ನೆರೆ ಹಾವಳಿಗೆ ದೇಶದಲ್ಲಿ ಈರುಳ್ಳಿ ಬೆಳೆ ಭಾಗಶಃ ನಾಶ: ರೈತರು ಕಂಗಾಲು

Update: 2019-11-29 13:48 GMT

ಬೆಂಗಳೂರು, ನ.29: ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಗುಜರಾತ್ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಕಳೆದ ಮುಂಗಾರು ಋತುವಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾದ ನೆರೆ ಹಾವಳಿಯಿಂದಾಗಿ, ಈರುಳ್ಳಿ ಬೆಳೆ ಶೇ.60-65ರಷ್ಟು ನಾಶವಾಗಿದೆ.

ಈರುಳ್ಳಿ ಬೆಳೆ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಮಧ್ಯವರ್ತಿಗಳು ನೆರೆ ಹಾವಳಿ ಸಂಭವಿಸುತ್ತಿದ್ದಂತೆ ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಂಡು, ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದ ಗ್ರಾಹಕರ ಮೇಲೆ ಬೆಲೆ ಏರಿಕೆಯ ಪ್ರಹಾರವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭಾರತದಲ್ಲಿ ಅತೀ ಹೆಚ್ಚು ಈರುಳ್ಳಿಯನ್ನು ಬೆಳೆಯುವ ರಾಜ್ಯ ಮಹಾರಾಷ್ಟ್ರ. 507.96 ಹೆಕ್ಟೇರ್ ಪ್ರದೇಶದಲ್ಲಿ 8854.09 ಮೆಟ್ರಿಕ್ ಟನ್ ಈರುಳ್ಳಿ ಅಲ್ಲಿ ಬೆಳೆಯಲಾಗುತ್ತದೆ. ದ್ವಿತೀಯ ಸ್ಥಾನದಲ್ಲಿ ಕರ್ನಾಟಕವಿದ್ದು 195.28 ಹೆಕ್ಟೇರ್ ಪ್ರದೇಶದಲ್ಲಿ 2986.59 ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಆನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಬಿಹಾರ, ಹರಿಯಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 35,361 ಎಕರೆ ಪ್ರದೇಶದಲ್ಲಿ 6.99 ಲಕ್ಷ ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ 33,237 ಎಕರೆ ಪ್ರದೇಶದಲ್ಲಿ 4.83 ಲಕ್ಷ ಟನ್ ಬೆಳೆಯಲಾಗುತ್ತದೆ. ಇದನ್ನು ಹೊರತುಪಡಿಸಿ ಗದಗ, ಧಾರವಾಡ, ದಾವಣಗೆರೆ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಮುಂಗಾರು ಋತುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ.

2019-20ರಲ್ಲಿ ನಮ್ಮ ರಾಜ್ಯದಲ್ಲಿ 1,95,441 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ಗುರಿ ಹೊಂದಲಾಗಿತ್ತು. ಆದರೆ, 1,21,887 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ನೆರೆ ಹಾವಳಿಯಿಂದಾಗಿ 24,890 ಎಕರೆ ಪ್ರದೇಶದಲ್ಲಿನ ಬೆಳೆ ಹಾನಿಯಾಯಿತು. ರೈತರು ಬೆಳೆದಿರುವ ಈರುಳ್ಳಿ ಬೆಳೆಯಲ್ಲಿ ಶೇ.60ರಷ್ಟು ಮಾತ್ರ ಸರಕಾರದ ಎಪಿಎಂಸಿಗಳಿಗೆ ಪ್ರವೇಶ ಮಾಡಿದೆ.

