ಕಲ್ಲಡ್ಕ ಶ್ರೀರಾಮ ಶಾಲೆಯ ‘ಕ್ರೀಡಾ’ ಕಾರ್ಯಕ್ರಮದ ಸುತ್ತಮುತ್ತ
ಇದೇ ಡಿಸೆಂಬರ್ 15, 2019ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಮಕ್ಕಳ ಕೈಯಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಯ ಅಣಕು ಪ್ರದರ್ಶನ ಮಾಡಿಸಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬಾಬರಿ ಮಸೀದಿ ಧ್ವಂಸ ಒಂದು ಕ್ರಿಮಿನಲ್ ಕೃತ್ಯವೆಂದು ಸರ್ವೋಚ್ಚ ನ್ಯಾಯಾಲಯ ತನ್ನ ಇತ್ತೀಚಿನ ಅಯೋಧ್ಯೆ ತೀರ್ಪಿನಲ್ಲಿ ಹೇಳಿರುವ ಹೊರತಾಗಿಯೂ ಹೀಗೆ ಮಾಡಿರುವುದು ದೇಶದ ನ್ಯಾಯಾಂಗವನ್ನೇ ಅಣಕಿಸಿದಂತಾಗಿದೆ.
ಕೋಮು ಸಂಘರ್ಷದ ತೀವ್ರತೆಗಾಗಿ ದೇಶಾದ್ಯಂತ ಕುಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಇದೀಗ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದುಮಾಡಿದೆ. ಇದೇ ಡಿಸೆಂಬರ್ 15, 2019ರಂದು ಅಲ್ಲಿನ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಮಕ್ಕಳ ಕೈಯಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಯ ಅಣಕು ಪ್ರದರ್ಶನ ಮಾಡಿಸಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬಾಬರಿ ಮಸೀದಿ ಧ್ವಂಸ ಒಂದು ಕ್ರಿಮಿನಲ್ ಕೃತ್ಯವೆಂದು ಸರ್ವೋಚ್ಚ ನ್ಯಾಯಾಲಯ ತನ್ನ ಇತ್ತೀಚಿನ ಅಯೋಧ್ಯೆ ತೀರ್ಪಿನಲ್ಲಿ ಹೇಳಿರುವ ಹೊರತಾಗಿಯೂ ಹೀಗೆ ಮಾಡಿರುವುದು ದೇಶದ ನ್ಯಾಯಾಂಗವನ್ನೇ ಅಣಕಿಸಿದಂತಾಗಿದೆ.
ಕಲ್ಲಡ್ಕದಲ್ಲಿ ನಡೆಸಲಾದ ಈ ಅಣಕು ಪ್ರದರ್ಶನ ನಿಜವಾಗಿ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೋಮು ಧ್ರುವೀಕರಣದ ಮುಂದುವರಿದ ಭಾಗವೇ ಆಗಿದೆ. ಕೋಮು ಧ್ರುವೀಕರಣಕ್ಕೆ ಇತರ ಹಲವು ವಿಷಯಗಳೊಂದಿಗೆ ಜಾನುವಾರು ಸಾಗಾಟವನ್ನು ಬಹಳ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ಕಾರ್ಯಕರ್ತರು ಜಾನುವಾರು ಸಾಗಾಟಕ್ಕೆ ಅಡ್ಡಿಪಡಿಸುವ, ಸಾಗಾಟಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಘಟನೆಗಳು ವಿಪರೀತ ಹೆಚ್ಚಿರುವ ಕಾರಣ ಹೈನುಗಾರಿಕೆ ವೃತ್ತಿಯಲ್ಲಿರುವವರು ಮತ್ತು ರೈತಾಪಿ ಮಂದಿ ತಮ್ಮ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿರುವುದು ಇವತ್ತಿನ ಕಟು ವಾಸ್ತವ. ಇತ್ತೀಚಿನ ದಿನಗಳಲ್ಲಿ ಜಾನುವಾರು ಕಳವು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬಹುಶಃ ಇದೊಂದು ಪ್ರಮುಖ ಕಾರಣವೆನ್ನಬಹುದು. ಇದೇ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಪೊಲೀಸ್ ಇಲಾಖೆ ಕಳವಿನ ಹಳೇ ಅಪರಾಧಿಗಳನ್ನು ಮಂಗಳೂರಿಗೆ ಕರೆಸಿ, ಎರಡೆರಡು ಬಾರಿ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದೆ. ಆದರೆ ಇದನ್ನೊಂದು ನಿಷ್ಪಕ್ಷಪಾತಿ ನೆಲೆಯಿಂದ ನೋಡಿದಾಗ ಸಾಗಾಟಕ್ಕೆ ಅಡ್ಡಿಪಡಿಸುವಂತಹ, ಹಲ್ಲೆ ಮಾಡುವಂತಹ ಅಪರಾಧಕೃತ್ಯ ಎಸಗುವವರನ್ನು ಯಾಕೆ ಪೆರೇಡ್ ಮಾಡಲಾಗುತ್ತಿಲ್ಲ, ಅವರಿಗೆ ಯಾಕೆ ಎಚ್ಚರಿಕೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆೆ. ಉತ್ತರಗಳನ್ನು ಮೇಲೆ ಹೇಳಿರುವ ಕಲ್ಲಡ್ಕ ಶ್ರೀರಾಮ ಶಾಲೆಯ ಕಾರ್ಯಕ್ರಮ ಪರೋಕ್ಷವಾಗಿ ಒದಗಿಸಬಹುದು ಎಂದರೆ ಒಂದು ಕ್ಷಣ ಅಚ್ಚರಿಯೆನಿಸಬಹುದು. ಆದರೆ ಲಭ್ಯವಿರುವ ವಾಸ್ತವಾಂಶಗಳನ್ನು ಗಣನೆಗೆ ತೆಗೆದುಕೊಂಡಾಗ ವಿಷಯ ಸ್ಪಟಿಕಸ್ಪಷ್ಟವಾಗುತ್ತದೆಂದು ನನ್ನ ಭಾವನೆ.
ಮೊದಲನೆಯದಾಗಿ, ಇದೇ ಡಿಸೆಂಬರ್ 15ರ ಆಸುಪಾಸಿನಲ್ಲಿ ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದ ಘಟನೆಯೊಂದನ್ನು ತೆಗೆದುಕೊಳ್ಳಿ. ಸಾಕಣೆಯ ಉದ್ದೇಶಕ್ಕಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದವರ ವಾಹನವನ್ನು ಸಂಘಟನೆಯೊಂದರ ನಾಲ್ವರು ಪುಢಾರಿಗಳು ಅಡ್ಡಗಟ್ಟಿದ್ದರು. ಸದ್ರಿ ಸಂಘಟನೆ ಯಥಾಪ್ರಕಾರ ಸಂಘಪರಿವಾರದ ಒಂದು ಸದಸ್ಯ ಸಂಘಟನೆಯಾಗಿರುವುದರಲ್ಲಿ ಸಂಶಯವಿಲ್ಲ. ವಾಹನವನ್ನು ಅಡ್ಡಗಟ್ಟಿರುವ ಸಮಾಚಾರ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಗಾಟ ಸಕ್ರಮವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆಮೇಲೆ ಸದ್ರಿ ಪುಢಾರಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಹೊರತು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.
(ಕರಾವಳಿ ಅಲೆ, ಡಿಸೆಂಬರ್ 16, 2019).
