ವಿಭಜಿಸಿ ತೊಲಗುವ ನೀತಿಯ ಶೋಚನೀಯ ವೈಫಲ್ಯ

Update: 2019-11-16 18:30 GMT

ತಾವು ವಸಾಹತುಶಾಹಿಗಳಾಗಿ ಮಾಡಿಕೊಂಡ ದೇಶಗಳನ್ನು ಧಾರ್ಮಿಕ ಅಥವಾ ಜನಾಂಗೀಯ ನೆಲೆಯಲ್ಲಿ ವಿಭಜಿಸುವ ಬ್ರಿಟಿಷರ ನೀತಿಯು ಮೇಲೆ ಉಲ್ಲೇಖಿಸಿರುವ ಎಲ್ಲ ಮೂರು ದೇಶಗಳ ಪ್ರಕರಣದಲ್ಲಿ ಯುದ್ಧ ಮತ್ತು ಯಾತನೆಯ ದುಃಖದ ದಾಖಲೆಗಳನ್ನಷ್ಟೇ ನಿರ್ಮಿಸಿದೆ. ತನ್ನ ಹಿಂದಿನ ವಸಾಹತುಗಳನ್ನು ತ್ಯಜಿಸುವಾಗ ಅವುಗಳಿಗೆ ಸ್ವಾತಂತ್ರ್ಯ ಅಥವಾ ಭಿನ್ನ ಆಡಳಿತ ನೀಡಿ ತೆರಳುವಾಗ ತನ್ನ ನೀತಿಯ/ ತಾನು ತೆಗೆದುಕೊಳ್ಳುವ ಕ್ರಮದ ಪರಿಣಾಮಗಳ ಬಗ್ಗೆ ಬ್ರಿಟನ್‌ಗೆ ಕಾಳಜಿ ಇರಲಿಲ್ಲವೆಂಬುದು ಈ ದೇಶಗಳ ವಿಭಜನೆಯಿಂದ ಗೊತ್ತಾಗುತ್ತದೆ.


