ರೂಪಕ ನಿಷ್ಠ ಗಿರೀಶ್ ಕಾಸರವಳ್ಳಿ

Update: 2019-12-21 18:34 GMT

ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿ ಎಂದರೆ, ಅವರ ಬಹುತೇಕ ಚಿತ್ರಗಳು-‘ಘಟಶ್ರಾದ್ಧ’ದಿಂದ ‘ದ್ವೀಪ’ದವರೆಗೆ-ಸ್ತ್ರೀ ಕೇಂದ್ರಿತ ಚಿತ್ರಗಳು ಎಂಬುದು. ಅದರಲ್ಲೂ ಭಾರತೀಯ ಸಂಸ್ಕೃತಿ ಹಿನ್ನೆಲೆಯ ಸ್ತ್ರೀಯರನ್ನು ಕೇಂದ್ರವಾಗುಳ್ಳ ಚಿತ್ರಗಳು. ಇವುಗಳಲ್ಲಿ ತುಂಬ ಮುಖ್ಯ ಎನ್ನಿಸುವುದು ‘ಘಟಶ್ರಾದ್ಧ’, ತಾಯಿಸಹೇಬ’ ಮತ್ತು ‘ದ್ವೀಪ’.‘ಘಟಶ್ರಾದ್ಧ’ ಬ್ರಾಹ್ಮಣ ಸಮುದಾಯದ ಕಟ್ಟಳೆಗಳು, ಕಂದಾಚಾರಗಳು, ಸನಾತನ ಶಾಸ್ತ್ರ, ಸಂಪ್ರದಾಯ, ಪದ್ಧತಿಗಳ ಸುಳಿಯಲ್ಲಿ ಸಿಕ್ಕ ಮಹಿಳೆಯೊಬ್ಬಳ ದುರಂತ ಚಿತ್ರವಾದರೆ, ‘ತಾಯಿಸಾಹೇಬ’ ಮತ್ತು ‘ದ್ವೀಪ’ಚಿತ್ರಗಳಲ್ಲಿ ಗಿರೀಶರು ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಸಮಾಜದಲ್ಲಿನ ಹೆಣ್ಣಿನ ಸ್ಥಾನಮಾನ ಮತ್ತು ಸ್ವಾತಂತ್ರಗಳ ಇತಿಮಿತಿಗಳನ್ನು ಶೋಧಿಸುತ್ತಾರೆ.


