ಸಂಪನ್ನ ಕವಿಗೆ ಸಂದ ಗೌರವ

Update: 2019-12-07 18:38 GMT

‘‘ದೇವತೆಗಳಲ್ಲಿ, ರಾಕ್ಷಸರಲ್ಲಿ, ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸ್ಥಾವರ ಜಗತ್ತಿನಲ್ಲಿ ಕೂಡಾ ನಾನು ಹುಡುಕುವುದು ಮಾನವೀಯ ಮಿಡಿತಗಳನ್ನು. ದೇವತೆ, ರಾಕ್ಷಸರಿರಲಿ, ಮನುಷ್ಯರಲ್ಲಿ ಕೂಡಾ ಅವಿತುಕೊಂಡಿರಬಹುದಾದ ಮನುಷ್ಯರನ್ನು ಹುಡುಕುವುದೇ ನನ್ನ ಬರವಣಿಗೆಯ ಪುರುಷಾರ್ಥ’’ ಎನ್ನುವ ಎಚ್ಚೆಸ್ವಿಯವರ ಕಾವ್ಯ ಇಂಥದೊಂದು ಅನ್ವೇಷಣೆಯ ಅವಿರತ ಪಯಣ. ಪರಂಪರೆಯಿಂದ ಆಧುನಿಕತೆಯತ್ತ, ಆಧುನಿಕದಿಂದ ಪರಂಪರೆಯತ್ತ ಸಾಗುವ ಈ ಪಯಣ ಇವತ್ತಿಗೆ ಅತ್ಯಗತ್ಯವಾಗಿರುವ ‘ವಸುಧೈವ ಕುಟುಂಬಕಂ’ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಸಾಗಿರುವ ಅರ್ಥಪೂರ್ಣ ಪಯಣ.


ಹೊಸ ವರುಷದ ಶುರುವಿಗೇ ಕಲ್ಯಾಣ ಕರ್ನಾಟಕದ ಕೇಂದ್ರ ನಗರವಾದ ಕಲಬುರಗಿಯಲ್ಲಿ ನಡೆಯಲಿರುವ ಎಂಬತ್ತೈದನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಎಚ್.ಎಸ್.ವೆಂಕಟೇಶ ಮೂರ್ತಿಯವರು ನವ್ಯೋತ್ತರ ಪೀಳಿಗೆಯ ಪ್ರಮುಖ ಕವಿಗಳು. ಕನ್ನಡದಲ್ಲಿ ನವ್ಯ ಕಾವ್ಯದ ಪ್ರಭಾವ ಉಜ್ವಲವಾಗಿದ್ದ ಕಾಲಘಟ್ಟದಲ್ಲೇ ಕಾವ್ಯ ಕೃಷಿ ಪ್ರಾರಂಭಿಸಿದ ವೆಂಕಟೇಶ ಮೂರ್ತಿಯವರು ನವ್ಯ ಕಾವ್ಯ ಚಳವಳಿ ಸ್ಥಗಿತಗೊಂಡಂತೆ ಒಂದು ನಿಲುಗಡೆಗೆ ಬಂದಂತಹ ಸಂಧರ್ಭದಲ್ಲಿ ಕವಿಯಾಗಿ ಪ್ರಕಾಶಮಾನಕ್ಕೆ ಬಂದವರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಾವ್ಯಪ್ರಧಾನವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಎಚ್ಚೆಸ್ವಿಯವರ ಈ ಸುದೀರ್ಘ ಸೃಜನಶೀಲ ಪಯಣದ ಸಾಧನೆಗಳ ಹಾದಿಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಂದು ಶೃಂಗ.

