ಮಹಿಳಾ ದೌರ್ಜನ್ಯ: ಆಷಾಢಭೂತಿ ರಾಜಕಾರಣಿಗಳ ಕ್ರಿಯಾಶೂನ್ಯತೆ

Update: 2019-12-10 18:23 GMT

ಈ ಎನ್‌ಕೌಂಟರ್ ಬಗ್ಗೆ ಪೊಲೀಸರು ನೀಡಿರುವ ಹಳಸಲು ಹೇಳಿಕೆಯನ್ನು ನೋಡಿದರೆ ಯಾರಿಗೂ ಅದು ನಂಬಲರ್ಹವೆಂದು ಅನಿಸದು. ಆದರೆ ಟಿವಿ ಪರದೆಯ ಮೇಲೆ ಜನ ಪಟಾಕಿ ಸಿಡಿಸಿ, ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುವುದನ್ನು ನೋಡಿದಾಗ; ಪೊಲೀಸ್ ತಂಡವನ್ನು ಹೀರೋಗಳೆಂಬಂತೆ ಪುಷ್ಪವೃಷ್ಟಿಗರೆದು ಸ್ವಾಗತಿಸುವುದನ್ನು ಕಂಡಾಗ; ರಾಜಕಾರಣಿಗಳು, ಸಿನೆಮಾ ತಾರೆಯರು, ಆಟಗಾರರು ಪೊಲೀಸರನ್ನು ಅಭಿನಂದಿಸುವುದನ್ನು ಕಂಡಾಗ ಈ ರೀತಿ ಎನ್‌ಕೌಂಟರ್ ಹೆಸರಿನಲ್ಲಿ ಆರೋಪಿಗಳನ್ನು ಗುಂಡಿಟ್ಟು ಕೊಲೆಗೈಯುವುದನ್ನು ಸಂಭ್ರಮಿಸುವ ಮಟ್ಟಕ್ಕಿಳಿದ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸಲೂ ಭಯವಾಗುತ್ತದೆ.


ಹೈದರಾಬಾದ್‌ನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಒಂದು ಅತ್ಯಂತ ಬರ್ಬರ ಹಾಗೂ ಹೇಯ ಕೃತ್ಯವಾಗಿದ್ದು ಅದನ್ನು ಎಷ್ಟು ಖಂಡಿಸಿದರೂ ಸಾಲದು. ಆದರೆ ಇದೀಗ ಇದೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿದ್ದ ನಾಲ್ವರು ಆರೋಪಿಗಳು ಪೊಲೀಸರ ‘ಎನ್‌ಕೌಂಟರ್’ಗೆ ಬಲಿಯಾಗಿರುವುದು ಇದಕ್ಕಿಂತಲೂ ಬರ್ಬರ ಹಾಗೂ ಹೇಯ ಘಟನೆಯಾಗಿದ್ದು ಪ್ರಜ್ಞಾವಂತರು ಇದನ್ನು ಇನ್ನಷ್ಟು ಕಠಿಣ ಶಬ್ದಗಳಲ್ಲಿ ಖಂಡಿಸಬೇಕಾಗಿದೆೆ. ಈ ಎನ್‌ಕೌಂಟರ್ ಬಗ್ಗೆ ಪೊಲೀಸರು ನೀಡಿರುವ ಹಳಸಲು ಹೇಳಿಕೆಯನ್ನು ನೋಡಿದರೆ ಯಾರಿಗೂ ಅದು ನಂಬಲರ್ಹವೆಂದು ಅನಿಸದು. ಆದರೆ ಟಿವಿ ಪರದೆಯ ಮೇಲೆ ಜನ ಪಟಾಕಿ ಸಿಡಿಸಿ, ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುವುದನ್ನು ನೋಡಿದಾಗ; ಪೊಲೀಸ್ ತಂಡವನ್ನು ಹೀರೋಗಳೆಂಬಂತೆ ಪುಷ್ಪವೃಷ್ಟಿಗರೆದು ಸ್ವಾಗತಿಸುವುದನ್ನು ಕಂಡಾಗ; ರಾಜಕಾರಣಿಗಳು, ಸಿನೆಮಾ ತಾರೆಯರು, ಆಟಗಾರರು ಪೊಲೀಸರನ್ನು ಅಭಿನಂದಿಸುವುದನ್ನು ಕಂಡಾಗ ಈ ರೀತಿ ಎನ್‌ಕೌಂಟರ್ ಹೆಸರಿನಲ್ಲಿ ಆರೋಪಿಗಳನ್ನು ಗುಂಡಿಟ್ಟು ಕೊಲೆಗೈಯುವುದನ್ನು ಸಂಭ್ರಮಿಸುವ ಮಟ್ಟಕ್ಕಿಳಿದ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸಲೂ ಭಯವಾಗುತ್ತದೆ.