ಇದೀಗ ಎಪ್ಪತ್ತರ ಪ್ರಾಯಕ್ಕೆ ಪದಾರ್ಪಣ ಮಾಡಿರುವ ಗಿರೀಶ್ ಕಾಸರವಳ್ಳಿ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳ ನಿರ್ದೇಶಕರು ಎಂದೇ ಸುವಿಖ್ಯಾತರು. ಶ್ರೇಷ್ಠತೆ, ಅಭಿಜಾತ ಪ್ರತಿಭೆಗಳಿಗೆ ಯಾವುದೇ ಹಣೆಪಟ್ಟಿಯ ಅಗತ್ಯವಿಲ್ಲ. ಅನನ್ಯತೆಯೇ ಅವುಗಳ ಅಸ್ಮಿತೆ. ತಮ್ಮ ಸಂವೇದನೆಗೆ ತಾಕಿದ ಸುತ್ತಲ ಜನಜೀವನವನ್ನು ಶುದ್ಧ ನೈಜತೆಯಲ್ಲಿ ಬಿಂಬಿಸುವ ಮೂಲಕ ನಮ್ಮ ಜನಜೀವನ, ಸಂಸ್ಕೃತಿ-ಪರಂಪರೆಗಳನ್ನು ದೃಶ್ಯ ಮಾಧ್ಯಮದ ವಿಮರ್ಶೆಯ ನಿಕಷಕ್ಕೆ ಒಡ್ಡಿದ ಗಿರೀಶ್ ಕಾಸರವಳ್ಳಿಯವರು ಇಂಥ ಹಣೆ ಪಟ್ಟಿಗಳನ್ನು ಮೀರಿ ಬೆಳೆದಿರುವ ನಿರ್ದೇಶಕರು. ಸುಮಾರು ನಾಲ್ಕು ದಶಕಗಳಷ್ಟು ಹಿಂದೆ ಬೆಂಗಳೂರಿನಲ್ಲಿ ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟಿನ ವಿದ್ಯಾರ್ಥಿಗಳ ಚಿತ್ರೋತ್ಸವವೊಂದು ಏರ್ಪಾಟಾಗಿತ್ತು. ಆ ಉತ್ಸವದಲ್ಲಿ ವಿಶೇಷವಾಗಿ ಗಮನ ಸೆಳೆದವರು ಕರ್ನಾಟಕದ ಗಿರೀಶ್ ಕಾಸರವಳ್ಳಿ ಮತ್ತು ಯು.ಎಮ್.ಎನ್. ಷರೀಫ್ ಮತ್ತು ಉತ್ತರ ಭಾರತದ ಜಯಾಭಾದುರಿ. ‘ಅವಶೇಷ್’ ನಿರ್ದೇಶನದಿಂದ ಗಿರೀಶ್ ಮತ್ತು ಅತ್ಯುತ್ತಮ ಛಾಯಾಗ್ರಹಣದಿಂದ ಷರೀಫ್ ಹಾಗೂ ಲವಲವಿಕೆಯ ಅಭಿನಯದಿಂದ ನವಜಾತ ಪ್ರತಿಭೆಯಾಗಿ ‘ಗುಡ್ಡಿ’ ಜಯಾ ಭಾದುರಿ ಚಿತ್ರ ರಸಿಕರ ವಿಶೇಷ ಗಮನಸೆಳೆದಿದ್ದರು. ಆ ಚಿತ್ರೋತ್ಸವದ ನೆನಪು ಈ ಅಂಕಣಕಾರನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ.‘ಅವಶೇಷ್’ ಗಿರೀಶ್ ಕಾಸರವಳ್ಳಿಯವರು ಫಿಲ್ಮ್ ಇನ್‌ಸ್ಟಿಟ್ಯೂಟಿನಿಂದ ಡಿಪ್ಲೊಮಾ ಪಡೆಯಲು ನಿರ್ಮಿಸಿದ ಕಿರುಚಿತ್ರ. ಮೂರು ತಲೆಮಾರುಗಳ ಸಂಬಂಧ ಮತ್ತು ಆಪ್ತತೆಗಳು ಕ್ರಮೇಣ ನಶಿಸುತ್ತಿರುವುದು ಈ ಚಿತ್ರದ ಕಥಾವಸ್ತು.ಮಲೆನಾಡಿನ ಹಳೆಯ ಮನೆಯೊಂದನ್ನು ನಶಿಸುತ್ತಿರುವ ಸಂಬಂಧಗಳನ್ನು ಬಿಂಬಿಸುವ ರೂಪಕವಾಗಿ ಗಿರೀಶ್ ಕಾಸವಳ್ಳಿಯವರು ಈ ಚಿತ್ರದಲ್ಲಿ ತುಂಬ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಒಂದು ಕಾಲಕ್ಕೆ ಭವ್ಯವಾಗಿದ್ದ, ಈಗ ಆ ಭವ್ಯತೆಯ ‘ಅವಶೇಷವಾಗಿ ಉಳಿದಿರುವ ಮನೆ ಮೂರುತಲೆಮಾರುಗಳ ಶಿಥಿಲಗೊಂಡ ಕೌಟುಂಬಿಕ ಹಾಗೂ ಮನುಷ್ಯ ಸಂಬಂಧಗಳ ‘ಅವಶೇಷ’ವೂ ಆಗಿ ಪ್ರೇಕ್ಷಕರ ಮನದಲ್ಲಿ ಒಂದಷ್ಟು ಕಾಲ ಉಳಿಯುವಷ್ಟು ಪರಿಣಾಮಕಾರಿ.