ದಾವಣಗೆರೆಯ ಹೋದಿಗ್ಗೆರೆ ಸಣ್ಣಗ್ರಾಮ ಎಚ್ಚೆಸ್ವಿಯವರ ಹುಟ್ಟಿದೂರು. ಜನನ 1944ರಲ್ಲಿ. ತಾಯಿ, ಅಜ್ಜಿಯರ ಅಂತಃಕರಣದ ಲಾಲನೆಪಾಲನೆಯಲ್ಲಿ ಬೆಳೆದ ಎಚ್ಚೆಸ್ವಿಯವರನ್ನು ಬಾಲ್ಯದಲ್ಲೇ ಆಕರ್ಷಿಸಿದ್ದು ಹಳ್ಳಿಯ ಯಕ್ಷಗಾನ, ಗೊಂಬೆಯಾಟ, ಬಯಲಾಟ, ಭಾರತ ವಾಚನಗಳ ಪರಿಸರ. ಗ್ರಾಮೀಣ ಸಂಸ್ಕೃತಿಯ ಈ ಪರಿಸರದಲ್ಲಿ ಕವಿಯ ಮನೋಭೂಮಿಕೆಗೆ ಬಂದಿಳಿದರು ರಾಮ-ರಾವಣ-ಸೀತೆ-ಲಕ್ಷ್ಮಣ-ಊರ್ಮಿಳಾ, ಮಂಥರೆ-ಕೈಕೇಯಿ-ಕೃಷ್ಣ, ಕಂಸ-ದ್ರೌಪದಿ-ಭೀಮಾರ್ಜುನರು...ಹೊಳಲ್ಕರೆಯಲ್ಲಿ ಹೈಸ್ಕೂಲ್ ಮುಗಿಸಿ, ಭದ್ರಾವತಿಯ ಪಾಲಿಟೆಕ್ನಿಕ್ ಶಾಲೆಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಕ್ರಾಫ್ಟ್ ಟೀಚರ್ ಆದರು. ವಿದ್ಯಾರ್ಥಿಗಳಿಗೆ ಕರಕುಶಲ ಕಲೆ ಬೋಧಿಸುತ್ತಲೇ ತಾವೂ ವ್ಯಾಸಂಗ ಮಾಡಿ ಕರ್ನಾಟಕ ವಿಶ್ವವಿದ್ಯಾನಿಲಯ ದಿಂದ ಬಿ.ಎ. ಪಾಸಾದರು. ಈ ಮಧ್ಯೆ ರಾಜಲಕ್ಷ್ಮೀಯವರನ್ನು ವಿವಾಹವಾಗಿ ಚತುರ್ಭುಜರಾದರು. ಮೂರು ಮಕ್ಕಳ ತಂದೆಯಾದರು. ಹದಿಮೂರರ ಪ್ರಾಯದಲ್ಲೇ ಕಾವ್ಯಕನ್ನಿಕೆಯೊದಿಗೆ ಕೋರ್ಟ್‌ಶಿಪ್ ಆರಂಭಿಸಿದ್ದ ಎಚ್ಚೆಸ್ವಿ ಕನ್ನಡ ಕೈಂಕರ್ಯದ ಮಹತ್ವಾಕಾಂಕ್ಷೆಯಿಂದ ಮಲ್ಲಾಡಿಹಳ್ಳಿಯ ವೃತ್ತಿ ತೊರೆದು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಸೇರಿ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದರು.

ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಾಪನ ಆರಂಭಿಸಿ, ಕನ್ನಡ ಪ್ರಾಧ್ಯಾಪಕರು ವಿಭಾಗದ ಮುಖ್ಯಸ್ಥರೂ ಆದರು. ಇಪ್ಪತ್ತೇಳು ವರ್ಷಗಳ ಕಾಲ ಬೋಧಿಸಿ ಕನ್ನಡ ಮಸ್ಸುಗಳನ್ನು ರೂಪಿಸಿದರು. 2000ದಲ್ಲಿ ಬೋಧನೆ ವೃತ್ತಿಯಿಂದ ನಿವೃತ್ತಿ. ಬಾಲ್ಯದ ಯಕ್ಷಗಾನ, ಗೊಂಬೆಯಾಟ, ಭಾರತ ವಾಚನಗಳ ಸಿರಿಗಂಟನ್ನು ಹೊತ್ತು ಬೆಂಗಳೂರು ಸೇರಿದ ಎಚ್ಚೆಸ್ವಿಯವರು ಅಧ್ಯಾಪನ ವೃತ್ತಿಯ ಜೊತೆಗೆ ನಿರಂತರವಾಗಿ ಬರವಣಿಗೆಯಲ್ಲಿ ನಿರತರಾದರು. ಅವರ ಸೃಜನಶೀಲ ಪ್ರತಿಭೆ ಗರಿಗೆದರಿತು. ಕಾವ್ಯ, ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದರು. ಎಚ್ಚೆಸ್ವಿಯವರ ಸೃಜನಶೀಲ ಪ್ರತಿಭೆ ಹಲವು ಪ್ರಕಾರಗಳಲ್ಲಿ ಪ್ರಯೋಗಶೀಲವಾಗಿದ್ದರೂ ಎಚ್ಚೆಸ್ವಿ ಮೂಲತಃ ಕವಿ. ಅವರು ಗದ್ಯ ಬರೆದರೂ ಅದರಲ್ಲಿ ಕಾವ್ಯದ ಅಸ್ಮಿತೆಯದೇ ಛಾಪು. ಮಲ್ಲಾಡಿಹಳ್ಳಿಯಲ್ಲಿದ್ದಾಗಲೇ ತಮ್ಮ ಚೊಚ್ಚಲ ಕವನ ಸಂಕಲನ ‘ಪರಿವೃತ್ತ’ವನ್ನು(1968) ಪ್ರಕಟಿಸಿದ್ದರು. ‘ಪರಿವೃತ್ತ’ದಿಂದ ಪ್ರಾರಂಭವಾದ ಕಾವ್ಯಯಾನ ಇಂದಿಗೂ ಸೃಜನಶೀಲ. ಇಲ್ಲಿಯವರೆಗೆ ನಲವತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿರುವ ಎಚ್ಚೆಸ್ವಿಯವರು ಇತರ ಪ್ರಕಾರಗಳಲ್ಲಿ ಮಾಡಿರುವ ಸಾಧನೆ ಕಿರಿದಾದುದೇನಲ್ಲ. ಹದಿನೈದಕ್ಕೂ ಹೆಚ್ಚು ನಾಟಕಗಳು, ಕಥೆ, ಕಾದಂಬರಿ, ಪ್ರವಾಸ ಕಥನ, ಪ್ರಬಂಧಗಳು ಸೇರಿದಂತೆ ಹದಿನಾರು ಗದ್ಯ ಕೃತಿಗಳು. ‘ಕಥನ ಕವನ’, ‘ಆಕಾಶದ ಹಕ್ಕು’, ‘ಪುತಿನ ಪರಿಕ್ರಮ’ ಸೇರಿದಂತೆ ಹನ್ನೊಂದು ವಿಮರ್ಶಾ ಸಂಕಲನಗಳು. ‘ಋತು ವಿಲಾಸ’ ಕಾಳಿದಾಸನ ಋತು ಸಂಹಾರದ ಅನುವಾದ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರವಾದ ಕೃತಿ. ಎಚ್ಚೆಸ್ವಿಯವರ ಸಾಹಿತ್ಯ ಸಂಪದ ಇನಿತು ಸಮೃದ್ಧವಾದುದು.

