ಇದು ಇಂದಿನ ಸ್ವಾತಂತ್ರ್ಯ ಸಮರ

Update: 2019-12-30 04:50 GMT

ಇನ್ನೇನು ಎರಡು ದಿನ, ಬುಧವಾರ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ.ಗತಿಸಿದ ವರ್ಷದ ಸಿಹಿ, ಕಹಿ ನೆನಪುಗಳೊಂದಿಗೆ 2020ಕ್ಕೆ ಪ್ರವೇಶಿಸಿಸುತ್ತಿದ್ದೇವೆ. ಹಿಂದಿನ ವರ್ಷದ ನಡೆದು ಬಂದ ದಾರಿ ಭಾರತೀಯರ ಪಾಲಿಗೆ ಕಲ್ಲುಮುಳ್ಳಿನ ದಾರಿ. ಪ್ರಜಾಪ್ರಭುತ್ವ ಮಾನವ ಸಮಾಜದ ಶ್ರೇಷ್ಠ ವ್ಯವಸ್ಥೆಯಾದರೂ ಒಮ್ಮೆಮ್ಮೆ ಅಯೋಗ್ಯರು, ಅವಿವೇಕಿಗಳು, ಅಸಭ್ಯರು, ದೇಶ ಮುರುಕರು ವೋಟಿನ ಬಲದಿಂದ ಸೀಟು ಗೆದ್ದು ಅಧಿಕಾರಕ್ಕೆ ಬರುತ್ತಾರೆ. ಇಂಥವರಕೈಯಲ್ಲಿ ಸಿಕ್ಕಿ ವಿಶ್ವದ ಅನೇಕ ದೇಶಗಳು ನರಳಿವೆ, ನರಳುತ್ತಿವೆ. ಈಗ ಭಾರತೀಯರ ಸ್ಥಿತಿಯೂ ಅದೇ ಆಗಿದೆ.

ಕಳೆದ ವರ್ಷ ಈ ದೇಶ ಅನುಭವಿಸಿದ ಈಗಲೂ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ನಿರುದ್ಯೋಗ, ಇವೆೆಲ್ಲದರ ಪರಿಣಾಮವಾಗಿ ಉಂಟಾದ ಆರ್ಥಿಕ ಹಿಂಜರಿತ, ಇವುಗಳಿಂದ ರೋಸಿ ಹೋದ ಜನ ಬೀದಿಗಿಳಿಯುವ ಮುನ್ನವೇ ಕೇಂದ್ರ ಸರಕಾರ ತಂದ ಪೌರತ್ವ ಕಾನೂನಿನ ತಿದ್ದುಪಡಿ, ಅದರ ವಿರುದ್ಧ ಸಿಡಿದ ಜನಾಕ್ರೋಶ ಎಲ್ಲರಿಗೂ ಗೊತ್ತಿದೆ.

