ಆರ್ಥಿಕತೆಯನ್ನು ಕಾಪಾಡದ ಬಜೆಟ್
ಕುಸಿಯುತ್ತಿರುವ ಜನಬಳಕೆ ಮತ್ತು ಬಂಡವಾಳ ಹೂಡಿಕೆ ಹಾಗೂ ತೀವ್ರವಾಗಿ ಕಡಿಮೆಯಾಗುತ್ತಿರುವ ಜಿಡಿಪಿ ಅಭಿವೃದ್ಧಿ ದರದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ ದೇಶದೊಳಗಿನ ಹೂಡಿಕೆಯ ವಾತಾವರಣವನ್ನು ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಿ ಆರ್ಥಿಕತೆಯಲ್ಲಿ ವೇಗವನ್ನು ಹುಟ್ಟಿಸುವಂತಹ ಸಾರಭೂತ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಬೆಲೆಗಳು ಒಂದೇ ಸಮನೆ ಏರುತ್ತಿರುವಾಗ ಮತ್ತು ಕಳೆದ ಜನವರಿಯಿಂದ ಒಟ್ಟಾರೆಯಾಗಿ ರಿಸರ್ವ್ ಬ್ಯಾಂಕು ರೆಪೋ ದರವನ್ನು 135 ಅಂಶಗಳಷ್ಟು ಇಳಿಸಿದ ಮೇಲೆ ಹಣಕಾಸು ನೀತಿಗಳ ಮೂಲಕ ಆರ್ಥಿಕತೆಯನ್ನು ಸುಧಾರಿಸಬಹುದಾದ ಎಲ್ಲಾ ಅವಕಾಶಗಳು ಮುಕ್ತಾಯಗೊಂಡಿದ್ದವು. ಹೀಗಾಗಿ ಸರಕಾರದ ಕೈಯಲ್ಲಿರುವ ವಿತ್ತೀಯ ನೀತಿಗಳ ಮುಂದೊಡಗುಗಳ ವಲಯಕ್ಕೆ ಆರ್ಥಿಕ ಸುಧಾರಣೆಯ ಪ್ರಯತ್ನಗಳನ್ನು ದಾಟಿಸಲಾಗಿತ್ತು. ಮೂಲಭೂತ ಸುಧಾರಣೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ದೊಡ್ಡ ಅವಕಾಶ ಬಜೆಟಿಗಿತ್ತು. ಅಲ್ಲದೆ ಬಜೆಟ್‌ಗೆ ಮುನ್ನ ಬಿಡುಗಡೆಯಾದ ಆರ್ಥಿಕ ಸರ್ವೇಯು ನೈಜ ಬಳಕೆಯಲ್ಲಿನ ಆಮೆಗಾಲಿನ ಬೆಳವಣಿಗೆಯು ನೈಜ ಸ್ಥಿರ ಹೂಡಿಕೆಯಲ್ಲಿನ ಕಂಡು ಬಂದಿರುವ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ಜಿಡಿಪಿ ದರವು ಇಳಿಕೆಯಾಗುತ್ತಿರುವುದರಿಂದ ಸರಕಾರವು ತನಗೆ ಸಿಕ್ಕಿರುವ ಬಲವಾದ ಜನಾದೇಶಗಳನ್ನು ಬಳಸಿಕೊಂಡು ಮೂಲಭೂತ ಆರ್ಥಿಕ ಸುಧಾರಣೆಗಳನ್ನು ತ್ವರಿತವಾಗಿ ಜಾರಿ ಮಾಡಿ 2020-21ರಲ್ಲಿ ಆರ್ಥಿಕತೆಯು ಮರುಚಿಗುರಿ ಮುನ್ನೆಲೆಗೆ ಬರುವಂತೆ ಮಾಡಲು ಮುಂದಾಗಬೇಕು ಎಂದು ಹೇಳಿದ್ದರಿಂದ ಬಜೆಟ್‌ನ ಮೇಲಿನ ನಿರೀಕ್ಷೆಯು ಇನ್ನಷ್ಟು ಹೆಚ್ಚಿತ್ತು. ಆದರೆ ದುರದೃಷ್ಟವಶಾತ್ ಹಣಕಾಸು ಸಚಿವರ ಭಾಷಣವು ಆರ್ಥಿಕತೆಯಲ್ಲಿ ಸಮಸ್ಯೆ ಇದೆಯೆಂಬುದನ್ನೇ ಒಪ್ಪಿಕೊಳ್ಳುವುದಿಲ್ಲ.
