್ಪಕ್ಷತನದಿಂದ ಕೂಡಿದ ಈ ದಿಟ್ಟ ಮಾತುಗಳ ಬಗ್ಗೆ ಪಕ್ಷಭೇದ ಮರೆತು ಎಲ್ಲರೂ ಸಂತೋಷ ಪಡಬೇಕು, ಹೆಮ್ಮೆ ಪಡಬೇಕು. ಹೆಮ್ಮೆ ಪಡದವರು ತಮ್ಮನ್ನು ಭಾರತೀಯರೆಂದು ಕರೆದುಕೊಳ್ಳಬೇಕಿಲ್ಲ’’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ನೀಡಿರುವ ಹೇಳಿಕೆ ತೀವ್ರ ಪ್ರತಿಕ್ರಿಯೆಗೆ ಎಡೆಮಾಡಿಕೊಟ್ಟಿದೆ. ಟ್ರಂಪ್ ಅವರ ಈ ಪ್ರಶಂಸೆ ಭಾರತೀಯರು ಹೆಮ್ಮೆ ಪಡುವಂಥದ್ದಲ್ಲ, ಇದರಿಂದ ಮಹಾತ್ಮಾ ಗಾಂಧಿಯವರಿಗೆ ಅವಮಾನಮಾಡಿದಂತಾಗಿದೆ.ಟ್ರಂಪ್ ಹೇಳಿದ್ದ್ದೆಲ್ಲ ವೇದವಾಕ್ಯವೇ? ಜಿತೇಂದ್ರಸಿಂಗ್‌ರ ಮಾತುಗಳಿಂದ ಮಹಾತ್ಮಾಗಾಂಧಿಯವರ ಅನುಯಾಯಿಗಳನ್ನು ಹೀನಾಯವಾಗಿ ಕಂಡಂತಾಗಿದೆ ಎಂಬಂತಹ ಪ್ರತಿಕ್ರಿಯೆಗಳು ಗಾಂಧಿಯವರನ್ನು ರಾಷ್ಟ್ರಪಿತನೆಂದು ನಂಬಿರುವ ಕೋಟಿಕೋಟಿ ಭಾರತೀಯರ ನೊಂದ ಭಾವನೆಗಳ ಅನುರಣನೆಯೇ ಆಗಿದೆ.

ಸ್ವತ: ಗಾಂಧಿಯವರ ಆಯ್ಕೆಗೇ ಬಿಟ್ಟಿದ್ದಿದ್ದರೆ ಅವರು ರಾಷ್ಟ್ರಪಿತ ಸಂಬೋಧನೆಯನ್ನು ಒಪ್ಪುತ್ತಿರಲಿಲ್ಲವೇನೋ. ದಾಸ್ಯದ ನೊಗ ಕಳಚಿ ಸ್ವಾತಂತ್ರ್ಯ ತಂದು ಕೊಟ್ಟ ತಮ್ಮ ಪ್ರೀತಿಯ ಬಾಪುವನ್ನು ಕೋಟ್ಯಂತರ ಭಾರತೀಯರು ರಾಷ್ಟ್ರಪಿತನೆಂದು ಕರೆದರು. ಅದು ರಾಷ್ಟ್ರವ್ಯಾಪಿ ಮನ್ನಣೆಯನ್ನು ಪಡೆಯಿತು. ಈ ಭಾವನೆಯನ್ನೂ ಒಪ್ಪಿಕೊಳ್ಳದ ಅಸಹನೆ ಗಾಂಧಿಯವರ ವಿಚಾರದಲ್ಲಿ ವ್ಯಕ್ತವಾಗಬಾರದಿತ್ತು. ಅದೂ ಗಾಂಧೀಜಿಯವರ ನೂರೈವತ್ತನೆ ಜನ್ಮದಿನೋತ್ಸವಕ್ಕೆ ಸಡಗರದ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲಿ. ಮಹಾತ್ಮಾಗಾಂಧಿ ಮತ್ತು ನೆಹರೂರನ್ನು ಅವರ ಎತ್ತರದ ಸ್ಥಾನಗಳಿಂದ ಪದಚ್ಯತಿಗೊಳಿಸಿ ಆ ಜಾಗದಲ್ಲಿ ಮತ್ತೊಬ್ಬರನ್ನು ಕೂರಿಸುವ ಪರಿವಾರದ ಉತ್ಸಾಹದಲ್ಲಿ ಅಚ್ಚರಿಯೇನೂ ಕಾಣುತ್ತಿಲ್ಲ. ಆದರೆ ಇಂತಹ ವಾಮ ಮಾರ್ಗಗಳ ಮೂಲಕ ಜನಮನದಿಂದ ಹಾಗೂ ಚರಿತ್ರೆಯಿಂದ ಈ ಮಹನೀಯರನ್ನು ಅಳಿಸಿಹಾಕಬಹುದು ಎಂದು ಯಾರಾದರೂ ನಂಬಿದ್ದರೆ ಅದು ಭ್ರಮೆಯಷ್ಟೆ. ಪ್ರಿಯ ಬಾಪೂ, ನೂರೈವತ್ತನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಇದೆಂಥ ಕೊಡುಗೆ ನಿಮಗೆ!