    ಎಚ್ಚೆಸ್ವಿಯವರ ಈ ಸಾಹಿತ್ಯ ಸಿರಿಯಲ್ಲಿ ಕಾವ್ಯದ್ದೇ ಸುಗ್ಗಿ. ಕವಿ ಎಂದೇ ಅವರು ಸಿದ್ಧಪ್ರಸಿದ್ಧರು. ನವ್ಯ ಕಾವ್ಯದ ಪ್ರಭಾವ ಗಾಢವಾಗಿದ್ದ ದಿನಗಳಲ್ಲಿ ಕಾವ್ಯರಚನೆ ಪ್ರಾರಂಭಿಸಿದ ಎಚ್ಚೆಸ್ವಿ ಬಲು ಬೇಗ ಅದರ ಪ್ರಭಾವದಿಂದ ಬಿಡಿಸಿಕೊಂಡು ಅದರ ಮಿತಿಗಳನ್ನು ಮೀರಿದರು ಎನ್ನುವುದು ವಿಮರ್ಶೆಯ ಮಾತು. ಅಂತೆಯೇ ಕವಿಯಾಗಿ ಎಚ್ಚೆಸ್ವಿ ಕನ್ನಡದಲ್ಲಿ ಒಂದು ಸ್ಥಾನ ಪಡೆಯುವ ವೇಳೆಗೆ ದಲಿತ ಮತ್ತು ಬಂಡಾಯ ಚಳವಳಿ ಭರ ಪಡೆಯುತ್ತಿತ್ತು. ಎಚ್ಚೆಸ್ವಿ ಇವುಗಳಿಂದ ಆಕರ್ಷಿತರೂ ಆಗಲಿಲ್ಲ, ವಿಚಲಿತರೂ ಆಗಲಿಲ್ಲ. ಈ ಹೊತ್ತಿಗೆ ಎಚ್ಚೆಸ್ವಿಯವರಿಗೆ ತಮ್ಮ ಕಾವ್ಯಮಾರ್ಗ ಸ್ಪಷ್ಟವಾಗಿತ್ತು. ಅವರ ಸುಪ್ರಸಿದ್ಧ ಸುನೀತ ‘ಗಂಧವ್ರತ’ದಲ್ಲಿ ಇದರ ಸುಳಿವು ಸಿಗುತ್ತದೆ. ಅಗರುಬತ್ತಿಯೆ...! ತೆಪ್ಪಗುರಿಯುತ್ತ, ಉರಿಯುತ್ತ
    ಆಯುಷ್ಯ ಸಮೆಸು, ನಡುಮನೆಯ ಹಂಗೇ ಬೇಡ.
    ನಿನ್ನ ಪಾಡಿಗೆ ನೀನು ಮೂಲೆಯಲಿ ಸುಟ್ಟುಕೋ.
    ಒಮ್ಮೆಗೇ ಹೊತ್ತಿ ಧಗ್ಗನೆ ದಗ್ಧವಾಗುವುದು
    ವ್ಯರ್ಥ. ಕೊರಗಿರಲಯ್ಯ ಕೊನೆವರೆಗು. ನಡುವೆಯೇ
    ಆರಿದರೆ ಕರಕು, ಕನಿಕರದ ಕೊರೆ ಉಳಿಯುವುದು.
    ವ್ರತದಂತೆ ಒಂದೆ ಹದದಲ್ಲಿ ಎದೆಯಲ್ಲೊಂದು
    ಕಿಡಿಗೆಂಡ ಹಿಡಿದು, ಅಂತಸ್ಥ ಚಿತ್ತವನ್ನೆತ್ತಿ
    ಚಿತ್ತಾರ ಮಾಡಿಬಿಡು ಹೊರಗೆ.
    ..............
ಕೆ.ವಿ.ತಿರುಮಲೇಶರು ಹೇಳುವಂತೆ ‘ಗಂಧವ್ರತ’ವೇ ಎಚ್ಚೆಸ್ವಿಯವರ ಚಿತ್ತವೃತ್ತಿ.ಕಾವ್ಯವೆನ್ನುವುದು ಅವರಿಗೆ ಒಂದು ಢಾಣಾಡಂಗುರದ ಮೇಲಾಟವಲ್ಲ.ಅದೊಂದು ವ್ರತ, ಬದುಕಿನಲ್ಲಿ, ಕಲೆಯಲ್ಲಿ ಒಂದು ಹದ ಸಾಧಿಸುವ ವ್ರತ. ಎಚ್ಚೆಸ್ವಿಯವರ ಕಾವ್ಯದ ಈ ಹದದ ಗುಟ್ಟು ಇರುವುದು ಪರಂಪರೆ ಮತ್ತು ಆಧುನಿಕತೆ ಎರಡಕ್ಕೂ ಸ್ಪಂದಿಸುವ ಅವರ ಮುಕ್ತ ಮನಸ್ಸಿನಲ್ಲಿ. ಅವರು ಪ್ರಯೋಗದ, ಕ್ರಾಂತಿಯ ಉತ್ಸಾಹಗಳಲ್ಲಿ ಪರಂಪರೆಯನ್ನು ಹೀಗಳೆದವರಲ್ಲ.ಕವಿ, ವಿಮರ್ಶಕ ಜಿ.ಎಸ್.ಶಿವರುದ್ರಪ್ಪನವರು ಹೇಳುವ ಈ ಮಾತುಗಳನ್ನು ಗಮನಿಸಿ:
‘‘ವೆಂಕಟೇಶ ಮೂರ್ತಿಯವರ ವಿಶೇಷತೆ ಮತ್ತು ಅವರ ಸೃಜನಶೀಲತೆಯ ಉತ್ಕರ್ಷಕ್ಕೆ ಬಹುಮುಖ್ಯವಾದ ಕಾರಣವೇನೆಂದರೆ ಅವರು ಪರಂಪರೆಯೊಂದಿಗೆ