ಈ ದೇಶದಲ್ಲಿ ಜನರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಶತಮಾನಗಳ ಕಾಲ ಒಂದಾಗಿ ಬದುಕಿದ, ಈ ದೇಶವನ್ನು ಕಟ್ಟಿದ, ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ದೇಶದಲ್ಲಿ ಯಾದವೀ ಕಲಹ ಉಂಟು ಮಾಡಲು ಸರಕಾರವೇ ಮುಂದಾಗಿದೆ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸಂಸತ್ತಿನ ಉಭಯ ಸದನಗಳು, ಸುಪ್ರೀಂ ಕೋರ್ಟ್ ಎಲ್ಲವೂ ಇವೆ. ಆದರೆ ಜನ ಸಾಮಾನ್ಯರು ಆತಂಕದಲ್ಲಿ ಬದುಕುತ್ತಿದ್ದಾರೆ. ಪೌರತ್ವ ಕಾನೂನಿಗೆ ತಿದ್ದುಪಡಿ ತಂದು 2024ರೊಳಗೆ ಈ ದೇಶದ ಪ್ರಜೆಗಳಲ್ಲದವರನ್ನು ಹೊರದಬ್ಬುವುದಾಗಿ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಬೆದರಿಕೆ ಹಾಕುತ್ತಾರೆ. ಇದರ ವಿರುದ್ಧ ಜನಸಾಮಾನ್ಯರು ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು ಬೀದಿಗಿಳಿದ ನಂತರ ಒಮ್ಮೆಲೆ ಎಚ್ಚೆತ್ತ ಪ್ರಧಾನಿ ಮೋದಿಯವರು ಎನ್‌ಆರ್‌ಸಿ ಜಾರಿ ಮಾಡುವ ಯೋಜನೆ ಇಲ್ಲ ಎಂದು ಹೇಳುತ್ತಾರೆ.ಆದರೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಅಮಿತ್ ಶಾ ಹೇಳಿದ ದಾಖಲೆಗಳಿವೆ. ದೇಶದ ಪ್ರಜೆಗಳಲ್ಲದವರನ್ನು ಬಂಧಿಸಿಡಲು ಡಿಟೆನ್ಷನ್ ಸೆಂಟರ್ ಗಳನ್ನು ನಿರ್ಮಿಸಲು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿಗಳು ಹೇಳುತ್ತಾರೆ. ಆದರೆ ಇಂಥ ಡಿಟೆನ್ಷನ್ ಸೆಂಟರ್ ನಿರ್ಮಾಣ ಸುಳ್ಳು ಎಂದು ಪ್ರಧಾನಿ ಹೇಳುತ್ತಾರೆ.

ಈ ದೇಶದಲ್ಲಿ ಸ್ವಾತಂತ್ರಾ ನಂತರ ಸಾರ್ವಜನಿಕ ಆಸ್ತಿ ಪಾಸ್ತಿಗೆ ಯಾರಿಂದ ನಷ್ಟ ಉಂಟಾಗಿದೆ ಎಂಬುದಕ್ಕೆ ದಾಖಲೆಗಳಿವೆ. ಪೌರತ್ವ ಕಾಯ್ದೆ ವಿರುದ್ಧ ನಡೆದ ಚಳವಳಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕುವುದಾಗಿ, ಅಂಥವರಿಂದ ದಂಡ ವಸೂಲಿ ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆದರಿಕೆ ಹಾಕುತ್ತಾರೆ. ಕರ್ನಾಟಕದ ಮಂತ್ರಿ ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಕೂಡ ಇಂಥದೇ ಬೆದರಿಕೆ ಹಾಕುತ್ತಾರೆ. ಸರಿ ಇದರ ಬಗ್ಗೆ ಆಕ್ಷೇಪವಿಲ್ಲ. ಆದರೆ ಇದಕ್ಕಾಗಿ ಒಂದು ಕಾನೂನು ರೂಪಿಸಬೇಕು. ಹಿಂದುಳಿದವರಿಗೆ ಮೀಸಲು ನೀಡುವ ಮಂಡಲ್ ಆಯೋಗದ ವರದಿಯ ವಿರುದ್ಧ ನಡೆದ ಚಳವಳಿ, ಹಾಗೂ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ನಡೆದ ದೊಂಬಿಯಲ್ಲಿ ಈ ದೇಶದ ಲಕ್ಷಾಂತರ ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಯಿತು. ಆ ಚಳವಳಿಗಳಲ್ಲಿ ಪಾಲ್ಗೊಂಡು ಪ್ರಚೋದನೆ ನೀಡಿದವರ ಆಸ್ತಿಯನ್ನೂ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಇಡೀ ದೇಶಕ್ಕೆ, ಮನೆ ಮನೆಗೆ, ಮನಸ್ಸುಗಳಿಗೆ ಬೆಂಕಿ ಹಚ್ಚಿ ವಿಷಬೀಜ ಬಿತ್ತಿದವರು ಮಹಾ ಸಂಪನ್ನರಂತೆ ಗಾಂಧಿ ತುಂಡುಗಳಂತೆ ಮಾತಾಡುವುದನ್ನು, ಬೆದರಿಕೆ ಹಾಕುವುದನ್ನು ಕೇಳಿದಾಗ ಈ ದೇಶ ತಲುಪಿದ ದುರಂತ ಸ್ಥಿತಿ ಕಂಡು ನೋವಾಗುತ್ತದೆ.