ನೆರೆ ಹಾವಳಿ ಹಾಗೂ ಸತತ ಮಳೆಯಿಂದಾಗಿ ಈರುಳ್ಳಿಯಲ್ಲಿ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಕಡಿಮೆ ಬೆಲೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಎಂಟು ರೂಪಾಯಿಗೆ ಒಂದು ಕೆಜಿ ಈರುಳ್ಳಿ ಮಾರಾಟ ಮಾಡುವ ಮೂಲಕ ಕಣ್ಣೀರನಲ್ಲಿ ಕೈ ತೊಳೆದಿದ್ದರು. ಆದರೆ, ಇದೀಗ ಏಕಾಏಕಿ ಈರುಳ್ಳಿ ಬೆಲೆ ಕೆಜಿಗೆ 120 ರೂ.ಗಳ ಗಡಿ ದಾಟಿರುವುದು, ಬಡವರು, ಮಧ್ಯಮ ವರ್ಗಗಳ ಮೇಲೆ ಗದಾ ಪ್ರಹಾರ ಮಾಡಿದಂತಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ, ರೈತರು ಹಾಗೂ ಗ್ರಾಹಕರ ಹಿತ ಕಾಪಾಡಬೇಕು. ಈ ಹಿಂದೆ ಈರುಳ್ಳಿ ಬೆಲೆ ಹೆಚ್ಚಳವಾದ ಸಂದರ್ಭದಲ್ಲಿ ಕೇಂದ್ರ ಸರಕಾರವು ಚೀನಾ, ಈಜಿಪ್ಟ್, ನ್ಯೂಝಿಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಿಂದ ಆಮದು ಮಾಡಿಕೊಂಡಿತ್ತು. ಚೀನಾ ವಿಶ್ವದಲ್ಲೆ ಅತೀ ಹೆಚ್ಚು ಈರುಳ್ಳಿ ಬೆಳೆಯುವ ದೇಶ. ವಾರ್ಷಿಕ ಸರಾಸರಿ 20.5 ದಶಲಕ್ಷ ಟನ್ ಈರುಳ್ಳಿಯನ್ನು ಚೀನಾ ಉತ್ಪಾದಿಸುತ್ತದೆ. ಒಟ್ಟಾರೆ ಈರುಳ್ಳಿ ಬೆಳೆಯ ಶೇ.27.61ರಷ್ಟು ಇದಾಗಿದೆ. ದ್ವಿತೀಯ ಸ್ಥಾನದಲ್ಲಿ ಭಾರತವಿದ್ದು 13.3 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆ(ಶೇ.18ರಷ್ಟು) ಮಾಡುತ್ತಿದೆ. ಭಾರತ, ಚೀನಾ, ಯುಎಸ್‌ಎ, ಈಜಿಪ್ಟ್, ಇರಾನ್ ಹಾಗೂ ಟರ್ಕಿ ಸೇರಿದಂತೆ ಇನ್ನಿತರ ದೇಶಗಳು ಒಟ್ಟು 74.2 ದಶಲಕ್ಷ ಟನ್ ಈರುಳ್ಳಿಯನ್ನು ಉತ್ಪಾದಿಸುತ್ತವೆ.

ಜನವರಿ ಅಂತ್ಯಕ್ಕೆ ಬೆಲೆ ಇಳಿಕೆ ಆಗಬಹುದು

ಸಾಮಾನ್ಯವಾಗಿ ನಾವು ಈರುಳ್ಳಿಯನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತೇವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಬೇಕಿದೆ. ಜನವರಿ, ಫೆಬ್ರವರಿ ವೇಳೆಗೆ ಹಿಂಗಾರು ಋತುವಿನಲ್ಲಿ ಈರುಳ್ಳಿ ಬೆಳೆ ಕೈ ಸೇರಿದರೆ ದರ ಕಡಿಮೆಯಾಗಬಹುದು. ಆದರೆ, ಮುಂದಿನ ವರ್ಷವು ಇದೇ ರೀತಿ ಮಳೆಯಾಗಿ, ಮುಂಗಾರು ಋತುವಿನಲ್ಲಿ ಬೆಳೆ ಹಾನಿಯಾದಲ್ಲಿ, ಮತ್ತೆ ಬೆಲೆ ಏರಿಕೆಯ ಸಮಸ್ಯೆ ಎದುರಾಗಬಹುದು.

