ಸಿರಿಯ: 4 ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದ ರಶ್ಯ
ವಾಶಿಂಗ್ಟನ್, ಅ. 14: ಈ ವರ್ಷದ ಮೇ ತಿಂಗಳಲ್ಲಿ ರಶ್ಯದ ಯುದ್ಧವಿಮಾನಗಳು ಸಿರಿಯದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ 12 ಗಂಟೆಗಳ ಅವಧಿಯಲ್ಲಿ ನಾಲ್ಕು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ರವಿವಾರ ವರದಿ ಮಾಡಿದೆ.
ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್‌ರನ್ನು ಬೆಂಬಲಿಸುವ ಪಡೆಗಳು ಆಸ್ಪತ್ರೆಗಳ ಮೇಲೆ ದಾಳಿ ನಡೆಸುವ ಮಾದರಿಯಲ್ಲೇ ಈ ದಾಳಿಗಳು ನಡೆದಿವೆ ಎಂದು ಪತ್ರಿಕೆ ಹೇಳಿದೆ. ರಶ್ಯದ ರೇಡಿಯೊ ದಾಖಲೆಗಳು, ವಿಮಾನ ಕಾಣಿಸಿಕೊಂಡ ದಾಖಲೆಗಳು ಮತ್ತು ಪ್ರತ್ಯಕ್ಷದರ್ಶಿ ವಿವರಗಳ ಆಧಾರದಲ್ಲಿ ಈ ದಾಳಿಗಳನ್ನು ನಡೆಸಿರುವುದು ರಶ್ಯ ಎಂದು ಪತ್ರಿಕೆ ಹೇಳಿದೆ.
ಮೇ 5ರಂದು ಆರಂಭವಾದ ದಾಳಿ 12 ಗಂಟೆಗಳ ಕಾಲ ಮುಂದುವರಿಯಿತು ಹಾಗೂ ದಾಳಿಗೊಳಗಾದ ಆಸ್ಪತ್ರೆಗಳ ಪೈಕಿ ನಬದ್ ಅಲ್ ಹಯಾತ್ ಸರ್ಜಿಕಲ್ ಆಸ್ಪತ್ರೆ ಒಂದಾಗಿತ್ತು ಎಂದು ಪತ್ರಿಕೆಯು ತನಿಖಾ ವರದಿಯಲ್ಲಿ ತಿಳಿಸಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಯಬಹುದು ಎಂದು ನಿರೀಕ್ಷಿಸಿ ಅಲ್ಲಿನ ಸಿಬ್ಬಂದಿ ಮೂರು ದಿನಗಳ ಮೊದಲೇ ಆಸ್ಪತ್ರೆ ತೊರೆದಿದ್ದರು.