ಟಿಪ್ಪು ನಡೆಸಿರದ ಹತ್ಯಾಕಾಂಡ - ಒಂದು ವಿವೇಚನೆ
ಟಿಪ್ಪುಸುಲ್ತಾನನು ಮೇಲುಕೋಟೆಯಲ್ಲಿ ಶ್ರೀ ವೈಷ್ಣವ ಬ್ರಾಹ್ಮಣರ 800 ಕುಟುಂಬಗಳ ಹತ್ಯಾಕಾಂಡ ಮಾಡಿದನೆಂದು ಅದಕ್ಕೇ ಅವರು ದೀಪಾವಳಿ ಆಚರಿಸುವುದಿಲ್ಲವೆಂದು ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಿಂದ ಪುಕಾರು ಹಬ್ಬಿಸಲಾಗಿತ್ತು. ಆಮೇಲೆ ಅದಕ್ಕೇ ಈಚೆಗೆ ಕೆಲವರು ಸ್ಪಷ್ಟನೆ ಕೊಟ್ಟು ಅದು ಮೇಲುಕೋಟೆಯಲ್ಲಿ ನಡೆದುದ್ದಲ್ಲ, ಶ್ರೀರಂಗಪಟ್ಟಣದಲ್ಲೇ ನಡೆದಿದ್ದು ಮತ್ತು ಮೈಸೂರಿನ ಮಹಾರಾಣಿ ಅವರಿಗೆ ಬೆಂಬಲವಾಗಿ ಕೆಲವು ಮಂಡಯಂ ಅಯ್ಯಂಗಾರರು ಇದ್ದುದರಿಂದ ಅವರನ್ನು ಹತ್ಯೆಗೈಯಲಾಯ್ತು.. ಅಂತಲೂ ಸುದ್ದಿ ಸೇರಿಕೊಂಡಿತು.
ಆದರೆ ಎರಡಕ್ಕೂ ಕಟ್ಟುಕತೆಯ ಮಾತುಗಳನ್ನು ಬಿಟ್ಟರೆ ಯಾವ ರೀತಿಯ ಶಿಷ್ಟ (ಉಲ್ಲೇಖಿತ ಪುಸ್ತಕ, ಶಾಸನ, ತಾಮ್ರಪಟ, ಕಾವ್ಯ) ಮತ್ತು ಜನಪದದ (ಹಾಡುಗಬ್ಬ, ಲಾವಣಿ, ಕಥೆಗಳು) ಆಧಾರಗಳಿಲ್ಲ. ನಂಬಲರ್ಹ ಮೂಲಗಳೇ ಇಲ್ಲ.
ಅದಾಗ್ಯೂ ನಂಬುವುದಾದರೆ,
ಮೊದಲ ಪುಕಾರಿನಲ್ಲಿ ಹೇಳಿರುವಂತೆ:
1. ಮೇಲುಕೋಟೆಯಲ್ಲಿ 800 ಶ್ರೀವೈಷ್ಣವ ಬ್ರಾಹ್ಮಣ ಕುಟುಂಬಗಳು ಇದ್ದವೇ? ಅದೂ ಕ್ರಿ.ಶ.1790 ರಲ್ಲಿ. ಅಷ್ಟು ಜನಸಂಖ್ಯೆಯ ಕುಟುಂಬಗಳೂ ಈ ಕಾಲದಲ್ಲೂ ಅಲ್ಲಿಲ್ಲ. ಅದರಲ್ಲೂ ಬ್ರಾಹ್ಮಣರ ಸಂಖ್ಯೆ ಎಲ್ಲ ಕಾಲದಲ್ಲೂ ತೀರ ಕನಿಷ್ಠ ಸಂಖ್ಯೆಯದು! ಅಂತಹುದರಲ್ಲಿ ಆ ಸಣ್ಣ ಹಳ್ಳಿ ಮೇಲುಕೋಟೆಯಲ್ಲಿ 800ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳು ಇದ್ದದ್ದು ಮಾತ್ರವಲ್ಲ ಅವರ ಹತ್ಯಾಕಾಂಡ ನಡೆಯಿತೆಂಬುದು ದೊಡ್ಡ ಸುಳ್ಳು.
