ಭಾರತ ರತ್ನಕ್ಕೆ ಆರೆಸ್ಸೆಸ್/ಬಿಜೆಪಿ ಆಯ್ಕೆ ಮಾಡಿರುವ ವೀರಸಾವರ್ಕರ್

Update: 2019-10-30 18:16 GMT

ಭಾಗ-2

ಯಾವಾತನೂ ಸ್ತ್ರೀಯನ್ನು ಹೊಂದಿ ಬಲವಂತದಿಂದ ಶೀಲವನ್ನು ಕಾಪಾಡಲಾರನು. ಸ್ತ್ರೀಯರನ್ನು ಈ ಕೆಳಗೆ ಹೇಳುವ ಉಪಾಯಗಳಿಂದ ರಕ್ಷಿಸಲು ಪುರುಷರು ಶಕ್ತರಾಗುತ್ತಾರೆ.(9/10)
ಪತಿಯು ತನ್ನ ಪತ್ನಿಯನ್ನು ಧನ-ದ್ರವ್ಯ ಸಂಚಯದ ಕಾರ್ಯದಲ್ಲಿ, ಕುಟುಂಬ ನಿರ್ವಹಣೆ ಹಾಗೂ ಖರ್ಚಿನ ಚಟುವಟಿಕೆಯಲ್ಲಿ, ಶೌಚ ವಿಧಿಗಳಲ್ಲಿ, ಅಡುಗೆ ಮಾಡುವುದರಲ್ಲಿ, ಧರ್ಮಕಾರ್ಯದಲ್ಲಿ, ಗ್ರಹ ಪಾತ್ರೆಗಳು ಹಾಗೂ ಯಜ್ಞ ಪಾತ್ರೆಗಳನ್ನು ತೊಳೆದು ಶುದ್ಧವಾಗಿಸುವುದರಲ್ಲಿ ತೊಡಗಿಸಬೇಕು.(9/14)

ಸ್ತ್ರೀಯರು ಪುರುಷರ ರೂಪ ಹಾಗೂ ವಯಸ್ಸನ್ನು ಕುರಿತು ಹೆಚ್ಚು ವಿಚಾರಿಸಲು ಹೋಗುವುದಿಲ್ಲ. ಕುರೂಪಿಯಾಗಿರಲಿ, ಸುರೂಪಿ ಆಗಿರಲಿ ಪುರುಷ ಸಂಗವನ್ನು ಬಯಸುವರು. ಪುರುಷರನ್ನು ಭೋಗಿಸುವರು.(9/14) ಪುರುಷ ಸಂಗದ ಅಭಿಲಾಷೆಯಿಂದ (ಚಪಲದಿಂದ) ಮನಸ್ಸಿನ ಚಂಚಲತೆಯಿಂದ ಹಾಗೂ ರತಿಯಲ್ಲಿ ಸ್ನೇಹಾನುರತಿ ಇಲ್ಲದಿರುವುದರಿಂದ ಎಷ್ಟೇ ಪ್ರಯತ್ನಪಟ್ಟು ರಕ್ಷಿಸಿದರೂ ವ್ಯಭಿಚಾರಕ್ಕೆ ಬಿದ್ದಂತಹ ಪತ್ನಿಯರು ತಮ್ಮ ಗಂಡಂದಿರಿಗೆ ದ್ರೋಹ ಬಗೆಯುತ್ತಾರೆ.(9/15)
ನಿಸರ್ಗ ಸಹಜವಾಗಿರುವ ಸ್ತ್ರೀಯರ ಈ ಚಂಚಲ ಸ್ವಭಾವವನ್ನು ಅರ್ಥ ಮಾಡಿಕೊಂಡು ಪುರುಷನು ಸ್ತ್ರೀ ರಕ್ಷಣೆಯಲ್ಲಿ ವಿಶೇಷವಾಗಿ ಪ್ರಯತ್ನಿಸತಕ್ಕದ್ದು. (9/16)
ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರೋಧ ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ. (9/17)