ನಿರಂತರವಾಗಿ ನಡೆಯಿಸುವ ಸಂವಾದ ಮತ್ತು ಅನುಸಂಧಾನ.
ಒಬ್ಬ ನಿಜವಾದ ಬರಹಗಾರನಾದವನು, ತಾನು ಹೊಸತಾಗುವುದಕ್ಕೆ ಮತ್ತೆ ಮತ್ತೆ ಪ್ರಾಚೀನತೆಯ ಕಡೆ ಹೊರಳುವುದು ಅತ್ಯಂತ ಅಗತ್ಯವಾಗಿದೆ ಎಂಬ ಎಚ್ಚರ ವೆಂಕಟೇಶ ಮೂರ್ತಿಯವರಲ್ಲಿರುವಷ್ಟು, ಅವರ ಸಮಕಾಲೀನರಾದ ಎಷ್ಟೋ ಲೇಖಕರಿಗೆ ಅಷ್ಟರಮಟ್ಟಿಗೆ ಇರುವಂತೆ ತೋರುವುದಿಲ್ಲ.....ವೆಂಕಟೇಶ ಮೂರ್ತಿಯವರು ಹಿಂದಿನ ಮಹತ್ವದ ಮನಸ್ಸುಗಳೊಂದಿಗೆ ಮಾತನಾಡುತ್ತ ಬಂದಿದ್ದಾರೆ. ಕಾಳಿದಾಸನೊಂದಿಗೆ, ವಾಲ್ಮೀಕಿ-ವ್ಯಾಸರೊಂದಿಗೆ, ಪಂಪನೊಂದಿಗೆ, ಕುಮಾರವ್ಯಾಸನೊಂದಿಗೆ, ಅಷ್ಟೇ ಅಲ್ಲ, ಹೊಸಗನ್ನಡದ ಮಹತ್ವದ ಚಳವಳಿಗಳೊಂದಿಗೆ ಮತ್ತು ತಮ್ಮ ಆಯ್ಕೆಯ ಪಶ್ಚಿಮದ ಬರಹಗಾರರೊಂದಿಗೆ ಅವರು ಸಂವಾದ ನಡೆಸುತ್ತ, ತಮಗೆ ಹಿಂದಿನ ಪರಂಪರೆಯಿಂದ ತಮ್ಮ ಸೃಜನಶೀಲತೆಗೆ ಅಗತ್ಯವಾದುದನ್ನು ತಮ್ಮಿಳಗೆ ಅರಗಿಸಿಕೊಳ್ಳುತ್ತ ವಿವೇಚನೆಯ ಹಾದಿಯಲ್ಲಿ ನಡೆದವರು.’’
(ಗಂಧವ್ರತ ಪುಟ-17-17)

