ಬೇಡ, ಭಾವಾವೇಶ
ಇತಿಹಾಸ ಪುಸ್ತಕಗಳಲ್ಲಿ ಬಳಕೆಯಾಗುವ ತಪ್ಪು ವಿಶೇಷಣಗಳು ಜನರನ್ನು ತಪ್ಪುಹಾದಿಗೆಳೆಯಬಲ್ಲವು ಎಂಬುದನ್ನು ಮರೆಯದೆ ನಾವು ಇತಿಹಾಸವನ್ನು ಓದಬೇಕಾಗುತ್ತದೆ. ಅವು ಹೇಳುವ ಎರಡು ರೀತಿಯ ‘ಸತ್ಯ’ಗಳಲ್ಲಿ ಯಾವುದು ‘ನಿಜವಾದ ಸತ್ಯ’ವೆಂದು ಪರಾಮರ್ಶಿಸಿ ತಿಳಿಯದೆ ರಾಜಕೀಯ, ಮತೀಯ ಅಥವಾ ಧಾರ್ಮಿಕ ಕಾರಣಕ್ಕಾಗಿ ಒಬ್ಬ ರಾಜನ ಬಗ್ಗೆಯೂ ಉನ್ಮಾದಕ್ಕೊಳಗಾಗುವುದು ಬಾಲಿಶತನವಾಗುತ್ತದೆ. ಭಾರತವನ್ನಾಳಿದ ಮುಸ್ಲಿಂ ದೊರೆಗಳ ಬಗ್ಗೆಯಾಗಲಿ, ಪೇಶ್ವೆಗಳ ಕುರಿತಾಗಲಿ ನಿಜವಾದ ಸತ್ಯವನ್ನು ತಿಳಿಯದೆ ಭಾವಾವೇಶಕ್ಕೊಳಗಾಗುವುದು ವಿವೇಕವಲ್ಲ.
ಯಾಕೆಂದರೆ ಇತಿಹಾಸದಲ್ಲಿ ಖಾಲಿ ಬಿಟ್ಟ ಸ್ಥಳಗಳು ಹಲವಿರುತ್ತವೆ. ಅವುಗಳನ್ನು ತುಂಬದೆ ವಸ್ತುನಿಷ್ಠ ಇತಿಹಾಸ ದೊರಕುವುದಿಲ್ಲ.
ಯಾವುದೇ ಒಂದು ದೇಶದ ಇತಿಹಾಸವೆಂದರೆ ಆ ದೇಶದ ಒಟ್ಟು ಜನಸಮುದಾಯ ವಿವಿಧ ಕಾಲಘಟ್ಟಗಳಲ್ಲಿ ಕಂಡು ಅನುಭವಿಸಿದ ನೋವು-ನಲಿವು, ಸೋಲು-ಗೆಲುವು ಆತಂಕ-ಆಶ್ಚರ್ಯ, ಆಸೆ- ನಿರಾಸೆಗಳು ಮಾನವೀಯ ವಿವರ, ವಸ್ತು ನಿಷ್ಠ ಕಥಾನಕ. ಇದನ್ನು ಓದುಗನಿಗೆ ತಲುಪಿಸುವುದು ಇತಿಹಾಸ ಪುಸ್ತಕಗಳನ್ನು ಬರೆಯುವವರು ಮಾಡಬೇಕಾದ ಕೆಲಸ. ಆದರೆ ಇವತ್ತು ನಮ್ಮ ಶಾಲೆ ಕಾಲೇಜುಗಳ ಇತಿಹಾಸ ಪಠ್ಯಗಳನ್ನು ಓದುವವನಿಗೆ ಇತಿಹಾಸವೆಂದರೆ ಕೆಲವೇ ಕೆಲವು ರಾಜಮಹಾರಾಜರ, ಚಾರಿತ್ರಿಕ ಪುರುಷರ ಅಥವಾ ಧಾರ್ಮಿಕ ಮುಖಂಡರ ಕೊಡುಗೆ ಎಂಬ ಭಾವನೆ ಬರುತ್ತದೆ. ಇದಕ್ಕೆ ಕಾರಣವಿದೆ. ಇತಿಹಾಸ ಜಾಗತಿಕವಾಗಿ ಯಾವತ್ತೂ ಆಳುವವರ್ಗ ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಬರೆಸುವ ಇತಿಹಾಸ; ವಿದ್ಯಾರ್ಥಿಗಳು ಓದುವ ಇತಿಹಾಸ ಸರಕಾರ ಗೊತ್ತುಪಡಿಸುವ ಇತಿಹಾಸ. ಯಜಮಾನನನ್ನು ಓಲೈಸುವ ಆಳು ತನ್ನ ಯಜಮಾನನ ಆಸಕ್ತಿ, ಆಶಯಗಳ ವಿರುದ್ಧ ಹೇಗೆ ಸತ್ಯ ಹೇಳಲಾರನೋ, ಹಾಗೆಯೇ ಸರಕಾರ ನೇಮಿಸಿದ ಲೇಖಕರು ಬರೆಯುವ ಇತಿಹಾಸ ಪಠ್ಯಗಳು ಸರಕಾರಕ್ಕೆ ಒಪ್ಪಿಗೆಯಾಗುವ ಅಭಿಪ್ರಾಯಗಳನ್ನಷ್ಟೆ ಹೇಳುವುದು ಸಾಧ್ಯ.
ಹಾಗಾಗಿ ಬ್ರಿಟಿಷ್ ಸರಕಾರದ ಆಳ್ವಿಕೆಯ ಕಾಲದಲ್ಲಿ, ಸಾರ್ವತ್ರಿಕ ಚುನಾವಣೆಗಳಿಲ್ಲದ ಕಾಲದಲ್ಲಿ, ಯಾವುದೇ ಒಂದು ಸಮುದಾಯದ ಒಟ್ಟು ಮತಗಳ ಮೊತ್ತ ಅಧಿಕಾರಕ್ಕೆ ಬರಲು ಅನಗತ್ಯವಾಗಿದ್ದ ಕಾಲದಲ್ಲಿ ಅಂದಿನ ಇತಿಹಾಸ ಪಠ್ಯ ಪುಸ್ತಕಗಳು ಒಂದು ರೀತಿಯ ‘ಸತ್ಯ’ವನ್ನು ಹೇಳುತ್ತಿದ್ದರೆ ಇಂದಿನ ಪುಸ್ತಕಗಳು ಇನ್ನೊಂದು ರೀತಿಯ ‘ಸತ್ಯ’ವನ್ನು ಹೇಳುತ್ತವೆ. ಹೀಗಾಗಿ, ಇತಿಹಾಸವನ್ನು ಗಂಭೀರವಾಗಿ, ಭಾವನಾತ್ಮಕವಾಗಿ ಪರಿಗಣಿಸುವುದೇ ತಪ್ಪು ಇರಬಹುದು. ಇತಿಹಾಸದಿಂದ ಪಾಠ ಕಲಿಯುವವರು ಅಪರೂಪ ಮತ್ತು ಇತಿಹಾಸ ಪಠ್ಯಗಳಲ್ಲಿ ಅಚ್ಚಾಗಿರುವ ಇತಿಹಾಸದ ಪಾಠಗಳನ್ನು ಸಂಪೂರ್ಣವಾಗಿ ನಂಬುವುದು ಕೂಡ ಅಪಾಯಕಾರಿ ಇರಬಹುದು. ಯಾಕೆಂದರೆ ಇತಿಹಾಸ ಪಠ್ಯದಲ್ಲಿ ಬಳಸಲಾಗುವ ಶಬ್ದಗಳು, ಪದನಾಮಗಳು, ವಿಶೇಷಣಗಳು ಯಾವ ಕಾಲದಲ್ಲಿ ಯಾರಿಗೆ ಅನ್ವಯವಾಗುತ್ತವೆ ಅಥವಾ ಅನ್ವಯವಾಗುವುದಿಲ್ಲವೆಂದು ಹೇಳುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಬ್ರಿಟಿಷರ ಆಡಳಿತದಲ್ಲಿ ಕರ್ನಾಟಕದ ಶಾಲೆಗಳಿಗೆ ಗೊತ್ತು ಮಾಡಿದ್ದ ಇತಿಹಾಸ ಪಠ್ಯ ಮತ್ತು ಸ್ವಾತಂತ್ರಾನಂತರದ ಪದ್ಯ ಟಿಪ್ಪು ಸುಲ್ತಾನನ ಬಗ್ಗೆ ಏನು ಹೇಳುತ್ತದೆ ಎಂದು ನೋಡಬಹುದು:
‘‘ಈ ವೇಳೆಗೆ ಎಂಟು ವರ್ಷ ಕಾಲ ರಾಜ್ಯವಾಳಿದ ಟಿಪ್ಪುವು, ಮಲಯಾಳವನ್ನೂ, ಕೊಡಗನ್ನೂ ಮೈಸೂರಿನ ಸುತ್ತಮುತ್ತಲೂ ಇದ್ದ ಇತರ ದೇಶಗಳನ್ನೂ ಜಯಿಸಿ ಸ್ವಾಧೀನ ಮಾಡಿಕೊಂಡಿದ್ದನು. ಅದರಿಂದ ಗರ್ವೋದ್ಧತನಾಗಿ ಹಿಂದೂ ದೇಶದಲ್ಲಿ ತಾನೇ ಅದ್ವಿತೀಯ ಪರಾಕ್ರಮಿ ಎಂದು ಭಾವಿಸಿಕೊಂಡಿದ್ದನು. ಇವನೂ ಔರಂಗಜೇಬನಂತೆಯೇ ತನ್ನಿಂದ ಪರಾಜಿತರಾದವರನ್ನೆಲ್ಲ ಬಲಾತ್ಕಾರದಿಂದ ಮಹಮ್ಮದೀಯ ಮತಕ್ಕೆ ಸೇರಿಸುತ್ತಲೂ ಅದಕ್ಕೆ ಇಷ್ಟ ಪಡದವರನ್ನು ಸಾವಿರ ಸಾವಿರವಾಗಿ ಕೊಲ್ಲುತ್ತಲೂ ಇದ್ದನು. ಇವನಿಗೆ ಇಂಗ್ಲಿಷರ ನೆರಳನ್ನು ಕಂಡರಾಗದು. ಎಂದಾದರೂ ಅವರನ್ನೆಲ್ಲ ಈ ದೇಶದಿಂದ ಅಟ್ಟಿಬಿಡುವುದಾಗಿ ಬಹಿರಂಗವಾಗಿ ಪ್ರತಿಜ್ಞೆ ಮಾಡಿದ್ದನು.’’
(ಹಿಂದೂ ದೇಶದ ಚರಿತ್ರೆ- ಲೋವರ್ ಸೆಕೆಂಡರಿ ತರಗತಿಗಳಿಗೆ ಮ್ಯಾಕ್‌ಮಿಲನ್ ಮತ್ತು ಕಂಪೆನಿ ಲಿಮಿಟೆಡ್-1927)
ಅದೇ ಟಿಪ್ಪು ಸುಲ್ತಾನನ ಬಗ್ಗೆ ಸ್ವಾತಂತ್ರ್ಯೋತ್ತರ ಭಾರತದ ಪಠ್ಯ ಏನು ಹೇಳುತ್ತದೆ ನೋಡಿ:
‘‘ಟಿಪ್ಪುಸುಲ್ತಾನ್ ಮೈಸೂರಿನ ಪ್ರಬಲ ಆಡಳಿತಗಾರ. ಅವನು ನೀತಿವಂತನೂ, ದೇವರಲ್ಲಿ ಅಪಾರ ಭಕ್ತಿ ಉಳ್ಳವನೂ ಆಗಿದ್ದನು. ಒಳ್ಳೆಯ ವಿದ್ಯಾವಂತ. ಕನ್ನಡ, ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲವನಾಗಿದ್ದನು. ಒಂದು ದೊಡ್ಡ ಗ್ರಂಥ ಭಂಡಾರವನ್ನು ಹೊಂದಿದ್ದನು. ಧೀರ ಯೋಧನಾದ ಟಿಪ್ಪು ಸುಲ್ತಾನ್ ಚಂಚಲ ಸ್ವಭಾವದವನಾಗಿದ್ದನು. ಅವನು ಇಂಗ್ಲಿಷರ ಪ್ರಬಲ ಶತ್ರುವಾಗಿದ್ದನು. ಸ್ವಾತಂತ್ರ ಪ್ರಿಯನಾಗಿದ್ದ ಅವನಿಗೆ ‘ಮೈಸೂರು ಹುಲಿ’ ಎಂಬ ಹೆಸರು ಸಾರ್ಥಕವಾಗಿದ್ದಿತು. ಇಂಗ್ಲಿಷರ ವಿರುದ್ಧ ಸಹಾಯ ಪಡೆಯಲು ಕಾಬೂಲ್, ಪರ್ಷಿಯ, ಫ್ರಾನ್ಸ್ ಮತ್ತು ಕಾನ್‌ಸ್ಟಾಂಟಿನೋಪಲ್‌ಗಳೊಡನೆ ಸಂಪರ್ಕ ಹೊಂದಿದ್ದನು.’’
