ದೆಹಲಿಯಲ್ಲಿ ಮೈಕೊರೆಯುವ ಚಳಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನದ ನಡುವಿನ ಅಂತರ ಕೇವಲ 3 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದ್ದು, ಇದು "ಅತ್ಯಂತ ಶೀತ ದಿನ" ಎಂದು ಭಾರತೀಯ ಹವಾಮಾನ ಇಲಾಖೆ ವರ್ಗೀಕರಿಸಿದೆ.
ಕಳೆದ 16 ವರ್ಷಗಳಲ್ಲೇ ಡಿಸೆಂಬರ್‌ನಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ. ಅಂದರೆ ಹಗಲಿನಲ್ಲೂ ಶೀತಗಾಳಿ ಮತ್ತು ಮಂಜು ಮುಸುಕಿದ ವಾತಾವರಣ ಇರಲಿದ್ದು, ರಾತ್ರಿಯಷ್ಟೇ ಚಳಿ ಹಗಲಿನಲ್ಲೂ ಕಂಡುಬರಲಿದೆ.
ಸೋಮವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 12.9 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಇದು ವಾಡಿಕೆ ಚಳಿಗಿಂತ 10 ಡಿಗ್ರಿ ಸೆಲ್ಷಿಯಸ್‌ನಷ್ಟು ಕಡಿಮೆಯಾಗಿದ್ದು, ಪ್ರಸಕ್ತ ಋತುವಿನ ಅತ್ಯಂತ ಶೀತ ದಿನ ಎನಿಸಿಕೊಂಡಿದೆ. ಕನಿಷ್ಠ ತಾಪಮಾನ 10.2 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದೆ. ಲಘು ಮಳೆ ಮತ್ತು ಶೀತಗಾಳಿ ಡಿ. 22ರವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರ ಹಾಗೂ ಬುಧವಾರಕ್ಕೆ ಕೂಡಾ ಹವಾಮಾನ ಇಲಾಖೆ ಶೀತ ದಿನ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಇಲಾಖೆ ಅಂದಾಜಿನಂತೆ ದಿನದ ತಾಪಮಾನ ವಾಡಿಕೆಗಿಂತ ಕನಿಷ್ಠ 4.4 ಡಿಗ್ರಿ ಸೆಲ್ಷಿಯಸ್‌ನಷ್ಟು ಕಡಿಮೆ ಇರಲಿದೆ. ಡಿಸೆಂಬರ್ ಮೊದಲಾರ್ಧದಲ್ಲಿ ಇಂಥ ಅಸಾಮಾನ್ಯ ಚಳಿ ಕಂಡುಬಂದಿರುವುದು ಕಳೆದ 20 ವರ್ಷಗಳಲ್ಲೇ ಇದು ಮೊದಲು ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಇದಕ್ಕೂ ಮುನ್ನ 2003ರ ಡಿಸೆಂಬರ್ 25ರಂದು ಗರಿಷ್ಠ ಉಷ್ಣಾಂಶ 12.3 ಡಿಗ್ರಿಗೆ ಇಳಿದಿತ್ತು. ಡಿಸೆಂಬರ್ ತಿಂಗಳ ಕನಿಷ್ಠ ತಾಪಮಾನ 11.2 ಡಿಗ್ರಿ ಸೆಲ್ಷಿಯಸ್ 1973ರ ಡಿಸೆಂಬರ್ 28ರಂದು ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ದಾಖಲಾದಾಗ ಮತ್ತು ಗರಿಷ್ಠ ತಾಪಮಾನ ವಾಡಿಕೆಗಿಂತ 6.4 ಡಿಗ್ರಿಯಷ್ಟು ಕಡಿಮೆ ಇದ್ದಾಗ ಅದನ್ನು ತೀವ್ರ ಶೀತ ದಿನ ಎಂದು ಪರಿಗಣಿಸಲಾಗುತ್ತದೆ.