ಕರಾವಳಿಯ ಕೋಮುವಾರು ವಿದ್ಯಮಾನಗಳನ್ನು ಗಮನಿಸುತ್ತಾ ಬಂದವರಿಗೆ ಇದು ಹೊಸ ಸಂಗತಿಯೇನೂ ಅಲ್ಲ; ಕಳೆದ ಸುಮಾರು ಎರಡು ದಶಕಕ್ಕೂ ಅಧಿಕ ಕಾಲದಿಂದ ಅನೂಚಾನವಾಗಿ ಎಂಬಂತೆ ನಡೆಯುತ್ತಾ ಬಂದಿರುವ ‘ಸಂಪ್ರದಾಯ’ವಿದು. ಅನೈತಿಕ ಪೊಲೀಸ್‌ಗಿರಿ, ತಥಾಕಥಿತ ಮತಾಂತರ, ಜಾನುವಾರು ಸಾಗಾಟ ಮೊದಲಾದ ಪ್ರಕರಣಗಳಲ್ಲಿ ದಾಳಿಕೋರ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗುತ್ತಿರುವುದು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಕಳೆದ ಒಂದೆರಡು ವರ್ಷಗಳಿಂದೀಚೆಗಷ್ಟೇ ಅಪರೂಪಕ್ಕೊಮ್ಮೆ ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿರುವುದು ಕಂಡುಬರುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಡಿಸೆಂಬರ್ 15ರಂದು ಜಾನುವಾರು ಸಾಗಾಟಕ್ಕೆ ಅಡ್ಡಿಪಡಿಸಿದವರ ಮೇಲೆ ಪ್ರಕರಣ ದಾಖಲಿಸದಿರುವುದರಲ್ಲಿ ಅಚ್ಚರಿಯೇನು ಬಂತು! ಕರಾವಳಿಯ ಖಾಕಿಪಡೆಗಳಿಗೆ ಇಲ್ಲಿನ ಕೇಸರಿಪಡೆಗಳ ಬಗ್ಗೆ ಯಾಕಿಷ್ಟು ಮೃದು ಧೋರಣೆ ಎಂಬ ಪ್ರಶ್ನೆಗೆ ಉತ್ತರ ಬಹುಶಃ ಕಲ್ಲಡ್ಕದಲ್ಲಿ ಅಡಗಿರಬಹುದೆಂದು ಅನಿಸುವುದಕ್ಕೆ ಕೇವಲ ಇದೊಂದೇ ಕಾರಣವಲ್ಲ.
ಕಲ್ಲಡ್ಕ ಮೂಲದ ಓರ್ವ ಪ್ರಮುಖ ಆರೆಸ್ಸೆಸ್ ಮುಖಂಡ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್‌ನ ಸದಸ್ಯರಲ್ಲೊಬ್ಬರು. 2011-12ರಲ್ಲಿ ದ.ಕ.ಜಿಲ್ಲಾ ಪೊಲೀಸ್ ಅಂತರ್ಜಾಲ ತಾಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಶಿಸ್ತಿನ ಹೆಜ್ಜೆ ಮತ್ತಿತರ ಚಟುವಟಿಕೆಗಳಿಗೆ ಸಂಬಂಧಿಸಿದ ತೇಪೆಚಿತ್ರಗಳು ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಪ್ರದರ್ಶನಗೊಂಡಿದ್ದು ಅದನ್ನು 2 ಲಕ್ಷಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದ ಘಟನೆ ನಡೆದುದು ಇದೇ ಮುಖಂಡನ ಅವಧಿಯಲ್ಲಿ. ಈ ಆಘಾತಕಾರಿ ಮಾಹಿತಿಯನ್ನು ತನ್ನ ಮೇ 26, 2012ರ ಆವೃತ್ತಿಯಲ್ಲಿ ಬಯಲುಗೊಳಿಸಿದ ಕೀರ್ತಿ ‘ಬೆಂಗಳೂರು ಮಿರರ್’ ಪತ್ರಿಕೆಗೆ ಸಲ್ಲುತ್ತದೆ.
ವಿವರಗಳಿಗೆ ನೋಡಿ: https://bangaloremirror.indiatimes.com/bangalore/cover-story/cops-or-closet-swayamsevaks/articleshow/21376114.cms
ಕೋಮು ಪ್ರಚೋದಕ ಮಾತುಗಳಿಗೆ ಹೆಸರುವಾಸಿಯಾದ ಸದ್ರಿ ಮುಖಂಡ ಸದಾ ಒಂದಿಲ್ಲೊಂದು ಕಾರಣಕ್ಕೆ ವಿವಾದದಲ್ಲಿರುವ ವ್ಯಕ್ತಿ. ಈ ಮಹನೀಯ 2012ರ ಜನವರಿ 22ರಂದು ಉಪ್ಪಿನಂಗಡಿಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಭಾಷಣ ಮಾಡಿದ ಸಂದರ್ಭದಲ್ಲಿ ಪೊಲೀಸರು ಈತನ ಮೇಲೆ ಪ್ರಕರಣ ದಾಖಲಿಸಿದ್ದರು. ಕರ್ನಾಟಕ ಉಚ್ಚನ್ಯಾಯಾಲಯದಲ್ಲೂ ದೂರು ದಾಖಲಿಸಲಾಗಿತ್ತು. ಆದರೆ ಕೆಲವು ಸಮಯ ಕಳೆದು ಸ್ಥಳೀಯ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದರೆ ಉಚ್ಚನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಇದು ಕೆಳನ್ಯಾಯಾಲಯದಲ್ಲಿ ತೀರ್ಮಾನಿಸಬೇಕಾದ ಪ್ರಕರಣವೆಂದು ಆದೇಶಿಸಿದ ಘಟನೆ ನಡೆದಿದೆ.