ನಾವು ಸರ್ವತೋಮುಖ ವಿಕಾಸ ಹೊಂದುವ ಬದಲು ಮಧ್ಯಯುಗ ಅಥವಾ ಅದಕ್ಕೂ ಹಿಂದಿನ ಬರ್ಬರ, ಕಾಡುಮನುಷ್ಯರ ಯುಗಕ್ಕೆ ಹೋಗುತ್ತಿದ್ದೇವೋ ಎಂದು ಅನಿಸುತ್ತಿದೆ. ಅಂದ ಹಾಗೆ, ಈ ಎನ್‌ಕೌಂಟರ್‌ಗೆ ಸಂಬಂಧಪಟ್ಟಂತೆ ಒಂದು ಮುಖ್ಯ ವಿಷಯವನ್ನು ಗಮನಿಸಲೇಬೇಕಾಗುತ್ತದೆ. ಅದೇನೆಂದರೆ ಇಲ್ಲಿ ಆರೋಪಿಗಳು ಕೆಳವರ್ಗದಿಂದ ಬಂದವರು. ಒಂದು ವೇಳೆ ಆರೋಪಿಗಳು ಪ್ರಭಾವಿ ರಾಜಕೀಯ ನಾಯಕರೋ ಅಥವಾ ಮೇಲ್ವರ್ಗಗಳಿಗೆ ಸೇರಿದವರೋ ಆಗಿದ್ದ ಪಕ್ಷದಲ್ಲಿ ಎನ್‌ಕೌಂಟರ್ ನಡೆಯುತ್ತಿತ್ತೇ? ಹಿಂದಿನ ಅನುಭವಗಳ ಆಧಾರದಲ್ಲಿ ಹೇಳುವುದಾದರೆ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಮಹಿಳೆಯರ ಮೇಲೆ ದೌರ್ಜನ್ಯ / ಅತ್ಯಾಚಾರ / ಲೈಂಗಿಕ ಶೋಷಣೆ ಎಸಗಿದುದಕ್ಕಾಗಿ ಪ್ರಕರಣ ಎದುರಿಸುತ್ತಿರುವ ರಾಜಕಾರಣಿಗಳ ಸಂಖ್ಯೆ ಸಾಕಷ್ಟಿದೆ.