ಕನ್ನಡದ ಮುಖ್ಯ ವಿಮರ್ಶಕರಾದ ಕುರ್ತಕೋಟಿಯವರು ‘ಒಣ ಮರದ ಗಿಳಿಗಳು’ ಸಂಕಲನಕ್ಕೆ ಬರೆದಿರುವ ಮುನ್ನುಡಿಯಲ್ಲಿ ಹೇಳಿರುವ, ‘‘ವೆಂಕಟೇಶ ಮೂರ್ತಿಯವರ ಕವಿತೆಗಳು ಎತ್ತಿಕೊಂಡಿರುವ ಪ್ರಶ್ನೆ ದೊಡ್ಡದು. ಆಶಯ ದೊಡ್ಡದು. ಅಭಿವ್ಯಕ್ತಿ ಎಲ್ಲಕ್ಕಿಂತ ದೊಡ್ಡದು. ಕಾವ್ಯವೆಂದರೆ ಏನು ಎಂದು ಮತ್ತೆ ಆಲೋಚಿಸಲು ಹಚ್ಚುವ ಕಾವ್ಯ ನಿಜವಾಗಿಯೂ ದೊಡ್ಡ ಕಾವ್ಯ...’’ಎಂಬ ಮೌಲಿಕ ಮಾತುಗಳು ಗಮನಾರ್ಹವಾದುದು. ಎಚ್ಚೆಸ್ವಿಯವರ ಕಾವ್ಯ ಮತ್ತು ನಾಟಕಗಳಲ್ಲಿ ಮೇಲಿನ ಇಬ್ಬರು ಪ್ರಮುಖರ ಮಾತುಗಳಿಗೆ ಹೇರಳವಾಗಿ ನಿದರ್ಶನಗಳು ಕಾಣಸಿಗುತ್ತವೆ. ಸಿಂದಬಾದನ ಆತ್ಮ ಕಥೆಯ ಮೂರು ಕವನಗಳು, ಕ್ರಿಯಾಪರ್ವ, ಸೌಗಂಧಿಕಾ, ಹರಿಗೋಲು ಖಂಡ ಕಾವ್ಯ, ಅಗ್ನಿಸ್ತಂಭ, ಶಿಶಿರದ ಪಾಡು, ಉತ್ತರಾಯಣ ಇವೇ ಮುಖ್ಯವಾದ ಹಲವಾರು ಕವನಗಳಲ್ಲಿ, ಪ್ರಾಚೀನ ಕಾವ್ಯಗಳೊಂದಿಗಿನ ಎಚ್ಚೆಸ್ವಿಯವರ ಅನುಸಂಧಾನ ಹಾಗೂ ವರ್ತಮಾನದ ನೆಲೆಯಲ್ಲಿ ಅವುಗಳ ಸಂಗತ ಮತ್ತು ಹೊಸ ಅರ್ಥ ಸ್ಫುರರಣೆಗಳು ಢಾಳಾಗಿ ಹೊಳೆಯುತ್ತವೆ. ಪ್ರಾಚೀನ ಕಾವ್ಯದೊಂದಿಗೆ ಅನುಸಂಧಾನ ನಡೆಸುವ ಎಚ್ಚೆಸ್ವಿಯವರ ಇನ್ನೊಂದು ಪರಿ ಅವುಗಳ ತಿಳಿಗನ್ನಡ ಅವತರಣ ಮತ್ತು ವ್ಯಾಖ್ಯಾನಗಳು. ಪ್ರಾಚೀನ ಕಾವ್ಯಗಳೊಂದಿಗೆ ಹಾಸುಹೊಕ್ಕಾಗಿ ಅನುಸಂಧಾನ ನಡೆಸಿ ಇವತ್ತಿನ ಓದುಗರಿಗೆ ಅವುಗಳನ್ನು ತಿಳಿಗನ್ನಡದಲ್ಲಿ ಕಟ್ಟಿಕೊಡುವ ಎಚ್ಚೆಸ್ವಿಯವರ ಈ ಕಾರ್ಯ, ಪ್ರಾಚೀನ ಅಭಿಜಾತ ಕೃತಿಗಳ ಪುನರ್ರಚನೆಯ ನಿಟ್ಟಿನಲ್ಲಿ ಮಹತ್ವ ಪೂರ್ಣವಾದುದು. ‘ಋಗ್ವೇದ ಸ್ಫುರಣ’, ಮೂರು ಸಂಪುಟಗಳ ‘ಕುಮಾರ ವ್ಯಾಸ ಕಥಾಂತರ’, ‘ಆದಿಪುರಾಣ’, ‘ಯಶೋಧರ ಚರಿತೆ’ ಇವು ಹೊಸರೀತಿಯ ಅನುಸಂಧಾನಕ್ಕೆ ನಿದರ್ಶನಗಳು. ಕನ್ನಡ ಕಾವ್ಯ ಪರಂಪರೆಯಲ್ಲಿ ಪ್ರಭಾವಶಾಲಿಯಾಗಿ ಹಾಗೂ ಆಪ್ತವಾಗಿ ಎದ್ದು ಕಾಣುವ ಕಥನ ರೀತಿ ಎಚ್ಚೆಸ್ವಿಯವರ ಪರಂಪರೆಯೊಂದಿಗನ ಅನುಸಂಧಾನದ ಮತ್ತೊಂದು ಹೆಗ್ಗಳಿಕೆ. ಕಥನ ಕ್ರಮ ಎಚ್ಚೆಸ್ವಿಯವರ ಕಾವ್ಯದ ಮತ್ತೊಂದು ಪ್ರಮುಖ ಅಂಶ. ‘ಸಿಂದಬಾದನ ಆತ್ಮಕಥೆ’, ‘ಸೌಗಂಧಿಕಾ’, ‘ಹರಿಗೋಲು’, ‘ಉತ್ತರಾಯಣ’ ಕಥನ ಕವನಗಳಲ್ಲಿಯೇ ಎಚ್ಚೆಸ್ವಿಯವರ ಪ್ರಮುಖ ಸಾಧನೆ ಇರುವುದು ಎನ್ನುವ ಆಮೂರರ ಮಾತಿಗೆ ಇನ್ನಷ್ಟು ಉದಾಹರಣೆಗಳನ್ನು ಸೇರಿಸಬಹುದು. ಪಾರಂಪರಿಕ ಲಕ್ಷಣಗಳನ್ನೊಳಗೊಂಡೂ ಆಧುನಿಕತೆ ಮತ್ತು ನವ್ಯತೆಗಳನ್ನು ಸಾಧಿಸಿವುದು ವೆಂಕಟೇಶ ಮೂರ್ತಿಯವರ ಕಥನ ಕವನಗಳ ವಿಶೇಷತೆ ಎನ್ನುವ ಆಮೂರರ ಮಾತೂ ಪರಂಪರೆ ಕುರಿತಂತೆ ಎಚ್ಚೆಸ್ವಿಯವರ ದೃಷ್ಟಿಧೋರಣೆಗಳತ್ತಲೇ ಬೊಟ್ಟುಮಾಡುತ್ತದೆ. ಕಥನ ಎಚ್ಚೆಸ್ವಿಯವರಿಗೆ ಎಷ್ಟು ಪ್ರಿಯವಾದ ಮಾಧ್ಯಮವೆಂದರೆ,ಅವರ ಪಿಎಚ್.ಡಿ., ಸಂಪ್ರಬಂಧದ ವಿಷಯವೂ ಕಥನ ಕಾವ್ಯವೇ.