ಗಮನಾರ್ಹವಾಗಿ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ, ಜನವರಿ 28ರಂದು, ಇದೇ ಆರೋಪಿ ಮುಖಂಡ ಮಂಗಳೂರಿನಲ್ಲಿ ನೂತನ ಕಮಿಷನರೇಟ್ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ (ಉದ್ಘಾಟಕರಾಗಿದ್ದವರು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು) ಪಾಲ್ಗೊಂಡಿದ್ದರು ಮಾತ್ರವಲ್ಲ, ಗಣ್ಯರ ಸಾಲಿನಲ್ಲೇ ಕುಳಿತಿದ್ದರು!
ಅಂದು ಪೊಲೀಸ್ ಕಮಿಷನರ್ ಆಗಿದ್ದ ಸೀಮಂತ್ ಕುಮಾರ್ ಸಿಂಗ್ ಮತ್ತು ಸದ್ರಿ ಮುಖಂಡನ ನಡುವಿನ ಅನ್ಯೋನ್ಯತೆ ಗುಟ್ಟಿನ ವಿಷಯವೇನೂ ಅಲ್ಲ. 2011ರ ಡಿಸೆಂಬರ್ 11ರಂದು ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡಾ ಕಾರ್ಯಕ್ರಮದಲ್ಲಿ ಸೀಮಂತ್ ಕುಮಾರ್ ಸಿಂಗ್ ಮತ್ತು ಅಂದಿನ ದ.ಕ. ಜಿಲ್ಲಾಧಿಕಾರಿ ಭಾಗವಹಿಸಿದುದಷ್ಟೇ ಅಲ್ಲ, ಕೇಸರಿ ಶಾಲು ಧರಿಸಿ ವೇದಿಕೆಯ ಮೇಲೆ ಆಸೀನರಾಗಿದ್ದರು
(ಕರಾವಳಿ ಅಲೆ, ಡಿಸೆಂಬರ್ 14, 2011).
ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಈಶಾನ್ಯ ರಾಜ್ಯಗಳಿಂದ ಕಳ್ಳಸಾಗಾಣೆ ಮಾಡಿ ತಂದ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಂಡು ಅವರಲ್ಲಿ ಹಿಂದುತ್ವವಾದಿ ಮನೋಭಾವ ಬಿತ್ತುತ್ತಿರುವ ಆಘಾತಕಾರಿ ಅಂಶವನ್ನು ‘ತೆಹೆಲ್ಕಾ’ ನಿಯತಕಾಲಿಕ 2009ರಷ್ಟು ಹಿಂದೆಯೇ ವರದಿ ಮಾಡಿದೆ. ಆರೆಸ್ಸೆಸ್ ತನ್ನ ಕೇಸರಿ ಸಿದ್ಧಾಂತವನ್ನು ತಲೆಗೆ ತುರುಕುವುದಕ್ಕಾಗಿ ಮತ್ತು ಈ ಬಗ್ಗೆ ತರಬೇತಿ ನೀಡುವುದಕ್ಕಾಗಿ ಈಶಾನ್ಯ ರಾಜ್ಯಗಳಿಂದ ಮಕ್ಕಳನ್ನು ಕಾನೂನುಬಾಹಿರವಾಗಿ, ಸರಿಯಾದ ದಾಖಲೆಪತ್ರಗಳಿಲ್ಲದೆ ಜಿಲ್ಲೆಯೊಳಗೆ ಕಳ್ಳಸಾಗಾಟಮಾಡುತ್ತಿರುವುದನ್ನು ದ.ಕ. ಜಿಲ್ಲಾ ಬಾಲ ಕಲ್ಯಾಣ ಸಮಿತಿಯು 2009ರಲ್ಲಿ ಕಂಡುಹಿಡಿದಿದೆ.
