ರಾಜಧಾನಿಯಲ್ಲಿ ಪೊಲೀಸ್ ಅತಿರೇಕದ ಪ್ರಶ್ನೆ
ದಿಲ್ಲಿಯಲ್ಲಿ ಅಸೆಂಬ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧರಾಗಿರುವಂತೆಯೇ ಅವುಗಳು ಒಪ್ಪಿಕೊಳ್ಳಬೇಕಾದ ಒಂದು ಮುಖ್ಯ ವಿಷಯವೆಂದರೆ ದಿಲ್ಲಿ ನಗರದಲ್ಲಿರುವ ಹಿಂಸೆ ಮತ್ತು ಆ ಹಿಂಸೆಗೆ ಸಂಬಂಧಿಸಿದಂತೆ ಅದರಲ್ಲಿ ಪೊಲೀಸರ ಪಾತ್ರ. ದಿಲ್ಲಿಯ ಜನ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಮುಂದೆ ಇದು ಸ್ವಲ್ಪ ವಿಚಿತ್ರವಾದ ಸಲಹೆ ಅನ್ನಿಸಬಹುದು. ಆದರೆ ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಈ ಸಲಹೆಯನ್ನು ಸಮರ್ಥಿಸುತ್ತವೆ.
ಡಿಸೆಂಬರ್ ತಿಂಗಳಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸಿದರು. ಪೊಲೀಸರು ಈ ಪ್ರತಿಭಟನೆಗೆ ಅಸಾಮಾನ್ಯ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಅವರು ವಿಶ್ವವಿದ್ಯಾನಿಲಯದ ಗ್ರಂಥ ಭಂಡಾರದೊಳಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾ ಮುಗ್ಗಾ ಥಳಿಸಿದರೆಂದು ಪ್ರತ್ಯಕ್ಷದರ್ಶಿಗಳು ನೀಡಿರುವ ವಿವರಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಆ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಲೂಟಿ ಕೂಡ ವಿಶ್ವವಿದ್ಯಾನಿಲಯವೊಂದರ ಸದಸ್ಯರು ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುವಾಗ ಅವರ ವಿರುದ್ಧ ಪೊಲೀಸರು ನಡೆಸಿದ ಬೇಕಾಬಿಟ್ಟಿ ಹಿಂಸೆಯನ್ನು ಸಮರ್ಥಿಸಲಾಗದು. ಇದಾಗಿ ಮೂರು ವಾರಗಳೊಳಗಾಗಿ ಪೊಲೀಸರಿಂದಲ್ಲವಾದರೂ ವಿದ್ಯಾರ್ಥಿಗಳ ವಿರುದ್ಧ ಇನ್ನೊಂದು ಹಿಂಸಾ ಕೃತ್ಯ ನಡೆಯಿತು. ಮುಸುಕುಧಾರಿ ಗೂಂಡಾಗಳು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಗುರಿ ಮಾಡಿ ದಾಳಿ ನಡೆಸಿದರು. ಈ ಎರಡೂ ಘಟನೆಗಳಲ್ಲಿ ನಡೆದ ದಾಳಿಗಳ ಮಾದರಿಯನ್ನು ಗಮನಿಸಿದಾಗ ಆ ದಾಳಿಗಳನ್ನು ನಡೆಸಿದವರು ಜೆಎನ್‌ಯುನ ಎಡಪಂಥೀಯ ರಾಜಕಾರಣವನ್ನು ವಿರೋಧಿಸುವ ಬಲಪಂಥೀಯ ಶಕ್ತಿಗಳು ಎನ್ನುವುದು ಸ್ಪಷ್ಟವಾಗಿ ಗೋಚರಿಸಿತು.
