ಝಳಪಿಸಿದ ಕಾವ್ಯ ಖಡ್ಗ

Update: 2020-01-12 09:37 GMT

ಅನ್ಯದನಿಗಳಿಗೆ ಕಿವುಡಾದ ಭಾವಶೂನ್ಯ ದಣಿಗಳಿಗೆ ತಾಕುವುದೇ ಪ್ರತಿಭಟನಾ ಕಾವ್ಯದ ಉದ್ದೇಶವಾಗಿದೆ ಎನ್ನುತ್ತಾರೆ ಈ ಯುವ ಬಂಡಾಯ ಕವಿಗಳು. ಅನ್ಯಾಯ, ಶೋಷಣೆಗಳ ವಿರುದ್ಧ ‘ಕಾವ್ಯ ಪ್ರತಿಭಟನೆ’ ಸಂವೇದನಾಶೀಲ ಕವಿಗಳಿಗೆ, ಸಾಹಿತಿಗಳಿಗೆ ಅನಿವಾರ್ಯ ಅಭಿವ್ಯಕ್ತಿಯಾಗಿರುವಂತೆಯೇ, ಸಂವೇದನಾರಹಿತವಾದ ವ್ಯವಸ್ಥೆಯ ಜಡ್ಡುಗಟ್ಟಿದ ಮನಗಳಿಗೆ ಕಾಲಕಾಲಕ್ಕೆ ಇಂಥ ಕಾವ್ಯ ಚಿಕಿತ್ಸೆಯೂ ಅಗತ್ಯವಾದ ಅನಿವಾರ್ಯವೆನ್ನಿಸುತ್ತದೆ.


ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಸರಕಾರದ ದಮನಕಾರಿ ಕ್ರಮಗಳು ಹೆಚ್ಚಾದಂತೆ ಪ್ರತಿಭಟನೆ-ವಿರೋಧಗಳ ದನಿಯೂ ಪುಟಿವ ಚೆಂಡಿನಂತೆ ಜೋರಾಗುತ್ತಲೇ ಹೋಗುತ್ತವೆ.ಇದಕ್ಕೆ ಜಗತ್ತಿನ ಇತಿಹಾಸದಲ್ಲಿ ಹೇರಳವಾಗಿ ಉದಾಹರಣೆಗಳು ಸಿಗುತ್ತವೆ. ಈಗ ನಮ್ಮ ದೇಶದಲ್ಲಿ ಪೌರತ್ವ ತಿದ್ದುಪಡಿ ಶಾಸನದ ವಿರುದ್ಧ ಎದ್ದಿರುವ ಪ್ರತಿಭಟನೆಯ ದನಿಯನ್ನು ಬಗ್ಗುಬಡಿಯಲು ಸರಕಾರ ತನ್ನೆಲ್ಲ ಶಕ್ತಿಯುಕ್ತಿಯನ್ನೂ ಬಳಸುತ್ತಿರುವುದು ಸರಿಯಷ್ಟೆ. ಸಾಮ,ದಾನ,ಭೇದ ಮಾರ್ಗಗಳು ವಿಫಲವಾದಾಗ ತನ್ನ ಪೊಲೀಸ್ ಬಲವನ್ನೂ ಹೊರಗಿನ ಧೂರ್ತಶಕ್ತಿಗಳನ್ನು ಈಗ ಪ್ರತಿಭಟನಾಕಾರರ ವಿರುದ್ಧ ‘ಛೂ’ ಬಿಡುತ್ತಿರುವುದು ಜಾಮಿಯಾ ಮಿಲ್ಲಿಯಾ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಗಳ ಪ್ರತಿಭಟನಾರ್ಥಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯಿಂದ ಖಚಿತವಾಗಿದೆ.ಆದಾಗ್ಯೂ ಸರಕಾರದ ದೈತ್ಯ ಶಕ್ತಿಯಿಂದ ಪ್ರತಿಭಟನಾ ದನಿಯನ್ನು ಉಡುಗಿಸುವುದು ಸಾಧ್ಯವಾಗಿಲ್ಲ. ಯುವ ವಿದ್ಯಾರ್ಥಿಗಳ ಪ್ರತಿಭಟನೆ ವಿವಿಧ ರೀತಿರಿವಾಜುಗಳಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ. ವಿದ್ಯಾರ್ಥಿ ಪ್ರತಿಭೆಗಳು ಕಲೆ, ಸಾಹಿತ್ಯ, ಸಂಗೀತ ಮೊದಲಾದ ಮಾಧ್ಯಮಗಳ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ವರದಿಗಳು ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಿಂದ ಬಿತ್ತರವಾಗುತ್ತಿದೆ. ಕಾವ್ಯ,ಘೋಷಣೆ, ಹಾಡುಗಾರಿಕೆ, ರಂಗೋಲಿ, ಭಿತ್ತಿಚಿತ್ರ ಮೊದಲಾದವುಗಳಲ್ಲಿ ಪೌರತ್ವ ತಿದ್ದುಪಡಿ ಶಾಸನದ ವಿರುದ್ಧ ಪ್ರತಿಭಟನೆ ತೀವ್ರವಾಗಿ ಹೊರಹೊಮ್ಮುತ್ತಿದೆ.

