ಜಮ್ಮು-ಕಾಶ್ಮೀರ:ಉಗ್ರರ ದಾಳಿಯಲ್ಲಿ ಪಂಜಾಬಿನ ಸೇಬು ವ್ಯಾಪಾರಿ ಸಾವು

Update: 2019-10-16 18:19 GMT

ಹೊಸದಿಲ್ಲಿ,ಅ.16: ಜಮ್ಮು-ಕಾಶ್ಮೀರದ ಶೋಪಿಯಾನ ಜಿಲ್ಲೆಯ ಟ್ರೆಂಝ್ ಎಂಬಲ್ಲಿ ಬುಧವಾರ ಸಂಜೆ ಉಗ್ರರ ದಾಳಿಯಲ್ಲಿ ಪಂಜಾಬಿನ ಸೇಬು ವ್ಯಾಪಾರಿಯೋರ್ವ ಕೊಲ್ಲಲ್ಪಟ್ಟಿದ್ದು,ಇನ್ನೋರ್ವ ಗಾಯಗೊಂಡಿದ್ದಾನೆ. ಸಂಜೆ 7:30ರ ಸುಮಾರಿಗೆ 3-4 ಉಗ್ರರು ಪಂಜಾಬಿನ ಸೇಬು ವ್ಯಾಪಾರಿ ಚರಣಜಿತ್ ಸಿಂಗ್ ಮತ್ತು ಸಂಜೀವ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಪುಲ್ವಾಮಾದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಸಿಂಗ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ ಸಂಜೀವ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದರು.

ಇದು ಕಣಿವೆಯಲ್ಲಿ ಮೂರು ದಿನಗಳಲ್ಲಿ ಮೂರನೇ ಉಗ್ರರ ದಾಳಿಯಾಗಿದೆ. ಬುಧವಾರ ಬೆಳಿಗ್ಗೆ ಪುಲ್ವಾಮಾದಲ್ಲಿ ಛತ್ತೀಸ್‌ಗಡದ ವಲಸೆ ಕಾರ್ಮಿಕನೋರ್ವ ಕೊಲ್ಲಲ್ಪಟ್ಟಿದ್ದರೆ,ಎರಡು ದಿನಗಳ ಹಿಂದೆ ಶೋಪಿಯಾನ್‌ನಲ್ಲಿ ರಾಜಸ್ಥಾನದ ಟ್ರಕ್ ಚಾಲಕನನ್ನು ಗುಂಡಿಟ್ಟು ಕೊಂದಿದ್ದ ಉಗ್ರರು ಹಣ್ಣಿನ ತೋಟವೊಂದರ ಮಾಲಕನ ಮೇಲೆ ಹಲ್ಲೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News