ಸಾವರ್ಕರ್ ತನ್ನ ಬದುಕಿನ ಉದ್ದಕ್ಕೂ ಮನುವಿನ ಶಾಸನಗಳಿಗೆ ಬದ್ಧರಾಗಿದ್ದರು. 1940ರಲ್ಲಿ ಮಥುರಾದಲ್ಲಿ ಹಿಂದೂ ಮಹಾಸಭಾದ 22ನೇ ಅಧಿವೇಶನದಲ್ಲಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಅವರು ಹಿಂದೂಗಳಿಗೆ ಮನು ಕಾನೂನುಗಳನ್ನು ನೀಡಿದವನೆಂದು ಮತ್ತೊಮ್ಮೆ ಒತ್ತಿ ಹೇಳಿದ್ದರು. ಅಲ್ಲದೆ ಮನು ಬೋಧಿಸಿದ ‘‘ಪೌರುಷಯುಕ್ತವಾದ (ಮ್ಯಾನ್ಲಿ) ಪಾಠಗಳನ್ನು ನಾವು ಮತ್ತೊಮ್ಮೆ ಕಲಿತರೆ ನಮ್ಮ ಹಿಂದೂ ರಾಷ್ಟ್ರವು ಯಾರಿಂದಲೂ ಜಯಿಸಲು ಸಾಧ್ಯವಿಲ್ಲದ ರಾಷ್ಟ್ರವೆಂದು ಮತ್ತೊಮ್ಮೆ ಸಾಬೀತಾಗುತ್ತದೆ’’ ಎಂದೂ ಹೇಳಿದ್ದರು. ಮನು ನೀಡಿರುವ ಕಾನೂನುಗಳನ್ನು ಒಮ್ಮೆ ನಾವು ಅನುಷ್ಠಾನಗೊಳಿಸಿದೆವೆಂದರೆ ‘‘ನಮ್ಮ ಹಿಂದೂ ರಾಷ್ಟ್ರ ಅಜೇಯ ಹಾಗೂ ನಾವು ಇತರರನ್ನು ಗೆಲ್ಲುವ ರಾಷ್ಟ್ರವೆಂದು ಮತ್ತೊಮ್ಮೆ ರುಜುವಾತಾಗುತ್ತದೆ’’ ಎಂದರು. (ವಿ.ಡಿ. ಸಾವರ್ಕರ್, ಸಮಗ್ರ ಸಾವರ್ಕರ್ ವಾಙ್ಮಯ: ಹಿಂದೂ ರಾಷ್ಟ್ರ ದರ್ಶನ್, ಸಂಪುಟ 6, ಮಹಾರಾಷ್ಟ್ರ ಪ್ರಾಂತಿಕ್ ಹಿಂದೂ ಸಭಾ, ಪೂನಾ, 1963, 426)

ತಮ್ಮ ನಾಯಕ ಅಸ್ಪೃಶ್ಯರ ಜೊತೆ ಸಮುದಾಯ ಸಹಭೋಜನ ಏರ್ಪಡಿಸಿದ್ದರು ಹಾಗೂ ಅವರ ನಿವಾಸಗಳಿಗೆ ಭೇಟಿ ನೀಡಿದ್ದರು ಎಂದು ಸಾವರ್ಕರ್‌ವಾದಿಗಳು ಹೇಳುತ್ತಾರೆ. ಆದರೆ ಇವುಗಳು ತೋರಿಕೆಯ ಮೇಲು ಮೇಲಿನ ಕಾಸ್ಮೆಟಿಕ್ ಸುಧಾರಣಾವಾದಿ ಕ್ರಿಯೆಗಳಾಗಿದ್ದವು ಎಂಬುದು ಅವರು ತನ್ನ ವೈಯಕ್ತಿಕ ನೆಲೆಯಲ್ಲಿ ‘‘ಹಿಂದೂ ಮಹಾಸಭಾ ಸಂಘಟನೆ ಇದರಲ್ಲಿ ಒಳಗೊಳ್ಳದಂತೆ’’ ಮಾಡಿದ್ದರು ಎನ್ನುವುದರಿಂದ ಸ್ಪಷ್ಟವಾಗುತ್ತದೆ. (ಎ.ಎಸ್. ಭಿಡೆ, ವಿನಾಯಕ ದಾಮೋದರ ಸಾವರ್ಕರ್’ಸ್ ವ್ಹರ್ಲ್ ವಿಂಗ್ ಪ್ರೊಪಗಾಂಡ: ಎಕ್ಸ್‌ಟ್ರಾಕ್ಸ್ ಫ್ರಮ್ ದಿ ಪ್ರೆಸಿಡೆಂಟ್’ಸ್ ಡೈರಿ ಆಫ್ ಹಿಸ್ ಪ್ರೊಪಗಾಂಡಿಸ್ಟ್ ಟೂರ್ಸ್‌ ಇಂಟರ್‌ವ್ಯೆಸ್ ಫ್ರಂ 1937-1941, ಮುಂಬೈ 1940)

