ಕನ್ನಡದ ನವೆಂಬರ್ ಪ್ರಶ್ನೆಗಳು

Update: 2019-12-02 18:24 GMT

ಇದೀಗ ಕನ್ನಡ ತಿಂಗಳು ನವೆಂಬರ್ ಮುಗಿಸಿ ಡಿಸೆಂಬರ್‌ಗೆ ಪಯಣ ಬೆಳೆಸಿದ್ದೇವೆ. ಇದೊಂದು ವಾರ್ಷಿಕ ಪುನರಾವರ್ತನೆ ತೀರಾ ಸಾಮಾನ್ಯ ಸಂಗತಿ. ಆದರೆ ಕನ್ನಡ ಕರ್ನಾಟಕದ ಬಗೆಗಿನ ನವೆಂಬರ್ ತಿಂಗಳಲ್ಲಿ ನಡೆವ ಬಲೂನಿನಂತಹ ಉಬ್ಬುಮಾತುಗಳಿಗೆ ಸೂಜಿ ಚುಚ್ಚುವ ಸಣ್ಣ ಪ್ರಯತ್ನ ಮಾಡೋಣ. ಎಲ್ಲರಿಗೂ ತಿಳಿದಂತೆ ಕನ್ನಡ ಮತ್ತು ಕರ್ನಾಟಕ ಎರಡೂ ಭಿನ್ನವಾದವು. ಕನ್ನಡ ರಾಜ್ಯೋತ್ಸವ ಅಂದಾಗ ಕನ್ನಡ ಭಾಷೆ ಮಾತನಾಡುವ ಸಮುದಾಯಕ್ಕೆ ಆದ್ಯತೆ ಹೆಚ್ಚಾಗುತ್ತದೆ. ಅದೇ ಹೊತ್ತಿಗೆ ಇತರ ಭಾಷೆಗಳ ಜತೆ ಎದುರಾಳಿ ಕಲ್ಪನೆ ಮೂಡುತ್ತದೆ. ಆದರೆ ಕರ್ನಾಟಕ ರಾಜ್ಯೋತ್ಸವ ಎಂದಾಗ ಕರ್ನಾಟಕದ ಗಡಿಭಾಗದೊಳಗೆ ಕನ್ನಡ ಮಾತನಾಡುವ ಬಹುಸಂಖ್ಯಾತ ಭಾಷಿಕರನ್ನು ಒಳಗೊಳ್ಳುತ್ತದೆ. ತೆಲುಗು, ಮರಾಠಿ, ಉರ್ದು, ತುಳು, ತಮಿಳು, ಇಂಗ್ಲಿಷ್, ಹಿಂದಿ, ಕೊಡವ, ಮಲೆಯಾಳ, ಕೊಂಕಣಿ ಮುಂತಾದ ಇತರ ಭಾಷಿಕರನ್ನೂ, ಜೇನುಕುರುಬರ ಜೇನುನುಡಿ, ಗಂಟಿಚೋರರ ತುಡುಗು ಭಾಷೆಗಳನ್ನು ಒಳಗೊಂಡಂತೆ ಎಪ್ಪತ್ತಕ್ಕಿಂತ ಹೆಚ್ಚಿರುವ ಬುಡಕಟ್ಟು ಸಮುದಾಯಗಳ ಆಡು ಭಾಷಿಕರನ್ನೂ, ಕುಂದಾಪ್ರ ಕನ್ನಡ, ಕಲಬುರಗಿ ಕನ್ನಡ, ಧಾರವಾಡ ಕನ್ನಡ, ಬೆಳಗಾವಿ ಕನ್ನಡ ಒಳಗೊಂಡಂತೆ ಕನ್ನಡದ ಎಲ್ಲಾ ಪ್ರಾದೇಶಿಕ ಉಪಭಾಷಿಗರನ್ನೂ ಒಳಗೊಳ್ಳುತ್ತದೆ.

