ಅಂಬೇಡ್ಕರ್‌ರಿಂದ ಕಲಿಯಬೇಕಾದ ಪಾಠಗಳು

Update: 2019-12-09 18:16 GMT

ಡಿಸೆಂಬರ್ 6 ರಂದು ಬಿ.ಆರ್. ಅಂಬೇಡ್ಕರ್‌ರ 63ನೇ ಪರಿನಿರ್ವಾಣ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಯಿತು. ಭಾರತದ ಸಂವಿಧಾನದ ಮುಖ್ಯ ನಿರ್ಮಾತೃ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಲಿತರ ಹಕ್ಕುಗಳಿಗಾಗಿ ಶ್ರಮಿಸಿದ ಓರ್ವ ಧೀರ ಹೋರಾಟಗಾರ ಅಂಬೇಡ್ಕರ್. ದಲಿತರ ಸಬಲೀಕರಣಕ್ಕಾಗಿ ಅವರು ಬಳಸಿದ ವಿಧಾನಗಳು, ತಂತ್ರಗಳು ಬದಲಾದ ಸಂದರ್ಭಗಳಿಗನುಗುಣವಾಗಿ ಭಿನ್ನವಾಗಿರುತ್ತಿದ್ದವಾದರೂ ಅವರ ಗುರಿ ಒಂದೇ ಆಗಿತ್ತು. ಸವರ್ಣೀಯ ಹಿಂದೂಗಳಿಗೆ ಸಮಾನವಾದ ಸಮಾನತೆಯನ್ನು ದಲಿತರಿಗೆ ದೊರಕಿಸಿಕೊಡುವುದು. ಈ ಗುರಿ ಸಾಧನೆಗಾಗಿಯೇ 1930ರ ದಶಕದಲ್ಲಿ ಅವರು ದಲಿತರಿಗೆ ಅವರೇ ಚುನಾಯಿಸುವ ಪ್ರತ್ಯೇಕ ಇಲೆಕ್ಟೊರೇಟ್ (ಮತದಾರರ ಸಮುದಾಯ) ಬೇಕೆಂದು ಪ್ರತಿಪಾದಿಸಿದರು. ಬ್ರಿಟಿಷ್ ಪ್ರಧಾನಿ ರ್ಯಾಂಸೆ ಮ್ಯಾಕ್ ಡೊನಾಲ್ಡ್ 1932ರಲ್ಲಿ ಅಂಬೇಡ್ಕರ್‌ರ ಈ ಬೇಡಿಕೆಗೆ ಒಪ್ಪಿದರು. ಪರಿಣಾಮವಾಗಿ ದಲಿತರಿಗೆ ಕೇಂದ್ರ ಶಾಸನ ಸಭೆಗಳಲ್ಲಿ ಒಟ್ಟು ಸ್ಥಾನಗಳ ಶೇ. 16 ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ 71 ಸ್ಥಾನಗಳನ್ನು ನೀಡುವುದೆಂದು ನಿರ್ಧರಿಸಲಾಯಿತು. ಆದರೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ (ಇಲೆಕ್ಟೊರೇಟ್) ನೀಡುವುದರ ವಿರುದ್ಧ ಗಾಂಧೀಜಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡದ್ದರಿಂದ ಈ ಬೇಡಿಕೆ ಈಡೇರಲಿಲ್ಲ. ದಲಿತರಿಗೆ ಪ್ರತ್ಯೇಕ ಇಲೆಕ್ಟೊರೇಟ್ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಬ್ರಿಟಿಷರ ಒಂದು ಹುನ್ನಾರವೆಂದು ಗಾಂಧೀಜಿ ವಾದಿಸಿದರು. ದಲಿತರಿಗೆ ಹೆಚ್ಚು ಸ್ಥಾನಗಳನ್ನು ನೀಡಬೇಕು; ಆದರೆ ಸಾರ್ವತ್ರಿಕ ಹಿಂದೂ ಸಮುದಾಯ ಮತ್ತು ಇತರರು ಆ ದಲಿತ ಅಭ್ಯರ್ಥಿಗಳಿಗೆ ಮತದಾರರಾಗಿರಬೇಕು ಎಂಬ ಶರತ್ತಿಗೆ ಒಪ್ಪಿ ಅಂಬೇಡ್ಕರ್ ತನ್ನ ಬೇಡಿಕೆಯನ್ನು ಬಿಟ್ಟುಕೊಟ್ಟರು.

