ಮನುಸ್ಮತಿಯನ್ನು ಹಿಂದೂ ದಂಡ ಸಂಹಿತೆ ಎಂದು ಘೋಷಿಸಿದ್ದರು
ಹಿಂದುತ್ವ ರಾಜಕಾರಣದ ಪ್ರತಿಪಾದಕರಾಗಿರುವ ಸಾವರ್ಕರ್‌ವಾದಿಗಳು ಆಧುನಿಕ ಕಾಲವನ್ನು ಕಲಿಯುಗವೆಂದೂ, ನಾಸ್ತಿಕರನ್ನು ಸಮಾಜದ ಕೊಳೆ ಎಂದೂ, ಜಾತೀಯತೆ ಹಾಗೂ ಹಿಂದೂ ಧರ್ಮ ಸಮಾನವೆಂದೂ, ವೈಜ್ಞಾನಿಕ ಮಾನವ ಧರ್ಮವು ಕ್ರಿಶ್ಚಿಯನ್ನರ ಹಾಗೂ ಮುಸ್ಲಿಮರ ಒಂದು ವಿದೇಶಿ ಒಳಸಂಚು ಎಂದೂ ಹೇಳುತ್ತಾರೆ. ಇಂತಹ ಸಾವರ್ಕರ್ ವಾದಿಗಳೇ ಈಗ ಸಾವರ್ಕರ್ ಅವರ ಈ ಗುಣಗಳನ್ನು ವೈಭವೀಕರಿಸುತ್ತಿರುವುದು ತುಂಬಾ ಕುತೂಹಲಕಾರಿಯಾಗಿದೆ.
ಭಾಗ-1
ಸಾವರ್ಕರ್‌ಗೆ ಭಾರತ ತಂಡ ಬೇಕೆಂದು ಈಗ ಪ್ರಬಲವಾಗಿ ವಾದಿಸುತ್ತಿರುವ ಸಾವರ್ಕರ್ ವಾದಿಗಳ ಪ್ರಕಾರ:
ಹಿಂದುತ್ವ ‘ವೀರ’ರಾಗಿರುವ ಸಾವರ್ಕರ್ ಓರ್ವ ‘ವಿಚಾರವಾದಿ ಹಿಂದೂ’, ಅಸ್ಪೃಶ್ಯತೆಯ ಆಚರಣೆಯನ್ನು ಕೊನೆಗೊಳಿಸಿದ ಓರ್ವ ನಾಯಕ, ‘ವೈಜ್ಞಾನಿಕ ಮನೋಭಾವ’ದ ಪ್ರತಿಪಾದಕ ಮತ್ತು ಓರ್ವ ನಾಸ್ತಿಕನಾಗಿ ಮೃತಪಟ್ಟವರು ಅಲ್ಲದೆ ‘‘ಅವರ ದೃಷ್ಟಿಕೋನ ಸಂಪೂರ್ಣವಾಗಿ ಆಧುನಿಕ ಮತ್ತು ವೈಜ್ಞಾನಿಕ ಹಾಗೂ ಜಾತ್ಯತೀತ’’.
ಹಿಂದುತ್ವ ರಾಜಕಾರಣದ ಪ್ರತಿಪಾದಕರಾಗಿರುವ ಸಾವರ್ಕರ್‌ವಾದಿಗಳು ಆಧುನಿಕ ಕಾಲವನ್ನು ಕಲಿಯುಗವೆಂದೂ, ನಾಸ್ತಿಕರನ್ನು ಸಮಾಜದ ಕೊಳೆ ಎಂದೂ, ಜಾತೀಯತೆ ಹಾಗೂ ಹಿಂದೂ ಧರ್ಮ ಸಮಾನವೆಂದೂ, ವೈಜ್ಞಾನಿಕ ಮಾನವ ಧರ್ಮವು ಕ್ರಿಶ್ಚಿಯನ್ನರ ಹಾಗೂ ಮುಸ್ಲಿಮರ ಒಂದು ವಿದೇಶಿ ಒಳಸಂಚು ಎಂದೂ ಹೇಳುತ್ತಾರೆ. ಇಂತಹ ಸಾವರ್ಕರ್‌ವಾದಿಗಳೇ ಈಗ ಸಾವರ್ಕರ್ ಅವರ ಈ ಗುಣಗಳನ್ನು ವೈಭವೀಕರಿಸುತ್ತಿರುವುದು ತುಂಬಾ ಕುತೂಹಲಕಾರಿಯಾಗಿದೆ.