ಕೆಲವು ಉದಾಹರಣೆಗಳನ್ನು ನೋಡುವುದಾದರೆ ಅಸ್ಸಾಮಿನ ಕಾಂಗ್ರೆಸ್ ನಾಯಕ ಪ್ರಣಜಿತ್ ಚೌಧುರಿ (ತಲೆಮರೆಸಿಕೊಂಡಿದ್ದಾರೆ), ಗುಜರಾತ್‌ನ ಬಿಜೆಪಿ ಮುಖಂಡ ಜಯೇಶ್ ಪಟೇಲ್ (ತಲೆಮರೆಸಿಕೊಂಡಿದ್ದಾರೆ), ಮುಂಬೈ ಮೀರಾ ರೋಡ್‌ನ ಬಿಜೆಪಿ ಕಾರ್ಪೊರೇಟರ್ ಅನಿಲ್ ಭೋಸ್ಲೆ (ತಲೆಮರೆಸಿಕೊಂಡಿದ್ದಾರೆ), ಗುಜರಾತ್‌ನ ಬಿಜೆಪಿ ಸದಸ್ಯರಾದ ಶಾಂತಿಲಾಲ್ ಸೋಲಂಕಿ, ಗೋವಿಂದ್ ಪರುಮಲಾನಿ, ಅಜಿತ್ ರಾಮ್‌ವಾನಿ ಮತ್ತು ಅಜಿತ್ ಭಾನುಶಾಲಿ, ಬಿಹಾರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬ್ರಜೇಶ್ ಪಾಂಡೆ, ದಿಲ್ಲಿಯ ಬಿಜೆಪಿ ಮಾಜಿ ಶಾಸಕ ವಿಜಯ್ ಜಾಲಿ ಮತ್ತು ಮಧ್ಯಪ್ರದೇಶದ ಬಿಜೆಪಿ ನಾಯಕ ಭೋಜಪಾಲ್ ಸಿಂಗ್ ಜಾದೋನ್. ಈ ಬಗ್ಗೆ ನಮ್ಮ ಕೆಲವು ಘನತೆವೆತ್ತ ಸಂಸದರು ‘‘ಆರೋಪಿಗಳನ್ನು ಗುಂಪು ಹತ್ಯೆ ಮಾಡಿ’’, ‘‘ಗಲ್ಲಿಗೇರಿಸಿ’’, ‘‘ಕಠಿಣಾತಿಕಠಿಣ ಕಾನೂನುಗಳನ್ನು ಮಾಡಿ’’ ಎಂದು ಸಂಸತ್ತಿನಲ್ಲಿ ಕಿರಿಚಾಡಿದ್ದಿದೆಯೇ? ಪೊಲೀಸರು ಎಂದಾದರೂ ಇಂಥವರನ್ನು ಎನ್‌ಕೌಂಟರ್ ಮಾಡುವ ಧೈರ್ಯ ತೋರಿಸಿದ್ದಾರೆಯೇ?

ಇನ್ನು ಸ್ತ್ರೀದ್ವೇಷಿ ರಾಜಕಾರಣಿಗಳ ಪಟ್ಟಿಯೂ ಸಾಕಷ್ಟು ಉದ್ದವಿದೆ. ರಾಷ್ಟ್ರದ ಪ್ರಧಾನಮಂತ್ರಿಯ ಸ್ಥಾನದಲ್ಲಿರುವ ನರೇಂದ್ರ ಮೋದಿಯವರೇ ಚುನಾವಣಾ ಪ್ರಚಾರದ ವೇಳೆ ‘‘ಐನೂರು ಕೋಟಿಯ ಗರ್ಲ್ ಫ್ರೆಂಡ್’’ ಎಂಬ ಮಾತುಗಳನ್ನಾಡುವುದು, ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಜಿ ‘‘ಭಾರತದಲ್ಲಿ ಮಹಿಳೆಯರಿಗೆ ಗೌರವ ಇರದಿರುವುದಕ್ಕೆ ವಿದೇಶೀ ಮತ್ತು ವಸಾಹತುಶಾಹಿ ಆಡಳಿತಗಳೇ ಕಾರಣ’’ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುವುದು, ಕೇಂದ್ರದ ಬಿಜೆಪಿ ಸಚಿವ ಸಂತೋಷ್ ಗಂಗ್ವಾರ್ ಎಂಬವರು ‘‘ಇಷ್ಟು ದೊಡ್ಡ ದೇಶವೊಂದರಲ್ಲಿ ಒಂದೋ ಎರಡೋ ರೇಪ್‌ಗಳು ನಡೆದರೆ ಜನ ಅದನ್ನೇ ದೊಡ್ಡದು ಮಾಡಬೇಕಾಗಿಲ್ಲ’’ ಎಂದು ಹೇಳುವುದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲುವು ತಂದುಕೊಡಬಲ್ಲ ಮಹಿಳಾ ದೌರ್ಜನ್ಯ ಆರೋಪಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು, ಅಂಥವರು ಸಂಸದರಾಗುವುದು, ಅವರಲ್ಲಿ ಕೆಲವರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗುವುದು, ಸಿಬಿಐ ಕಸ್ಟಡಿಯಲ್ಲಿರುವ ಅತ್ಯಾಚಾರ ಆರೋಪಿ, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹುಟ್ಟುಹಬ್ಬಕ್ಕೆ ಮತ್ತೊಬ್ಬ ಸಂಸದ ಸಾಕ್ಷಿ ಮಹಾರಾಜರು ಶುಭಕೋರುವುದು ಏನನ್ನು ತೋರಿಸುತ್ತದೆ? ಇಂತಹ ಬೂಟಾಟಿಕೆಯ ನಾಯಕರ ಬಾಯಿಯಿಂದ ಉದ್ದುದ್ದದ ಅನುಕಂಪದ ಮಾತುಗಳು, ಕೊನೆಯಿಲ್ಲದ ಖಂಡನಾತ್ಮಕ ಹೇಳಿಕೆಗಳು, ಅಪರಿಮಿತ ಭರವಸೆಗಳು ಉದುರುವುದನ್ನು ನೋಡುವಾಗ ಹೇಸಿಗೆ ಎನಿಸುತ್ತದೆ.

ಮುಂದೊಂದು ಹಿಂದೊಂದು ಎನ್ನುವಂತಿರುವ ಇವರು ಕೆಲವೇ ದಿನಗಳಲ್ಲಿ ಎಲ್ಲವನ್ನೂ ಮೂಲೆಗೊತ್ತುತ್ತಾರೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. 2012ರ ನಿರ್ಭಯಾ ಪ್ರಕರಣದ ನಂತರ ಸ್ಥಾಪಿಸಿದ ನಿಧಿಯ ಶೇಕಡಾ 90ರಷ್ಟು ಹಣ ಉಪಯೋಗಿಸದೆ ಕೊಳೆಯುತ್ತಾ ಬಿದ್ದಿದೆ ಎಂಬ ಘೋರ ಸತ್ಯಾಂಶ ಬಯಲಾಗಿದೆ. 2018ರ ವಿಶ್ವಸಂಸ್ಥೆಯ ಅಧ್ಯಯನವೊಂದು ತಿಳಿಸುವಂತೆ ಬಜೆಟ್‌ನಲ್ಲಿ ಮಹಿಳಾ ಕಲ್ಯಾಣ, ಸಬಲೀಕರಣ ಇತ್ಯಾದಿಗಳಿಗಾಗಿ ಮೀಸಲಿಡುವ ನಿಧಿಯ ಮೊತ್ತ 2014ರ ಲಾಗಾಯ್ತು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಹೆಣ್ಣುಭ್ರೂಣ ಹತ್ಯೆಗಳು ಅಪಾಯಕಾರಿ ಮಟ್ಟಕ್ಕೇರಿದ ಪರಿಣಾಮವಾಗಿ ಲಿಂಗಾನುಪಾತ ಕುಸಿಯುತ್ತಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳಿಗೆಂದೇ ಉದ್ದೇಶಿಸಿರುವ ಸಾವಿರಾರು ತ್ವರಿತಗತಿಯ ನ್ಯಾಯಾಲಯಗಳನ್ನು ಇನ್ನೂ ಸ್ಥಾಪಿಸಲಾಗಿಲ್ಲ. ಅದೇ ವೇಳೆ ಮಹಿಳಾ ದೌರ್ಜನ್ಯ ಪ್ರಕರಣಗಳ ಆರೋಪಿಗಳು ಚುನಾವಣೆಯಲ್ಲಿ ಗೆದ್ದು ಸದನ, ಸಂಸತ್ತುಗಳನ್ನು ಪ್ರವೇಶಿಸುತ್ತಾರೆ. ನಮ್ಮ ಸರಕಾರಗಳ ಮತ್ತು ಭಂಡ ರಾಜಕೀಯ ಪಕ್ಷಗಳ ಎಣೆಯಿಲ್ಲದ ಆಷಾಢಭೂತಿತನವನ್ನು ಬಟಾಬಯಲುಗೊಳಿಸುವ ಈ ವಿದ್ಯಮಾನಗಳು ಅತ್ಯಂತ ಆತಂಕಕಾರಿಯಾಗಿವೆೆ.