ಅಂತರ್‌ರಾಷ್ಟ್ರೀಯ ಖ್ಯಾತಿಯ ಗಿರೀಶ್ ಕಾಸರವಳ್ಳಿ ಹುಟ್ಟಿದ್ದು ಕರ್ನಾಟಕದ ಮಲೆನಾಡಿನ ಕಾಸರವಳ್ಳಿಯಲ್ಲಿ. ಗಿರೀಶ್ ಓದಿದ್ದು ಔಷಧ ವಿಜ್ಞಾನ, ಮಣಿಪಾಲ್‌ನಲ್ಲಿ. ಆದರೆ ಅವರ ಒಲವು, ಅಭಿರುಚಿಗಳು ಸಿನೆಮಾದಲ್ಲಿ. ದೃಶ್ಯಮಾಧ್ಯಮದಲ್ಲಿನ ಒಲವು, ಸೆಳೆತೆಗಳೇ ಮೇಲುಗೈ ಪಡೆದು ಔಷಧೀಯ ಓದಿಗೆ ವಿದಾಯ ಹೇಳಿದರು. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಸೇರಿ ಚಲಚ್ಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಪಡೆದರು. ನೂರು ವರ್ಷಗಳ ಭಾರತೀಯ ಚಲಚಿತ್ರ ಇತಿಹಾಸದ ಇಪ್ಪತ್ತು ಐತಿಹಾಸಿ ಮಹತ್ವದ ಚಿತ್ರಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿರುವ ‘ಘಟಶ್ರಾದ್ಧ’(1977)ಗಿರೀಶ್ ಕಾಸರವಳ್ಳಿಯವರ ಚೊಚ್ಚಲ ಚಿತ್ರ. ಯು.ಆರ್. ಅನಂತ ಮೂರ್ತಿಯವರ ಸಣ್ಣಕಥೆಯನ್ನು ಆಧರಿಸಿದ ‘ಘಟಶ್ರಾದ್ಧ’ ರಾಷ್ಟ್ರಪತಿಗಳ ‘ಸ್ವರ್ಣ ಕಮಲ’ವೂ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಪ್ರತಿಭಾನ್ವಿತ ಸೃಜನಶೀಲ ನಿರ್ದೇಶಕನೊಬ್ಬನ ಆಗಮನವನ್ನು ಜಗತ್ತಿಗೆ ಸಾರಿತು. ಸುಮಾರು ನಾಲ್ಕು ದಶಕಗಳ ಕಾಲದ ಸೃಜನಶೀಲ ಪಥದ ಪಯಣದಲ್ಲಿ ಹದಿನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ ಗಿರೀಶ್ ಕಾಸರವಳ್ಳಿಯವರು ಪ್ರಥಮ ಪ್ರಯತ್ನದಲ್ಲೇ ‘ಸ್ವರ್ಣ ಕಮಲ’ವನ್ನು ಚುಂಬಿಸಿದವರು. ಅವರ ಎಲ್ಲ ಚಿತ್ರಗಳೂ ರಾಜ್ಯ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವುದು ಒಂದು ವಿಶೇಷವೇ ಸರಿ. ‘ಘಟಶ್ರಾದ್ಧ’(1977),‘ತಬರನ ಕಥೆ’(1987),‘ತಾಯಿ ಸಹೇಬ’(1997) ಮತ್ತು ‘ದ್ವೀಪ’ (2002) ರಾಷ್ಟಪತಿಗಳ ಸ್ವರ್ಣಕಮಲ ಪ್ರಶಸ್ತಿವಿಜೇತ ಚಿತ್ರಗಳು. ಬಿ.ವಿ. ವೈಕುಂಠರಾಜು ಅವರ ಕಾದಂಬರಿ ಆಧಾರಿತ ‘ಆಕ್ರಮಣ’(1979) ಜಕಾರ್ತದಲ್ಲಿ ನಡೆದ ಏಶ್ಯನ್ ಚಿತ್ರೋತ್ಸವದಲ್ಲಿ ಮೊಯಿತ್ರಾ ಪ್ರಶಸ್ತಿಗೆ ಪಾತ್ರವಾಯಿತು.