ಖಡ್ಗಕ್ಕಿಂತ ಲೇಖನಿ ಹೆಚ್ಚು ಮೊನಚಾದುದು ಎಂಬುದು ಹಳೆಯ ಉಕ್ತಿ. ಖಡ್ಗವಾಗಲಿ ಕಾವ್ಯ ಎನ್ನುವುದು ಇಂದಿನ ಬಂಡಾಯ ಸಾಹಿತ್ಯದ ಪ್ರಣಾಳಿಕೆ. ಪೌರತ್ವ ತಿದ್ದುಪಡಿ ಶಾಸನದ ವಿರುದ್ಧ ಪ್ರತಿಭಟಿಸಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸಂಸತ್ ಚಲೋ ಯಾತ್ರೆ ಕೈಗೊಂಡು ದಿಲ್ಲಿಯತ್ತ ಹೊರಟಾಗ ವಿದ್ಯಾರ್ಥಿ ಕಾವ್ಯ ಪ್ರತಿಭೆ ಗರಿಗೆದರಿತ್ತು. ‘ನಾನು ಇದನ್ನು ತಿರಸ್ಕರಿಸುತ್ತೇನೆ’ (ಮೈನೆ ಇನ್ಕಾರ್ ಕರ್ತಾಹೂಂ) ಆಮಿರ್ ಅಝೀಝ್ ಎಂಬ ವಿದ್ಯಾರ್ಥಿ ಪ್ರತಿಭಟನಾಕಾರನ ಕಾವ್ಯಾತ್ಮಕ ಘೋಷಣೆ. ಆಮಿರ್ ಅಝೀಝ್ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ. ಈಗಾಗಲೇ ‘ಅಚ್ಛೇದಿನ್ ಬ್ಲೂಸ್’(ಒಳ್ಳೆಯ ದಿನಗಳ ಆಘಾತಗಳು), ಪೆಹ್ಲೂಖಾನನ ಪಾಡ್ದನಗಳು ಮೊದಲಾದ ಮೋದಿ ವಿಡಂಬನಾ ಕವಿತೆಗಳಿಂದ ಖ್ಯಾತನಾದ ಯುವ ಕವಿ. ಸರಕಾರದ ದಮನ ನೀತಿಗಳು, ಸುತ್ತಲ ಸಮಾಜದಲ್ಲಿನ ಸಿಟ್ಟು-ಕೋಪ, ಅಸಹನೆ-ಅಸಹಿಷ್ಣುತೆಗಳಿಂದಾಗಿ ತಮ್ಮಲ್ಲಿ ಮೂಡುತ್ತಿರುವ ಪರಕೀಯತೆ, ತಾವು ಅಮುಖ್ಯರು, ಅಲ್ಪರು ಎನ್ನುವ ಭಾವನೆ ತೀವ್ರವಾಗುತ್ತಿರುವ ದಿನಗಳಲ್ಲಿನ ಈ ಕಾವ್ಯಾಭಿವ್ಯಕ್ತಿಯನ್ನು ನೋಡಿ:
‘‘ನನ್ನ ದೇಶದಲ್ಲಿ
ನನಗೆ ಹಕ್ಕುಗಳ ಬದಲು ದಾನಕೊಟ್ಟಂತೆ ಮೂರುಕಾಸು ಭಿಕ್ಷೆ ಹಾಕ್ತಾರೆ. ನಾನು ಅದನ್ನು ಸ್ವೀಕರಿಸುವುದಿಲ್ಲ.’’

ಯುವಕವಿ ಆಮಿರ್ ಅಝೀಝ್‌ರ ಈ ಪ್ರತಿಭಟನಾ ಕವಿತೆ ಬಹುತೇಕ ಪ್ರತಿಭಟನಾ ಸಭೆಗಳಲ್ಲಿ ರಿಂಗಣಗುಣಿಸುತ್ತಿದೆ. ಅಝೀಝ್ ಅವರ ಇನ್ನೊಂದು ಕವಿತೆ ‘ಜಾಮಿಯಾದ ಹುಡುಗಿಯರಿಗೆ’(‘ಜಾಮಿಯಾಕೆ ಲಡಕಿಯಾನ’). ಇದು ಸಹಪಾಠಿ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತಿರುವ ವಿದ್ಯಾರ್ಥಿನಿಯರ ಧೈರ್ಯಸ್ಥೈರ್ಯಗಳನ್ನು ಮೆಚ್ಚಿಕೊಂಡು ಬರೆದಿರುವ ಕವಿತೆ. ಮುಸ್ಲಿಮ್ ಯುವತಿಯರು ಸಹಪಾಠಿ ವಿದ್ಯಾರ್ಥಿಗಳನ್ನು ಪೊಲೀಸರಿಂದ ರಕ್ಷಿಸಲು ಈ ರೀತಿ ಗೋಡೆಕಟ್ಟಿ ನಿಂತಿದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಆಮಿರ್ ಅಝೀಝ್ ಬರೆಯುತ್ತಾರೆ. ‘ಕಾಗದ ತೋರಿಸುವುದಿಲ್ಲ’

-ಇದು ಪ್ರತಿಭಟನಾ ಕವಿತೆಯ ಮತ್ತೊಂದು ಸಾಲು. ನಿಮ್ಮ ಪೂರ್ವಿಕರು ಎಲ್ಲಿಂದ ಬಂದದ್ದು, ಅವರೆಲ್ಲ ಜನ್ಮ ತಳೆದದ್ದು ಎಲ್ಲಿ ಇತ್ಯಾದಿ ಪ್ರಶ್ನೋತ್ತರಗಳಿಗೆ ಆಧಾರವಾಗಿ ಯಾವುದೇ ದಾಖಲೆಯನ್ನು ತೋರಿಸುವುದಿಲ್ಲ ಎನ್ನುವ ಜನಸಂಕಲ್ಪವನ್ನು ಬಿಂಬಿಸುವ ಈ ಸಾಲು ಪ್ರತಿಭಟನಾಕಾರರ ‘ನವ ರಾಷ್ಟ್ರಗೀತೆ’ಯಾಗಿದೆಯಂತೆ. ಈ ಕವಿತೆಯ ಯುವ ಕವಿ ವರುಣ್ ಗ್ರೋವರ್. ತೀವ್ರ ಅಸಹಾಯಕತೆಯ ಅಭಿವ್ಯಕ್ತಿಯಾಗಿ ಹುಟ್ಟಿರುವ ಪ್ರತಿಭಟನಾ ಕವಿತೆಗಳ ಬಗ್ಗೆ ಯುವಕವಿಗಳು ಹೀಗೆ ಹೇಳುತ್ತಾರೆ:

‘‘ನಾನು ಇನ್ನೂ ಸತ್ತಿಲ್ಲ ಎಂದು ಉಸುರುವ ಕಿರುದನಿ ನಮ್ಮೀ ಕಾವ್ಯ. ನಮ್ಮಿಳಗಣ ತೀವ್ರವಾದ ಹತಾಶೆಯನ್ನು ತೋಡಿಕೊಳ್ಳಲು ಈ ಕವಿತೆ ಬರೆದೆ.’’
