ಈ ಎನ್‌ಕೌಂಟರ್ ಅಗತ್ಯವಿತ್ತೇ?

Update: 2019-12-10 18:14 GMT

ಮಾನ್ಯರೇ,

ಹೈದರಾಬಾದ್‌ನಲ್ಲಿ ನಾಲ್ಕು ಜನ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ನಿಜವಾಗಿ ಅದು ಆ ಅತ್ಯಾಚಾರಿಗಳಿಗೆ ಕೊಟ್ಟ ಶಿಕ್ಷೆಯಲ್ಲ, ಅದು ಬಹುಮಾನವೆಂದೇ ಪರಿಗಣಿಸಬೇಕು. ಇದೊಂದು ರೀತಿಯ ದಯಾ ಮರಣವೇ ಆಗಿದೆ. ಪೊಲೀಸರು ಸರಿಯಾಗಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರೆ ಹೇಗೂ ತ್ವರಿತ ನ್ಯಾಯಾಲಯದಲ್ಲಿ ಅವರಿಗೆ ಖಂಡಿತಾ ಗಲ್ಲು ಶಿಕ್ಷೆಯಾಗುತ್ತಿತ್ತು. ಹೆಚ್ಚೆಂದರೆ ಅದಕ್ಕೆ ಎರಡು ಮೂರು ತಿಂಗಳು ಹಿಡಿಯುತ್ತಿತ್ತು. ನಂತರ ಅವರು ಹೈಕೋರ್ಟ್ ಸುಪ್ರೀಂ ಕೋರ್ಟಿಗೆ ಅಪೀಲ್ ಮಾಡಿದ್ದರೂ ಹೆಚ್ಚೆಂದರೆ ಅದಕ್ಕೆ ಆರು ತಿಂಗಳು ತಗಲುತ್ತಿತ್ತು. ಅಷ್ಟು ದಿನವೂ ಅವರು ಸ್ವಲ್ಪ ಸ್ವಲ್ಪವೇ ಸಾಯುತ್ತಿದ್ದರು. ಈ ಮಾನಸಿಕ ಹಿಂಸೆ ಸಹಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿರುತ್ತಿತ್ತು. ಈಗ ಎನ್‌ಕೌಂಟರ್ ಮಾಡಿ ಆ ನಾಲ್ವರಿಗೂ ತಿಂಗಳುಗಟ್ಟಲೇ ಆಗಬಹುದಾಗಿದ್ದ ಭೀಕರ ಮಾನಸಿಕ ಚಿತ್ರಹಿಂಸೆಯನ್ನು ಪೊಲೀಸರು ಒಂದೇ ಏಟಿಗೆ ತಡೆದಂತಾಯಿತು.

ಕೋಲ್ಕತಾದ ಧನಂಜಯ ಚಟರ್ಜಿಯ ಚರಿತ್ರೆ ಓದಿದವರಿಗೆ ಇದೆಲ್ಲಾ ಸರಿಯಾಗಿ ಅರ್ಥವಾಗುತ್ತದೆ. 1992ರಲ್ಲಿ ಒಂದು ಹೈಸ್ಕೂಲ್ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಧನಂಜಯ ಚಟರ್ಜಿಯನ್ನು ಕೊನೆಗೆ ಗಲ್ಲಿಗೆ ಏರಿಸಿದ್ದು 2004ರಲ್ಲಿ. ಹನ್ನೆರಡು ವರ್ಷಗಳ ಕಾಲ ಅವನು ಜೈಲಿನಲ್ಲಿ ಮಾನಸಿಕ ಹಿಂಸೆಯಿಂದ ಜರ್ಜರಿತನಾಗಿ ಗಲ್ಲಿಗೇರುವ ದಿನ ಹತ್ತಿರ ಬರುತ್ತಿರುವಂತೆ ಹುಚ್ಚನಾಗಿ ಬಿಟ್ಟಿದ್ದ. ಅವನನ್ನು 12 ವರ್ಷ ಗಮನಿಸುತ್ತಿದ್ದ ಜೈಲು ಸಿಬ್ಬಂದಿಯ ಸಂದರ್ಶನವಿದ್ದ ಸವಿಸ್ತಾರ ಲೇಖನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 2013ರಲ್ಲಿ ಆದ ನಿರ್ಭಯಾ ಪ್ರಕರಣದಲ್ಲಿಯೂ ಒಬ್ಬ ಆರೋಪಿ ಮಾನಸಿಕ ಹಿಂಸೆ ತಡೆಯಲಾರದೆ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅದೇ ರೀತಿ ಈ ಹೈದರಾಬಾದಿನ 4 ಅತ್ಯಾಚಾರಿಗಳಿಗೂ ಮಾನಸಿಕ ಹಿಂಸೆ ಮತ್ತು ಪ್ರಾಯಶ್ಚಿತ ಆಗಬೇಕಿತ್ತು. ಹೈದರಾಬಾದ್ ಎನ್‌ಕೌಂಟರ್ ಪೊಲೀಸರ ಕಾರ್ಯಕ್ಷಮತೆಗೂ ಘೋರ ಅವಮಾನ.

ನಾಲ್ಕು ಜನ ಪೀಚಲು ಹುಡುಗರು ಹತ್ತು ಜನ ಪೈಲ್ವಾನರಂತಿದ್ದ ಪೊಲೀಸರನ್ನು ಹೊಡೆದು ಕೆಡವಿ ಅವರಿಂದ ಬಂದೂಕು ಕಸಿದು ಕೊಂಡು ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದರು ಅನ್ನುವುದು ಪೊಲೀಸರ ದೈಹಿಕ ಕ್ಷಮತೆಯ ಮೇಲೆಯೇ ಪ್ರಶ್ನೆ ಹುಟ್ಟು ಹಾಕುತ್ತದೆ. ಇಂತಹ ದುರ್ಬಲ ಪೊಲೀಸರು ಇಲಾಖೆಯಲ್ಲಿರಲು ಅರ್ಹರೇ? ಈ ಆರೋಪಿಗಳು ಈ ಒಂದು ಅತ್ಯಾಚಾರ ಮಾತ್ರವಲ್ಲ, ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿಯೂ ಇಂತಹ ಅನೇಕ ಅಪರಾಧಗಳನ್ನು ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದರು. ಅದು ನಿಜವೇ ಆಗಿದ್ದರೆ ಈ ಎನ್‌ಕೌಂಟರ್‌ನಿಂದ ಅವರು ಮಾಡಿರಬಹುದಾದ ಬೇರೆ ಅಪರಾಧಗಳು ಮುಚ್ಚಿ ಹೋಗುವಂತೆ ಆಯಿತು ತಾನೇ? ಏನೇ ಇರಲಿ, ಒಂದು ವೇಳೆ ಈ ನಾಲ್ಕು ಅತ್ಯಾಚಾರಿಗಳು ಮೇಲ್ಜಾತಿಯವರಾಗಿದ್ದು ಆ ನತದೃಷ್ಟ ಹುಡುಗಿ ಕೆಳಜಾತಿಯವಳಾಗಿದ್ದಿದ್ದರೆ ಆರೋಪಿಗಳ ಎನ್‌ಕೌಂಟರ್ ಆಗುತ್ತಿತ್ತೇ? 

ಉದಯರಾಜ್ ಆಳ್ವಾ,

ಕಾಟಿಪಳ್ಳ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News