ಯಶವಂತ ಚಿತ್ತಾಲರ ಸಣ್ಣ ಕಥೆಯನ್ನು ಆಧರಿಸಿದ ‘ಮೂರು ದಾರಿಗಳು’ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯಿತು. ‘ಮನೆ’(1988),‘ಬಣ್ಣದ ವೇಷ’(1990), ‘ಕ್ರೌರ್ಯ’(1995), ‘ಹಸೀನಾ’(2005), ರಾಷ್ಟ್ರಪತಿಗಳ ರಜತಕಮಲ ಪ್ರಶಸ್ತಿ ವಿಜೇತ ಚಿತ್ರಗಳು. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ‘ನಾಯಿ ನೆರಳು’(2006) ವಿ.ಶಾಂತಾರಾಮ್ ರಾಷ್ಟಪ್ರಶಸ್ತಿ ಗೆದ್ದುಕೊಂಡ ಚಿತ್ರ. ನಾಲ್ಕು ಸ್ವರ್ಣ ಕಮಲಗಳನ್ನು ಪಡೆದಿರುವ ಗಿರೀಶ್ ಕಾಸರವಳ್ಳಿಯವರು ಈಗಾಗಲೇ ನಾಲ್ಕು ಸ್ವರ್ಣ ಕಮಲಗಳ ವಿಜೇತರಾದ ಅಂತರ್‌ರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಸತ್ಯಜಿತ್ ರಾಯ್, ಮೃಣಾಲ್ ಸೇನ್, ಬುದ್ಧದೇವ್‌ದಾಸ್ ಗುಪ್ತ ಅವರುಗಳ ಪಂಕ್ತಿಯಲ್ಲಿ ವಿರಾಜಮಾನರು. ಗಿರೀಶ್ ಕಾಸರವಳ್ಳಿಯವರ ಎಲ್ಲ ಚಿತ್ರಗಳೂ ರೋಮ್, ರಾಟರ್ಡಾಮ್, ಕೊಲಂಬೊ, ಢಾಕಾ ಮೊದಲಾಗಿ ಒಂದಲ್ಲ ಒಂದು ಅಂತರ್‌ರಾಷ್ಟ್ರೀಯ ಚಿತೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಗಳಿಸಿರುವುದು ಒಂದು ವಿಶೇಷ. ಇಪ್ಪತ್ತೈದು ರಾಷ್ಟ್ರೀಯ ಪ್ರಶಸ್ತಿ, ನಲವತ್ತೈದು ರಾಜ್ಯ ಪ್ರಶಸ್ತಿ ಹಾಗೂ ಇಪ್ಪತ್ತೊಂದು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಗಿರೀಶ್ ಹೆಸರಿಗೆ ‘ಪ್ರಶಸ್ತಿವಿಜೇತ’ ಎಂಬುದು ಸಮಾನಾರ್ಥಕವೂ ಆಗಬಲ್ಲುದು.

ಗಿರೀಶ್ ಕಾಸರವಳ್ಳಿಯವರಿಗೆ ಸಿನೆಮಾ ನಿರ್ದೇಶನ ಒಂದು ತಪಸ್ಸಿದ್ದಂತೆ. ಕಥೆಯ ಆಯ್ಕೆ, ಚಿತ್ರಕಥೆ, ಸ್ಥಳ(ಲೊಕೇಶನ್)ಆಯ್ಕೆ, ವೇಷಭೂಷಣ ಪರಿಕರಗಳು, ಸಂಗೀತ, ಧ್ವನಿ, ಸಂಕಲನ ಇತ್ಯಾದಿಯಾಗಿ ಒಂದೊಂದು ಚಿತ್ರದ ಹಿಂದೆಯೂ ತಿಂಗಳುಗಟ್ಟಳೆ, ವರ್ಷಗಟ್ಟಳೆ ಅಧ್ಯಯನ, ಚಿಂತನೆ, ಸಂಶೋಧನೆಗಳ ತಪೋಬಲವಿರುತ್ತದೆ. ಕಾಸರವಳ್ಳಿಯವರ ಚಿತ್ರಗಳ ಅಸ್ಮಿತೆಯ ಛಾಪಿನ ಹಿಂದಿರುವ ಪ್ರತಿಭಾ ಪರಿಶ್ರಮವಿದು. ಹೊಸ ಮಾದರಿಗಳಿಗಾಗಿ ನಿರಂತರ ಹುಡುಕಾಟ, ವಿಭಿನ್ನ ವಿಷಯಗಳ/ಕಥೆಗಳ ಆಯ್ಕೆ ಮತ್ತು ಸೌಂದರ್ಯಪ್ರಜ್ಞೆಗಳಿಂದ ಹಾಗೂ ಸೂಕ್ಷ್ಮ ಸಂವೇದನೆಯಿಂದ, ವಿಶಿಷ್ಟವಾದ ನಿರೂಪಣಾ ಶೈಲಿಯಿಂದ ಗಿರೀಶ್ ಕಾಸರವಳ್ಳಿಯವರು ಕನ್ನಡ ಚಿತ್ರ ರಂಗಕ್ಕೆ ಅಂತರ್‌ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟವರು. ಕಾಸರವಳ್ಳಿಯವರ ಎಲ್ಲ ಚಿತ್ರಗಳೂ ಕನ್ನಡದ ಖ್ಯಾತ ಲೇಖಕರುಗಳ ಕಥೆ/ಕಾದಂಬರಿಗಳನ್ನು ಆಧರಿಸಿದ್ದು. ಗಟ್ಟಮುಟ್ಟಾದ ಕಥೆ ಅವರ ಮೊದಲ ಆಯ್ಕೆ. ಸತ್ವಯುತವಾದ ಕಥೆ ತಲಾಶ ಆದ ಕೂಡಲೇ ಚಿತ್ರಕಥೆ ರಚನೆಯಿಂದ ಗಿರೀಶರ ಸೃಜನಶೀಲ ಪ್ರತಿಭಾ ಸ್ಪರ್ಶ ಶುರುವಾಗುತ್ತದೆ. ಕೊನೆಗೆ ಒಂದು ಸಿನೆಮಾ ಆಗಿ ನಮ್ಮ ಮುಂದೆ ತೆರೆದುಕೊಂಡಾಗ ಅದು ಗಿರೀಶ್ ಕಾಸರವಳ್ಳಿಯವರ ಅಸ್ಮಿತೆಯೆ ಛಾಪಿನ ಚಿತ್ರವೇ ಆಗಿರುತ್ತದೆ.

ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿ ಎಂದರೆ, ಅವರ ಬಹುತೇಕ ಚಿತ್ರಗಳು-‘ಘಟಶ್ರಾದ್ಧ’ದಿಂದ ‘ದ್ವೀಪ’ದವರೆಗೆ-ಸ್ತ್ರೀ ಕೇಂದ್ರಿತ ಚಿತ್ರಗಳು ಎಂಬುದು. ಅದರಲ್ಲೂ ಭಾರತೀಯ ಸಂಸ್ಕೃತಿ ಹಿನ್ನೆಲೆಯ ಸ್ತ್ರೀಯರನ್ನು ಕೇಂದ್ರವಾಗುಳ್ಳ ಚಿತ್ರಗಳು. ಇವುಗಳಲ್ಲಿ ತುಂಬ ಮುಖ್ಯ ಎನ್ನಿಸುವುದು ‘ಘಟಶ್ರಾದ್ಧ’, ತಾಯಿಸಹೇಬ’ ಮತ್ತು ‘ದ್ವೀಪ’.‘ಘಟಶ್ರಾದ್ಧ’ ಬ್ರಾಹ್ಮಣ ಸಮುದಾಯದ ಕಟ್ಟಳೆಗಳು, ಕಂದಾಚಾರಗಳು, ಸನಾತನ ಶಾಸ್ತ್ರ, ಸಂಪ್ರದಾಯ, ಪದ್ಧತಿಗಳ ಸುಳಿಯಲ್ಲಿ ಸಿಕ್ಕ ಮಹಿಳೆಯೊಬ್ಬಳ ದುರಂತ ಚಿತ್ರವಾದರೆ, ‘ತಾಯಿಸಾಹೇಬ’ ಮತ್ತು ‘ದ್ವೀಪ’ಚಿತ್ರಗಳಲ್ಲಿ ಗಿರೀಶರು ಐತಿಹಾಸಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಸಮಾಜದಲ್ಲಿನ ಹೆಣ್ಣಿನ ಸ್ಥಾನಮಾನ ಮತ್ತು ಸ್ವಾತಂತ್ರಗಳ ಇತಿಮಿತಿಗಳನ್ನು ಶೋಧಿಸುತ್ತಾರೆ. ಇತ್ತೀಚೆಗೆ ನಿಧನರಾದ ರಂ.ಶಾ.ಲೋಕಾಪುರ ಅವರ ಕಾದಂಬರಿಯನ್ನು ಆಧರಿಸಿರುವ ‘ತಾಯಿಸಾಹೇಬ’ ಮಹಿಳಾ ವಿಮೋಚನೆಯೇ ಮುಖ್ಯ ಎಳೆ.