ಕವಿತೆ, ಹಾಡುಗಳು, ಸಂಗೀತ ಯಾವತ್ತಿಗೂ ವ್ಯವಸ್ಥೆಯ ವಿರುದ್ಧದ ಸಿಡಿಗುಂಡು ಸಾಧನಗಳು. ರಾಹತ್ ಇಂದೂರಿ ಎಂಬ ವಿದ್ಯಾರ್ಥಿ ಕವಿಯ ಈ ಸಾಲುಗಳನ್ನು ಗಮನಿಸಿ:
‘‘ನಮ್ಮೆಲ್ಲರ ರಕ್ತ ಮಣ್ಣಲ್ಲಿ ಬೆರೆತು ಮಣ್ಣಾಗಿ ಹೋಗುವುದು:
ಹಿಂದೂಸ್ಥಾನ
ಯಾರೊಬ್ಬರ ಏಕಸ್ವಾಮ್ಯ ಸೊತ್ತಲ್ಲ.’’

 ಹಠಾತ್ತನೆ ಈ ರೀತಿಯ ಕಾವ್ಯಸ್ಫೋಟ ಸಂಭವಿಸಿರುವುದನ್ನು ನಾವು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಇಲ್ಲಿ ಕಾವ್ಯದ ಮೂಲಕ ತಮ್ಮ ಹತಾಶೆ, ಸಂಕಟಗಳನ್ನು ತೋಡಿಕೊಳ್ಳುತ್ತಿರುವವರೆಲ್ಲರೂ ದಿಕ್ಕುಗಾಣದ ನವತರುಣ-ತರುಣಿಯರು. ಪ್ರೀತಿಯಿರಲಿ, ಯುದ್ಧವಿರಲಿ ಆತಂಕದಿಂದ ಹೃದಯಗಳು ಮಡುಗಟ್ಟಿದಾಗ ಯುವಮನಸ್ಸುಗಳಿಗೆ ಕಾವ್ಯವೊಂದೇ ಸಹಜ ರಹದಾರಿ.
‘ನನ್ನ ದೇಶ ಗೊಂದಲಪುರ’
-ಇದು ಕಾವ್ಯ ಪ್ರತಿಭಟನೆಯ ಇನ್ನೊಂದು ಮಾದರಿ. ಈ ಕವಿತೆ ಒಂದು ಮುಖ್ಯ ಪ್ರಶ್ನೆಯನ್ನು ಕೇಳುತ್ತದೆ:

‘‘ಜಾತ್ಯತೀತ ರಾಷ್ಟ್ರದಲ್ಲಿ ನಾನು ಜಾತ್ಯತೀತನಾಗಿರುವುದಕ್ಕೆ ನೀವು ವಿಷಾದಿಸುವಿರಾ?’’

ಬಾಲಿವುಡ್‌ನ ಗೀತರಚನಾಕಾರ ಪುನೀತ್ ಶರ್ಮಾ ಅವರ ‘ನೀವು ಸರಕಾರವಲ್ಲ’ ಎಂಬ ರಚನೆ ಪೊಲೀಸರ ಕ್ರೌರ್ಯ ಮತ್ತು ಹಿಂಸಾಚಾರದಲ್ಲಿನ ಸರಕಾರದ ಸಹಭಾಗಿತ್ವವನ್ನು ಕಟುವಾಗಿ ಟೀಕಿಸುವ ಗೀತೆ:
‘‘ನಿಮ್ಮ ಮನೆಗಳು ಲಾಠಿ, ಇಟ್ಟಿಗೆ, ಕಲ್ಲುಗುಂಡುಗಳ ಉಗ್ರಾಣವಿದ್ದೀತು
ನಿಮ್ಮ ಕಣ್ಣುಗಳಲ್ಲಿ ಧಗಧಗಿಸುವ ಸೇಡಿನ ಕಿಡಿ ಇದ್ದೀತು
ಆದರೆ ಹಿಂಸಾಚಾರದ ದುಸ್ಸಾಹಸ ಬೇಡ
ಏಕೆಂದರೆ ನೀವು ಸರಕಾರವಲ್ಲ’’
‘‘ಕಾವ್ಯ ನನ್ನ ಪ್ರಣಾಳಿಕೆ. ಭಾವಾವೇಶದ ಪರಾಕಾಷ್ಠೆಯಲ್ಲಿ ಕವಿತೆಗಳು ಕ್ಷಿಪಣಿಗಳಂತೆ ಚಿಮ್ಮುತ್ತವೆ’’ ಎನ್ನುತ್ತಾರೆ ಶರ್ಮಾ.