(ಸಮಾಜ ಪಾಠಗಳು-ಹತ್ತನೇ ತರಗತಿ)
ಹಿಟ್ಲರ್‌ನ ಬಲಗೈ ಬಂಟನಾಗಿದ್ದು ಯುದ್ಧ ಕಾಲದ ಅಪರಾಧಗಳಿಗಾಗಿ ನಲವತ್ತೊಂದು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿ 1987 ಆಗಸ್ಟ್ 17ರಂದು ಆತ್ಮಹತ್ಯೆ ಮಾಡಿಕೊಂಡು ಸತ್ತ ರುಡಾಲ್ಫ್ ಹೆಸ್‌ನಿಗೆ ಸಂಬಂಧಿಸಿ ಬಳಸಲಾದ ವಿಶೇಷಣಗಳನ್ನು ಪರಿಶೀಲಿಸಿದರೆ ಇತಿಹಾಸದಲ್ಲಿ ವಿಶೇಷಣಗಳು ಹೇಗೆ ಬದಲಾಗುತ್ತಿರುತ್ತವೆ ಎಂಬುದು ತಿಳಿಯುತ್ತದೆ. ಸುಮಾರು ಅರವತ್ತು ಲಕ್ಷ ಯಹೂದಿಗಳ ನರಹತ್ಯೆಗೆ ಕಾರಣವಾದ ಅತ್ಯಂತ ಕ್ರೂರ ನಾಜಿಗಳ ಆಳ್ವಿಕೆಯಲ್ಲಿ ರುಡಾಲ್ಫ್ ಹೆಸ್ ಹಿಟ್ಲರ್‌ನ ಆಜ್ಞಾಧಾರಕನಾಗಿದ್ದ. ಆರಾಧಕನಾಗಿದ್ದ. ಹೆಸ್‌ನ ಆತ್ಮಹತ್ಯೆಯ ಬಳಿಕ ಪಶ್ಚಿಮ ಜರ್ಮನಿಯಲ್ಲಿ ನವ ನಾಜಿವಾದ ಭಾವನೆಗಳ ಅಲೆಗಳೆದ್ದು ನಾಜಿವಾದ ಮರುಹುಟ್ಟು ಪಡೆಯುವ ಸ್ಪಷ್ಟ ಲಕ್ಷಣಗಳು ಕಾಣಿಸಿದವು. ರಾಜಸ್ಥಾನದಲ್ಲಿ ರೂಪಾ ಕನ್ವರ್ ತನ್ನ ಗಂಡನ ಚಿತೆಯ ಮೇಲೆ ಸುಟ್ಟು ಬೂದಿಯಾದ ಸತಿಸ್ಥಳ, ದೇವರಾಲ ‘ಪವಿತ್ರ’ ಯಾತ್ರಾಸ್ಥಳವಾದಂತೆ, ಹೆಸ್‌ನ ಶವಸಂಸ್ಕಾರ ನಡೆದ ಬವೇರಿಯಾದಲ್ಲಿ ಅವನು ಹುಟ್ಟಿದ ಊರು ನೂರಾರು ನವನಾಜಿಗಳಿಗೆ ನಾಜಿ ದೇವಾಲಯವಾಯಿತು. ನವ-ನಾಜಿಗಳು ಹೆಸ್‌ನ ಶವಸಂಸ್ಕಾರ ನಡೆದ ಬವೇರಿಯಾದ ಹಳ್ಳಿಗೆ ಜಾತ್ರೆ ಬಂದರು.