2. ಮೇಲುಕೋಟೆಯಲ್ಲಿ ದೀಪಾವಳಿಯನ್ನು ನಮ್ಮ ನಿಮ್ಮಂತೆಯೇ ಸಾಲು ದೀಪಗಳನ್ನು ಹಚ್ಚಿ, ಕೆಲವರು ಪಟಾಕಿ ಸಿಡಿಸಿ, ಚೆಲುವನಾರಾಯಣ ಯೋಗನಾರಸಿಂಹ ದೇವಳಗಳಲ್ಲಿ ವಿಶೇಷ ಪೂಜೆಗಳನ್ನು ಕೈಗೊಂಡು ಅದ್ದೂರಿಯಾಗಿ ಆಚರಿಸುತ್ತಾರೆ. ಇದನ್ನು ನಾವು ಮಂಡ್ಯದ ಜನ ನೋಡಿದ್ದೇವೆ.. ನೋಡುತ್ತಲೇ ಇದ್ದೇವೆ - ಇಲ್ಲಿಗೆ ‘‘ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ’’ ಎಂಬುದು ಇನ್ನೊಂದು ಕೆಟ್ಟ ಸುಳ್ಳು.
ಇನ್ನು ಎರಡನೇಯ ಪುಕಾರಿನಂತೆ:
1. ಹೆಬ್ಬಾರ ಅಯ್ಯಂಗಾರರು ಮತ್ತು ಮಂಡಯಂ ಅಯ್ಯಂಗಾರರು ಕೆಲವರು ಮೈಸೂರಿನ ರಾಣಿ ಲಕ್ಷ್ಮ್ಮಮ್ಮಣ್ಣಿಯವರಿಗೆ ಸಹಾಯ ಮಾಡುತ್ತಿದ್ದ ಕಾರಣ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಪಾಪ! ಕೇವಲ ಪೌರೋಹಿತ್ಯ, ಆಸ್ಥಾನದ ಕರಣಿಕತ್ವ ಬಿಟ್ಟರೆ ಮತ್ತೇನು ಮಾಡಲಾಗದ ಬಡ ಬ್ರಾಹ್ಮಣರು ಸಂಸ್ಥಾನದ ವಿರುದ್ಧ ಹೋರಾಡಲು ಸಾಧ್ಯವೇ?! ಅದೂ ಅವರದೇ ಪಂಗಡದ ದಿವಾನ್ ಪೂರ್ಣಯ್ಯನವರು ಇದ್ದಾಗ?!
* ‘ಸಹಾಯ’ ಹೌದು ಎನ್ನುವುದಾದರೆ! ಇವರು ಟಿಪ್ಪುವಿಗೆ ವಿರುದ್ದ ಮೈಸೂರು ರಾಣಿಯವರಿಗೆ ಸಹಾಯ ಮಾಡಿದ್ದರೋ ಅಥವಾ ಮೀರ್ ಸಾಧಿಕ್ ತರಹ ಬ್ರಿಟಿಷರಿಗೋ ?! (ಯಾಕೆಂದರೆ ರಾಣಿಯವರಿಗೆ ಟಿಪ್ಪುವಿನ ವಿರುದ್ಧ ದಂಗೆ ಏಳುವಷ್ಟು ಸೇನಾಬಲವಿರಲಿಲ್ಲ. ಇದ್ದದ್ದು ಬ್ರಿಟಿಷರಿಗೆ ಮಾತ್ರ ಮತ್ತು ಸಹಾಯ ಮಾಡಿದರೆ ಲಾಭ ದೊರೆಯುತ್ತಿದ್ದದು ಬ್ರಿಟಿಷರಿಂದ ಮಾತ್ರ!)