 ‘‘ದೇವತೆಗಳಲ್ಲಿ, ರಾಕ್ಷಸರಲ್ಲಿ, ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸ್ಥಾವರ ಜಗತ್ತಿನಲ್ಲಿ ಕೂಡಾ ನಾನು ಹುಡುಕುವುದು ಮಾನವೀಯ ಮಿಡಿತಗಳನ್ನು. ದೇವತೆ, ರಾಕ್ಷಸರಿರಲಿ, ಮನುಷ್ಯರಲ್ಲಿ ಕೂಡಾ ಅವಿತುಕೊಂಡಿರಬಹುದಾದ ಮನುಷ್ಯರನ್ನು ಹುಡುಕುವುದೇ ನನ್ನ ಬರವಣಿಗೆಯ ಪುರುಷಾರ್ಥ’’ ಎನ್ನುವ ಎಚ್ಚೆಸ್ವಿಯವರ ಕಾವ್ಯ ಇಂಥದೊಂದು ಅನ್ವೇಷಣೆಯ ಅವಿರತ ಪಯಣ. ಪರಂಪರೆಯಿಂದ ಆಧುನಿಕತೆಯತ್ತ, ಆಧುನಿಕದಿಂದ ಪರಂಪರೆಯತ್ತ ಸಾಗುವ ಈ ಪಯಣ ಇವತ್ತಿಗೆ ಅತ್ಯಗತ್ಯವಾಗಿರುವ ‘ವಸುಧೈವ ಕುಟುಂಬಕಂ’ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಸಾಗಿರುವ ಅರ್ಥಪೂರ್ಣ ಪಯಣ. ಇದು ಇನ್ನೊಂದು ಬಗೆಯ ಅನುಸಂಧಾನ. ‘ಆಪ್ತಗೀತ’, ‘ಶ್ರೀ ಸಂಸಾರಿ’ ಮೊದಲಾದ ಇತ್ತೀಚಿನ ಕವನಗಳಲ್ಲಿ ಇದನ್ನು ನಾವು ಕಾಣುತ್ತೇವೆ. ‘ಆಪ್ತ ಗೀತ’ದಲ್ಲಿ ಕೃಷ್ಣನ ದೈವತ್ವ ಸಾಧಿಸಿದ ನಾಲ್ಕು ಮಾನುಷ ಮಾರ್ಗಗಳನ್ನು ಸೂಚಿಸುತ್ತಲೇ ಐದನೆಯ ಮಾರ್ಗವಾಗಿ, ಕೃಷ್ಣನ ಶ್ರೀ ಚಕ್ರ ಮೋಹನದಾಸ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಸಾಧನವಾದ ಚರಕವಾಗಿ ಧ್ವನಿಸುವುದರಲ್ಲಿ ಎಚ್ಚೆಸ್ವಿಯವರ ಕಾವ್ಯದ ವರ್ತಮಾನದ ಜರೂರಿನ ಹೊಸಹೊಳಹು ಸ್ಪಷ್ಟವಾಗುತ್ತದೆ. ಆದರ್ಶ ಪುರುಷ ರಾಮನ ಚಿತ್ರ ಅಳಿಲಿನೊಂದಿಗೆ ಪೂರ್ಣಗೊಳ್ಳುವುದರಲ್ಲಿ ಗಾಂಧಿಯವರ ರಾಮರಾಜ್ಯ ಮತ್ತು ಅಂತ್ಯೋದಯಗಳೇ ಎಚ್ಚೆಸ್ವಿಯವರ ಕಾವ್ಯದ ಮಹದಾಶಯವೆಂಬ ಇಂಗಿತ ಸ್ಪಷ್ಟ.