2014ರಲ್ಲಿ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಕೈಗೊಂಡ ತನಿಖೆ ಕೂಡ ಹೀಗೆ ಕಳ್ಳಸಾಗಾಟವಾದ ಸುಮಾರು 70 ಮೇಘಾಲಯದ ಮಕ್ಕಳು ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಇದ್ದುದನ್ನು ಪತ್ತೆಹಚ್ಚಿದೆ. ಅವರಲ್ಲಿ ಹೆಚ್ಚಿನವರು ಕ್ರೈಸ್ತ ಧರ್ಮೀಯರು. ಉಳಿದವರು ಬುಡಕಟ್ಟು ಧರ್ಮಗಳಿಗೆ ಸೇರಿದವರು. ಅವರಿಗೆಲ್ಲ ಉಚಿತ ಶಿಕ್ಷಣದೊಂದಿಗೆ ವೈದಿಕ ಶ್ಲೋಕಗಳು, ಮಂತ್ರಗಳು ಇತ್ಯಾದಿ ಹಿಂದೂ ಧರ್ಮೀಯ ಆಚರಣೆಗಳನ್ನು ಹೇಳಿಕೊಡಲಾಗುತ್ತದೆಂದು ವರದಿ ತಿಳಿಸುತ್ತದೆ. ಇಂತಹ ಒಬ್ಬ ಮೇಘಾಲಯದ 15 ವರ್ಷದ ಬಾಲಕ ಧಂಗಪಾಯಾ ಎಂಬಾತನನ್ನು ಮಾತನಾಡಿಸಿದಾಗ ಆತ ಹೇಳಿದ್ದೇನು ಗೊತ್ತೇ? ‘‘ನಾನು ಸೇನೆಗೆ ಸೇರಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲಿಚ್ಛಿಸುತ್ತೇನೆ!’’ ‘‘ಒಂದು ವೇಳೆ ಸೇನೆಗೆ ಆಯ್ಕೆಯಾಗದಿದ್ದಲ್ಲಿ ಏನು ಮಾಡುವೆ?’’ ಎಂಬ ಪ್ರಶ್ನೆಗೆ ‘‘ಬಜರಂಗ ದಳಕ್ಕೆ ಸೇರಿ ದೇಶವನ್ನು ಉಗ್ರಗಾಮಿಗಳು, ದೇಶದ್ರೋಹಿಗಳು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಉತ್ತೇಜನ ನೀಡುವವರಿಂದ ರಕ್ಷಿಸುತ್ತೇನೆ’’ ಎಂದು ಉತ್ತರಿಸುತ್ತಾನೆ!! ಈ ಮಕ್ಕಳನ್ನು ಪ್ರತಿಭಟನೆಗಳಿಗೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಹಿತಿಯನ್ನೂ ವರದಿ ಹೊರಹಾಕುತ್ತದೆ. 2014ರ ಮಾರ್ಚ್‌ನಲ್ಲಿ ಪುತ್ತೂರಿನ ಮುಸ್ಲಿಮರ ಮನೆಗಳಿಗೆ ಕಲ್ಲೆಸೆತದ ಪ್ರಕರಣಗಳಲ್ಲಿ ಇದೇ ಮೇಘಾಲಯದ ಮಕ್ಕಳು ಭಾಗಿಯಾಗಿದ್ದರು. ಅವರೆಲ್ಲ ಅಪ್ರಾಪ್ತ ವಯಸ್ಕರಾಗಿರುವುದರಿಂದ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.