ಹೈದರಾಬಾದ್ ಪ್ರಕರಣದಲ್ಲಿ ಕಾನೂನುಪಾಲಕರಾಗಿರಬೇಕಿದ್ದ ಪೊಲೀಸರೇ ಕಾನೂನು ವ್ಯವಸ್ಥೆಯನ್ನು ಬೈಪಾಸ್ ಮಾಡಿ ತಾವೇ ವಿಚಾರಣೆ ನಡೆಸಿ, ತೀರ್ಪು ಕೊಟ್ಟು ಅಥವಾ ಯಾರೋ ಪ್ರಭಾವಿ ರಾಜಕಾರಣಿಗಳ ಅಕ್ರಮ ಆದೇಶಕ್ಕೆ ತಲೆಬಾಗಿ ಆರೋಪಿಗಳನ್ನು ಕೊಂದಿರುವಂತೆ ಕಾಣುತ್ತದೆ. ನಮ್ಮ ಕೆಲವು ನೀತಿಭ್ರಷ್ಟ ಪೊಲೀಸರು ಈ ಹಿಂದೆ ಇಂತಹ ಹಲವಾರು ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ. ಕೆಲವೊಂದು ಅಮಾಯಕರನ್ನೂ ಕೊಂದುಹಾಕಿ ತಮ್ಮ ಶೌರ್ಯವನ್ನು ಮೆರೆದಿದ್ದಾರೆ! ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿದ್ದರೂ ರಾಜಕಾರಣಿಗಳ ಕೃಪಾಕಟಾಕ್ಷದಿಂದಾಗಿ ಬಿಡುಗಡೆಗೊಂಡಿದ್ದಾರೆ! ಅತ್ತ ರಾಜಕಾರಣಿಗಳ ಅಕ್ರಮಗಳನ್ನು ಬಯಲುಗೊಳಿಸಿ ಕೆಂಗಣ್ಣಿಗೆ ಗುರಿಯಾಗುವ ಪ್ರಾಮಾಣಿಕ ಪೊಲೀಸರಿಗೆ ಸಂಜೀವ ಭಟ್ ಥರ ಸುಳ್ಳು ಆರೋಪಗಳ ಮೇಲೆ ಸೆರೆಮನೆವಾಸವೇ ಗತಿ! ಒಂದು ವಿಧದಲ್ಲಿ ಈ ರೀತಿಯ ಎನ್‌ಕೌಂಟರ್ ಹತ್ಯೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ಅವ್ಯವಸ್ಥೆಗೆ ಅಥವಾ ದುರ್ಬಲತೆಗೆ ಹಿಡಿದ ಕೈಗನ್ನಡಿಯಾಗಿದೆ.