ಈ ಚಿತ್ರದ ನಾಯಕಿ ನರ್ಮದಾ ಬಾಯಿಯ ಪತಿ ದೇಶದ ಸ್ವಾತಂತ್ರ ಹೋರಾಟದಲ್ಲಿ ಭಾವಹಿಸಿದ್ದವನು. ಆದರೆ ಅವನ ಪತ್ನಿ ಭವ್ಯ ಬಂಗಲೆಯಲ್ಲಿ ಬಂದಿಯಾಗಿ ಅಲ್ಲಿಂದ ವಿಮೋಚನೆಗಾಗಿ ಹೆಣಗುತ್ತಿರುವ ಸಂತ್ರಸ್ತ ಮಹಿಳೆ. ‘ದ್ವೀಪ’ದಲ್ಲಿ ಸ್ತ್ರೀಶಕ್ತಿ ಮತ್ತು ತ್ಯಾಗಗಳಿಗೆ ಹೆಚ್ಚಿನ ಒತ್ತು. ‘ಘಟಶ್ರಾದ್ಧ’,‘ತಾಯಿಸಾಹೇಬ’ ‘ಹಸೀನಾ’, ಮತ್ತು ‘ದ್ವೀಪ’ ಸ್ತ್ರೀ ಶೋಷಣೆ ಹಾಗೂ ಸ್ತ್ರೀ ಸ್ವಾತಂತ್ರ್ಯ-ವಿಮೋಚನೆಗಳ ದೃಷ್ಟಿಯಿದ ತೌಲನಿಕ ಅಧ್ಯಯನ ಯೋಗ್ಯವಾದ ಚಿತ್ರಗಳು. ಈ ಮೂರೂ ಚಿತ್ರಗಳ ನಾಯಕಿಯರು ತಮ್ಮನ್ನು ತಾವೇ ಸುಟ್ಟುಕೊಂಡು ಲೋಕಕ್ಕೆ ಬೆಳಕು ನೀಡುವವರಾಗಿ ಉಳಿಯುತ್ತಾರೆ ಎಂಬುದು ಚಲಚಿತ್ರ ವಿಮರ್ಶಕ ನರಹರಿರಾವ್ ಅವರ ಅಂಬೋಣ (ರಿಫ್ಲೆಕ್ಷನ್ಸ್ ಆನ್ ಗಿರೀಶ್ ಕಾಸರವಳ್ಳಿ ಫಿಲ್ಮ್ಸ್). ಮಾನವ ಸಂಸ್ಕೃತಿಯಲ್ಲಿ ಮೂಲಭೂತವಾದಿಗಳು ವಿಶ್ವದಾದ್ಯಂತ ಸ್ತ್ರೀಯರ ಬದುಕಿನೊಂದಿಗೆ ಚೆಲ್ಲಾಟ ನಡೆಸಿರುವಂಥ ಸಮಕಾಲೀನ ಸಮಸ್ಯೆಗೆ ಸ್ಪಂದಿಸುವ ಧೈರ್ಯವನ್ನು ಗಿರೀಶ್ ಕಾಸರವಳ್ಳಿ ತೋರಿದ್ದಾರೆ ಎನ್ನುವುದೂ ನರಹರಿರಾಯರ ಮೆಚ್ಚುಗೆಯ ಮಾತು.