ಕಾಲಕಾಲಕ್ಕೆ ಹೊಸಹೊಸ ಅರ್ಥಗಳನ್ನು ಸ್ಫುರಿಸುವುದು ಜೀವಂತ ಕಾವ್ಯದ ಶ್ರೇಷ್ಠತೆ ಎನ್ನುವುದು ಕಾವ್ಯವಿಮರ್ಶೆ ಮಾನ್ಯಮಾಡಿರುವ ಸಂಗತಿ. ಎಂದೇ ಇಂದಿಗೂ ನಮಗೆ ಪ್ರಾಚೀನ ಕವಿಗಳು, ವಚನಕಾರರು ಪ್ರಸ್ತುತರಾಗುತ್ತಾರೆ. ಸಾಹಿತಿ, ಗೀತರಚನಾಕಾರ ಹುಸೈನ್ ಹೈದರಿಯವರ ‘ಹಿಂದೂಸ್ಥಾನಿ ಮುಸಲ್ಮಾನ್’ ಅಂತಹ ಒಂದು ಕವಿತೆ. ಹಲವಾರು ವರ್ಷಗಳ ಹಿಂದೆ ಬರೆದು, ಪ್ರಕಟಗೊಂಡ ಈ ಕವಿತೆಯನ್ನು ಇತ್ತೀಚೆಗೆ ಮುಂಬೈಯ ಆಝಾದ್ ಮೈದಾನದಲ್ಲಿ ಹಾಡಿದಾಗ ಜನತೆ ಅದರಲ್ಲಿ ಸದ್ಯದ ಜರೂರಿನ ಅರ್ಥವೊಂದನ್ನು ಗ್ರಹಿಸಿತು. ಹಲವು ವರ್ಷಗಳ ಹಿಂದೆ ಕವಿ ಅದನ್ನು ಬರೆದ ಸಂದರ್ಭದಲ್ಲಿ ಅದು ಕವಿ ಮುಸ್ಲಿಮನಾಗಿ ತನ್ನ ಅಸ್ಮಿತೆಯನ್ನು ಬಿಂಬಿಸುವ ಕವನವಾಗಿ ರಸಿಕರ ಗಮನ ಸೆಳೆದಿತ್ತು.ಆನಂತರದ ವರ್ಷಗಳಲ್ಲಿ ಕವಿ, ಇಸ್ಲಾಮ್ ಮತ್ತು ಸಮುದಾಯ ಬೇರ್ಪಡಿಸಲಾಗದಂಥ ಒಂದು ಅಖಂಡ ವ್ಯವಸ್ಥೆ ಎಂದು ಪರಿಗಣಿಸಲಾಗದೆಂದು ಹೇಳತೊಡಗಿದರು. ‘ಹಿಂದೂಸ್ಥಾನಿ ಮುಸಲ್ಮಾನ್’ ಇತ್ತೀಚಿನ ವರ್ಷಗಳಲ್ಲಿ ವಿವಿಧತೆಗಳನ್ನು, ಧರ್ಮ ಮತ್ತು ಸಮುದಾಯದೊಳಗಿನ ವ್ಯತ್ಯಾಸಗಳನ್ನು, ಬದಲಾವಣೆಗಳನ್ನು, ಹೇಳದೇ ಬಿಟ್ಟ ಇನ್ನೂ ಅನೇಕ ಸಂಗತಿಗಳನ್ನೂ ಧ್ವನಿಸುತ್ತದೆ ಎಂಬ ಹೊಸ ಅರ್ಥವಿವರಣೆಗಳನ್ನು ಪಡೆದುಕೊಂಡಿದೆ. ಇಂದು ತಮ್ಮೀ ಕವಿತೆ ಪೂರ್ತಿಯಾಗಿ ಹೊಸ ಅರ್ಥವನ್ನೇ ಪಡೆದುಕೊಂಡಿದೆ.ಅದು, ತನ್ನನ್ನು ಅನ್ಯನಂತೆ ಕಾಣುವ, ತನ್ನ ಭಾರತೀಯ ಅಸ್ಮಿತೆಯನ್ನು ಆಕ್ರಮಿಸುವುದರ ವಿರುದ್ಧ ದನಿಎತ್ತುವ ಕವಿತೆಯಾಗಿ ಇವತ್ತಿನ ಸಂದರ್ಭದಲ್ಲಿ ಹೊಸದೊಂದು ಅರ್ಥವನ್ನೇ ಸ್ಫುರಿಸುತ್ತಿದೆ ಎನ್ನುತ್ತಾರೆ ಕವಿ ಹೈದರಿ.