ಗುಜರಾತ್‌ನ ಆ ಭಯಂಕರ ಹಿಂಸಾಚಾರ ಮತ್ತು ಗಲಭೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಅಸು ನೀಗಿದರು. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟವಾಯಿತು. ಆಗ ನಷ್ಟಕ್ಕೆ ಕಾರಣರಾದವರ ಆಸ್ತಿಯನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಮುಟ್ಟುಗೋಲು ಹಾಕಿದರೇ? ದಂಡ ವಸೂಲಿ ಮಾಡಿದರೇ ಈಗ ದಂಡ ವಸೂಲಿಯ ಆತ್ಮಾವಲೋಕನದ ಬೂಟಾಟಿಕೆಯ ಮಾತೇಕೆ?

ಪೌರತ್ವ ವಿರೋಧಿ ಚಳವಳಿಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ನಮ್ಮ ಪ್ರಧಾನ ಮಂತ್ರಿಗಳು ಬಹಿರಂಗವಾಗಿ ಕರೆ ನೀಡುತ್ತಾರೆ. ಇಂಥ ಕರೆಯನ್ನು ದೊರೆಸ್ವಾಮಿ, ಮೇಧಾ ಪಾಟ್ಕರ್ ಅವರಂಥ ಗಾಂಧಿವಾದಿ ಗಳು ನೀಡಿದ್ದರೆ ಒಪ್ಪಬಹುದಿತ್ತು. ಆದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ನಡುರಸ್ತೆಯಲ್ಲಿ ಹಾಡ ಹಗಲೇ ಮತಾಂಧರು ಕೊಚ್ಚಿ ಹಾಕಿದಾಗ ಪೊಲೀಸರಿಗೆ ಸುಮ್ಮನಿರುವಂತೆ ಕಣ್ಸನ್ನೆ ಮಾಡಿದ ವ್ಯಕ್ತಿ, ನಡುರಸ್ತೆಯಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿ ಅತ್ಯಾಚಾರ ಮಾಡಿ ಬೆಂಕಿಗೆ ಹಾಕಿದಾಗ, ಪೊಲೀಸರ ಕೈ ಕಟ್ಟಿ ಹಾಕಿದ ಮನುಷ್ಯ, ಗರ್ಭಿಣಿಯ ಹೊಟ್ಟೆಗೆ ತ್ರಿಶೂಲದಿಂದ ಚುಚ್ಚಿ ಭ್ರೂಣ ಹೊರಗೆ ತೆಗೆದು ಉರಿವ ಜ್ವಾಲೆಗೆ ಎಸೆದಾಗ ತೆಪ್ಪಗಿದ್ದ ಅವರು ಈಗ ಆತ್ಮಾವಲೋಕನದ ಕರೆ ಕೊಡುವಾಗ ಹೇಸಿಗೆಯಾಗುತ್ತದೆ. ಆಗಿನ ದಿನಗಳ ನೆನಪು ನನ್ನಲ್ಲಿ ಇನ್ನೂ ಕಹಿಯಾಗಿಯೇ ಉಳಿದಿದೆ. ಗುಜರಾತ್ ಪೊಲೀಸರು ಬೆಪ್ಪುತಕ್ಕಡಿಗಳಂತೆ ಕುಳಿತಾಗ ಅಂದಿನ ಪ್ರಧಾನಿ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಅವರನ್ನು ಸೇನಾಪಡೆಗಳೊಂದಿಗೆ ಗುಜರಾತ್‌ಗೆ ಕಳಿಸಿಕೊಟ್ಟು ಉದ್ರಿಕ್ತ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕಾಯಿತು. ಸ್ವತಃ ವಾಜಪೇಯಿ ಗುಜರಾತ್‌ಗೆ ಧಾವಿಸಿ ಸಂತ್ರಸ್ತರ ಶಿಬಿರದಲ್ಲಿ ಪತ್ರಕರ್ತರ ಎದುರಿಗೇ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಸಲಹೆ ನೀಡಿದರು.