ಅದೇನಿದ್ದರೂ, ಸಾವರ್ಕರ್ ಓರ್ವ ಉದಾರವಾದ ವ್ಯಕ್ತಿಯಾಗಿದ್ದಾರೆಂಬ ವಾದವನ್ನು ಹಿಂದೂ ಮಹಾಸಭಾದ ದಾಖಲೆಗಳಲ್ಲಿ ದೊರೆಯುವ ಸಾವರ್ಕರ್ ಕಾಲದ ದಾಖಲೆಗಳೊಂದಿಗೆ ಹೋಲಿಸಿ ನೋಡೋಣ. ಸಾವರ್ಕರ್, ಮನುಸ್ಮತಿ ಹಿಂದೂಗಳ ಸಂವಿಧಾನವಾಗಬೇಕೆಂದು ಬಯಸಿದ್ದರು. ಅವರು ಮನುವಿನ ಸಂಹಿತೆಗಳಲ್ಲಿ ದೃಢವಾದ ನಂಬಿಕೆ ಹೊಂದಿದ್ದರು ಎಂಬುದನ್ನು ತಿಳಿದಾಗ ಅವರು ಎಷ್ಟು ಶ್ರೇಷ್ಠ ವಿಚಾರವಾದಿ, ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಾರ ಹಾಗೂ ವೈಜ್ಞಾನಿಕ ಮನೋಧರ್ಮದವರು ಎಂಬುದು ಬಯಲಾಗುತ್ತದೆ. ಅವರು ಮನುಸ್ಮತಿಯನ್ನು ಹಿಂದೂಗಳ ಪವಿತ್ರ ಗ್ರಂಥವೆಂದು ಪರಿಗಣಿಸಿದ್ದರು. ಹಿಂದುತ್ವ ಹಾಗೂ ಆರೆಸ್ಸೆಸ್‌ನ ತತ್ವಶಾಸ್ತ್ರಜ್ಞ ಹಾಗೂ ಮಾರ್ಗದರ್ಶಕನಾಗಿ ಅವರು ಸ್ಪಷ್ಟ ಮಾತುಗಳಲ್ಲಿ ಹೀಗೆ ಹೇಳಿದ್ದರು:
‘‘ನಮ್ಮ ಹಿಂದೂ ರಾಷ್ಟ್ರಕ್ಕೆ ವೇದಗಳ ಬಳಿಕ ಅತ್ಯಂತ ಗೌರವಾರ್ಹವಾದ ಪೂಜಾರ್ಹವಾದ ಪವಿತ್ರ ಗ್ರಂಥ ಮನುಸ್ಮತಿ. ಅದು ಪ್ರಾಚೀನ ಕಾಲದಿಂದ ನಮ್ಮ ಸಂಸ್ಕೃತಿ-ಪದ್ಧತಿಗಳು ವಿಚಾರಧಾರೆ ಹಾಗೂ ಆಚರಣೆಗೆ ಮೂಲಾಧಾರವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಹಾಗೂ ದೈವಿಕ ಮಾರ್ಗವನ್ನು ಸಂಹಿತೆ ರೂಪದಲ್ಲಿ ನೀಡಿದೆ. ಇಂದಿಗೂ ಕೂಡ ಕೋಟಿಗಟ್ಟಲೆ ಹಿಂದೂಗಳು ತಮ್ಮ ಬದುಕು ಮತ್ತು ಆಚರಣೆಯಲ್ಲಿ ಅನುಸರಿಸಿರುವ ನಿಯಮಗಳು ಮನುಸ್ಮತಿಯನ್ನೇ ಆಧರಿಸಿವೆ. ಇಂದು ಮನುಸ್ಮತಿ ಹಿಂದೂ ಕಾನೂನು, ಹಿಂದೂ ದಂಡ ಸಂಹಿತೆ. ಇದು ಮೂಲಭೂತವಾಗಿರುವ ವಿಷಯ’’ (ವಿ.ಡಿ. ಸಾವರ್ಕರ್, ಸಾವರ್ಕರ್ ಸಮಗರ್ (ಹಿಂದಿಯಲ್ಲಿ ಸಾವರ್ಕರ್ ಬರಹಗಳ ಸಂಗ್ರಹ) ‘ವಿಮೆನ್ ಇನ್ ಮನುಸ್ಮತಿ’ ಪ್ರಭಾತ್, ದಿಲ್ಲಿ, ಸಂಪುಟ 4, ಪುಟ 415)
ಮನುವಿನ ಕಾನೂನುಗಳನ್ನು ಜಾರಿಗೊಳಿಸುವ ಸಾವರ್ಕರ್ ಅವರ ಈ ಕನಸು ನನಸಾದಲ್ಲಿ, ಅದು ಭಾರತದಲ್ಲಿ ದಲಿತರ ಹಾಗೂ ಮಹಿಳೆಯರ ಪಾಲಿಗೆ ಬದುಕಿನ ಮಾರ್ಗದ ಕೊನೆಯಾಗುತ್ತದೆ. ಅವರ ಬಗ್ಗೆ ಮನು ಏನು ಹೇಳುತ್ತಾನೆಂದು ತಿಳಿದರೆ ಆಗ ಅವರ ಬದುಕು ಎಷ್ಟೊಂದು ಚಿಂತಾಜನಕ ಹಾಗೂ ಕ್ರೂರ ಅಮಾನವೀಕೃತ (ಡೀಹ್ಯೂಮನೈಸ್ಡ್) ಸ್ಥಿತಿಗೆ ತಲುಪುತ್ತದೆಂದು ತಿಳಿಯುತ್ತದೆ.