ಇವತ್ತಿಗೆ ಪ್ರಸ್ತುತವಾಗುವಂಥ ಹೊಸ ಅರ್ಥವನ್ನು ಸ್ಫುರಿಸುವುದೆಂಬ ಕಾರಣದಿದಾಗಿ ವಿವಾದಕ್ಕೆಡೆ ಮಾಡಿಕೊಟ್ಟಿರುವ ಇನ್ನೊಂದು ಕವಿತೆ ಪಾಕಿಸ್ತಾನ ಕವಿ ಫೈಝ್ ಅಹಮದ್ ಫೈಝ್ ಅವರ ‘ಹಮ್ ದೇಖೇಂಗೆ’ ಕವಿತೆ. ಡಿಸೆಂಬರ್ 17ರಂದು ಕಾನ್ಪುರದ ಐಐಟಿ ವಿದ್ಯಾರ್ಥಿಗಳು ನಡೆಸಿದ ಪೌರತ್ವ ತಿದ್ದುಪಡಿ ಶಾಸನ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಈ ಕವಿತೆಯನ್ನು ಹಾಡಲಾಯಿತು. ಕೂಡಲೇ ಈ ಕವಿತೆ ರಾಷ್ಟ್ರವಿರೋಧಿಯಾದದ್ದು, ಹಿಂದೂ ವಿರೋಧಿಯಾದದ್ದು ಎನ್ನುವ ಕೂಗೆದ್ದು ದೂರುಗಳ ಸುರಿಮಳೆಯಾಯಿತು. ಕಾನ್ಪುರದ ಐಐಟಿ ಈ ದೂರುಗಳ ಬಗ್ಗೆ ವಿಚಾರಣೆ ನಡೆಸಲು ತನಿಖಾ ಸಮಿತಿಯೊಂದನ್ನೂ ರಚಿಸಿದೆ. ಹೀಗೆ ದೂರುಕೊಟ್ಟಿರುವವರು ಸಾಹಿತ್ಯ ಜ್ಞಾನ, ಕಾವ್ಯಾಲಂಕಾರ, ಕವಿ ಫೈಝ್ ಅವರ ರಾಜಕೀಯ ಒಲವು ನಿಲುವುಗಳು ಇದಾವುದನ್ನೂ ತಿಳಿಯದ ಅಜ್ಞಾನಿಗಳು. ಫೈಝ್ ಅಹಮದ್ ಫೈಝ್(1911-1984) ಆ ಕಾಲದ ಶ್ರೇಷ್ಠ ಉರ್ದು ಕವಿ. ಅವನು ಪಾಕಿಸ್ತಾನಿ ಎಂಬುದು ಕೇವಲ ಜನ್ಮಜಾತ ಆಕಸ್ಮಿಕವಷ್ಟೆ. ಅವನ ಜನ್ಮಸ್ಥಳ ಲಾಹೋರ್ ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಯಿತು. ಪ್ರಗತಿಶೀಲ ಸಾಹಿತಿಗಳು ಮತ್ತು ಚಿಂತಕರ ಕೇಂದ್ರವಾಗಿದ್ದ ಲಾಹೋರ್‌ನಲ್ಲೇ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘ(1936) ಹುಟ್ಟಿದ್ದು. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಈ ಸಂಘದ ಧ್ಯೇಯವಾಗಿತ್ತು. ಈ ಸಂಘದ ಸದಸ್ಯರಾಗಿದ್ದ ಬಹುತೇಕ ಮಂದಿ ಕವಿಗಳು ಸಾಹಿತಿಗಳು ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಫೈಝ್ ಅಹಮದ್ ಫೈಝ್ ‘ಸುಭೇ ಆಝಾದಿ’(ಸ್ವತಂತ್ರ್ಯೋದಯ) ಭಾರತ ವಿಭಜನೆಯ ಯಾತನೆಯನ್ನು ಸಮರ್ಥವಾಗಿ ಧ್ವನಿಸುವ ಕವಿತೆ. ‘‘ಕರಾಳ ರಾತ್ರಿಯ ಕಳಂಕಿತ ಈ ಬೆಳಗು ನಿಶ್ಚಯವಾಗಿಯೂ ನಾವು ಕಾತರದಿಂದ ಕಾಯುತ್ತಿದ್ದ ನವ ಅರುಣೋದಯವಲ್ಲ’’