ದೊಣ್ಣೆಗಳನ್ನು ಹಿಡಿದ ಒಂದು ಗುಂಪು ಅನೇಕ ಗಂಟೆಗಳ ಕಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ದೌರ್ಜನ್ಯ ನಡೆಸಿದಾಗ ದಿಲ್ಲಿ ಪೊಲೀಸರು ಕ್ಯಾಂಪಸ್‌ನ ಹೊರಗೆ ಗೇಟುಗಳ ಪಕ್ಕದಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ಹೇಳಲಾಗಿದೆ. ವಿಶ್ವವಿದ್ಯಾನಿಲಯದ ವ್ಯಾಪಕವಾದ ಭದ್ರತಾ ವ್ಯವಸ್ಥೆ ಹಿಂಸೆಯನ್ನು ಹತ್ತಿಕ್ಕಲು ಅಸಮರ್ಥವಾಗಿದ್ದಲ್ಲಿ ಆಗ ವಿವಿಯ ಸಂಬಂಧಿತ ವರಿಷ್ಠರು ಪೊಲೀಸರನ್ನು ಕರೆಸಬೇಕಾಗಿತ್ತು. ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ವರ್ಗದ ಮೇಲೆ ನಡೆದ ದಾಳಿಯಲ್ಲಿ ಪೊಲೀಸರು ಕೂಡ ಶಾಮೀಲಾಗಿದ್ದರು ಎಂಬ ಆರೋಪವಿದೆ. ಭಾರತದಲ್ಲಿ ಪೊಲೀಸರು ಪಕ್ಷಪಾತದ ವರ್ತನೆ ತೋರುವುದು ಕೇವಲ ದಿಲ್ಲಿ ಪೊಲೀಸರಿಗೆ ಸೀಮಿತವಾಗಿಲ್ಲ. 1984ರಲ್ಲಿ ದಿಲ್ಲಿಯಲ್ಲಿ ಸಿಖ್ಖರ ಮೇಲೆ ಗುಂಪುಗಳು ದಾಳಿ ನಡೆಸಿದಾಗ ಹಾಗೂ 2002ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ಧ ದಾಳಿಗಳು ನಡೆದಾಗ ಪೊಲೀಸರು ಹಿಂಸೆಯಲ್ಲಿ ಸಹ ಅಪರಾಧಿಗಳಾಗಿದ್ದರು ಎನ್ನುವ ಆಪಾದನೆ ಇದೆ. ಆದರೆ ಸಿಎಎಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಅವರು ಕಾನೂನನ್ನು ತಮ್ಮ ಕೈಗೇ ಎತ್ತಿಕೊಂಡಿರಬಹುದು. ಹೀಗೆ, ಅಹಮದಾಬಾದ್‌ನ ಐಐಎಂನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಮ್ಮ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಕೂಡದೆಂದು ಅವರ ಮೇಲೆ ಒತ್ತಡ ಹಾಕುವುದರಿಂದ ಆರಂಭಿಸಿ, ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದವರನ್ನೂ ಬಿಡದೆ ಆಸ್ಪತ್ರೆಗೂ ನುಗ್ಗುವ ವರೆಗೂ ಎಲ್ಲವೂ ಕೂಡ ಸರಕಾರದ ಆಡಳಿತವನ್ನು ವಿರೋಧಿಸುವವರ ವಿರುದ್ಧ ಪೊಲೀಸರನ್ನು ಬಳಸಿಕೊಳ್ಳುವ ಸರಕಾರ ಪೂರ್ವ ನಿರ್ಧಾರಿತ ಕ್ರಮವನ್ನು ಸೂಚಿಸುತ್ತದೆ.
ಅದೇನಿದ್ದರೂ ಪೊಲೀಸರ ಪಾತ್ರ ಅತ್ಯಂತ ಹೆಚ್ಚು ಢಾಳಾಗಿ ಕಾಣಿಸುವುದು ಉತ್ತರ ಪ್ರದೇಶದಲ್ಲಿ. ಅಲ್ಲಿ ಪೊಲೀಸ್ ಗೋಲಿಬಾರ್‌ನಿಂದ ಸತ್ತವರ ಸಂಖ್ಯೆ 20ಕ್ಕೂ ಮೀರಿದೆ. ಆದರೆ, ಆ ಬಳಿಕ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆಂದು ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಆಸ್ತಿಪಾಸ್ತಿಗೆ ಹಾನಿಯಾಗಿರಬಹುದು. ಆದರೆ ಹೀಗೆ ಆಪಾದಿತರೆನ್ನಲಾದವರು ತಮಗೂ ಅಲ್ಲಿ ನಡೆದ ಪ್ರತಿಭಟನೆಗಳಿಗೂ ಯಾವುದೇ ಸಂಬಂಧವಿಲ್ಲ, ತಾವು ಅಮಾಯಕರು ಎಂದು ಹೇಳಿದ್ದಾರೆ. ವ್ಯಂಗ್ಯವೆಂದರೆ ಎಫ್‌ಐಆರ್ ದಾಖಲಿಸ ಲಾದವರ ಯಾದಿಯಲ್ಲಿ ಓರ್ವ ನಿವೃತ್ತ ಪೊಲೀಸ್ ಹಾಗೂ ರಿಕ್ಷಾ ಎಳೆಯುವವ ಕೂಡ ಸೇರಿದ್ದಾರೆ. ಗುಜರಾತ್, ಕರ್ನಾಟಕ ಮತ್ತು ಯುಪಿಯಲ್ಲಿ ಬಿಜೆಪಿ ಸರಕಾರಗಳು ಅಧಿಕಾರದಲ್ಲಿವೆ.