ಎಂಬತ್ತರ ದಶಕದಿಂದ ಈ ದೇಶದಲ್ಲಿ ನಡೆದ ಬಹುತೇಕ ಗಲಭೆ, ಹಿಂಸಾಚಾರಗಳಿಗೆ ಈ ಕೋಮುವಾದಿ ಶಕ್ತಿಗಳು ಕಾರಣ. ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯ ವಿರುದ್ಧ ನಡೆದ ಗಲಭೆ, ಹಿಂಸಾಚಾರ, ಅಯೋಧ್ಯೆಯ ಮಂದಿರದ ಹೆಸರಿನಲ್ಲಿ ಗುಜರಾತಿನ ಸೋಮನಾಥದಿಂದ ಎಲ್.ಕೆ.ಅಡ್ವಾಣಿ ಹೊರಟ ರಥಯಾತ್ರೆ ನಂತರ ನಡೆದ ರಕ್ತಪಾತ, ಹಿಂಸಾಚಾರ; ಬಾಬರಿ ಮಸೀದಿ ಕೆಡವಿದ ನಂತರ ನಡೆದ ದೊಂಬಿ, ಹಿಂಸಾಚಾರ ಇವೆಲ್ಲವುಗಳಿಗೆ ಕಾರಣರಾದವರು ಈಗ ಕೇಂದ್ರದ ಅಧಿಕಾರ ಸೂತ್ರ ಹಿಡಿದು ಆತ್ಮಾವಲೋಕನದ ಮಾತಾಡುತ್ತಿದ್ದಾರೆ.

ಈ ಬಾರಿ ಜನಾಂಗ ಪಕ್ಷಪಾತದ ಫ್ಯಾಶಿಸ್ಟ್ ಮಾದರಿಯ ಪೌರತ್ವ ಕಾಯ್ದೆಯ ವಿರುದ್ಧ ಆರಂಭವಾದ ಹೋರಾಟ ಒಂದೆರಡು ದಿನಗಳಲ್ಲಿ ಮುಗಿಯುವ ಹೋರಾಟವಲ್ಲ. ಇದು ದೇಶದ ಎರಡನೇ ಸ್ವಾತಂತ್ರ್ಯ ಸಮರ. 1947ರಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ದೇಶದಿಂದ ತೊಲಗಿಸಿದಂತೆ ಈ ಬಾರಿ ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಸಂಘರ್ಷ ಆರಂಭವಾಗಿದೆ. ಇದು ಯಾವುದೇ ಪಕ್ಷದ, ಗುಂಪಿನ ಹೋರಾಟವಲ್ಲ. ಇಡೀ ದೇಶದ ಜನ ಜಾತಿ, ಧರ್ಮ, ಭಾಷೆ ಹೀಗೆ ಎಲ್ಲ ಭೇದ ಮರೆತು ಹೋರಾಟಕ್ಕೆ ಇಳಿದಿ ದ್ದಾರೆ. ಬಹುತೇಕ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಯುವಕರು, ಕಲಾವಿದರು, ಸಾಹಿತಿಗಳು ಎಲ್ಲರೂ ಸಂಘರ್ಷದ ರಣರಂಗಕ್ಕೆ ಧುಮುಕಿದ್ದಾರೆ. ಅಂತಲೆ ಮೋದಿ ಮತ್ತು ಬಿಜೆಪಿ ನಾಯಕರು ಯುವಕರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಇದು ಅವರ ಮೂರ್ಖತನ. ಇಂದಿನ ವಿದ್ಯಾರ್ಥಿಗಳು, ಯುವಕರು ಸಾಕಷ್ಟು ಓದಿಕೊಂಡಿದ್ದಾರೆ, ಅವರಿಗೆ ಈ ಕರಾಳ ಕಾನೂನಿನ ಆಳ ಅಗಲಗಳ ಬಗ್ಗೆ ಗೊತ್ತಿದೆ.