ಬಾಪೂ ಬೊಚ್ಚು ಬಾಯಿಯಿಂದ ನಗುತ್ತ ಹೇಳುತ್ತಾರೆ, ಈಗ ದೇಶಕ್ಕೆ ಬೇಕಾಗಿರುವುದು:
‘‘ಪ್ರಾಚೀನ ಧರ್ಮಗಳ ಭಾರತದಲ್ಲಿ ಕೊಡುವಂತಹದ್ದು ಬೇಕಾದಷ್ಟಿದೆ. ಪರಸ್ಪರ ಧರ್ಮಗಳ ಮೂಲಕ ಹೃತ್ಪೂರ್ವಕವಾಗಿ ಸಹಾನುಭೂತಿಯಿಂದ ಏಕತೆಯನ್ನು ರೂಪಿಸಬಹುದಾಗಿದೆ. ಈ ಮುಖ್ಯ ಪ್ರಶ್ನೆಯಲ್ಲಿ ಅಡಕವಾಗಿರುವುದು ಪರಮ ಸಹಿಷ್ಣುತೆ. ಅಂದರೆ ನಮ್ಮ ದಿನನಿತ್ಯ ಜೀವನದ ಸಂಬಂಧಗಳಲ್ಲಿ ವ್ಯಾಪಕವಾದ ಪ್ರೀತಿ ವಾತ್ಸಲ್ಯಗಳಿರಬೇಕು. ಆಗ ಹಾಲಿ ಇರುವ ತಪ್ಪುಗ್ರಹಿಕೆಗಳು ಮಾಯವಾಗುತ್ತವೆ. ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಇಂಥ ಸಹಿಷ್ಣುತೆಯ ಅಗತ್ಯ ಹೆಚ್ಚಾಗಿರುವುದು ವಾಸ್ತವಿಕ ಸಂಗತಿಯಲ್ಲವೇ? ಇದು ಪೂರ್ವ-ಪಶ್ಚಿಮಗಳ ನಡುವಣ ಸಮಸ್ಯೆಗಿಂತ ದೊಡ್ಡದು ಎಂದು ಕೆಲವರು ಭಾವಿಸುವುದುಂಟು. ಭಾರತೀಯರ ನಡುವೆ ಇರುವ ಸಾಮರಸ್ಯದ ಕೊರಳು ಹಿಚುಕುವ ಕೆಲಸವನ್ನು ನಾವು ಮಾಡದಿರೋಣ. ತನ್ನೊಳಗೇ ಒಡೆದು ಛಿದ್ರವಾಗಿರುವ ಮನೆ ಕುಸಿಯುವುದು ಅನಿವಾರ್ಯ. ಆದ್ದರಿಂದ ನಾನು ಭಾರತದ ಎಲ್ಲ ಸಮುದಾಯಗಳ ನಡುವೆ ಪರಿಪೂರ್ಣ ಐಕಮತ್ಯ ಮತ್ತು ಭ್ರಾತೃತ್ವಗಳು ಅಗತ್ಯ ಎಂದು ಆಗ್ರಹಪೂರ್ವಕವಾಗಿ ಹೇಳಲಿಚ್ಛಿಸುತ್ತೇನೆ’’
(ರಾಮಚಂದ್ರ ಗುಹಾ ಅವರ ‘ಗಾಂಧಿ ಮಹಾತ್ಮರಾದುದು’-ಪುಟ249)
ಹಿಂದೂ ಮುಸ್ಲಿಂ ಐಕಮತ್ಯ ಕುರಿತ ಚರ್ಚೆಯೊಂದರ ಸಂದರ್ಭದಲ್ಲಿ ಗಾಂಧೀಜಿಯವರು ಆಡಿದ ಈ ಮಾತುಗಳು ಇಂದು ಅತ್ಯಗತ್ಯ ಮನನೀಯವಾದುದು, ಅನುಷ್ಠಾನ ಯೋಗ್ಯವಾದುದು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75