ಪಾರಂಪರಿಕವಾಗಿ ಉತ್ತರ ಐರ್‌ಲ್ಯಾಂಡ್ ನಲ್ಲಿ ಬ್ರಿಟನ್‌ಗೆ ನಿಷ್ಠರಾಗಿದ್ದ ಗುಂಪುಗಳು ಮತ್ತು ಮಿಲೀಶಿಯಾಗಳು ಬ್ರೆಕ್ಸಿಟ್ ವಿವಾದಕ್ಕೆ ಸಂಬಂಧಿಸಿ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದವು. ಪ್ರಧಾನಿ ಬೋರಿಸ್ ಜಾನ್ಸನ್ ಪ್ರಸ್ತಾಪಿಸಿರುವ ಬ್ರೆಕ್ಸಿಟ್ ಕುರಿತಾದ ಯಾವುದೇ ವ್ಯವಸ್ಥೆಯನ್ನು ಪ್ರೊಟೆಸ್ಟೆಂಟ್ ಯೂನಿಯನಿಸ್ಟರು ದೃಢವಾಗಿ, ತೀವ್ರವಾಗಿ ನಿರಾಕರಿಸುತ್ತಾರೆ. ಆ ಪ್ರಸ್ತಾವದ ಪ್ರಕಾರ ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಹೊರಗೆ ಹೋಗುತ್ತದೆ. ಐರ್‌ಲ್ಯಾಂಡ್ ಗಣರಾಜ್ಯದೊಂದಿಗೆ ಹೊಂದಿರುವ ಆರ್ಥಿಕ ಕೊಂಡಿಗಳು ಮುರಿದು ಹೋಗದಂತೆ ನೋಡಿಕೊಳ್ಳುವುದಕ್ಕಾಗಿ ಉತ್ತರ ಐರ್‌ಲ್ಯಾಂಡ್ ಮಾತ್ರ ಯುರೋಪಿಯನ್ ಯೂನಿಯನ್‌ನ ಒಳಗೆ ಉಳಿಯುತ್ತದೆ. ಈ ವ್ಯವಸ್ಥೆಯ ಹಿಂದೆ ಬ್ರಿಟಿಷ್ ಸರಕಾರ ಧಾರ್ಮಿಕ ಬಹುಸಂಖ್ಯಾತರ ಆಧಾರದಲ್ಲಿ ಐರ್‌ಲ್ಯಾಂಡ್ ನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿದ ರಾಜಕೀಯ ನಿರ್ಧಾರದ ಇತಿಹಾಸವಿದೆ. 1922ರಲ್ಲಿ ಐರ್‌ಲ್ಯಾಂಡ್ ಮೇಲಿನ ತನ್ನ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿದಾಗ ಬ್ರಿಟನ್ ಐರ್‌ಲ್ಯಾಂಡ್‌ನ ಆರು ಪ್ರೊಟೆಸ್ಟೆಂಟ್ ಬಹುಸಂಖ್ಯಾತ ಉತ್ತರ ಭಾಗದ ಕೌಂಟಿಗಳನ್ನು ಪ್ರತ್ಯೇಕಿಸಿ ಉತ್ತರ ಐರ್‌ಲ್ಯಾಂಡ್ ಎಂದು ವಿಭಜಿಸಿತು. ಧರ್ಮದ ಆಧಾರದಲ್ಲಿ ಐರ್‌ಲ್ಯಾಂಡ್‌ನ ವಿಭಜನೆ ಮುಂದಕ್ಕೆ ಬ್ರಿಟಿಷ್ ಭಾರತದ (ಭಾರತ ಪಾಕಿಸ್ತಾನ) ವಿಭಜನೆಗೆ ಮುನ್ಸೂಚನೆಯಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದ ವಿಭಜನೆ ಹೇಗೆ ಭಾರತೀಯ ಉಪಖಂಡಕ್ಕೆ ಶಾಂತಿಯನ್ನು ತರಲಿಲ್ಲವೋ ಹಾಗೆಯೇ ಐರ್‌ಲ್ಯಾಂಡ್‌ನ ವಿಭಜನೆ ಕೂಡ ಅಲ್ಲಿಯ ಕೆಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ನಡುವಿನ ಧಾರ್ಮಿಕ ಹಾಗೂ ರಾಜಕೀಯ ದ್ವೇಷದ ಸಮಸ್ಯೆಯನ್ನು ಪರಿಹರಿಸಲಿಲ್ಲ. ಯಾಕೆಂದರೆ ಉತ್ತರ ಐರ್‌ಲ್ಯಾಂಡ್‌ನ ಜನಸಂಖ್ಯೆಯ ಶೇ. 40ಕ್ಕಿಂತಲೂ ಹೆಚ್ಚು ಮಂದಿ ಕೆಥೊಲಿಕರು; ಮತ್ತು ಅವರಲ್ಲಿ ಬಹುತೇಕರು ಐರ್‌ಲ್ಯಾಂಡ್ ಗಣರಾಜ್ಯದ ಜೊತೆ ಸೇರಿಕೊಳ್ಳಲು ಬಯಸುತ್ತಾರೆ.

ಭಾರತದ ವಿಭಜನೆಯ ಅಂತರ್ ಕೋಮು ಬಿಗಿತವನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಎರಡು ರಾಷ್ಟ್ರಗಳ ನಡುವಿನ ಬಿಗಿತವಾಗಿ ಮಾರ್ಪಡಿಸಿತು. ಐರ್‌ಲ್ಯಾಂಡ್‌ನ ಪ್ರಕರಣದಲ್ಲಿ ಉತ್ತರ ಐರ್‌ಲ್ಯಾಂಡ್‌ನ ಪ್ರೊಟೆಸ್ಟೆಂಟ್ ಮತ್ತು ಕೆಥೊಲಿಕ್ ಮಿಲೀಶಿಯಾಗಳ ಅಂತರ್ಯುದ್ಧಕ್ಕೆ (ಸಿವಿಲ್ ವಾರ್) ಕಾರಣವಾಯಿತು ಮತ್ತು ಕೆಥೊಲಿಕರು ಬ್ರಿಟಿಷರ ವಿರುದ್ಧ ದಂಗೆ ಹೇಳುವಂತಾಯಿತು. ಕೆಥೊಲಿಕ್ ಪ್ರತಿಭಟನೆಯ ಸಶಸ್ತ್ರ ಘಟಕವಾದ ಐರಿಷ್ ರಿಪಬ್ಲಿಕನ್ ಆರ್ಮಿಯು ಐರ್‌ಲ್ಯಾಂಡ್ ಮತ್ತು ಬ್ರಿಟನ್‌ಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿತು. 1998ರಲ್ಲಾದ ಗುಡ್ ಫ್ರೈಡೇ ಒಪ್ಪಂದದ ಬಳಿಕ ಪರಿಸ್ಥಿತಿ ಸುಧಾರಿಸಿ ತಾದರೂ ಎರಡು ಸಮುದಾಯಗಳ ನಡುವಿನ ಸಂಬಂಧ ಇನ್ನೂ ಬಿಗುವಾಗಿಯೇ ಇದೆ.