ದೇಶದಿಂದ ಮನುವಾದಿ, ಮನಿವಾದಿ ಫ್ಯಾಶಿಸ್ಟರನ್ನು ತೊಲಗಿಸುವ ಈ ಹೋರಾಟ ಸೋಲುವ ಹೋರಾಟವಲ್ಲ.ಇದರಲ್ಲಿ ದಣಿದವರಿಲ್ಲ. ಸುಸ್ತಾದವರಿಲ್ಲ, ಮನವಿ ಕೊಡುವ ರಾಜೀಕೋರರಿಲ್ಲ. ಇದರಲ್ಲಿ ಇರುವುದು ಬಿಸಿ ನೆತ್ತರಿನ ವಿದ್ಯಾವಂತ ತರುಣರು. ಎಲ್ಲಕ್ಕಿಂತ ಹೆಮ್ಮೆ ಅಂದರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ಅಂತಲೆ ಈ ಹೋರಾಟ ಸೋಲುವ ಹೋರಾಟವಲ್ಲ. ಇದು ದ್ವಿತೀಯ ಸ್ವಾತಂತ್ರ್ಯ ಸಮರವೆಂದರೆ ಅತಿಶಯೋಕ್ತಿಯಲ್ಲ.

ಈ ನವ ಸ್ವಾತಂತ್ರ್ಯ ಸಮರದಲ್ಲಿ ಒಂದೆಡೆ ರಾಷ್ಟ್ರ ಧ್ವಜ ಮತ್ತು ಗಾಂಧೀಜಿ ಮತ್ತು ಅಂಬೇಡ್ಕರ್ ಫೋಟೊ ಕೈಯಲ್ಲಿ ಹಿಡಿದ ಸಹಸ್ರ ಸಹಸ್ರ ಯುವಕರು, ಯುವತಿಯರು, ಹಿಂದೂ, ಮುಸ್ಲಿಮ್, ಕ್ರೈಸ್ತರು ಹೀಗೆ ಎಲ್ಲ ಭಾರತೀಯರು ಕರಾಳ ಪೌರತ್ವ ಕಾಯ್ದೆ ವಿರುದ್ಧ ಒಂದಾಗಿ ನಿಂತಿದ್ದಾರೆ. ಈ ಕಾನೂನಿನ ಪರವಾಗಿ ಕೇಸರಿ ಬಾವುಟ ಹಿಡಿದು ಕೆಲವರು ಮುಖಾಮುಖಿಯಾಗಿದ್ದಾರೆ. ಇದು ತ್ರಿವರ್ಣ ರಾಷ್ಟ್ರ ಧ್ವಜ ಹಾಗೂ ಏಕವರ್ಣ ಕೇಸರಿ ಧ್ವಜಗಳ ಮುಖಾಮುಖಿ ಎಂದರೆ ತಪ್ಪಲ್ಲ.

ಈ ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷದಲ್ಲಿ ಫ್ಯಾಶಿಸ್ಟ್ ಪ್ರಭುತ್ವ ಪೊಲೀಸರನ್ನು, ಅರೆಸೇನಾಪಡೆಗಳನ್ನು ಬಿಟ್ಟು ಶಾಲೆ ಕಾಲೇಜುಗಳ ಮಕ್ಕಳ ಮೇಲೆ ದಾಳಿ ಮಾಡಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮನೆಗೆ ನುಗ್ಗಿದ ಪೊಲೀಸರು ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಥಳಿಸುತ್ತಿದ್ದಾರೆ. ಈ ಹೇಯ ದೌರ್ಜನ್ಯ, ಗುಂಡಿನ ಆರ್ಭಟ; ನೊಂದವರ, ಏಟು ತಿಂದವರ ಆಕ್ರಂದನ, ಆಕ್ರೋಶಗಳ ನಡುವೆ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇವೆ.

ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಶಾಂತಿಯುತ ಅಸಹಕಾರ ಚಳವಳಿಯ ಇತಿಹಾಸ ಈ ದೇಶಕ್ಕೆ ಇದೆ. ಈಗ ಈ ಕರಾಳ ಪೌರತ್ವ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ರಾಜ್ಯಗಳು ಅಸಹಕಾರ ಆಂದೋಲನ ನಡೆಸಬೇಕು. ಸಾರ್ವಜನಿಕರೂ ಮಾಹಿತಿ ಕೊಡುವುದಿಲ್ಲ ಎಂದು ಶಾಂತಿಯುತ ಪ್ರತಿರೋಧ ವ್ಯಕ್ತಪಡಿಸಬೇಕು.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News