ಮ್ಯಾನ್‌ಹೋಲ್‌ನಲ್ಲಿ ಸ್ವಚ್ಛತೆಗೆ ಇಳಿದ ಕಾರ್ಮಿಕ ಮೃತ್ಯು
ಹೊಸದಿಲ್ಲಿ, ನ.24: ಮ್ಯಾಲ್‌ಹೋಲ್ ಸ್ವಚ್ಛತೆಗೆ ಇಳಿದ ಪೌರ ಕಾರ್ಮಿಕನೊಬ್ಬ ಮೃತಪಟ್ಟು, ಇತರ ಮೂವರು ಪ್ರಜ್ಞೆ ಕಳೆದುಕೊಂಡಿರುವ ಘಟನೆ ಈಶಾನ್ಯ ದಿಲ್ಲಿಯ ಶಂಕರಪುರದಲ್ಲಿ ಶನಿವಾರ ಸಂಭವಿಸಿದೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನೊಬ್ಬ ಈ ಕೆಲಸ ಮಾಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ಪ್ರಕಟಿಸಿದ್ದಾರೆ. ಮೃತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮೃತ ಯುವಕನನ್ನು ಬುದ್ಧವಿಹಾರದ ಅಶೋಕ್ ಎಂದು ಗುರುತಿಸಲಾಗಿದೆ. ಗೋರೆಲಾಲ್ (35), ರೋಹಿತ್ (30) ಮತ್ತು ಸಾಯಿ (50) ಎಂಬವರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ಯಾಸ್ ಏಜೆನ್ಸಿಯೊಂದರ ಬಳಿಕ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಇಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಕೆಳಕ್ಕೆ ಇಳಿದವರು ಬಹಳ ಹೊತ್ತಿನವರೆಗೂ ಹೊರಗೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ನಾಲ್ವರನ್ನು ಹೊರತೆಗೆದು ಭಗವಾನ್ ಮಹಾವೀರ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಅಶೋಕ್ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಇಬ್ಬರು ಗುತ್ತಿಗೆದಾರರನ್ನು ಬಂಧಿಸಲಾಗಿದೆ.