ಸೈಕಲ್‌ನಲ್ಲಿ 'ಸ‌ಅದಿಯ್ಯಾ'ಗೆ ಯಾತ್ರೆ ಹೊರಟ ಇಬ್ರಾಹೀಂ ತಾತ ಸಿಕ್ಕಿದರು...

Update: 2019-12-26 06:34 GMT

ನಿನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ರಾಹೀಂ ತಾತರ ಫೋಟೋ ನೋಡಿದ್ದೆ. ಇಂದು ಬೆಳಗ್ಗೆ ಸುಮಾರು 7:30ರ ಹೊತ್ತಿಗೆ ನಮ್ಮೂರಿನ ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ಬೈಕಲ್ಲಿ ಹೋಗುತ್ತಿದ್ದಾಗ ‌‌ಮುಡಿಪು ಕಡೆಯಿಂದ ವೇಗವಾಗಿ ಸೈಕಲ್ ತುಳಿಯುತ್ತಾ ಬರುತ್ತಿದ್ದ ವಯೋವೃದ್ಧರೊಬ್ಬರನ್ನು ಕಂಡೆ. ಅವರು ನನ್ನೆದುರಲ್ಲೇ ಹಾದು ಹೋಗುತ್ತಿದ್ದಾಗ ಸರಿಯಾಗಿ ಗಮನಿಸಿದೆ. ಸೈಕಲ್‌ನ ಹ್ಯಾಂಡಲ್ ಬಳಿ ಒಂದು ಉದ್ದದ ಕಂಬ ಕಟ್ಟಿ ಅದಕ್ಕೆ ಹಸಿರು ಬಿಳಿ ಧ್ವಜ ಕಟ್ಟಿದ್ದರು.‌ ಹ್ಯಾಂಡಲ್‌ನ ಎದುರು ಭಾಗಕ್ಕೆ 'ಸ‌ಅದಿಯ್ಯಾ ಗೋಲ್ಡನ್ ಜುಬಿಲಿ, ಸೈಕಲ್ ಯಾತ್ರೆ' ಎಂಬ ನಾಮಫಲಕವೊಂದನ್ನು ಕಟ್ಟಿದ್ದರು. ಬೈಕ್ ತಿರುಗಿಸಿ ಅವರನ್ನು ಹಿಂಬಾಲಿಸಿ ಅವರ ಹತ್ತಿರ ಹೋಗಿ ನಿಲ್ಲಿಸಿ ಸಲಾಮ್‌ ಹೇಳಿ ಕುಶಲೋಪಚರಿ ವಿಚಾರಿಸಿ ಅವರನ್ನು ಮಾತಿಗೆಳೆದೆ.

ತಾತ ನಿಮ್ಮ ಹೆಸರೇನು...?

-ಇಬ್ರಾಹೀಂ

ಎಲ್ಲಿಂದ ಬಂದಿರಿ..?

-ಸಾಗರದಿಂದ

ಚಹಾ -ತಿಂಡಿ ಆಯಿತಾ...?

- ಇಲ್ಲಪ್ಪಾ, ಇವತ್ತು ಉಪವಾಸ

ಯಾಕೆ ತಾತ...?

-ಗುರುವಾರ ಮತ್ತು ಸೋಮವಾರ ಪ್ರತೀ ವಾರವೂ ಉಪವಾಸ ಅನುಷ್ಠಾನಿಸುವ ಪರಿಪಾಠ ಬೆಳೆಸಿದ್ದೇನೆ.

ತಾತ ನಿಮಗೆ ವಯಸ್ಸೆಷ್ಟು..?

-ಎಂಬತ್ತೇಳು

ಆರೋಗ್ಯ ಹೇಗಿದೆ...?

-ಫರ್ಸ್ಟ್ ಕ್ಲಾಸ್ ಇದ್ದೇನೆ, ಅಲ್-ಹಮ್ದುಲಿಲ್ಲಾಹ್

ಏನು ಕೆಲಸ ಮಾಡುತ್ತಿದ್ದಿರಿ...?

-ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದೆ

ಮಕ್ಕಳೆಷ್ಟು...?

-ಒಂಬತ್ತು ಮಂದಿ

ಏನ್ಮಾಡ್ತಿದ್ದಾರೆ....?

-ಊರಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡ್ತಿದ್ದಾರೆ

ಸೈಕಲ್ ಯಾತ್ರೆಯ ಉದ್ದೇಶವೇನು...?

-ಕಾಸರಗೋಡಿನ ಸ‌ಅದಿಯ್ಯಾ ವಿದ್ಯಾ ಸಂಸ್ಥೆ ಸಹಸ್ರಾರು ಧಾರ್ಮಿಕ ವಿದ್ವಾಂಸರನ್ನು ಸಮಾಜಕ್ಕೆ ಅರ್ಪಿಸಿದೆ. ಸಾವಿರಾರು ಅನಾಥ, ನಿರ್ಗತಿಕ ಮಕ್ಕಳಿಗೆ ಧಾರ್ಮಿಕ -ಲೌಕಿಕ ಶಿಕ್ಷಣ ನೀಡಿ ಅವರ ಬದುಕು ರೂಪಿಸಿದೆ.‌ ಅಂತಹಾ ಸಂಸ್ಥೆಯೆಂದ ಮೇಲೆ ಅಭಿಮಾನ ಸಹಜ. ಸ‌ಅದಿಯ್ಯ ಗೋಲ್ಡನ್ ಜುಬಿಲಿ ಆಚರಿಸುತ್ತಿರುವಾಗ ಅದರ ಪ್ರಚಾರಕ್ಕೆ ನಾನೇನಾದರೂ ಮಾಡಬೇಕೆಂಬ ಆಸೆಯಿತ್ತು. ಸಾಗರದಿಂದ ಕಾಸರಗೋಡು ತಲುಪುವ ಹಾದಿಯಲ್ಲಿ ಲಕ್ಷಾಂತರ ಮಂದಿ ನನ್ನನ್ನು ಗಮನಿಸುತ್ತಾರೆ. ಆ ಮೂಲಕ ಗೋಲ್ಡನ್‌ ಜುಬಿಲಿ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಚಾರ ದೊರಕುತ್ತದೆ.