* ಹೌದು! ಟಿಪ್ಪ್ಪು ವಿರುದ್ಧ ಮೈಸೂರಿನ ಮಹಾರಾಣಿಗೋ ಅಥವಾ ಬ್ರಿಟಿಷರಿಗೋ ಸಹಾಯ ಮಾಡಿದ್ದರು ಅದಕ್ಕೇನೀಗ ಅಂತೀರಾ? ಯೋಚಿಸಿ; ತನ್ನ ರಾಜ್ಯದೊಳಗಿರುವ ಕೆಲವರು ರಾಜ್ಯದ ವಿರುದ್ಧ ಕೆಲಸ ಮಾಡುವುದು ರಾಜದ್ರೋಹವಲ್ಲವೇ?! ಅದನ್ನು ರಾಜನಾದವನು ಶಿಕ್ಷಿಸಬೇಕಲ್ಲವೇ?! ಇದಕ್ಕೆ ಹಿಂದೂ ರಾಜ, ಇಸ್ಲಾಂ ರಾಜ, ಜೈನ ರಾಜ, ಕೊಡವ ರಾಜ ಅಂತ ವಿಭಾಗ ಉಂಟೇ?! ಎಲ್ಲ ರಾಜರೂ ರಾಜದ್ರೋಹ ಮಾಡಿದವರಿಗೆ ಇದೇ ಶಿಕ್ಷೆ ಮಾಡಿದ್ದಾರೆ ಅನ್ನುತ್ತದಲ್ಲ ಇತಿಹಾಸ!
* ಟಿಪ್ಪು ‘ಬ್ರಾಹ್ಮಣ ವಿರೋಧಿ’ / ‘ಹಿಂದೂ ವಿರೋಧಿ’ ಅಂತಿರೇನು?! ಹೌದು ಅನ್ನೋದಾದ್ರೆ ಇವೆಲ್ಲಾ ಏನು?
ಮರಾಠ ಹಿಂದೂಗಳು ನಾಶ ಮಾಡಿದ ಶೃಂಗೇರಿ ಮಠಕ್ಕೆ ದತ್ತಿ -ಉಂಬಳಿ ಕೊಟ್ಟು ಬೆಳೆಸಿದ್ದು ಟಿಪ್ಪು
ಪಟ್ಟಣದ ಶ್ರೀರಂಗನಾಥ, ಶೃಂಗೇರಿ ಶಾರದಾ, ನಂಜನಗೂಡು ನಂಜುಂಡೇಶ್ವರ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ಹಲವಾರು ದೇವಾಲಯಗಳಿಗೆ ಬೆಳ್ಳಿಯ ಬಟ್ಟಲು, ಪಾತ್ರೆ, ಚಿನ್ನದ ಒಡವೆಗಳನ್ನು ದಾನ ಕೊಟ್ಟು ದೇವಾಲಯಗಳು ಸಮೃದ್ಧಿಯಾಗಿರುವಂತೆ ನೋಡಿಕೊಂಡಿದ್ದಾನೆ.
ಶ್ರೀರಂಗಪಟ್ಟಣದ ಟಿಪ್ಪುವಿನ ಮುಖ್ಯ ಅರಮನೆಯ ಎದುರಿಗೇ ಶ್ರೀರಂಗನಾಥ ದೇವಾಲಯ, ಪಕ್ಕಕ್ಕೆ ನಾರಸಿಂಹ ಮತ್ತು ಗಂಗಾಧರೇಶ್ವರ ದೇವಾಲಯಗಳಿವೆ. ಕಾಲಕಾಲಕ್ಕೆ ಇವನ್ನು ದುರಸ್ತಿಗೊಳಿಸಿ ಜೀರ್ಣೊದ್ಧಾರ ಮಾಡಲಾಗಿದೆ. ಹಿಂದೂ ವಿರೋಧಿಯಾಗಿದ್ದರೆ ಈ ದೇವಳಗಳು ಎಲ್ಲಿರುತ್ತಿದ್ದೋ?
ಅಷ್ಟಲ್ಲದೇ ಬ್ರಾಹ್ಮಣನಾದ ಪೂರ್ಣಯ್ಯನನ್ನೇ ತನ್ನ ಕಾಲದಲ್ಲೂ ದಿವಾನನಾಗಿ ಮುಂದುವರಿಸಿದ್ದಾನೆ.. ಆದರೆ ವೈಯುಕ್ತಿಕ ಲಾಭ ಮತ್ತು ದ್ವೇಷಕ್ಕಾಗಿ ಈತ ಟಿಪ್ಪುವಿಗೆ ದ್ರೋಹ ಬಗೆದು ಬ್ರಿಟಿಷರಿಗೆ ಸಹಾಯ ಮಾಡಿದ್ದನ್ನು ಜನಪದರು ಲಾವಣಿಗಳಲ್ಲಿ ಹಾಡಿದ್ದಾರೆ.
* ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯು ದೇವಸ್ಥಾನವಾಗಿತ್ತೇ?!
ಇಲ್ಲವೇ ಇಲ್ಲ.. ಅದು ಮುಸ್ಲೀಮರ ಪ್ರಾರ್ಥನೆಗಾಗಿ ಕಟ್ಟಿದ ಮಸೀದಿಯೇ ಆಗಿದೆ. ಆದ್ರೆ ಮುಂದೆ ಕಾಲಾನುಕ್ರಮದಲ್ಲಿ ರಸ್ತೆ ಬದಿಗಿದ್ದ ದೇವತೆಗಳ ಉಬ್ಬು ಕೆತ್ತನೆಯುಳ್ಳ ಸಾಲುಮಂಟಪವೊಂದನ್ನು ಈ ಮಸೀದಿಯೊಳಕ್ಕೆ ಸೇರಿಸಿಕೊಳ್ಳಲಾಗಿದೆಯಷ್ಟೇ! ಇದೊಂದು ಮಂಟಪವನ್ನು ನೋಡಿ ಅದು ಪೂರಾ ದೇವಳವಾಗಿತ್ತು ಎಂಬುದು ಹಾಸ್ಯಾಸ್ಪದ. ಇಂತಹ ಹಲವಾರು ಹಾಳು ಮಂಟಪಗಳು ಶ್ರೀರಂಗಪಟ್ಟಣ ದ್ವೀಪದ ರಸ್ತೆಬದಿ, ಹೊಲಗದ್ದೆ, ನದೀಗುಂಟಗಳಲ್ಲಿ ನಾವು ಯಥೇಚ್ಚವಾಗಿ ಕಾಣಬಹುದು.
ಇದೆಲ್ಲವೂ ಮೇಲುಕೋಟೆಯ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಯುಳ್ಳ ಬಿಜೆಪಿ ಬೆಂಬಲಿಗರು ಹಳೇ ಮೈಸೂರು ಭಾಗದ ಕೋಮುಸಾಮರಸ್ಯ ಕೆಡಿಸಲು ಕಟ್ಟಿದ ಕಟ್ಟುಕಥೆ ಎನ್ನುವುದನ್ನು ಸಾಬೀತು ಮಾಡುತ್ತದೆ. ಇಂತಹ ಸುಳ್ಳುಗಳನ್ನು ನಂಬಿ ಹರಡುವುದನ್ನು ನಿಲ್ಲಿಸಿ.. ಒಂದು ಕ್ಷಣ ವಿಚಾರ, ಆಲೋಚನೆ ಮಾಡಿ ನಂಬಬೇಕು ಮತ್ತು ಇವತ್ತಿನ ಬದುಕಿಗೆ ಬೇಕಾದ ಪರಸ್ಪರ ಹೊಂದಾಣಿಕೆಗಳನ್ನು, ಸೌಹಾರ್ದತೆಯನ್ನು ನಾವು ಬೆಳೆಸಿಕೊಳ್ಳಬೇಕಿದೆ.
Disclaimer: ನಾನು ಮಂಡ್ಯದವನು, ಸದಾ ಕಾಲ ಇಲ್ಲಿನ ಇತಿಹಾಸ, ಸಾಹಿತ್ಯ-ಸಂಸ್ಕೃತಿ, ಕೃಷಿಯೇತ್ಯಾದಿಗಳನ್ನು ನೋಡುತ್ತಾ, ಅಧ್ಯಯನ ಮಾಡುತ್ತಾ ಬಂದವನು. ನಿಮಗಿರುವ ಸಂದೇಹ, ಪ್ರಶ್ನೆಗಳನ್ನು ಅಥವಾ ನಿಮ್ಮದೇ ವಿವರಣೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಆದರೆ ವಾಟ್ಸ್‌ಆ್ಯಪ್ ಯುನಿವರ್ಸಿಟಿಯಲ್ಲಿ ಹರಿದುಬಂದ ಮೂರ್ಖತನವನ್ನು ಹಂಚಬೇಡಿ.