ವಾಸ್ತವದಲ್ಲಿ ಬಹುಭಾಷೆಗಳ ಸಂಕರ ಸಂಸ್ಕೃತಿಯೇ ನಿಜ ಮತ್ತು ಈ ಹೊತ್ತಿನ ಅನಿವಾರ್ಯ. ಹಾಗಾಗಿ ಕನ್ನಡ ರಾಜ್ಯೋತ್ಸವ ಎನ್ನುವ ಅಭಿಮಾನದ ಜತೆ ಕನ್ನಡದ ಬಳಕೆಯ ವಲಯಗಳನ್ನು ವಿಸ್ತರಿಸಲು ನಮ್ಮ ನೆಲೆಗಳಲ್ಲಿ ಬದ್ಧತೆಯಿಂದ ದುಡಿಯಬೇಕು. ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತ ಎಲ್ಲಾ ಭಾಷಿಕರ ಜತೆ ಸಹಬಾಳ್ವೆಯನ್ನು ಮಾಡುತ್ತಲೇ ಕನ್ನಡದ ಗುರುತುಗಳನ್ನು ದುರ್ಬಲಗೊಳ್ಳದಂತೆ ಕಾಪಿಡುವುದು ಹೇಗೆ ಎಂದು ಚರ್ಚಿಸಬೇಕಾಗುತ್ತದೆ.

ಕನ್ನಡವೆಂಬ ಭಾಷಿಕ ನೆಲೆಯ ಕನ್ನಡಿಗರು ಜಗತ್ತಿನಾದ್ಯಂತ ಹರಡಿ ಕೊಂಡಿದ್ದಾರೆ. ಆದರೆ ಕರ್ನಾಟಕವೆಂಬ ಭೌಗೋಳಿಕ ನೆಲೆಯ ಕನ್ನಡಿಗರ ವ್ಯಾಪ್ತಿ ರಾಜ್ಯಮಟ್ಟದ್ದು. ಈ ಎರಡೂ ನೆಲೆಯ ಕನ್ನಡಿಗರನ್ನು ಬೆರೆಸಿದಾಗ ಅಮೂರ್ತವಾದ ಕನ್ನಡತ್ವ ಮತ್ತು ಕನ್ನಡಿಗ ಎನ್ನುವ ಒಂದು ಸಮುದಾಯ ಎದುರು ಕಾಣುತ್ತದೆ. ಈ ಅಂಶಗಳನ್ನು ಆಧರಿಸಿ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಕನಿಷ್ಠ ಪ್ರತಿ ವರ್ಷ ನವೆಂಬರ್ ಹೊತ್ತಿಗೆ ಈ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಕಂಡುಕೊಳ್ಳುವ ವಾರ್ಷಿಕ ಆಚರಣೆಯಾದರೂ ಆಗಬೇಕಿದೆ. ಈ ಪ್ರಶ್ನೆಗಳನ್ನು ಸದ್ಯಕ್ಕೆ ಕನ್ನಡ ‘ಕರ್ನಾಟಕದ ನವೆಂಬರ್ ಪ್ರಶ್ನೆಗಳು’ ಎಂದಿಟ್ಟುಕೊಳ್ಳೋಣ. ಈ ಬಗೆಯ ಪ್ರಶ್ನೆಗಳು ಯಾವುವು?

1. ಸಂಪತ್ತಿನ ಅಸಮಾನ ಹಂಚಿಕೆಯಲ್ಲಿ ಅಗತ್ಯಕ್ಕಿಂತ ಸಾವಿರಾರು ಪಟ್ಟು ಸಂಪತ್ತನ್ನು ಗುಡ್ಡೆಹಾಕಿಕೊಂಡ ಕನ್ನಡಿಗರು ನಾಡಿನ ಅಸಮಾನತೆ ಹೆಚ್ಚಾಗಲು ಮತ್ತು ಬಹುಸಂಖ್ಯಾತರು ನಿರ್ಗತಿಕರಾಗಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಹೀಗೆ ನಿರಂತರವಾಗಿ ಈ ನಾಡನ್ನು ದುರ್ಬಲಗೊಳಿಸುತ್ತ ರಾಜ್ಯದ ಅಸಮಾನತೆಯ ಅಂತರವನ್ನು ಹೆಚ್ಚಿಸುತ್ತಲೇ ಇರುವವರು ಹೇಗೆ ನಿಜ ಕನ್ನಡಿಗರಾಗಲು ಸಾಧ್ಯ?

