ಬೆಂಗಳೂರಿನಲ್ಲಿ ಡೇರಿ ತರಬೇತಿ ಪಡೆದಿದ್ದ ಗಾಂಧೀಜಿ

Update: 2019-10-01 18:16 GMT

ಬೆಂಗಳೂರಿನ ಅಡುಗೊಡಿಯಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (ಎನ್‌ಡಿಆರ್‌ಐ)ಯ ವಿಸ್ತಾರವಾದ ಆವರಣದಲ್ಲಿ ಸದ್ಯ ಜೀರ್ಣಾವಸ್ಥೆಯಲ್ಲಿರುವ ಪಾಳುಬಿದ್ದ ಕಟ್ಟಡ ಇತಿಹಾಸದ ಮಹತ್ವದ ಕಾಲಘಟ್ಟವನ್ನು ತನ್ನೊಳಗೆ ಹಿಡಿದಿಟ್ಟಿದೆ. ಅಕ್ಟೋಬರ್ 2ರಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರಿಗೂ ಈ ಕಟ್ಟಡಕ್ಕೂ ಇದ್ದ ನಂಟನ್ನು ಮೆಲುಕು ಹಾಕಲಾಗಿದೆ.

1927ರ ಜೂನ್ ತಿಂಗಳಲ್ಲಿ ಅಂದು ಪಿಂಚಣಿದಾರರ ಸ್ವರ್ಗವೆನಿಸಿದ್ದ ಬೆಂಗಳೂರಿನಲ್ಲಿ ಕಾಯಿಲೆಯಿಂದ ಗುಣಮುಖರಾಗುತ್ತಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹದಿನೈದು ದಿನಗಳ ಕಾಲ ನಿರಂತರ ಈ ಕಟ್ಟಡಕ್ಕೆ ಭೇಟಿ ನೀಡಿದ್ದರು.

ಎನ್‌ಡಿಆರ್‌ಐ ಕಡತದಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ, ಬ್ರಿಟಿಶ್ ಶಸ್ತ್ರಚಿಕಿತ್ಸಕ ಮೇ.ಮ್ಯಾಡೊಕ್, ಗಾಂಧೀಜಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ನಂತರ ಯಾವುದಾದರೂ ಹಿತವಾದ ವಾತಾವರಣವಿರುವ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುವಂತೆ ಅವರು ಗಾಂಧೀಜಿಗೆ ಸಲಹೆ ನೀಡಿದ್ದರು. ಅದಕ್ಕೆ ಬೆಂಗಳೂರು ಸೂಕ್ತ ಸ್ಥಳವೆಂದು ಗೊತ್ತು ಮಾಡಲಾಯಿತು ಮತ್ತು ಮೈಸೂರಿನ ಮಹಾರಾಜರೂ ಮಹಾತ್ಮರನ್ನು ತಮ್ಮ ಅತಿಥಿಯಾಗಿ ಬರುವಂತೆ ಆಹ್ವಾನಿಸಿದರು.

ಬೆಂಗಳೂರಿಗೆ ಆಗಮಿಸಿದ ಗಾಂಧೀಜಿ ಕುಮಾರಕೃಪ ಅತಿಥಿಗೃಹದಲ್ಲಿ ತಂಗಿದ್ದರು. ಇಂಪೀರಿಯಲ್ ಡೇರಿ ಎಕ್ಸ್‌ಪರ್ಟ್‌ನ ಕಚೇರಿ ಈ ಅತಿಥಿಗೃಹದ ಸಮೀಪವೇ ಇತ್ತು. ಅಂದು ಈ ಸಂಸ್ಥೆಯ ಮುಖ್ಯಸ್ಥ ವಿಲಿಯಂ ಸ್ಮಿತ್ ಎಂಬ ಬ್ರಿಟಿಶ್ ಆಗಿದ್ದರು. ಸ್ಮಿತ್ ಜೊತೆ ಗಾಂಧೀಜಿ ಹಲವು ಬಾರಿ ಮಾತುಕತೆ ನಡೆಸಿದಾಗ ಅವರಿಗೆ ಡೇರಿಯ ಬಗ್ಗೆ ಆಸಕ್ತಿ ಮೂಡಿತ್ತು ಮತ್ತು ಅದಕ್ಕೆ ಸರಿಯಾಗಿ ಸ್ಮಿತ್ ಕೂಡಾ ಗಾಂಧೀಜಿಯನ್ನು ಸಂಸ್ಥೆ ಭೇಟಿ ನೀಡುವಂತೆ ಮತ್ತು ವೈಯಕ್ತಿಕವಾಗಿ ಇತ್ತೀಚಿನ ಡೇರಿ ತಂತ್ರಜ್ಞಾನದ ಬಗ್ಗೆ ಜ್ಞಾನ ಪಡೆಯುವಂತೆ ಆಹ್ವಾನ ನೀಡಿದರು. ಇದಕ್ಕಾಗಿ ಪ್ರತಿದಿನ ಸಂಜೆ 5ರಿಂದ 5-45ರ ಸಮಯವನ್ನು ನಿಗದಿಪಡಿಸಲಾಯಿತು.