ದಿಲ್ಲಿಯಲ್ಲಿ ಪೊಲೀಸರು ದಿಲ್ಲಿ ರಾಜ್ಯ ಸರಕಾರಕ್ಕೆ ಉತ್ತರ ದಾಯಿಗಳಲ್ಲ; ಬದಲಾಗಿ ಈಗ ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಅವರು ಉತ್ತರದಾಯಿಗಳಾಗಿದ್ದಾರೆ. ಆದರೂ ಕೂಡ ಜಾಮಿಯ ಹಾಗೂ ಜೆಎನ್‌ಯು ಕ್ಯಾಂಪಸ್‌ಗಳಲ್ಲಿ ನಡೆದ ಹಿಂಸೆಯ ವಿಚಾರಣೆ ನಡೆಸುವ ಜವಾಬ್ದಾರಿ ಆಮ್ ಆದ್ಮಿ ಪಕ್ಷಕ್ಕೆ ಇದೆ. ಯಾಕೆಂದರೆ ಹಿಂಸೆ ಅದರ ಆಡಳಿತದಲ್ಲಿ ನಡೆದಿದೆ. ಬಿಜೆಪಿ ಮತ್ತು ಎಎಪಿಗಳು ಸದ್ಯದಲ್ಲೇ ನಡೆಯಲಿರುವ ದಿಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಹೋರಾಡುವ ಮುಖ್ಯ ರಾಜಕೀಯ ಪಕ್ಷಗಳಾಗಿವೆ. ದಿಲ್ಲಿಯಲ್ಲಿ ನಡೆಯುವ ಘಟನೆಗಳು ದೇಶಾದ್ಯಂತ ಸಂಚಲನ ಉಂಟು ಮಾಡುತ್ತವೆ. ಆದ್ದರಿಂದ ಅಲ್ಲಿಯ ಚುನಾವಣೆಗಳ ಕಾರ್ಯಸೂಚಿ ಭಾರತದ ಇತರ ಭಾಗಗಳಲ್ಲೂ ಪರಿಣಾಮ ಬೀರದಿರುವುದಿಲ್ಲ. ಒಂದರ ಬಳಿಕ ಒಂದರಂತೆ ಎರಡು ಹಿಂಸಾ ಘಟನೆಗಳಲ್ಲಿ ಪೊಲೀಸರು ವಹಿಸಿರುವ ಪಾತ್ರದ ಕುರಿತು ವಿಶ್ಲೇಷಣೆ ನಡೆಸುವ ಅಗತ್ಯವಿದೆ. ನಾವು ಒಂದು ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ನಮ್ಮನ್ನು ನಾವು ಹೇಗೆ ಆಳಿಸಿಕೊಳ್ಳುತ್ತೇವೆ ಎನ್ನುವುದರ ಒಂದು ಮೌಲ್ಯಮಾಪನಾಗಿದೆ.
(ಲೇಖಕರು ಅಶೋಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೋಝಿಕೋಡ್‌ನ ಐಐಎಂನಲ್ಲಿ ಸೀನಿಯರ್ ಫೆಲೊ ಆಗಿದ್ದಾರೆ.)
ಕೃಪೆ: ದಿ ಹಿಂದೂ