 ಭಾರತೀಯ ಸಂಪ್ರದಾಯದಲ್ಲಿ ನಾಟಕವನ್ನು ‘ಕಾವ್ಯೇಷು ನಾಟಕಂ ರಮ್ಯಂ’ ಎಂದೇ ಭಾವಿಸಲಾಗಿದೆ. ಪಾಶ್ಚಾತ್ಯ ವಿಮರ್ಶೆಯ ಪರಿಕಲ್ಪನೆಯಲ್ಲೂ ನಾಟಕವನ್ನು ಕಾವ್ಯವೆಂದೇ ಮಾನ್ಯ ಮಾಡಲಾಗಿದೆ. ಕಾವ್ಯ ನಾಟಕವೇ ಆದರ್ಶಪ್ರಾಯವಾದುದು (ದ ಡ್ರಾಮಾ ಈಸ್ ಎಸೆನಿಷಿಯಲೀ ಪೊಯಿಟಿಕ್) ಎನ್ನುತ್ತಾನೆ, ಪಾಶ್ಚಾತ್ಯ ಕವಿ, ವಿಮರ್ಶಕ ಟಿ.ಎಸ್.ಎಲಿಯಟ್. ನಾಟಕ ರಂಗಭೂಮಿಯ ಕಾವ್ಯವೇ ಸರಿ. ಎಚ್ಚೆಸ್ವಿ ಈ ಮಾತುಗಳಿಗೆ ರುಜುವಾತಾಗುವಂತಹ ನಾಟಕಗಳನ್ನು ರಚಿಸಿ ಕನ್ನಡ ರಂಗಭೂಮಿಯಲ್ಲೂ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರು ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದು, ಅವುಗಳಲ್ಲಿ ಏಳು ಗದ್ಯ ನಾಟಕಗಳಾದರೆ, ಉಳಿದವು ಕಾವ್ಯಪ್ರಧಾನ ನಾಟಕಗಳು. ಚಿತ್ರಪಟ, ಅಗ್ನಿವರ್ಣ, ಉರಿಯ ಉಂಯ್ಯಿಲೆ, ಕಂಸಾಯಣ, ಊರ್ಮಿಳಾ, ಮಂಥರಾ ಇವು ಕಾವ್ಯಾತ್ಮಕವಾಗಿಯೂ ದೃಶ್ಯಾತ್ಮಕವಾಗಿಯೂ ರಂಗದ ಮೇಲೆ ಯಶಸ್ವಿಯಾಗಿ, ರಸಿಕರ ಮನಸೆಳೆದಿರುವ ನಾಟಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲೂ ಎಚ್ಚೆಸ್ವಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ‘‘ಮಕ್ಕಳ ಕವಿತೆಗಳಿಗೆ ಹೊಸ ಬಣ್ಣ ಕೊಟ್ಟವರು’’ ಎನ್ನುವ ಲಕ್ಷ್ಮೀನಾರಾಯಣ ಭಟ್ಟರ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ.

