ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡಿದರೆ ಅಕ್ರಮ ವಲಸೆಯಲ್ಲಿ ಹೆಚ್ಚಳ
ಐಝಾವ್ಲ್, ಅ.5: ಪೌರತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ರಾಜ್ಯದ ಜನರು ವಿರೋಧಿಸುತ್ತಿದ್ದಾರೆ ಮತ್ತು ಈ ತಿದ್ದುಪಡಿಯ ಮೂಲಕ ಮುಸ್ಲಿಮೇತರರಿಗೆ ಪೌರತ್ವ ನೀಡಿದರೆ ಮಿಝೊರಾಂನಲ್ಲಿ ಅಕ್ರಮ ವಲಸೆಗೆ ದ್ವಾರವನ್ನು ತೆರೆದಂತಾಗುತ್ತದೆ ಎಂದು ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಿಝೊರಾಂ ಮುಖ್ಯಮಂತ್ರಿ ಝೋರಮ್‌ತಂಗ ಶನಿವಾರ ತಿಳಿಸಿದ್ದಾರೆ.
ರಾಜ ಭವನದಲ್ಲಿ ಶಾ ಜೊತೆ ಮಾತುಕತೆ ನಡೆಸಿದ ಝೋರಮ್‌ತಂಗ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಪೌರತ್ವ ತಿದ್ದುಪಡಿ ಮಸೂದೆ 2019ರಿಂದ ಮಿಝೊರಾಂ ಹೆಚ್ಚಿನ ಸುರಕ್ಷತಾ ನಿಬಂಧನೆಗಳನ್ನು ಪಡೆಯುವ ಮೂಲಕ ಇನ್ನಷ್ಟು ಬಲವರ್ಧಿತವಾಗಲಿದೆ ಎಂದು ಈ ಸಂದರ್ಭದಲ್ಲಿ ಶಾ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ಶಾ ಮಿಝೊರಾಂಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ವೇಳೆ ಶಾ, ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಪ್ರಸ್ತಾವ ಮಾಡದೆ ಇತರ ವಿಷಯಗಳ ಬಗ್ಗೆ ಮಾತನಾಡಿದರು. ಎನ್‌ಆರ್‌ಸಿ ಮತ್ತ ಸಿಎಬಿ ವಿರೋಧಿಸಿ ಮಿಝೊರಾಂನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು.
ಪೌರತ್ವ ತಿದ್ದುಪಡಿ ಮಸೂದೆ 2019ರ ಕುರಿತು ಕೋಲ್ಕತಾದಲ್ಲಿ ಮಾತನಾಡುವ ವೇಳೆ ಶಾ, ಹಿಂದು,ಸಿಖ್,ಜೈನರು ಮತ್ತು ಬೌದ್ಧರು ಸೇರಿದಂತೆ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ತಿಳಿಸಿದ್ದರು.