‘‘ಹಿಂದೂ ದೇವಾಲಯಗಳಿಗೆ ಅಸ್ಪೃಶ್ಯರ ಪ್ರವೇಶವನ್ನು ವಿರೋಧಿಸುವ ಸನಾತನ ಹಿಂದೂಗಳಿಗೆ ಸಾವರ್ಕರ್ 1939ರಲ್ಲಿ ಹೀಗೆ ಆಶ್ವಾಸನೆ ನೀಡಿದ್ದರು: ಹಿಂದೂ ಮಹಾಸಭಾ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಕಡ್ಡಾಯ ಕಾನೂನನ್ನು ಮಂಡಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ.
ಹಿಂದೂಗಳಲ್ಲದವರಿಗೆ ಯಾವ ಮಿತಿಯಿಂದ ಮುಂದಕ್ಕೆ ಹಳೆಯ ದೇವಾಲಯಗಳಲ್ಲಿ ಸಂಪ್ರದಾಯ ಪ್ರಕಾರ ಪ್ರವೇಶವಿಲ್ಲವೋ ಅಲ್ಲಿಂದ ಮುಂದಕ್ಕೆ ಹೋಗಲು ಅನುಮತಿ ನೀಡುವ ಕಡ್ಡಾಯ ಕಾನೂನನ್ನು ಅದು ಮನ್ನಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ’’(ಭಿಡೆ, ಪು.128)

ದೇವಾಲಯಗಳಿಗೆ ಅಸ್ಪೃಶ್ಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತಾನು ಸನಾತನ ಹಿಂದೂಗಳ ಭಾವನೆಗಳಿಗೆ ನೋವು ಉಂಟು ಮಾಡುವುದಿಲ್ಲವೆಂದು ಸಾವರ್ಕರ್ 1941ರ ಜೂನ್ 20ರಂದು ಒಂದು ವೈಯಕ್ತಿಕ ಆಶ್ವಾಸನೆ ರೂಪದಲ್ಲಿ ಮತ್ತೊಮ್ಮೆ ಪ್ರತಿಜ್ಞೆ ಮಾಡಿ ಆಶ್ವಾಸನೆ ನೀಡಿದ್ದರು. ಈ ಬಾರಿ ಅವರು ಮಹಿಳಾ ವಿರೋಧಿ ಹಾಗೂ ದಲಿತ ವಿರೋಧಿ ವೈಯಕ್ತಿಕ ಕಾನೂನುಗಳನ್ನು ತಾನು ಮುಟ್ಟುವುದಿಲ್ಲ ಎಂದು ಆಶ್ವಾಸನೆಯನ್ನೂ ನೀಡಿದ್ದರು:

‘‘ಪ್ರಾಚೀನ ದೇವಾಲಯಗಳಿಗೆ ಅಸ್ಪೃಶ್ಯರ ಪ್ರವೇಶಕ್ಕೆ ಸಂಬಂಧಿಸಿ ಯಾವುದೇ ಶಾಸನಗಳನ್ನು ಹಿಂದೂ ಮಹಾಸಭಾ ಬಲವಂತವಾಗಿ ತರಬೇಕಾಗಿ ಅಥವಾ ಆ ದೇವಾಲಯಗಳಲ್ಲಿರುವ ಯಾವುದೇ ಪವಿತ್ರ ಹಾಗೂ ನೈತಿಕ ಕ್ರಮವನ್ನು ಆಚರಣೆಯನ್ನು ಬದಲಾಯಿಸಬೇಕೆಂದು ಕಾನೂನು ಮೂಲಕ ಬಲವಂತ ಮಾಡುವುದಿಲ್ಲವೆಂದು ನಾನು ಖಾತರಿ ನೀಡುತ್ತೇನೆ. ವೈಯಕ್ತಿಕ ಕಾನೂನಿನ ಮಟ್ಟಿಗೆ ಹೇಳುವುದಾದರೆ ನಮ್ಮ ಸನಾತನ ಸಹೋದರರ ಮೇಲೆ ಸುಧಾರಣಾವಾದಿ ನಿಲುವುಗಳನ್ನು ಹೇರುವ ಯಾವುದೇ ಕಾನೂನನ್ನು ಮಹಾಸಭಾ ಸಾಮಾನ್ಯವಾಗಿ ಬೆಂಬಲಿಸುವುದಿಲ್ಲ’’ (ಭಿಡೆ, ಪು.425)

ಹಿಂದೂ ಮಹಾಸಭಾದ ಪ್ರಾಚ್ಯಾಗಾರದಲ್ಲೇ ಲಭ್ಯವಿರುವ ಸಾವರ್ಕರ್ ಅವರ ಮಾನವ ವಿರೋಧಿ ವಿಚಾರಗಳು/ ಆಚರಣೆಗಳು ಹಾಗೂ ಮೇಲೆ ಉಲ್ಲೇಖಿಸಿರುವ ಹಲವಾರು ವಾಸ್ತವ ಸಂಗತಿಗಳನ್ನು ಗಮನಿಸಿದ ಮೇಲೆ ಕೂಡ ಅವರನ್ನು ಓರ್ವ ಶ್ರೇಷ್ಠ ವಿಚಾರವಾದಿ, ಸೆಕ್ಯುಲರ್‌ವಾದಿ ಹಾಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವವರೆಂದು ವೈಭವೀಕರಿಸಲಾಗುತ್ತಿದೆ. ವಾಸ್ತವ ಏನೆಂದರೆ ಸಾವರ್ಕರ್ ಅವರಿಗೆ ಮನುಸ್ಮತಿಯಲ್ಲಿ ಸಂಪೂರ್ಣ ನಂಬಿಕೆ ಇತ್ತು ಮತ್ತು ಅವರು ಪ್ರಜಾಸತ್ತಾತ್ಮಕ ಸೆಕ್ಯುಲರ್ ಸಂವಿಧಾನವನ್ನು ದ್ವೇಷಿಸುತ್ತಿದ್ದರು ಎಂಬ ಕಾರಣಕ್ಕಾಗಿ ಆರೆಸ್ಸೆಸ್/ಬಿಜೆಪಿ ಆಡಳಿತ ಅವರಿಗೆ ಭಾರತರತ್ನ ನೀಡಬೇಕು ಎನ್ನುತ್ತಿದೆ. ಸಮಾನತೆಯನ್ನು ಬಯಸುವ ಹಾಗೂ ಅಸ್ಪೃಶ್ಯತೆಯನ್ನು ತಿರಸ್ಕರಿಸುವ ಬಹುಸಂಖ್ಯಾತ ಭಾರತೀಯರು ಜಾತೀಯತೆಗೆ ಸಮಾನವಾದ ಹಿಂದುತ್ವದ ಈ ದೇವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಬದಲಿಸಬೇಕೆಂಬ ಉದ್ದೇಶದಿಂದ ಸಾವರ್ಕರ್ ಅವರ ಉದಾರವಾದಿ ನಿಲುವುಗಳನ್ನು ಉತ್ಪಾದಿಸಲಾಗುತ್ತಿದೆ.

ಕೃಪೆ: countercurrents    

Writer - ಶಂಸುಲ್ ಇಸ್ಲಾಂ

contributor

Editor - ಶಂಸುಲ್ ಇಸ್ಲಾಂ

contributor

Similar News