ಪೌರತ್ವ ತಿದ್ದುಪಡಿ ಮಸೂದೆಯಿಂದ ಈ ರಾಜ್ಯಕ್ಕೆ ವಿನಾಯಿತಿ
Update: 2019-12-19 06:46 GMT
ಹೊಸದಿಲ್ಲಿ,ಡಿ.9: ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ ಅಥವಾ ಆಂತರಿಕ ವೀಸಾ ವ್ಯವಸ್ಥೆಯಡಿ ಸೇರಿಸುವ ಮೂಲಕ ಅದಕ್ಕೆ ಪೌರತ್ವ ತಿದ್ದುಪಡಿ ಮಸೂದೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ವ್ಯವಸ್ಥೆಯಡಿ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಸಂರಕ್ಷಿತ ಪ್ರದೇಶಗಳೆಂದು ವ್ಯಾಖ್ಯಾನಿಸಲಾಗಿರುವ ಸ್ಥಳಗಳಿಗೆ ಭೇಟಿ ನೀಡುವ ಹೊರಗಿನವರು ಅಲ್ಲಿಯ ಸರಕಾರದಿಂದ ಪೂರ್ವಾನುಮತಿ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ವ್ಯವಸ್ಥೆ ಮತ್ತು ಸಂವಿಧಾನದ ಆರನೇ ಅನುಸೂಚಿಯಡಿಯ ಈಶಾನ್ಯ ಭಾರತದ ಪ್ರದೇಶಗಳಿಗೆ ಪೌರತ್ವ ತಿದ್ದುಪಡಿ ಮಸೂದೆಯು ಅನ್ವಯವಾಗುವುದಿಲ್ಲ.
ಶಾ ಪ್ರಕಟಣೆಗೆ ಮುನ್ನ ಅವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಟ್ವೀಟಿಸಿದ್ದ ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು,ರಾಜ್ಯದ ಜನತೆ ಬೀದಿಗಿಳಿದು ಸಂಭ್ರಮ ಅಚರಿಸುತ್ತಿದ್ದಾರೆ ಎಂದು ತಿಳಿಸಿದ್ದರು.