ಗಾಂಧೀಜಿ ಪ್ರತಿದಿನಿ ನಿಗದಿತ ಸಮಯಕ್ಕೆ ಸರಿಯಾಗಿ ಪಂಡಿತ್ ಮದನ್‌ಮೋಹನ್ ಮಾಳವಿಯ ಜೊತೆಗೆ ಸಂಸ್ಥೆಗೆ ಆಗಮಿಸಿ ಡೇರಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಅಲ್ಲಿನ ಅಧಿಕಾರಿ ಝಿಲ್ ಕೊಥವಲ್ಲ ಗಾಂಧೀಜಿ ಮತ್ತು ಮಾಳವಿಯರನ್ನು ಡೇರಿಯ ಸುತ್ತ ಸುತ್ತಾಡಿಸಿ ಹಸುಗಳ ಸಂತಾನೋತ್ಪತಿ ಮತ್ತು ಡೇರಿ ತಂತ್ರಜ್ಞಾನದ ಬಗ್ಗೆ ವಿವರಣೆ ನೀಡುತ್ತಿದ್ದರು.

ಈ ಭೇಟಿ ಮತ್ತು ಸಂವಾದದಿಂದ ಹಸುವಿನ ಕುರಿತು ಗಾಂಧೀಜಿಗೆ ಇದ್ದ ಅರಿವು ಹೆಚ್ಚಾಯಿತು. ಹಸುಗಳ ಒಳಿತು ಮತ್ತು ಸಂರಕ್ಷಣೆ ಗಾಂಧೀಜಿ ಕಾಳಜಿ ಹೊಂದಿದ್ದ ಮುಖ್ಯ ವಿಷಯವಾಗಿತ್ತು. ತನ್ನ ಸಂಪಾದಕತ್ವದ ಯಂಗ್ ಇಂಡಿಯಾ ಜರ್ನಲ್‌ನಲ್ಲಿ ಗಾಂಧೀಜಿ, ಹಸುವಿನ ಸಂತಾನೋತ್ಮತಿ, ಅದರ ಪೋಷಣೆ ಮತ್ತು ಸುಧಾರಣೆಯ ಕುರಿತು ಹಲವು ಲೇಖನಗಳನ್ನು ಬರೆದರು.

ಎನ್‌ಡಿಆರ್‌ಐ ಮುಖ್ಯಸ್ಥ ಕೆ.ಪಿ ರಮೇಶ್ ಪ್ರಕಾರ, ಸಂಸ್ಥೆಯ 70ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾರಂಪರಿಕ ಕಟ್ಟಡದ ಎದುರು ಗಾಂಧೀಜಿ ಮತ್ತು ಜಿಲ್ ಹಸುವಿನ ಪ್ರತಿಮೆಯನ್ನು ಸ್ಥಾಪಿಸುವುದು ಸೂಕ್ತ ಎಂದು ಎನ್‌ಡಿಆರ್‌ಐ ಅಧಿಕಾರಿಗಳು ನಿರ್ಧರಿಸಿದ್ದರು. ಕಟ್ಟಡದ ಮುಖ್ಯ ಪ್ರವೇಶದ್ವಾರದಲ್ಲೂ ಮಹಾತ್ಮಾ ಗಾಂಧಿ ಮತ್ತು ಪಂಡಿತ್ ಮಾಳವಿಯ ಜಿಲ್ ಹಸು ಜೊತೆಗಿರುವ ಭಾವಚಿತ್ರವಿದ್ದರೂ ಅದು ಸದ್ಯ ಬಹುಮಟ್ಟಿಗೆ ಮಾಸಿಹೋಗಿದೆ.