ತಮ್ಮ ಕ್ರಾಂತಿಕಾರಿ ವಿಚಾರಧಾರೆಯಿಂದಾಗಿ ಸರಕಾರದ ಅವಕೃಪೆಗೆ ಪಾತ್ರರಾದ ಫೈಝ್ ಜೀವಿತದ ಬಹುಭಾಗವನ್ನು ಸೆರೆಮನೆಯಲ್ಲಿ ಕಳೆಯ ಬೇಕಾಯಿತು. ‘ಜಿಂದಾನ್ ನಾಮ’(ಸೆರೆವಾಸದ ಚಿಂತನೆಗಳು) ಅವರು ಜೈಲಿನಲ್ಲಿದ್ದಾಗ ಬರೆದ ಕವಿತೆಗಳ ಸಂಕಲನ. ಝಿಯಾವುಲ್ ಹಕ್ ಅವರ ಆಡಳಿತದ ಕಿರುಕುಳ ಸಹಿಸಲಾಗದೆ ಫೈಝ್ ಅವರು 1979ರಿಂದ 1982ರವರೆಗೆ ತಲೆಮರೆಸಿಕೊಂಡು ತಾಯ್ನಾಡಿನಿಂದ ದೂರವಾಗಿದ್ದರು. ‘ಹಮ್ ದೇಖೇಂಗೆ’ ಝಿಯಾವುಲ್ ಹಕ್ ಅವರ ಸರ್ವಾಧಿಕಾರ ಮತ್ತು ಮೂಲಭೂತವಾದಿ ಆಡಳಿತದ ವಿರುದ್ಧ ಪ್ರತಿಭಟಿಸಲು ಕರೆ ನೀಡುವ ರಣಕಹಳೆಯ ಕವನ. ಮುಸ್ಲಿಮ್ ಬಾಂಧವರನ್ನುದ್ದೇಶಿಸಿ ಬರೆದಿರುವ ಈ ಕವನದಲ್ಲಿ ಇಸ್ಲಾಮಿಕ್ ರೂಪಕಗಳ ಮೂಲಕವೇ ಸರ್ವಾಧಿಕಾರವನ್ನು ಫೈಝ್ ಖಂಡಿಸಿದ್ದಾರೆ. ದೇವರ ಆಖೈರು ತೀರ್ಪಿನ ದಿನವೆಂದು ನಂಬಲಾಗಿರುವ ‘ತೀರ್ಪಿನ ದಿನ’(ದಿ ಜಡ್ಜ್ ಮೆಂಟ್ ಡೇ-ಜಗತ್ತಿನ ಪ್ರಳಯ ದಿನ)ದ ಪರಿಕಲ್ಪನೆಯನ್ನು ಈ ಕವನದಲ್ಲಿ ಅನ್ಯೋಕ್ತಿಯಾಗಿ ಬಳಸಿರುವ ಫೈಝ್, ಆ ದಿನದಂದು ಪ್ರಜಾಪ್ರಭುತ್ವ ಮತ್ತು ಸಮಾನತೆಯನ್ನು ಕಾಪಾಡುವ ಸಲುವಾಗಿ ಸುಳ್ಳು ದೇವರುಗಳೆಲ್ಲ(ಸರ್ವಾಧಿಕಾರಿಗಳು) ಪದಚ್ಯುತಿ ಹೊಂದಿ ಸಿಂಹಾಸನಗಳು, ರಾಜಮುಕುಟಗಳು ಧೂಳೀಪಟವಾಗುವುದೆಂದು ಬಲು ಮಾರ್ಮಿಕವಾಗಿ ಘೋಷಿಸಿದ್ದಾರೆಂದು ಕಾವ್ಯ ರಸಿಕರು ಮೆಚ್ಚಿಕೊಂಡಿದ್ದಾರೆ. ನಿರಂಕುಶ ಪ್ರಭುತ್ವ ಮತ್ತು ಮೂಲಭೂತವಾದವನ್ನು ಖಂಡಿಸುವ ಈ ಕವಿತೆ ಹೇಗೆ ಹಿಂದೂವಿರೋಧಿಯಾದೀತು? ರಾಷ್ಟ್ರ ವಿರೋಧಿಯಾದೀತು? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಂಡ ಎಂಬಂತಿದೆ ವಿದ್ಯಾರ್ಥಿಗಳು ಈ ಕವಿತೆ ಹಾಡಿರುವುದಕ್ಕೆ ಸರಕಾರದ ಪರ ಇರುವವರು ಎತ್ತಿರುವ ತಕರಾರುಗಳು.