ಗುಂಪು ಹತ್ಯೆಗಳು, ಅತ್ಯಾಚಾರಗಳು ನಡೆದಾಗಲೆಲ್ಲ ಅತ್ಯಂತ ಕಠೋರ ಕಾಯ್ದೆಗಳನ್ನು ರೂಪಿಸಿ ಎಂಬ ಕೂಗು ಕೇಳಿಬರುತ್ತದೆ. ಆದರೆ ಕಾನೂನುಗಳು ಎಷ್ಟೇ ಕಠಿಣವಿದ್ದರೂ ಸರಿಯಾಗಿ ಅನುಷ್ಠಾನಗೊಳ್ಳದಿದ್ದರೆ ಅಥವಾ ದಶಕಗಳಷ್ಟು ತಡವಾಗಿ ಅನುಷ್ಠಾನಗೊಂಡರೆ ಏನು ಪ್ರಯೋಜನ? ನ್ಯಾಯಾಲಯಗಳಲ್ಲಿ ಸಾವಿರಾರು ಅತ್ಯಾಚಾರ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಬಿದ್ದಿವೆ. ಕೇವಲ ಕೆಲವೇ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವುದನ್ನು ಕಂಡ ಜನ ಆಮೆಗತಿಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಸಹನೆ ತೋರುತ್ತಿದ್ದಾರೆ. ಇದೊಂದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದ್ದು ಸರಕಾರಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಅರಣ್ಯ ನ್ಯಾಯ ಅಥವಾ ಜನತಾ ಧರ್ಮದ ಘಟನೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಈಗಾಗಲೇ ಕೆಲವು ನಿರ್ಲಜ್ಜ ಮಂದಿ ಮತ್ತು ಗುಂಪುಗಳು ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ದೇಶಾದ್ಯಂತ ದಲಿತ, ಅಲ್ಪಸಂಖ್ಯಾತರ ಗುಂಪು ಹತ್ಯೆಗಳಿಗೆ, ಕಾನೂನುಬಾಹಿರ ಕೊಲೆಗಳಿಗೆ ಉತ್ತೇಜನ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಇದೀಗ ಇದೇ ಡಿಸೆಂಬರ್ 7ರಂದು ಭೋಪಾಲದಲ್ಲಿ ವಕೀಲರ ಗುಂಪೊಂದು ಅತ್ಯಾಚಾರ ಆರೋಪಿಗಳಿಗೆ ಕೋರ್ಟ್ ಆವರಣದಲ್ಲೇ ಥಳಿಸಿರುವ ಘಟನೆ ವರದಿಯಾಗಿದೆ. ಅತ್ತ ಕೇರಳದ ವಯಲಾರ್ ಸಹೋದರಿಯರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯೆಂದು ಪರಿಗಣಿಸಲ್ಪಟ್ಟ ವ್ಯಕ್ತಿಯೊಬ್ಬನ ಮೇಲೆ ಪಾಲಕ್ಕಾಡ್ ಸಮೀಪ ಗುಂಪು ದಾಳಿ ನಡೆದಿದೆ.