ಇದೇ ಕಥೆಯ ಇನ್ನೊಂದು ರೂಪ ಫೆಲೆಸ್ತೀನ್‌ನಲ್ಲಿ ಪುನರಾವರ್ತನೆಯಾಯಿತು. ಮೊದಲ ವಿಶ್ವ ಸಮರ ಅಂತ್ಯಗೊಂಡ ಬಳಿಕ ಲೀಗ್ ಆಫ್ ನೇಷನ್ಸ್ ನಿಯಮ ಆಧಾರಿತ ಒಪ್ಪಂದದ ಹೆಸರಿನಲ್ಲಿ ಫೆಲೆಸ್ತೀನ್ ಬ್ರಿಟನ್‌ನ ಒಂದು ವಸಾಹತುಶಾಹಿ ಆಯಿತು. ಅಲ್ಲಿ ಆರಂಭವಾದ ಅರಬರ ಮತ್ತು ಯಹೂದಿಗಳ ನಡುವಿನ ತಿಕ್ಕಾಟ, ಘರ್ಷಣೆ ಮೂಲತಃ ಬ್ರಿಟನ್‌ನ ನೀತಿಗಳ ಸೃಷ್ಟಿ. 1917ರಲ್ಲಿ ಬ್ರಿಟನ್‌ನ ಬಾಲ್ಫೋರ್ ಘೋಷಣೆ ಮತ್ತು 1948ರಲ್ಲಿ ಬ್ರಿಟನ್ ಫೆಲೆಸ್ತೀನ್‌ನಿಂದ ತನ್ನ ಪಾಡಿಗೆ ತಾನು ಹೊರ ನಡೆದಿದ್ದು ಫೆಲೆಸ್ತೀನ್ ದುರಂತದ ಎರಡು ಮುಖ್ಯ ಅಂಶಗಳು. ಯುರೋಪಿಯನ್ ಯಹೂದಿಗಳು ಫೆಲೆಸ್ತೀನ್‌ಗೆ ವಲಸೆ ಹೋಗಲು ನೆರವು ನೀಡುವ ಮೂಲಕ ಫೆಲೆಸ್ತೀನ್‌ನಲ್ಲಿ ಯಹೂದಿಗಳ ಒಂದು ಪ್ರದೇಶವನ್ನು ಸೃಷ್ಟಿಸುವುದು ಬ್ರಿಟನ್‌ನ ನೀತಿ ಎಂದು ಬಾಲ್ಫೋರ್ ಘೋಷಣೆ ಹೇಳಿತ್ತು. ಇದು ಫೆಲೆಸ್ತೀನ್‌ನ ವಿಭಜನೆಗೆ ನಾಂದಿ ಹಾಡಿದಂತಾಯಿತು. 1948ರಲ್ಲಿ ಬ್ರಿಟನ್ ತನ್ನ ಉತ್ತರಾಧಿಕಾರಿ ಯಾರೆಂದು ಹೇಳದೆ ಫೆಲೆಸ್ತೀನ್‌ನಿಂದ ಹಿಂದೆ ಸರಿದು ಸಮಸ್ಯೆಯನ್ನು ವಿಶ್ವಸಂಸ್ಥೆಯ ತೊಡೆಯ ಮೇಲೆ ಎಸೆಯಿತು. ಇದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯವೊಂದರ ಮೂಲಕ ಫೆಲೆಸ್ತೀನ್‌ನ ವಿಭಜನೆಗೆ, ಮೊದಲ ಅರಬ್-ಇಸ್ರೇಲಿ ಯುದ್ಧ್ದಕ್ಕೆ ಮತ್ತು ಶೇಕಡಾ 77 ಫೆಲೆಸ್ತೀನಿಯರು ಇಸ್ರೇಲ್‌ನ ನಿಯಂತ್ರಣಕ್ಕೆ ಒಳಪಡುವುದಕ್ಕೆ ಕಾರಣವಾಯಿತು.