‘ಬಾರೋ ಬಾರೋ ಮಳೆರಾಯ’, ‘ಹಕ್ಕಿ ಸಾಲು’ ಮಕ್ಕಳ ಮನೋಲೋಕಕ್ಕೆ ಲಗ್ಗೆ ಇಡುವ ಚೇತೋಹಾರಿ ಪದ್ಯಗಳಿಂದ ಮಕ್ಕಳು ಮತ್ತು ದೊಡ್ಡವರು ಇಬ್ಬರಿಗೂ ಪ್ರಿಯವಾಗುತ್ತವೆ. ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಸಾಹಿತ್ಯ ಸತ್ವ ಮತ್ತು ಸಂಖ್ಯೆ ಎರಡು ದೃಷ್ಟಿಯಿಂದಲೂ ಅಂಕಣಬರಹದ ಮಿತಿಗಳನ್ನು ಮೀರಿ ನಿಲ್ಲುವಷ್ಟು ಬೃಹತ್ತಾದುದು. ಎಚ್ಚೆಸ್ವಿಯವರ ಕಾವ್ಯ ಸಾಧನೆಯ ಸಮಗ್ರ ಚಿತ್ರವನ್ನು ಒಂದು ಚಿಕಣಿ ಚೌಕಟ್ಟಿನಲ್ಲಿ ಹಿಡಿದಿರಿಸುವುದು ಸುಲಭವಲ್ಲ. ಸುಗಮ ಸಂಗೀತ, ಚಲನಚಿತ್ರ ಮೊದಲಾದ ಕಲಾ ಪ್ರಕಾರಗಳಲ್ಲೂ ಅವರ ಸಾಧನೆಯ ಗುರುತುಗಳಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಗಂಧವ್ರತ’ ಅಭಿನಂದನಾ ಗ್ರಂಥ ಹೀಗೆ ಹಲವಾರು ಪ್ರಶಸ್ತಿಗಳ ಹಾರತುರಾಯಿಗಳು ಅವರನ್ನು ಅಲಂಕರಿಸಿವೆ. ಈಗ ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆ. ಗುಣ, ಗಾತ್ರ ಎರಡರಲ್ಲೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಸಂಪನ್ನ ಕವಿಗೆ, ಅವರ ಅನನ್ಯ ಕಾವ್ಯಕ್ಕೆ ಸಲ್ಲುತ್ತಿರುವ ಗೌರವವಿದು. ಎಚ್ಚೆಸ್ವಿಗೆ ನೇಸರಾಭಿನಂದನೆಗಳು.

Writer - ಜಿ.ಎನ್. ರಂಗನಾಥ್ ರಾವ್

contributor

Editor - ಜಿ.ಎನ್. ರಂಗನಾಥ್ ರಾವ್

contributor

Similar News

ಸಂವಿಧಾನ -75