ಕೇವಲ ಬಾಹ್ಯ ಸ್ವಚ್ಛತೆಯೊಂದೇ ರಾಷ್ಟ್ರವನ್ನು ಸ್ವಚ್ಛವಾಗಿಸದು. ಅದಕ್ಕೆ ಮಾನಸಿಕ ಸ್ವಚ್ಛತೆಯೂ ಅವಶ್ಯವಿದೆ. ಏಕೆಂದರೆ ರಾಷ್ಟ್ರವೆಂದರೆ ಕೇವಲ ಭೂಪ್ರದೇಶವಲ್ಲ, ಪ್ರಧಾನವಾಗಿ ಅದರೊಳಗೆ ವಾಸಿಸುವ ಜನ. ಭಾರತ ಒಂದು ಸ್ವತಂತ್ರ ಗಣತಂತ್ರ ರಾಷ್ಟ್ರವಾಗಿ ಆಧುನಿಕ ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳೇ ಸಂದಿವೆ. ಇಷ್ಟು ಹೊತ್ತಿಗಾಗಲೇ ಸಂವಿಧಾನ ಶಿಲ್ಪಿಡಾ. ಅಂಬೇಡ್ಕರರು ಮೊದಲೇ ಮುಂಗಂಡು ಎಚ್ಚರಿಸಿದ್ದಂತೆ ಜನತಾ ಧರ್ಮಗಳ ಜಾಗದಲ್ಲಿ ಸಾಂವಿಧಾನಿಕ ಧರ್ಮವನ್ನು ತರಬೇಕಾಗಿತ್ತು. ಆದರೆ ಸ್ತ್ರೀಯನ್ನು ಪುರುಷನಿಗಿಂತ ಕೀಳಾಗಿ ಕಾಣುವ ಮಾನಸಿಕ ಪ್ರವೃತ್ತಿಯನ್ನು ಬಿತ್ತಿರುವಂತಹ ಮನುಧರ್ಮದ ಪ್ರಭಾವ ಜನತೆಯಲ್ಲಿ ಇನ್ನೂ ಜೀವಂತವಾಗಿರುವುದನ್ನು ನೋಡುತ್ತಿದ್ದೇವೆ. ಚಿಕ್ಕಂದಿನಿಂದಲೇ ಮನೆಗಳಲ್ಲಿ ಪ್ರಾರಂಭವಾಗುವ ಈ ಮನುವ್ಯಾಧಿಯನ್ನು ಸೂಕ್ತ ಹಾಗೂ ಉತ್ತಮ ಶಿಕ್ಷಣದ ಮೂಲಕ ತೊಡೆದುಹಾಕಲು ಸಾಧ್ಯವಿತ್ತು.

ಆದರೆ ಸರಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳ ಹಸ್ತಕ್ಷೇಪದ ಪರಿಣಾಮವಾಗಿ ಸಮಸ್ಯೆ ಬೆಳೆಯುತ್ತಾ ಬೆಳೆಯುತ್ತಾ ರಾಕ್ಷಸರೂಪ ತಳೆದು ನಿಂತಿದೆ. ಇಂದು ಮಕ್ಕಳು ಮತ್ತು ವಯಸ್ಕರಲ್ಲಿ ಬೇರೂರಿರುವ ಈ ಜನತಾ ಧರ್ಮವನ್ನು ಕಿತ್ತೊಗೆದು ಅದರ ಸ್ಥಾನದಲ್ಲಿ ಸಾಂವಿಧಾನಿಕ ಧರ್ಮವನ್ನು ತರಬೇಕಿದ್ದರೆ ಸಮರೋಪಾದಿಯಲ್ಲಿ ಒಂದು ವ್ಯವಸ್ಥಿತ ಹಾಗೂ ದೇಶವ್ಯಾಪಿ ಶೈಕ್ಷಣಿಕ ಆಂದೋಲನವನ್ನೇ ಪ್ರಾರಂಭಿಸುವ ಅಗತ್ಯವಿದೆ. ಇದರ ಜೊತೆಯಲ್ಲೇ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವನ್ನು ನಿಲ್ಲಿಸಬೇಕಾಗಿದೆ. ರಾಜಕೀಯ ಪಕ್ಷಗಳೂ ಸ್ತ್ರೀದ್ವೇಷಿಗಳಿಗೆ, ಕ್ರಿಮಿನಲ್ ಆರೋಪಿಗಳಿಗೆ ಟಿಕೆಟ್ ನೀಡುವುದನ್ನು ನಿಲ್ಲಿಸಿ ಅಂಥವರ ಸದಸ್ಯತ್ವವನ್ನೇ ರದ್ದುಗೊಳಿಸಬೇಕಾಗಿದೆ. ಆದರೆ ಪ್ರಶ್ನೆ ಏನೆಂದರೆ ನಮ್ಮ ಸಮಾಜ, ನಮ್ಮ ರಾಜಕೀಯ ಪಕ್ಷಗಳು, ನಮ್ಮ ನಾಯಕತ್ವ ಮತ್ತು ಸರಕಾರಗಳು ಇಂತಹದೊಂದು ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಸಿದ್ಧವಿವೆಯೇ?

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News