ಶೂದ್ರರ ಕುರಿತು ಮನುವಿನ ಕಾನೂನುಗಳು ಹೀಗಿವೆ:
ಲೋಕಗಳ ಅಭಿವೃದ್ಧಿಗಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನೂ, ಭುಜದಿಂದ ಕ್ಷತ್ರಿಯರನ್ನೂ, ತೊಡೆಯಿಂದ ವೈಶ್ಯನನ್ನ್ನೂ ಪಾದದಿಂದ ಶೂದ್ರನನ್ನೂ ನಿರ್ಮಿಸಿದನು.(1/31)
ಆ ಮಹಾಪ್ರಭುವಾದ ಬ್ರಹ್ಮನು ಈ ಮೇಲಿನ ಮೂರು ವರ್ಣಗಳ ಜನರ ನಿಸ್ವಾರ್ಥ ಸೇವೆ ಮಾಡಿಕೊಂಡಿರುವುದನ್ನು ಶೂದ್ರನಿಗೆ ಕರ್ತವ್ಯವೆಂದು ಆದೇಶಿಸಿದ್ದಾನೆ. (1/91)
ಶೂದ್ರನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಹೀನವಾದ, ಕೆಟ್ಟ ಮಾತುಗಳಿಂದ ಬೈದರೆ ಆ ಶೂದ್ರನ ನಾಲಿಗೆಯನ್ನು ಛೇದಿಸತಕ್ಕದ್ದು, ಏಕೆಂದರೆ ಅವನು ಕೆಳ ಜಾತಿಯವನು. (9/270)
ಬ್ರಾಹ್ಮಣರಿಗೆ ಅಹಂಕಾರದಿಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ ಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಬೇಕು.(8/272)
ಬ್ರಾಹ್ಮಣನ ಜೊತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು, ಇಲ್ಲವೇ ಕುಂಡೆಯನ್ನು ಕತ್ತರಿಸಬೇಕು.(9/281)
ರಾಮಣ್ಣನಿಗೆ ಮಂಗಳ ಸೂಚಕವಾದ, ಕ್ಷತ್ರಿಯನಿಗೆ ಬಲ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗೂ ಶೂದ್ರನಿಗೆ ಜಿಗುಪ್ಸಾ ಸೂಚಕವಾದ ಹೆಸರುಗಳನ್ನು ಇಡಬೇಕು.(2/31)
ಬ್ರಾಹ್ಮಣನಿಗೆ ‘ಶರ್ಮ’ ಎಂತಲೂ, ರಾಜನಿಗೆ ರಕ್ಷಣೆಯನ್ನು ಸೂಚಿಸುವ ‘ವರ್ಮ’ ಎಂತಲೂ, ವೈಶ್ಯನಿಗೆ ಸಮೃದ್ಧತೆ ಸೂಚಿಸುವ ‘ಗುಪ್ತ’ ಎಂಬ ಹೆಸರನ್ನೂ ಹಾಗೂ ಶೂದ್ರನಿಗೆ ಸೇವೆ ಸೂಚಕವಾದ ‘ದಾಸ’ ಎಂಬ ಹೆಸರನ್ನು ಸೇರಿಸಬೇಕು. ಬ್ರಾಹ್ಮಣ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕಾರ್ಯವನ್ನು ಮಾಡಿದರೆ ಅದರಿಂದ ಅವನಿಗೆ ಯಾವ ಫಲವೂ ಸಿಗುವುದಿಲ್ಲ.(10/123)
ಕೆಲಸ ಮಾಡುವ ಶೂದ್ರನಿಗೆ ಉಳಿದ ಅನ್ನವನ್ನೂ, ಹಳೆಯ ಬಟ್ಟೆಗಳನ್ನೂ, ಕೇರಿಕೊಂಡು ಹಸನು ಮಾಡಿದ ನಂತರ ಉಳಿದ ಧಾನ್ಯಗಳನ್ನೂ ಕೊಡಬೇಕು.(10/125)