ಇತಿಹಾಸದಲ್ಲಿ ಶಬ್ದಗಳು ಮರುಕಳಿಸುತ್ತವೆ. ವಿಶೇಷಣಗಳು ಪರ್ಯಾಯವಾಗಿ ಬಳಸಲ್ಪಡುತ್ತವೆ. ಹಿಟ್ಲರ್ ಅಧಿಕಾರದಲ್ಲಿದ್ದವರಿಗೆ ನಾಜಿ ನಾಯಕನಾಗಿದ್ದ ಹೆಸ್ ಒಬ್ಬ ನಿಜವಾದ ಜರ್ಮನ್, ಮಹಾ ದೇಶಪ್ರೇಮಿ ಅನ್ನಿಸಿಕೊಂಡಿದ್ದ. ನಾಜಿವಾದ ಮಣ್ಣು ಪಾಲಾಗಿ ಜರ್ಮನಿ ಪತನಗೊಂಡಾಗ ಸತ್ಯ ಬಯಲಾಗಿ ಅದೇ ಹೆಸ್ ದೊಡ್ಡ ಅಪರಾಧಿ ಎಂದು ಸಾಬೀತಾಯಿತು. ಈಗ ಜರ್ಮನರು ನಾಜಿಗಳು ನಡೆಸಿದ್ದ ನರಮೇಧದ ಕುರಿತಾಗಲಿ, ಯಹೂದಿಗಳಿಗೆ ನೀಡಿದ ಚಿತ್ರಹಿಂಸೆಯ ಕುರಿತಾಗಲಿ ಮಾತನಾಡಲು ಇಷ್ಟಪಡುವುದಿಲ್ಲ. ಪಶ್ಚಿಮ ಜರ್ಮನಿಯ ಕೊಲೊನ್ ನಗರದಲ್ಲಿರುವ ರೋಮನ್ ಮ್ಯೂಸಿಯಂಗೆ ಹೋದಾಗ ನಾನು ನಾಜಿಗಳು ವಿರೋಧಿಗಳನ್ನು ಸೆರೆಯಲ್ಲಿಟ್ಟಿದ್ದ ಸೆರೆಮನೆಯ ಕೋಣೆಗಳನ್ನು (ಎಲ್‌ಡೀ ಹೌಸ್) ನೋಡಬೇಕೆಂದೆ. ಮ್ಯೂಸಿಯಂನ ಅಧಿಕಾರಿ ಮುಖ ಸಿಂಡರಿಸಿದ. ಕೊನೆಗೂ ಅವ ನನಗೆ ಎಲ್‌ಡೀ ಹೌಸ್‌ಗೆ ಹೋಗುವ ದಾರಿ ಹೇಳಿದ್ದು ಮನಸ್ಸಿಲ್ಲದ ಮನಸ್ಸಿನಿಂದಲೇ. ನಲ್ವತ್ತು ವರ್ಷಗಳ ಹಿಂದೆ ಯುದ್ಧಾಪರಾಧಿ ಎಂದು ಕರೆಯಲ್ಪಟ್ಟ ಹೆಸ್ ಈಗ ಪುನಃ ನವನಾಜಿಗಳ ಪಾಲಿಗೆ ನಿಜವಾದ ಜರ್ಮನ್ ಆಗಿದ್ದಾನೆ! ಅವನ ಸಾವು ಆತ್ಮಹತ್ಯೆಯಲ್ಲ, ಒಂದು ಕೊಲೆ ಎನ್ನುವ ನವನಾಜಿಗಳು ಬ್ರಿಟನ್‌ನ ಮಹಾ ಮುತ್ಸದ್ದಿ ವಿನ್‌ಸ್ಟ್ಟನ್ ಚರ್ಚಿಲ್‌ರನ್ನೇ ‘ಯುದ್ಧ ಪಾತಕಿ’ (ವಾರ್ ಕ್ರಿಮಿನಲ್) ಎಂದು ಪರಿಗಣಿಸಲಾರಂಭಿಸಿದರು. ಪಶ್ಚಿಮದ ಮಿತ್ರ ರಾಷ್ಟ್ರಗಳು ಬ್ರಿಟಿಷ್ ಸೇನಾ ನೆಲೆಗಳಿಂದ ಅನೇಕ ಜರ್ಮನ್ ನಗರಗಳ ಮೇಲೆ ಬಾಂಬ್ ಹಾಕಿದ್ದವು. ಇದಕ್ಕೆ ಅನುಮತಿ ನೀಡಿದ್ದ ಚರ್ಚಿಲ್ ನಾಜಿಗಳ ದೃಷ್ಟಿಯಲ್ಲಿ ಈಗ ‘ವಾರ್ ಕ್ರಿಮಿನಲ್’! ಇದು ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರು ಹುಲಿ, ಅದ್ವಿತೀಯ ಪರಾಕ್ರಮಿ, ಸ್ವಾತಂತ್ರ್ಯ ಪ್ರೇಮಿ ಟಿಪ್ಪುವನ್ನು ಬ್ರಿಟಿಷ್ ಆಡಳಿತ ಕಾಲದ ಪಠ್ಯಪುಸ್ತಕಗಳು ‘ಗರ್ವೋದ್ಧತ’, ಇಸ್ಲಾಂ ಧರ್ಮಕ್ಕೆ ಸೇರಲು ಒಪ್ಪದವರನ್ನು ‘ಸಾವಿರ ಸಾವಿರವಾಗಿ ಕೊಲ್ಲುತ್ತಲೂ ಇದ್ದ’ ಎಂದು ಹೇಳಿದಂತೆಯೇ.
ಒಟ್ಟಿನಲ್ಲಿ ಇತಿಹಾಸ ಪುಸ್ತಕಗಳಲ್ಲಿ ಬಳಕೆಯಾಗುವ ತಪ್ಪು ವಿಶೇಷಣಗಳು ಜನರನ್ನು ತಪ್ಪುಹಾದಿಗೆಳೆಯಬಲ್ಲವು ಎಂಬುದನ್ನು ಮರೆಯದೆ ನಾವು ಇತಿಹಾಸವನ್ನು ಓದಬೇಕಾಗುತ್ತದೆ. ಅವು ಹೇಳುವ ಎರಡು ರೀತಿಯ ‘ಸತ್ಯ’ಗಳಲ್ಲಿ ಯಾವುದು ‘ನಿಜವಾದ ಸತ್ಯ’ವೆಂದು ಪರಾಮರ್ಶಿಸಿ ತಿಳಿಯದೆ ರಾಜಕೀಯ, ಮತೀಯ ಅಥವಾ ಧಾರ್ಮಿಕ ಕಾರಣಕ್ಕಾಗಿ ಒಬ್ಬ ರಾಜನ ಬಗ್ಗೆಯೂ ಉನ್ಮಾದಕ್ಕೊಳಗಾಗುವುದು ಬಾಲಿಶತನವಾಗುತ್ತದೆ. ಭಾರತವನ್ನಾಳಿದ ಮುಸ್ಲಿಂ ದೊರೆಗಳ ಬಗ್ಗೆಯಾಗಲಿ, ಪೇಶ್ವೆಗಳ ಕುರಿತಾಗಲಿ ನಿಜವಾದ ಸತ್ಯವನ್ನು ತಿಳಿಯದೆ ಭಾವಾವೇಶಕ್ಕೊಳಗಾಗುವುದು ವಿವೇಕವಲ್ಲ.
ಯಾಕೆಂದರೆ ಇತಿಹಾಸದಲ್ಲಿ ಖಾಲಿ ಬಿಟ್ಟ ಸ್ಥಳಗಳು ಹಲವಿರುತ್ತವೆ. ಅವುಗಳನ್ನು ತುಂಬದೆ ವಸ್ತುನಿಷ್ಠ ಇತಿಹಾಸ ದೊರಕುವುದಿಲ್ಲ.
(bhaskarrao599@gmail.com)