ವಸ್ತುವಿನಷ್ಟೇ ಗಹನಗಂಭೀರವಾದುದು ಕಾಸರವಳ್ಳಿಯವರ ನಿರೂಪಣಾ ಶೈಲಿ. ಗಿರೀಶ್ ಕಾಸರವಳ್ಳಿಯವರ ಚಿತ್ರಗಳ ಯಶಸ್ಸಿನ ಮರ್ಮವಿರುವುದು ಸತ್ವಶಾಲಿ ಕಥಾ ವಸ್ತುವಿನ ಆಯ್ಕೆಯ ಜೊತೆಗೆ ಅವರ ನಿರೂಪಣಾ ಶೈಲಿಯಲ್ಲಿ. ಗಿರೀಶರ ನಿರೂಪಣಾ ಶೈಲಿ ಅನನ್ಯವಾದುದು. ಪ್ರಪ್ರಥಮ ಕಿರುಚಿತ್ರ ‘ಅವಶೇಷ್’ನಲ್ಲಿ ಕಂಡುಬರುವ ರೂಪಕನಿಷ್ಠೆಯನ್ನು ಅವರ ಮುಂದಿನ ಎಲ್ಲ ಚಿತ್ರಗಳಲ್ಲೂ ನಾವು ಕಾಣುತ್ತೇವೆ. ರೂಪಕಗಳು, ವಸ್ತು ಪ್ರತಿರೂಪಗಳು, ಪ್ರತಿಮೆಗಳು, ಸಂಕೇತಗಳು, ಪ್ರತಿಮೆ, ಪ್ರತೀಕಗಳು, ಪರಿಸರ-ಪ್ರಕೃತಿ ಇವುಗಳನ್ನು ಅತ್ಯಂತ ಸಮರ್ಥನೀಯವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಗಿರೀಶ್ ಕಾಸರವಳ್ಳಿಯವರ ಕಥನ ಶೈಲಿ ಅನನ್ಯವಾದುದು.ಅವರು ರೂಪಕ ನಿಷ್ಠ ನಿರ್ದೇಶಕರು.

ಸಾಕ್ಷ ಚಿತ್ರಗಳ ನಿರ್ದೇಶನದಲ್ಲೂ ಗಿರೀಶರು ತಮ್ಮ ಛಾಪನ್ನು ಸ್ಪಷ್ಟವಾಗಿ ಮೂಡಿಸಿದ್ದಾರೆ. ಸುಪ್ರಸಿದ್ಧ ಕಲಾವಿದ ಕೆ.ಕೆ. ಹೆಬ್ಬಾರ್, ಯು.ಆರ್. ಅನಂತಮೂರ್ತಿ ಮತ್ತು ಕರ್ನಾಟಕದ ಐತಿಹಾಸಿಕ ಮಹತ್ವದ ಕಾಗೋಡು ಸತ್ಯಾಗ್ರಹ ಕುರಿತ ಸಾಕ್ಷ ಚಿತ್ರಗಳು ಘನವಾದ ಸಾಕ್ಷ ಚಿತ್ರಗಳಿಗೆ ಮಾದರಿ ಎನ್ನುವಂತಿವೆ. ಭೈರಪ್ಪನವರ ‘ಗೃಹಭಂಗ’ ಕಾದಂಬರಿ ಆಧರಿತ ಎಪ್ಪತ್ತೈದು ಕಂತುಗಳ ಕಿರುತೆರೆ ಚಿತ್ರ ಮತ್ತೊಂದು ಉಲ್ಲೇಖನಾರ್ಹ ಅಂಶ. ತಮ್ಮ ಚಿತ್ರಗಳಲ್ಲಿ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳನೋಟಗಳನ್ನು ಮಾರ್ಮಿಕವಾಗಿ, ಮನೋಜ್ಞವಾಗಿ ಬಿಂಬಿಸಿ ದೇಶವಿದೇಶಗಳಲ್ಲಿ ಮಾನ್ಯತೆಗಳಿಸಿರುವ ಗಿರೀಶ್ ಕಾಸರವಳ್ಳಿಯವರ ಚಿತ್ರಗಳನ್ನು, ಅವರ ಚಿತ್ರಗಳ ಪರಿಭಾಷೆಯನ್ನು ವಿಶ್ಲೇಷಿಸುವ, ವಿಮರ್ಶಿಸುವ ಒಂದೆರಡು ಪುಸ್ತಕಗಳೂ ಪ್ರಕಟಗೊಂಡಿವೆ. ಅವುಗಳಲ್ಲಿ ಮುಖ್ಯವಾದದ್ದು ‘ರಿಫ್ಲೆಕ್ಷನ್ಸ್ ಆನ್ ಗಿರೀಶ್ ಕಾಸರವಳ್ಳಿ ಫಿಲ್ಮ್ಸ್...’ ಭಾರತೀಯ ಚಲಚಿತ್ರಂಗದ ಖ್ಯಾತನಾಮ ವಿಮರ್ಶಕರಾದ ಟಿ.ಜಿ. ವೈದ್ಯನಾಥನ್, ವಿದ್ಯಾರ್ಥಿ ಚಟರ್ಜಿ, ಪ್ರದೀಪ್ ಬಿಶ್ವಾಸ್, ಮನು ಚಕ್ರವರ್ತಿ, ಕೆ.ನರಹರಿ ರಾವ್ ಮೊದಲಾದವರ ವಿಮರ್ಶೆಗಳನ್ನೊಳಗೊಂಡಿರುವ ಗ್ರಂಥ.