ಆದರೆ ಬಳಿಕ ಅಂಬೇಡ್ಕರ್ ತನ್ನ ಈ ನಿರ್ಧಾರಕ್ಕಾಗಿ ವಿಷಾದಿಸಿದರು. ಯಾಕೆಂದರೆ ಸವರ್ಣೀಯ ಹಿಂದೂಗಳ ಮತ್ತು ದಲಿತರ ಒಟ್ಟು ಅರ್ಹ ಮತದಾರರ ಸಂಖ್ಯೆಯಲ್ಲಿ ಭಾರೀ ತಾರತಮ್ಯ, ವ್ಯತ್ಯಾಸವಿರುವಾಗ ಬೆರಳೆಣಿಕೆಯಷ್ಟು ಮಂದಿ ದಲಿತರು ಚುನಾಯಿತರಾಗುತ್ತಾರೆ; ಅವರು ದಲಿತ ಹಿತಾಸಕ್ತಿಗಳನ್ನು ನಿಜವಾಗಿಯೂ ಪ್ರತಿನಿಧಿಸುವುದು ಸಾಧ್ಯವಾಗುವುದಿಲ್ಲವೆಂಬುದು ಅಂಬೇಡ್ಕರ್‌ರಿಗೆ ಮನವರಿಕೆಯಾಯಿತು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಅಸ್ಪಶ್ಯತೆಯನ್ನು ಖಂಡಿಸಿದರು. ಆದರೆ ಅವರು ಅಸ್ಪಶ್ಯರನ್ನು ಉಲ್ಲೇಖಿಸಲು ಬಳಸಿದ ಶಬ್ದಗಳೇ ಅವರು ಸಮಸ್ಯೆಯನ್ನು ಎದುರಿಸಿದ ವಿಧಾನಗಳಲ್ಲಿದ್ದ ವ್ಯತ್ಯಾಸವನ್ನು ಸೂಚಿಸಿದ್ದವು. ಗಾಂಧೀಜಿ ಅವರನ್ನು ‘ಹರಿಜನ’ (ದೇವರ ಮಕ್ಕಳು) ಎಂದು ಕರೆದರು. ಆದರೆ ಇದನ್ನು ಅಂಬೇಡ್ಕರ್ ‘ಆಶ್ರಯದಾತ’ ಎಂಬ ಅರ್ಥ ಬರುವ, ಮೇಲರಿಮೆಯವರು ಬಳಸುವ ಶಬ್ದವೆಂದು ಪರಿಗಣಿಸಿದರು. ಆದ್ದರಿಂದ ಅವರು ಅಸ್ಪಶ್ಯರನ್ನು ‘ದಲಿತ’ರೆಂದು ಕರೆದರು. ದಲಿತರ ದಮನದ ವಾಸ್ತವವನ್ನು ಸೂಚಿಸುವ ಪದ ಇದು.

1930ರ ದಶಕದ ದ್ವಿತೀಯಾರ್ಧದಲ್ಲಿ ಅಂಬೇಡ್ಕರ್ ಮುಸ್ಲಿಮ್ ಲೀಗನ್ನು ತನ್ನ ಒಂದು ಮಿತ್ರ ಪಕ್ಷವೆಂದು ಪರಿಗಣಿಸಿದರು. ಮುಸ್ಲಿಮರು ಮತ್ತು ದಲಿತರು ಜೊತೆಯಾಗಿ ಕಾರ್ಯಾಚರಿಸಿದರೆ ಆಗ ಅವರು ಸವರ್ಣೀಯ ಹಿಂದೂಗಳ ರಾಜಕೀಯ ಶಕ್ತಿಗೆ ಎದುರಾಗಿ ನಿಲ್ಲಬಲ್ಲರೆಂಬುದು ಅಂಬೇಡ್ಕರ್‌ರ ತೀರ್ಮಾನವಾಗಿತ್ತು. ಆದರೆ 1940ರ ಲಾಹೋರ್ ಅಧಿವೇಶನದ ಬಳಿಕ ಮುಸ್ಲಿಮ್ ಲೀಗ್ ತನಗೆ ಮುಸ್ಲಿಮರು ಬಹುಮತವಿರುವ ಒಂದು ಮುಸ್ಲಿಮ್ ರಾಷ್ಟ್ರಬೇಕೆಂದು ಬೇಡಿಕೆ ಇಟ್ಟಾಗ ಅಂಬೇಡ್ಕರ್‌ಗೆ ಭ್ರಮನಿರಸನವಾಯಿತು. ಸ್ವಾತಂತ್ರ ದೊರಕಿದ ಬಳಿಕ ಅಧಿಕಾರದ ಚೌಕಟ್ಟಿನ ಒಳಗಿನಿಂದಲೇ ತಾನು ದಲಿತರ ಹಕ್ಕುಗಳನ್ನು ಪಡೆಯಬಹುದೆಂಬ ನಂಬಿಕೆಯಿಂದ ಅವರು ಕಾಂಗ್ರೆಸ್ ಪಕ್ಷದ ಜತೆ ರಾಜಿಮಾಡಿಕೊಂಡರು. ಅವರು ಸ್ವತಂತ್ರ ಭಾರತದ ಕಾನೂನು ಸಚಿವರಾದರು ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು. ಆದರೆ 1951ರಲ್ಲಿ ಅವರ ಹಿಂದೂ ಸಂಹಿತೆ (ಕೋಡ್) ಮಸೂದೆಯ ಕರಡನ್ನು ಸಂಸತ್ ಅಂಗೀಕರಿಸದಿದ್ದಾಗ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