ಹೆಚ್ಚಿನ ವಿವರಗಳಿಗೆ ನೋಡಿ: http://www.hindustantimes.com/india-news/catch-them-young-watch-them-grow/article1-1296286.aspx
ತರುವಾಯ 2016ರಲ್ಲಿ, ಅಸ್ಸಾಮಿನಿಂದ 31 ಬುಡಕಟ್ಟು ಬಾಲಕಿಯರನ್ನು ಗುಜರಾತ್ ಮತ್ತು ಪಂಜಾಬಿನ ಆರೆಸ್ಸೆಸ್ ಶಾಲೆಗಳಿಗೆ ಕಳ್ಳಸಾಗಾಟ ಮಾಡಿರುವುದನ್ನು ಬಯಲಿಗೆಳೆದುದಕ್ಕಾಗಿ ಇಂಗ್ಲಿಷ್ ನಿಯತಕಾಲಿಕ ಔಟ್‌ಲುಕ್ ಮೋದಿ ಸರಕಾರದ ಕೆಂಗಣ್ಣಿಗೆ ತುತ್ತಾದ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಬಹುತೇಕ ಜನಸಾಮಾನ್ಯರ ಗಮನಕ್ಕೆ ಬಾರದ ಈ ಎಲ್ಲ ಮಾಹಿತಿಗಳು ಹಿರಿಯ ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿದಿರಲೇಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಡಿಸೆಂಬರ್ 15ರಂದು ನಡೆದ ವಿವಾದಾಸ್ಪದ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಂತ್ರಿಮಾಗಧರಲ್ಲದೆ ಹಾಲಿ ಪುದುಚೇರಿ ರಾಜ್ಯಪಾಲೆಯೂ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕಿರಣ್ ಬೇಡಿ ಹಾಗೂ ಎಡಿಜಿಪಿ ಮೋಹನ್ ಪ್ರಸಾದ್, ಭ್ರಷ್ಟಾಚಾರ ನಿಗ್ರಹ ದಳದ ಐಜಿ ಚಂದ್ರಶೇಖರ್, ದ.ಕ. ಜಿಲ್ಲಾ ಎಸ್‌ಪಿ ಲಕ್ಷ್ಮೀ ಪ್ರಸಾದ್, ಮಂಗಳೂರಿನ ಕಮಿಷನರ್ ಡಾ. ಪಿ.ಎಸ್. ಹರ್ಷ, ಸೀಮಂತ್ ಕುಮಾರ್ ಸಿಂಗ್ ಮೊದಲಾದ ಹಿರಿಯ ಪೊಲೀಸ್ ಅಧಿಕಾರಿಗಳೂ ಭಾಗವಹಿಸಿದ್ದರು! ಕರಾವಳಿಯ ಖಾಕಿಪಡೆಗಳಿಗೆ ಇಲ್ಲಿನ ಕೇಸರಿಪಡೆಗಳ ಬಗ್ಗೆ ಯಾಕಿಷ್ಟು ಮೃದು ಧೋರಣೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆಯಾ?
ಬಂಟ್ವಾಳ ಪೊಲೀಸರೇನೋ ಕಲ್ಲಡ್ಕದ ಆರೆಸ್ಸೆಸ್ ಮುಖಂಡನೂ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಾಧ್ಯಮಗಳಲ್ಲಿ ಇದಕ್ಕೆ ವ್ಯಾಪಕ ಪ್ರಚಾರವೂ ದೊರಕಿದೆ. ಆದರೆ ಇಲ್ಲಿ ಬಹುಮುಖ್ಯ ಪ್ರಶ್ನೆ ಏನೆಂದರೆ ಮುಂದೆ ಆರೋಪಪಟ್ಟಿ ಸಲ್ಲಿಕೆಯಾಗಲಿದೆಯೇ ಅಥವಾ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಲಿದೆಯೇ? ಈ ಹಿಂದಿನ ಅನುಭವಗಳ ಆಧಾರದಲ್ಲಿ ಮತ್ತು ಮೊನ್ನೆಯ ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಮಂತ್ರಿಗಳು ಉಪಸ್ಥಿತರಿದ್ದುದನ್ನು ಪರಿಗಣಿಸಿದರೆ ಪ್ರಕರಣ ಬಿದ್ದುಹೋಗುವ ಸಾಧ್ಯತೆಗಳೇ ಹೆಚ್ಚು ಎಂದು ತೋರುತ್ತದೆ.