ಇದರ ಸಂಪಾದಕರು: ಕನ್ನಡದ ಖ್ಯಾತ ವಿಮರ್ಶಕರಾದ ಮ.ನು. ಚಕ್ರವರ್ತಿಯವರು. ಮ.ನು. ಚಕ್ರವರ್ತಿಯವರು ಹೇಳುವಂತೆ, ಕನ್ನಡದಲ್ಲಿ ನಿಜವಾದ ಸಿನೆಮಾ ರಸಾಭಿಜ್ಞತೆ ದೃಷ್ಟಿಯಿಂದ ಹೊಸ ಅಲೆ ಶುರುವಾದದ್ದು ಕಾಸರವಳ್ಳಿಯುವರ ‘ಘಟಶ್ರಾದ್ಧ’ ಚಿತದದಿಂದಲೇ. ಶಕ್ತಿ ಸೇನ್‌ಗುಪ್ತಾ ಅವರ ‘ದಿ ಫಿಲ್ಮ್ಸ್ ಆಫ್ ಕಾಸರವಳ್ಳಿ’-ಕಾಸರವಳ್ಳಿಯವರ ಚಿತ್ರಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಇನ್ನೊಂದು ಪುಸ್ತಕ. ‘ಲೈಫ್ ಇನ್ ಮೆಟಫರ್ಸ್’ ಗಿರೀಶ್ ಕಾಸರವಳ್ಳಿಯವರನ್ನು ಕುರಿತು ಒ.ಪಿ. ಶ್ರೀನಿವಾಸ್ ಅವರು ತಯಾರಿಸಿರುವ ಸಾಕ್ಷ ಚಿತ್ರ. ಈ ಸಾಕ್ಷ ಚಿತ್ರದ ಹೆಸರು ರೂಪಕನಿಷ್ಠ ನಿರ್ದೇಶಕ ಗಿರೀಶರಿಗೆ ಅನ್ವರ್ಥನಾಮವೂ ಆದೀತು. ಗಾಂಧೀಜಿಯವರ ತತ್ವಗಳು, ಆದರ್ಶಗಳು, ಮೌಲ್ಯಗಳು ಇಂದು ವ್ಯಾಪಾರದ ಸರಕಾಗಿರುವುದನ್ನು ವಿಡಂಬಿಸುವ ಕುಂ.ವೀರಭದ್ರಪ್ಪನವರ ಕಥೆ ಆಧಾರಿತ ‘ಕೂರ್ಮಾವತಾರ’ದ ಒಂಬತ್ತು ವರ್ಷಗಳ ನಂತರ ಗಿರಿಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಹೊಸಚಿತ್ರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ರಜತಪರದೆಯಲ್ಲಿ ಶೋಭಿಸಲು ಸಿದ್ಧವಾಗಿದೆ. ಇದು ಜಯಂತ ಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿರುವ ಚಿತ್ರ. ಇದೇ 7-8ರಂದು ಎಪ್ಪತ್ತರ ‘ಯುವ’ಮನಸ್ಸಿನ ಗಿರೀಶ ಕಾಸರವಳ್ಳಿಯವರ ಚಿತ್ರಗಳ ಪ್ರದರ್ಶನೋತ್ಸವ ಹಾಗೂ ವಿಚಾರ ಸಂಕಿರಣವನ್ನು ಏರ್ಪಡಿಸಿ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು. ಗಿರೀಶರಿ

ಹೇಳೋಣ - ಸ್ವಸ್ತಿ ಸ್ವಸ್ತಿ ಸ್ವಸ್ತಿ.  

Writer - ಜಿ.ಎನ್.ರಂಗನಾಥ

contributor

Editor - ಜಿ.ಎನ್.ರಂಗನಾಥ

contributor

Similar News

ಸಂವಿಧಾನ -75