2. ಈಗಲೂ ಕರ್ನಾಟಕದಲ್ಲಿ ಅಸ್ಪಶ್ಯತೆಯ ಆಚರಣೆ ನಿಂತಿಲ್ಲ. ಕನ್ನಡಿ ಗರೆಲ್ಲ ಒಂದು ಎನ್ನುವಾಗ ಎಲ್ಲಾ ಜಾತಿ, ಮತ, ಧರ್ಮದವರು ಒಂದೆಂದು ಒಪ್ಪಿಕೊಂಡಂತಲ್ಲವೇ? ಹೀಗಿರುವಾಗ ಅಸ್ಪಶ್ಯತೆ ಆಚರಿಸುತ್ತ ದಲಿತರನ್ನು ಹೊರಗಿಟ್ಟ ಕರ್ನಾಟಕವಿರಲು ಸಾಧ್ಯವೇ? ಹಾರ್ಮೋನ್ಸ್ ವೈಪರೀತ್ಯದಿಂದಾದ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯವನ್ನೂ ನವ ಅಸ್ಪಶ್ಯರಂತೆ ಕಾಣುತ್ತೇವೆ. ಈ ಬಗೆಯ ಅಸ್ಪಶ್ಯತೆಯನ್ನು ಬಹಿರಂಗ ಮತ್ತು ಅಂತರಂಗದಿಂದ ಕಿತ್ತೊಗೆಯದವರು ಹೇಗೆ ನಿಜ ಕನ್ನಡಿಗರಾಗಲು ಸಾಧ್ಯ?

3. ನಿಜವಾದ ಕರ್ನಾಟಕ ಮತ್ತು ಕನ್ನಡ ನೆಲೆಸಿರುವುದು ಧಾರ್ಮಿಕ ಮತ್ತು ಭಾಷಿಕ ಸಾಮರಸ್ಯ ಮತ್ತು ಸೌಹಾರ್ದದಲ್ಲಿ. ಹೀಗಿರುವಾಗ ಧಾರ್ಮಿಕ ಮತ್ತು ಭಾಷಿಕ ಸಾಮರಸ್ಯವನ್ನು ಕದಡುವ ಯಾರೇ ಆಗಲಿ ಅವರು ಕನ್ನಡ ವಿರೋಧಿಗಳು. ಸಾಂವಿಧಾನಿಕವಾಗಿ ನಾವು ಭಾರತೀಯರು ಎಂಬ ಭಾವನೆಗೆ ಪಕ್ಕಾಗದೆ ನಾವು ಹಿಂದೂಗಳು, ನಾವು ಮುಸ್ಲಿಮರು, ನಾವು ಕ್ರಿಶ್ಚಿಯನ್ನರು ಎಂದೂ, ಜಾತಿ ನೆಲೆಯಲ್ಲಿ ನಾವು ಒಕ್ಕಲಿಗರು, ನಾವು ಲಿಂಗಾಯತರು, ನಾವು ರೆಡ್ಡಿಗಳು ಎಂದೂ ಅನ್ಯ ಧರ್ಮ ಮತ್ತು ಜಾತಿಯನ್ನು ಕಡೆಗಣಿಸಿ ನೋಡುವವರನ್ನು ಕನ್ನಡಿಗರೆಂದು ಒಪ್ಪಿಕೊಳ್ಳುವುದು ಕಷ್ಟ. ಹೀಗಾಗಿ ಧರ್ಮಗಳ ನಡುವೆ, ಜಾತಿಗಳ ನಡುವೆ ಕೋಮು ದ್ವೇಶವನ್ನು ಹುಟ್ಟಿಸುವವರು ನಿಜ ಕನ್ನಡಿಗರಾಗಲು ಹೇಗೆ ಸಾಧ್ಯ?

4. ಭಾರತ ಜನನಿಯ ತನುಜಾತೆ, ಕನ್ನಡಾಂಬೆ ಎಂದು ಕನ್ನಡ ಮತ್ತು ಕರ್ನಾಟಕವನ್ನು ಹೆಣ್ಣಾಗಿ ಪರಿಭಾವಿಸಿಕೊಂಡಿದ್ದೇವೆ. ಅದೇ ಹೊತ್ತಿಗೆ ಹೆಣ್ಣನ್ನು ಎರಡನೇ ದರ್ಜೆಯವಳು ಎಂದು ಭಾವಿಸಿದ ಹೆಣ್ಣಿನ ದಮನದ ನೂರಾರು ಪ್ರಕರಣಗಳು ನಿರಂತರ ಇದೇ ರಾಜ್ಯದಲ್ಲಿ ದಾಖಲಾಗುತ್ತವೆ. ಕನ್ನಡಾಂಬೆ ಎಂದು ಅಭಿಮಾನಿಸುವ ಕನ್ನಡಿಗರು ತನ್ನ ಒಡನಾಟದ ಹೆಣ್ಣನ್ನು ಗಂಡಾಳ್ವಿಕೆಯಿಂದ ನಿಯಂತ್ರಿಸುವುದು ತಪ್ಪಿದೆಯೇ? ಹೆಣ್ಣನ್ನು ಕೀಳಾಗಿ ಕಾಣುವ ಶೋಷಿಸುವ ಗಂಡಸರು ಅದೇಗೆ ಕನ್ನಡಿಗರಾಗಲು ಸಾಧ್ಯ?