ತಾತ ತಮಗೆ ಆಯಾಸವಾಗುವುದಿಲ್ಲವೇ...?

-ಬಿಲ್‌ಕುಲ್ ಇಲ್ಲ.

ಯಾವ ಮಾರ್ಗವಾಗಿ  ಬಂದಿರಿ...?

-ಸಾಗರದಿಂದ ಕುಂದಾಪುರ ಮಾರ್ಗವಾಗಿ ಬಂದೆ.

ಎಷ್ಟು ದಿನವಾಯಿತು ಹೊರಟು...?

-ಇಂದು ಆರನೇ ದಿನ

ದಿನಕ್ಕೆಷ್ಟು ಕಿಲೋ ಮೀಟರ್ ಕ್ರಮಿಸುತ್ತೀರಿ...?

- ಅದೆಲ್ಲಾ ಗೊತ್ತಿಲ್ಲಪ್ಪ

ಸ‌ಅದಿಯ್ಯಾಕೆ ಯಾವಾಗ ತಲುಪಬಹುದು...?

-ಇಂಶಾ ಅಲ್ಲಾಹ್ ನಾಳೆ

ಬಟ್ಟೆ ಬರೆ ಎಷ್ಟು ಜೋಡಿ ಇದೆ...?

-ಎರಡು ಜೋಡಿ ಎನ್ನುತ್ತಾ (ಬಟ್ಟೆಯ ಪುಟ್ಟ ಚೀಲ ತೋರಿಸಿದರು)

ಸೈಕಲ್ ದಾರಿ ಮಧ್ಯೆ ಕೈ ಕೊಟ್ಟರೆ..?

- ಹೊಸ ಟಯರ್ ಹಾಕಿಸಿದ್ದೇನೆ. ಕಂಡೀಶನ್ ಚೆನ್ನಾಗಿದೆ. ಪಂಕ್ಚರ್ ಆದರೆ ಹಾಕುವ ಎಲ್ಲ ವ್ಯವಸ್ಥೆ ನನ್ನಲ್ಲಿದೆ (ಎನ್ನುತ್ತಾ  ಅದರ ಪರಿಕರಗಳನ್ನು ತೋರಿಸಿದರು)

ಊಟ ತಿಂಡಿ , ವಿಶ್ರಾಂತಿಗೆ ಏನು ಮಾಡುತ್ತೀರಿ...?

- ದಾರಿ ಮಧ್ಯೆ ಜನ ಕರೆದು ಊಟ ತಿಂಡಿ ಕೊಡ್ತಾರೆ. ವಿಶ್ರಾಂತಿಗಾಗಿ ಮಸೀದಿಗಳಿಗೆ ಹೋಗುತ್ತೇನೆ. ಅಲ್ಲೂ ಊಟೋಪಚಾರ ನೀಡುತ್ತಾರೆ. ಸ್ನಾನ -ನಿತ್ಯ ಕರ್ಮಕ್ಕೆ ಮಸೀದಿಗಳಲ್ಲೇ ವ್ಯವಸ್ಥೆ ಮಾಡಿಕೊಡುತ್ತಾರೆ.

ವಾಪಸ್ ಸೈಕಲಲ್ಲೇ ಹೋಗ್ತೀರಾ...?

-ಕುಂದಾಪುರ ತನಕ ಸೈಕಲಲ್ಲಿ ಹೋಗುತ್ತೇನೆ. ಅಲ್ಲಿಂದ ಘಾಟಿ ರಸ್ತೆ ಸಿಗುತ್ತಲ್ವಾ.... ಅಲ್ಲಿಂದ ಬೇರೇನಾದರೂ ವ್ಯವಸ್ಥೆ ಮಾಡ್ಬೇಕೆಂದಿದ್ದೇನೆ ಇಂಶಾ ಅಲ್ಲಾಹ್

ತಾತ ಫೋಟೋ ತೆಗೆಯಲೇ...?

-ಧಾರಾಳವಾಗಿ ತೆಗೆದುಕೊಳ್ಳಪ್ಪಾ..

ತಾತ ನನಗೂ ಕುಟುಂಬಕ್ಕೂ ಪ್ರಾರ್ಥಿಸಿ....?

-ಇಂಶಾ ಅಲ್ಲಾಹ್, ಖಂಡಿತಾ....

Writer - -ಇಸ್ಮತ್ ಪಜೀರ್

contributor

Editor - -ಇಸ್ಮತ್ ಪಜೀರ್

contributor

Similar News