ಸಂಪ್ರದಾಯ ಶರಣ ಹಿಂದೂ ಸಂಸತ್ ಸದಸ್ಯರು ಆ ಮಸೂದೆಯನ್ನು ವಿರೋಧಿಸಿದ್ದರು. ಅಂಬೇಡ್ಕರ್ ಓರ್ವ ಹತಾಶ ವ್ಯಕ್ತಿಯಾಗಿ ಮಡಿದರಾದರೂ ದಲಿತರ ಸಬಲೀಕರಣಕ್ಕಾಗಿ ಅವರು ತೋರಿದ ಕಾಳಜಿ, ಬದ್ಧತೆ, ನಿಷ್ಠೆ ಇಂದಿನವರೆಗೂ ದಲಿತರಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಲೇ ಬಂದಿವೆ. ದಲಿತರಲ್ಲಿ ಮೂಡಿರುವ ಈ ಎಚ್ಚರ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ದಲಿತರ ಚಟುವಟಿಕೆ, ಪ್ರತಿಭಟನೆಗಳಲ್ಲೂ, ದಲಿತ ಆಧಾರಿತ ಪಕ್ಷಗಳ ಸ್ಥಾಪನೆಯಲ್ಲೂ ಕಂಡುಬರುತ್ತದೆ. ಅದೇನಿದ್ದರೂ ದಲಿತ ಚಳವಳಿಯನ್ನು ಮೂರು ಮುಖ್ಯ ಸಮಸ್ಯೆಗಳು ಕಾಡುತ್ತಿವೆ. ಮೊದಲನೆಯದಾಗಿ, ಉಪಜಾತಿಗಳನ್ನಾಧರಿಸಿ ದಲಿತರ ಒಳಗಡೆಯೇ ಇರುವ ವ್ಯತ್ಯಾಸಗಳು, ಭಿನ್ನ ಮತಗಳು ದಲಿತರ ಸಬಲೀಕರಣದ ವಿರೋಧಿಗಳಾಗಿರುವ ಶಕ್ತಿಗಳಿಗೆ ದಲಿತರನ್ನು ವಿಭಜಿಸಲು, ಅವರೊಳಗಡೆಯೇ ಒಡಕುಹುಟ್ಟಿಸಲು ಅವಕಾಶ ಮಾಡಿಕೊಡುತ್ತಿವೆ. ಎರಡನೆಯದಾಗಿ, ದಲಿತ ರಾಜಕಾರಣಿಗಳ ಮಧ್ಯೆಯಿರುವ ಪೈಪೋಟಿ, ಹಣಾಹಣಿ ಕೂಡ ದಲಿತರಲ್ಲಿ ಒಡಕು ಮೂಡಿಸಲು ಕಾರಣವಾಗಿದೆ. ಮೂರನೆಯದಾಗಿ, ದಲಿತ ನಾಯಕರಿಗೆ ತಮ್ಮ ದಲಿತೇತರ ಮಿತ್ರರೊಂದಿಗೆ, ಮಿತ್ರ ಪಕ್ಷಗಳೊಂದಿಗೆ ಕೊಡಿಕೊಳ್ಳಲು ಎದುರಾಗುವ ಅಸಾಮರ್ಥ್ಯ ಕೂಡ ದಲಿತರ ಸಬಲೀಕರಣಕ್ಕೆ ಒಂದು ಸವಾಲಾಗಿದೆ. ಅಂಬೇಡ್ಕರ್ ಪುನಃ ಪುನಃ ದಲಿತರಿಗೆ ನೀಡಿದ ಹಿತವಚನಗಳಿಂದ ದಲಿತರು ಕಲಿಯಬೇಕಾದ ಪಾಠ ಇದು: ದಲಿತರು ಒಂದಾಗಿ, ಒಗ್ಗಟ್ಟಾಗಿ ಉಳಿಯದಿದ್ದಲ್ಲಿ ದಲಿತರಿಗೆ ಸಿಗಬೇಕಾದ ರಾಜಕೀಯ ಅಧಿಕಾರದ ಅವರ ಪಾಲು ಅವರಿಗೆ ದೊರೆಯಲಾರದು.


(ಲೇಖಕರು ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ)
(ಕೃಪೆ: ದಿ ಹಿಂದೂ) 

Writer - ಮುಹಮ್ಮದ್ ಅಯ್ಯೂಬ್

contributor

Editor - ಮುಹಮ್ಮದ್ ಅಯ್ಯೂಬ್

contributor

Similar News