-ಪರಮೇಶ್ವರ್, ಕನ್ಸಲ್‌ಟೆನ್ಸಿ, ರಾಜ್ಯ ಕೃಷಿ ಬೆಲೆ ಆಯೋಗ

ಮಧ್ಯವರ್ತಿಗಳಿಗೆ ಮಾತ್ರ ಲಾಭ

ಜನ ಸಾಮಾನ್ಯರ ಕೈಗೆಟುಕದಂತೆ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಸರಕಾರ ರೈತರು ಹಾಗೂ ಎಪಿಎಂಸಿ ನಡುವೆ ಸಂಪರ್ಕ ಏರ್ಪಡಿಸಬೇಕು. ನೆರೆ ಹಾವಳಿ ಉಂಟಾದ ಸಂದರ್ಭದಲ್ಲಿ ಈರುಳ್ಳಿ ಮಧ್ಯವರ್ತಿಗಳ ಕೈ ಸೇರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾಕೋ ಈ ವಿಚಾರದಲ್ಲಿ ಸರಕಾರ ನಿರ್ಲಕ್ಷ ವಹಿಸಿತು. ಈರುಳ್ಳಿ ಬೆಲೆ ಏರಿಕೆಯಿಂದ ರೈತರಿಗೆ ಯಾವ ಲಾಭವು ಇಲ್ಲ. ಮಧ್ಯವರ್ತಿಗಳಿಗೆ ಮಾತ್ರ ಸುಗ್ಗಿಯಾಗಿದೆ.ನೆರೆ ಹಾವಳಿಯಿಂದ ಬೆಳೆ ನಾಶವಾದಲ್ಲಿ, ಸಹಜವಾಗಿಯೇ ಬೇಡಿಕೆ ಹೆಚ್ಚಾಗುತ್ತದೆ. ಬೆಲೆಯೂ ಏರಿಕೆಯಾಗುತ್ತದೆ. ಮಧ್ಯವರ್ತಿಗಳಿಗೆ ಇರುವ ವಿವೇಚನೆ ಸರಕಾರಕ್ಕೆ ಏಕಿರುವುದಿಲ್ಲ. ಪೆಟ್ರೋಲ್, ಡಾಲರ್‌ಗಿಂತಲೂ ಈರುಳ್ಳಿ ದುಬಾರಿಯಾಗಿದೆ. ಸರಕಾರ ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿರುವ ಈರುಳ್ಳಿಯನ್ನು ಪತ್ತೆ ಹಚ್ಚಿ ತನ್ನ ವಶಕ್ಕೆ ತೆಗೆದುಕೊಂಡು, ಮುಕ್ತ ಮಾರುಕಟ್ಟೆಗೆ ಬಿಟ್ಟರೆ ಈ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಬಹುದು.

-ಎಲೆ ಶ್ರೀನಿವಾಸ್, ರಾಜ್ಯಾಧ್ಯಕ್ಷ, ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟ

ನಮ್ಮ ರಾಜ್ಯದ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ನೆರೆ ಹಾವಳಿಯಿಂದಾಗಿ ಅಲ್ಲಿ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಿದೆ. ಈರುಳ್ಳಿಯನ್ನು ದಾಸ್ತಾನು ಮಾಡಿಟ್ಟುಕೊಂಡಿರುವ ದಲ್ಲಾಳಿಗಳು, ಇದೀಗ ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಕಡೆ ರೈತ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಮತ್ತೊಂದೆಡೆ ಗ್ರಾಹಕರು ಈರುಳ್ಳಿಯನ್ನು ಖರೀದಿಸಲು ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಮಧ್ಯಪ್ರವೇಶ ಮಾಡಿ, ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಗಮನಹರಿಸಬೇಕು.

-ಗೌರಮ್ಮ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News