ಅದೇನಿದ್ದರೂ, ಐರ್‌ಲ್ಯಾಂಡ್ ಮತ್ತು ಭಾರತದ ವಿಷಯದಲ್ಲಾದಂತೆ ಫೆಲೆಸ್ತೀನ್‌ನ ವಿಭಜನೆ ಯಹೂದಿಗಳು ಮತ್ತು ಫೆಲೆಸ್ತೀನಿ ಯನ್ ಅರಬರ ನಡುವಿನ ಘರ್ಷಣೆಗೆ ಪರಿಹಾರವಾಗಲಿಲ್ಲ. ಆ ಘರ್ಷಣೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಫೆಲೆಸ್ತೀನ್ ವಿಭಜನೆ ವಿಫಲವಾಯಿತು. ಫೆಲೆಸ್ತೀನ್ ವಿಭಜನೆ ಆ ದೇಶಕ್ಕೆ ಶಾಂತಿಯನ್ನು ತರದೆ ಸತತವಾದ ತಿಕ್ಕಾಟ ಹಾಗೂ ಹಿಂಸೆಯನ್ನೇ ತಂದಿತು. ತಾವು ವಸಾಹತುಶಾಹಿಗಳಾಗಿ ಮಾಡಿಕೊಂಡ ದೇಶಗಳನ್ನು ಧಾರ್ಮಿಕ ಅಥವಾ ಜನಾಂಗೀಯ ನೆಲೆಯಲ್ಲಿ ವಿಭಜಿಸುವ ಬ್ರಿಟಿಷರ ನೀತಿಯು ಮೇಲೆ ಉಲ್ಲೇಖಿಸಿರುವ ಎಲ್ಲ ಮೂರು ದೇಶಗಳ ಪ್ರಕರಣದಲ್ಲಿ ಯುದ್ಧ ಮತ್ತು ಯಾತನೆಯ ದುಃಖದ ದಾಖಲೆಗಳನ್ನಷ್ಟೇ ನಿರ್ಮಿಸಿದೆ. ತನ್ನ ಹಿಂದಿನ ವಸಾಹತುಗಳನ್ನು ತ್ಯಜಿಸುವಾಗ ಅವುಗಳಿಗೆ ಸ್ವಾತಂತ್ರ್ಯ ಅಥವಾ ಭಿನ್ನ ಆಡಳಿತ ನೀಡಿ ತೆರಳುವಾಗ ತನ್ನ ನೀತಿಯ/ ತಾನು ತೆಗೆದುಕೊಳ್ಳುವ ಕ್ರಮದ ಪರಿಣಾಮಗಳ ಬಗ್ಗೆ ಬ್ರಿಟನ್‌ಗೆ ಕಾಳಜಿ ಇರಲಿಲ್ಲವೆಂಬುದು ಈ ದೇಶಗಳ ವಿಭಜನೆಯಿಂದ ಗೊತ್ತಾಗುತ್ತದೆ.


 (ಲೇಖಕರು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಂತರ್‌ರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಡಿಸ್ಟಿಂಗ್ವಿಷ್ಡ್ ಪ್ರೊಫೆಸರ್ ಎಮಿರೇಟರ್ ಆಗಿದ್ದಾರೆ.)

ಕೃಪೆ ದಿ ಹಿಂದೂ

Writer - ಮುಹಮ್ಮದ್ ಅಯ್ಯೂಬ್

contributor

Editor - ಮುಹಮ್ಮದ್ ಅಯ್ಯೂಬ್

contributor

Similar News