ಧನಾರ್ಜನೆ ಮಾಡುವ ಶಕ್ತಿ ಸಾಮರ್ಥ್ಯಗಳಿದ್ದರೂ ಶೂದ್ರನು ಧನವನ್ನು ಗಳಿಸಬಾರದು. ಹಣ ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ.(10/129)
ಮಹಿಳೆಯರ ಕುರಿತು ಮನುವಿನ ಕಾನೂನುಗಳು ಈ ರೀತಿ ಇವೆ:
ಬಾಲಕಿ ಇದ್ದಾಗಲೂ, ಯುವತಿಯಾದಾಗಲೂ, ಮನೆಯಲ್ಲಿದ್ದಾಗಲೂ ತಾನೇ ಸ್ವತಂತ್ರವಾಗಿ ಸ್ತ್ರೀಯು ಯಾವ ಕಾರ್ಯವನ್ನೂ ಮಾಡಬಾರದು.(5/147)
ಬಾಲ್ಯದಲ್ಲಿ ಸ್ತ್ರೀಯು ತಂದೆಯ ವಶದಲ್ಲಿ, ಯೌವನದಲ್ಲಿ ಗಂಡನ ಅಧೀನದಲ್ಲಿ, ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳ ಬೇಕಲ್ಲದೆ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.(5/148)
ಬಾಲ್ಯದಲ್ಲಿ ಸ್ತ್ರೀಯನ್ನು ತಂದೆ ರಕ್ಷಿಸುತ್ತಾನೆ. ಯೌವನದಲ್ಲಿ ಗಂಡ ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ. ಆದುದರಿಂದ ಸ್ತ್ರೀಯು ಸ್ವತಂತ್ರವಾಗಿ ಇರಲು ಅರ್ಹಳಲ್ಲ (ನ ಸ್ತ್ರೀ ಸ್ವಾತಂತ್ರ್ಯಮರ್ಹತಿ)(9/3)
ಸೂಕ್ಷ್ಮವಾದ ಪ್ರಸಂಗಗಳಿಂದ (ಜಾರತನ, ಅತ್ಯಾಚಾರ ಇತ್ಯಾದಿಗಳಿಂದ)ವಿಶೇಷವಾಗಿ ಸ್ತ್ರೀಯರನ್ನು ಕಾಪಾಡಬೇಕು. ಹಾಗೆ ಸ್ತ್ರೀಯರನ್ನು ಕಾಪಾಡದಿದ್ದರೆ ಅವರು ಹೆತ್ತ ಮನೆ ಹಾಗೂ ಕೊಟ್ಟ ಮನೆಗಳೆರಡಕ್ಕೂ ಕೆಟ್ಟ ಹೆಸರು ತರುತ್ತಾರೆ ಹಾಗೂ ದುಃಖವನ್ನುಂಟು ಮಾಡುತ್ತಾರೆ.(9/5)
ತಮ್ಮ ತಮ್ಮ ಪತ್ನಿಯರ ಹಾಗೂ ತಮ್ಮ ಮನೆಯ ಹೆಣ್ಣು ಮಕ್ಕಳ ರಕ್ಷಣೆ ಮಾಡುವುದೇ ಎಲ್ಲ ಜಾತಿಯ ಜನರ ಪರಮ ಧರ್ಮವಾಗಿದೆ. ಗಂಡಂದಿರು ದುರ್ಬಲರಾಗಿದ್ದರೂ ಸಹ ತಮ್ಮ ಹೆಂಡಂದಿರ ರಕ್ಷಣೆಗೆ ಯತ್ನಿಸುತ್ತಾರೆ.(9/6)
ತನ್ನ ಪತ್ನಿಯನ್ನು ರಕ್ಷಿಸಬಲ್ಲವನು ತನ್ನ ಸಂತಾನವನ್ನು, ಕುಲದ ಚಾರಿತ್ರ್ಯವನ್ನು, (ವಂಶ ಗೌರವವನ್ನು) ತನ್ನನ್ನು, ಸ್ವಧರ್ಮವನ್ನು ಎಲ್ಲವನ್ನೂ ರಕ್ಷಿಸಿಕೊಳ್ಳುತ್ತಾನೆ. (9/17)
ಯಾವ ತರಹದ ಪುರುಷನನ್ನು ಮನಸಾರೆ ವರಿಸಿ ಸ್ತ್ರೀಯು ಸೇವಿಸುವಳೋ ಅದೇ ತರಹದ ಪುತ್ರನನ್ನು ಪಡೆಯುತ್ತಾಳೆ. ಆದ್ದರಿಂದ ಶುದ್ಧವಾದ ಸಂತಾನ ಉಂಟಾಗಲಿ ಎಂಬ ಅಪೇಕ್ಷೆಯಿಂದ ಸ್ತ್ರೀಯ ಶೀಲವನ್ನು ಪ್ರಯತ್ನಪಟ್ಟು ಕಾಪಾಡಿಕೊಳ್ಳಬೇಕು (9/9)
(ಮುಂದುವರಿಯುವುದು) ಕೃಪೆ: countercurrents