ಸದ್ಯ ಉಪಯೋಗವಿಲ್ಲದೆ ಪಾಳುಬಿದ್ದಿರುವ ಕಟ್ಟಡದ ನಿರ್ಮಾಣ ಕಾರ್ಯ 1917ರಲ್ಲಿ ಆರಂಭವಾಗಿ 1923ರಲ್ಲಿ ಉದ್ಘಾಟಿಸಲಾಗಿತ್ತು ಮತ್ತು ಆರಂಭದಲ್ಲಿ ಮುಖ್ಯ ಆಡಳಿತಾತ್ಮಕ ಕಟ್ಟಡವಾಗಿ ಕಾರ್ಯಾಚರಿಸುತ್ತಿತ್ತು. ನಂತರ 1996ವರೆಗೆ ಸಂಸ್ಥೆಯ ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು. ಈ ಕೇಂದ್ರವನ್ನು ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಪರಿವರ್ತಿಸಲು ನವೀಕರಣಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಮೇಶ್ ತಿಳಿಸುತ್ತಾರೆ. ಕಟ್ಟಡದ ಆಧಾರ ಸ್ತಂಭಗಳು, ಕಬ್ಬಿಣದ ಬೀಮ್‌ಗಳು ಮತ್ತು ಇತರ ಆಧಾರ ಕಂಬಗಳು ಇನ್ನೂ ಉತ್ತಮ ಸ್ಥಿತಿಯಲ್ಲಿದ್ದು ಕಟ್ಟಡವನ್ನು ವ್ಯವಸ್ಥಿತವಾಗಿ ನೋಡಿಕೊಂಡರೆ ಇನ್ನೂ ಹಲವು ದಶಕಗಳ ಕಾಲ ಸುಭದ್ರವಾಗಿ ಉಳಿಯಲಿದೆ.

ಎನ್‌ಡಿಆರ್‌ಐಯಲ್ಲಿದ್ದ ಜಿಲ್ ಹಸುವಿನ ಬಗ್ಗೆ ಗಾಂಧೀಜಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಈ ಹಸು ಸ್ಕಾಟ್‌ಲೆಂಡ್‌ನ ಐಶಿರ್ ಎತ್ತು ಮತ್ತು ಹರ್ಯಾಣದ ಹಸುವಿನ ಸಂಯೋಗದಿಂದ ಜನಿಸಿದ ತಳಿಯಾಗಿದೆ. ಅಡುಗೊಡಿಯ ಸೇನಾ ಫಾರ್ಮ್‌ನಲ್ಲಿ ಜನಿಸಿದ ಜಿಲ್ ಹತ್ತೊಂಬತ್ತುವರೆ ವರ್ಷ ಜೀವಿಸಿದ್ದು 18 ಕರುಗಳಿಗೆ ಜನ್ಮ ನೀಡಿತ್ತು ಮತ್ತು ತನ್ನ ಜೀವಿತಾವಧಿಯಲ್ಲಿ 1.54 ಲಕ್ಷ ಪೌಂಡ್ ಹಾಲು ನೀಡಿತ್ತು.

ಸಂಸ್ಥೆಗೆ ತನ್ನ ಕೊನೆಯ ದಿನದ ಭೇಟಿಯಲ್ಲಿ ಗಾಂಧೀಜಿ ಅಲ್ಲಿಗೆ ಬೇಟಿ ನೀಡುವವರ ದಾಖಲಾತಿ ಪುಸ್ತಕದಲ್ಲಿ ಗಾಂಧೀಜಿ ತನ್ನ ಸಹಿಯನ್ನು ಎಂ.ಕೆ ಗಾಂಧಿ ಎಂದು ಹಾಕಿದ್ದರು ಮತ್ತು ಹುದ್ದೆಯ ಕಾಲಂನಲ್ಲಿ ಸಾಬರ್ಮತಿಯ ರೈತ ಎಂದು ಬರೆದಿದ್ದರು. ಹಸು ಮತ್ತು ಅದರ ಉಪಯೋಗಗಳ ಕುರಿತು ಮಹತ್ಮ ಗಾಂಧಿ ನಿಲುವನ್ನು ದಾಖಲಿಸಿರುವ ಬಾಪೂ ಆ್ಯಂಡ್ ಡೇರಿಯಿಂಗ್ ಎಂಬ ಹೆಸರಿನ ಕಿರುಪುಸ್ತಕವನ್ನು ಡಾ. ರಮೇಶ್ ಬರೆದಿದ್ದಾರೆ.

Writer - ಎಂ.ಎ.ಸಿರಾಜ್

contributor

Editor - ಎಂ.ಎ.ಸಿರಾಜ್

contributor

Similar News