ಕಾವ್ಯಕ್ಕೆ ಮುಪ್ಪಿಲ್ಲ ಎನ್ನುವ ಪ್ರತಿಭಟನಾಕಾರರ ವಾದದಲ್ಲಿ ಹುರುಳಿಲ್ಲದೆ ಇಲ್ಲ. ಕಾಂಗ್ರೆಸ್ ಆಡಳಿತ ಕಾಲದಲ್ಲಿ ತಾವು ರಚಿಸಿದ ಕೆಲವು ಗೀತೆಗಳು ಇಂದಿಗೂ ಪ್ರಸ್ತುತ ಎನ್ನುವ ಪುನೀತ್ ಶರ್ಮಾ ‘ಮೇರೆ ಅಪ್ನಾ’ ಚಿತ್ರದಲ್ಲಿನ ಗುಲ್ಝಾರ್ ಅವರ ‘ಹಾಲ್ಚಾಲ್ ಠೀಕರಠಾಕ್ ಹೈ’ ಗೀತೆ 1971ರಷ್ಟೇ ಅಲ್ಲದೆ 2020ರಲ್ಲೂ ಪ್ರಸ್ತುತ ಎನ್ನುತ್ತಾರೆ. ಕಾವ್ಯ ಆದಿಯಿಂದಲೂ ಪ್ರತಿಭಟನೆಯ ಅವಿಭಾಜ್ಯ ಅಂಗವಾಗಿದೆ. ಕಾವ್ಯದ ಪ್ರತಿಭಟನೆ ಕೇವಲ ಸರಕಾರದ ವಿರುದ್ಧ ಮಾತ್ರವಲ್ಲ. ಮನೆ, ಕುಟುಂಬ, ವೃತ್ತಿ-ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲೂ ಕಾವ್ಯದ ಪ್ರತಿಭಟನೆಯ ಸೊಲ್ಲು ಕೇಳಿಬಂದಿದೆ. ಅನ್ಯದನಿಗಳಿಗೆ ಕಿವುಡಾದ ಭಾವಶೂನ್ಯ ದಣಿಗಳಿಗೆ ತಾಕುವುದೇ ಪ್ರತಿಭಟನಾ ಕಾವ್ಯದ ಉದ್ದೇಶವಾಗಿದೆ ಎನ್ನುತ್ತಾರೆ ಈ ಯುವ ಬಂಡಾಯ ಕವಿಗಳು. ಅನ್ಯಾಯ, ಶೋಷಣೆಗಳ ವಿರುದ್ಧ ‘ಕಾವ್ಯ ಪ್ರತಿಭಟನೆ’ ಸಂವೇದನಾಶೀಲ ಕವಿಗಳಿಗೆ, ಸಾಹಿತಿಗಳಿಗೆ ಅನಿವಾರ್ಯ ಅಭಿವ್ಯಕ್ತಿಯಾಗಿರುವಂತೆಯೇ, ಸಂವೇದನಾರಹಿತವಾದ ವ್ಯವಸ್ಥೆಯ ಜಡ್ಡುಗಟ್ಟಿದ ಮನಗಳಿಗೆ ಕಾಲಕಾಲಕ್ಕೆ ಇಂಥ ಕಾವ್ಯ ಚಿಕಿತ್ಸೆಯೂ ಅಗತ್ಯವಾದ ಅನಿವಾರ್ಯವೆನ್ನಿಸುತ್ತದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75