5. ಈ ನಾಡಿನಲ್ಲಿ 70ಕ್ಕೂ ಹೆಚ್ಚು ಆದಿವಾಸಿ ಅಲೆಮಾರಿ ಸಮುದಾಯಗಳಿವೆ. ಈ ಪುಟ್ಟಪುಟ್ಟ ಸಮುದಾಯಗಳು ಘನತೆಯ ಬದುಕನ್ನು ಕಟ್ಟಿಕೊಳ್ಳಲು ಈಗಲೂ ಸೆಣಸಾಡುತ್ತಿವೆ. ಇಂತಹ ದಮನಿತ, ಅಲ್ಪಸಂಖ್ಯಾತ ಸಮುದಾಯಗಳ ಬದುಕನ್ನು ಹಸನು ಮಾಡುವ ಕನಸುಳ್ಳ, ಜನತೆಯ ಒಳಿತಿನ ಬದುಕಿಗಾಗಿ ಬದ್ಧತೆ ಇಲ್ಲದ ಹೋರಾಟಗಳು ಅದೇಗೆ ಕನ್ನಡದ ಹೋರಾಟವಾಗಲು ಸಾಧ್ಯ?

6. ಕರ್ನಾಟಕದ ಜನಸಾಮಾನ್ಯರ ಒಳಿತಿಗಾಗಿ ಹಂಚಿಕೆಯಾಗಬೇಕಾದ ಸರಕಾರಿ ಯೋಜನೆಗಳ ಹಣವನ್ನು ವಂಚಿಸಿ ದೋಚುವ ಈ ರಾಜ್ಯದ ಗಾಳಿ, ನೀರು, ಅನ್ನ ಉಂಡು ಬದುಕುವ ಭ್ರಷ್ಟ ಅಧಿಕಾರಿ ಮತ್ತು ರಾಜಕಾರಿಣಿ ವರ್ಗ ಅದೇಗೆ ಕನ್ನಡಿಗರಾಗಲು ಸಾಧ್ಯ?

7. ಮುಂದಿನ ತಲೆಮಾರಿಗೆ ಉಳಿಸಲು ಮಿತವಾಗಿ ಬಳಸಬಹುದಾದ ನೈಸರ್ಗಿಕ ಸಂಪತ್ತನ್ನು ತಮಗಷ್ಟೇ ಸಾಕೆಂದು ಕೊಳ್ಳೆ ಹೊಡೆದು ‘ಗಣಿಧಣಿ’ಗಳೆಂಬ ಸ್ವಘೋಷಿತ ಫಲಕಗಳನ್ನು ಹಾಕಿಕೊಂಡು ಮೆರೆಯುವ ಯಾವುದೇ ರಾಜಕಾರಣಿ, ವ್ಯಾಪಾರಸ್ಥರು ಅದು ಹೇಗೆ ಕನ್ನಡಿಗರಾಗಲು ಸಾಧ್ಯ?

ಇಂತಹ ಮೂಲಭೂತ ಪ್ರಶ್ನೆಗಳನ್ನು ಎದುರುಗೊಳ್ಳದೆ ಆಡುವ ಕನ್ನಡಪರ ಮಾತುಗಳು, ಅಭಿಮಾನದ ಜೈಕಾರಗಳು ನವೆಂಬರ್ ತಿಂಗಳನ್ನು ಶೃಂಗಾರ ಮಾಡಲು ಬಳಸುವ ತೋರಣದ ಎಲೆಗಳಿದ್ದಂತೆ. ನಿಜಕ್ಕೂ ಈ ಮೇಲಿನ ಪ್ರಶ್ನೆಗಳನ್ನು ಕನ್ನಡ ಮತ್ತು ಕರ್ನಾಟಕದ ನವೆಂಬರ್ ಪ್ರಶ್ನೆಗಳು ಎಂದಿಟ್ಟುಕೊಂಡು ಚರ್ಚಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಾಸಿವೆ ಕಾಳಷ್ಟಾದರೂ ಈ ನಾಡಿಗೆ ಒಳಿತಾಗುತ್ತದೆ.

Writer - ಅರುಣ್ ಜೋಳದಕೂಡ್ಲಿಗಿ

contributor

Editor - ಅರುಣ್ ಜೋಳದಕೂಡ್ಲಿಗಿ

contributor

Similar News