ಬಜೆಟ್‌ನ ಪ್ರಕಾರ ಆರ್ಥಿಕತೆಯು ಮೂಲಭೂತವಾಗಿ ಸದೃಢವಾಗಿದೆ ಮತ್ತು ಅದರಿಂದಾಗಿ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸಾಧಿಸಲಾಗಿದೆ. ಕಣ್ಣೆದುರಿಗಿರುವ ಸಮಸ್ಯೆಯನ್ನೇ ನಿರಾಕರಿಸುವಾಗ ಅದಕ್ಕೆ ಪರಿಹಾರಗಳನ್ನು ಹುಡುಕುವುದು ಅಸಾಧ್ಯ. ಹೀಗಾಗಿ ಹಣಕಾಸು ಸಚಿವರು ಮಾಡಿದ ಸುದೀರ್ಘ ಭಾಷಣವು ಮಾರುಕಟ್ಟೆಯಲ್ಲಾಗಲೀ ಅಥವಾ ಸಾಮಾನ್ಯ ಜನರಲ್ಲಾಗಲೀ ಯಾವ ಭರವಸೆಯನ್ನೂ ಮೂಡಿಸುವಂತಿರಲಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಅಥವಾ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವೆಡೆ ದಾಪುಗಾಲಿಡುವ ಆಶಯಗಳನ್ನು ಪುನರುಚ್ಚರಿಸಿದರೂ, ರಫ್ತನ್ನು ಹೆಚ್ಚಿಸುವ ಅಥವಾ ಸಾಮಾನ್ಯ ಜನರ ಬಳಕೆ ವೆಚ್ಚ ಹೆಚ್ಚಿಸುವ ಅಥವಾ ಹೂಡಿಕೆಯನ್ನು ಹೆಚ್ಚಿಸುವಂತಹ ಯಾವುದೇ ನೀತಿಗಳು-ಕಾರ್ಯಕ್ರಮಗಳು ಬಜೆಟ್‌ನಲ್ಲಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ, ಭೂಮಿ ಗುತ್ತಿಗೆ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್‌ನಂತಹ ನೀತಿಗಳಿಗೆ ರಾಜ್ಯಗಳು ಸಹ ಒಪ್ಪಿಗೆ ನೀಡಬೇಕಾಗುತ್ತದೆ. ರೈತರಿಗೆ ಸಹಾಯ ಧನ ನೀಡುವ ವ್ಯವಸ್ಥೆಯಲ್ಲಾಗಲೀ ಅಥವಾ ನೀರಾವರಿ, ಕೃಷಿ ಉತ್ಪನ್ನ ಸಂಗ್ರಹಗಳಂತಹ ಕೃಷಿ ಸಂಬಂಧೀ ಮೂಲಭೂತ ಸೌಕರ್ಯಗಳಲ್ಲಿನ ಹೂಡಿಕೆಯನ್ನು ಹೆಚ್ಚಿಸುವ ವಿಷಯಗಳಲ್ಲಾಗಲೀ ಏನನ್ನೂ ಹೇಳಲಾಗಿಲ್ಲ. ಬಜೆಟ್ ಭಾಷಣದಲ್ಲಿ ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗಳ ಬಗ್ಗೆ 16 ಕ್ರಿಯಾ ಯೋಜನೆಗಳನ್ನು ಹೇಳಿದ್ದರೂ ಆ ಒಟ್ಟು ಬಾಬತ್ತುಗಳಿಗೆ ಎತ್ತಿಡಲಾಗಿರುವ ಒಟ್ಟಾರೆ 2.83 ಲಕ್ಷ ಕೋಟಿ ರೂಪಾಯಿ ಮೊತ್ತವು ಕಳೆದ ಸಾಲಿನ ಬಜೆಟ್‌ಗಿಂತ ಕೇವಲ ಶೇ.2.5ರಷ್ಟು ಮಾತ್ರ ಹೆಚ್ಚು.
ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗು ವುದೆಂದು ಹಣಕಾಸು ಮಂತ್ರಿಗಳು ಘೋಷಿಸಿದರು. ಇದರ ಬಹುಪಾಲು ಅಂಶವು ಖಾಸಗಿ ಕ್ಷೇತ್ರಗಳಿಂದಲೇ ಬರಬೇಕಿದೆ. ಅದಾಗಬೇಕಿದ್ದರೆ ಸರಕಾರವು ಬಂಡವಾಳ ವೆಚ್ಚದಲ್ಲಿ ಸಾಕಷ್ಟು ಹೆಚ್ಚಳವನ್ನು ತೋರಿಸಿ ತನ್ನ ಉದ್ದೇಶವನ್ನು ಸಾಬೀತು ಮಾಡಬೇಕಿದೆ. ಉತ್ತಮ ಮೂಲ ಸೌಕರ್ಯ, ಹೆಚ್ಚಿನ ಭರವಸೆ, ಕರಾರುಗಳ ಅನುಷ್ಠಾನ ಮತ್ತು ಪೂರಕ ವಾತಾವರಣವಿದ್ದರೆ ಮಾತ್ರ ಖಾಸಗಿ ಬಂಡವಾಳವು ಹರಿದು ಬರುತ್ತದೆ. ಸರಕಾರವು ತನ್ನ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಮೂಲಕ ಮಾತ್ರ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯ. ವಾಸ್ತವವೇನೆಂದರೆ ಹಾಲಿ ಸಾಲಿನಲ್ಲಿ ಸರಕಾರವು ಜಿಡಿಪಿಯ ಶೇ.1.8ರಷ್ಟನ್ನು ಮಾತ್ರ ಬಂಡವಾಳ ವೆಚ್ಚಕ್ಕೆ ಒದಗಿಸಿದೆ ಮತ್ತು ಇದು ಕಳೆದ ಸಾಲಿನ ಒದಗಿಸಿದ ಮೊತ್ತಕ್ಕಿಂತ ಹೆಚ್ಚೇನಲ್ಲ. ಅದೇ ರೀತಿ ಸಾರಿಗೆ ಮೂಲ ಸೌಕರ್ಯಕ್ಕಾಗಿ 1.7ಲಕ್ಷ ಕೋಟಿ ರೂಪಾಯಿಗಳನ್ನು ಎತ್ತಿರಿಸಲಾಗಿದೆ. ಇದು ಕಳೆದ ಸಾಲಿನ ಪರಿಷ್ಕರಿಸಿದ ಅಂದಾಜಿಗಿಂತ ಕೇವಲ ಶೇ.7.6ರಷ್ಟು ಮಾತ್ರ ಹೆಚ್ಚು. ಆಯ್ದ ಮೂಲಸೌಕರ್ಯ ಫೈನಾನ್ಸ್ ಕಂಪನಿಗಳಿಗೆ 20,000 ಕೋಟಿ ರೂ.ಗಳಷ್ಟು ಈಕ್ವಿಟಿ ಮೊತ್ತವನ್ನು ನೀಡುವ ಮೂಲಕ ಮೂಲಸೌಕರ್ಯಗಳಿಗೆ ಉತ್ತೇಜನ ಒದಗುತ್ತದೆಂದು ನಿರೀಕ್ಷಿಸಲಾಗಿದೆ. ಆದರೆ ಇದು ವಾಸ್ತವದಲ್ಲಿ ಸಂಭವಿಸುವುದು ದೂರದ ಮಾತು. ಸರಕಾರದ ಆದಾಯದಲ್ಲಿ ದೊಡ್ಡ ಮಟ್ಟದಲ್ಲ್ಲಿ ಕುಸಿತವಾಗಿದ್ದರಿಂದ 2019-20ರಲ್ಲಿ ನಿಗದಿಗೊಳಿಸಿಕೊಂಡ ವಿತ್ತೀಯ ಕೊರತೆಯ ಗುರಿಯಲ್ಲಿ ಹಿಂದೆ ಬೀಳುವುದು ನಿರೀಕ್ಷಿತವೇ ಆಗಿತ್ತು. ಇದು ಮೂರು ಕಾರಣಗಳಿಂದ ಸಂಭವಿಸಿದೆ. ತೆರಿಗೆ ಪೂರ್ವ ಜಿಡಿಪಿ ದರವು ಶೇ.12 ರ ದರದಲ್ಲಿ ಏರಿಕೆಯಾಗುತ್ತದೆಂದು ಭಾವಿಸಲಾಗಿತ್ತು. ಆದರೆ ಅದು ಶೇ.7.5ರ ದರಕ್ಕಿಂತ ಮೇಲೇರಲಿಲ್ಲ.
ಎರಡನೆಯದಾಗಿ ಹೋದ ವರ್ಷಕ್ಕಿಂತ ಈ ವರ್ಷದ ತೆರಿಗೆ ಸಂಗ್ರಹ ಶೇ.18.3ರಷ್ಟು ಹೆಚ್ಚುತ್ತದೆ ಎಂದು ಮಾಡಿದ ಅಂದಾಜು ಅವಾಸ್ತವಿಕವಾಗಿತ್ತು ಹಾಗೂ ಮೂರನೆಯದಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿನ ಸರಕಾರಿ ಹೂಡಿಕೆಯನ್ನು ಹಿಂದೆಗೆದುಕೊಳ್ಳುವ ಮೂಲಕ 1.03 ಲಕ್ಷ ಕೋಟಿ ರೂಪಾಯಿಗಳು ಸಂಗ್ರಹವಾಗುತ್ತದೆಂಬ ನಿರೀಕ್ಷೆಯನ್ನು ಸಾಧಿಸಲಾಗಲಿಲ್ಲ. ಹೀಗಾಗಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಲ್ಲಿರುವ ಪಾರಾಗುವ ಅಂಶಗಳನ್ನು ಬಳಸುತ್ತಾ ಸರಕಾರವು ನಿರೀಕ್ಷೆಯಂತೆ ಈ ಬಾರಿ 0.5ರಷ್ಟು ಹೆಚ್ಚಿನ ವಿತ್ತೀಯ ಕೊರತೆಗೆ ಅಂದರೆ ಶೇ.3.8ರಷ್ಟು ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳುವುದಕ್ಕೂ ಮತ್ತು ಮುಂದಿನ ಸಾಲಿನಲ್ಲಿ ಶೇ.3.5ರಷ್ಟು ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳುವುದಕ್ಕೂ ಅವಕಾಶವನ್ನು ಮಾಡಿಕೊಂಡಿದೆ. ವಿತ್ತೀಯ ಹೊಣೆಗಾರಿಕೆ ಹಾಗೂ ಬಜೆಟ್ ನಿರ್ವಹಣೆ ಕಾಯ್ದೆಯ ಪ್ರಕಾರ ಒಂದು ವರ್ಷದಲ್ಲಿ ವಿತ್ತೀಯ ಕೊರತೆಯಲ್ಲಿ ಸಡಿಲತೆಯನ್ನು ತಂದುಕೊಂಡರೆ ಮರುವರ್ಷ ಮೊದಲಿನ ಗುರಿಗೆ ಮರಳಬೇಕು. ಆದರೆ ಅದನ್ನೂ ಕೂಡಾ ಈ ಬಜೆಟ್ ಉಲ್ಲಂಘಿಸಿದೆ. ಆದರೆ ವಾಸ್ತವದಲ್ಲಿ ನೈಜ ವಿತ್ತೀಯ ಕೊರತೆ ಸರಕಾರ ಮುಂದಿಟ್ಟಿರುವ ಚಿತ್ರಣಕ್ಕಿಂತ ಭೀಕರವಾಗಿದೆ. ಏಕೆಂದರೆ ಬಜೆಟ್‌ನ ನಂತರ ಮಾಡಿರುವ ಸಾಲವು ಜಿಡಿಪಿಯ ಶೇ.0.8ರಷ್ಟಿದ್ದು ಈವರೆಗೆ ಪಾವತಿಯಾಗದ ಬಿಲ್ಲಿನ ಮೊತ್ತವೆಷ್ಟೆಂದು ತಿಳಿದುಬಂದಿಲ್ಲ. ಹೀಗಾಗಿ ಸರಕಾರವು ಬಜೆಟ್‌ನಲ್ಲಿ ಘೋಷಿಸಿರುವ ಸಂಖ್ಯೆಯನ್ನು ಸಾಧಿಸಲು ಸಾಧ್ಯವೇ ಎಂಬುದು ಪ್ರಶ್ನಾರ್ಹ.
ಈ ಸಾಲಿನಲ್ಲಿ ಬಂಡವಾಳ ಹಿಂದೆಗೆತದಿಂದ ಪಡೆದುಕೊಂಡಿರುವುದು ಕೇವಲ 18,000 ಕೋಟಿ ರೂ.ಗಳು ಮಾತ್ರ. ಆದರೆ ಪರಿಷ್ಕೃತ ಬಜೆಟ್‌ನಲ್ಲಿ ಈ ಬಾಬತ್ತಿನಲ್ಲಿ 65,000 ಕೋಟಿ ರೂ.ಗಳ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ ತೆರಿಗೆ ಪೂರ್ವ ಜಿಡಿಪಿ ದರವನ್ನು ಶೇ.10 ಎಂದು ಅಂದಾಜಿಸಲಾಗಿದೆಯಾದರೂ ತೆರಿಗೆ ಸಂಗ್ರಹದ ಹೆಚ್ಚಳ ಹುಮ್ಮಸ್ಸನ್ನು 1.2 ಎಂದು ಊಹಿಸಲಾಗಿದೆ. ಇದು ಉತ್ಪ್ರೇಕ್ಷಿತ ಅಂದಾಜಾಗಿದೆ. ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಕಡಿಮೆ ತೋರಿಸುವ ಸಲುವಾಗಿ ಹಣಕಾಸು ಆಯೋಗದ ವರದಿಯನ್ನು ಒಪ್ಪಿಕೊಂಡಿರುವುದಾಗಿ ತೋರಿಸಲಾಗಿದೆ. ಆದರೆ ಬಜೆಟ್‌ನಲ್ಲಿ ಅದಕ್ಕಾಗಿ ವೆಚ್ಚಾವಕಾಶವನ್ನೇ ತೋರಿಲ್ಲ. ಇನ್ನು ತೆರಿಗೆ ಸುಧಾರಣೆಯ ವಿಷಯಗಳಿಗೆ ಬರುವುದಾದರೆ ವ್ಯಕ್ತಿಗತ ಆದಾಯ ತೆರಿಗೆ ದರಗಳಲ್ಲಿನ ಇಳಿಕೆ ಕೇವಲ ನಾಮಮಾತ್ರದ್ದಾಗಿದೆ. ರಿಯಾಯಿತಿಗಳನ್ನು ಮತ್ತು ವಿನಾಯಿತಿಗಳನ್ನು ಪಡೆದುಕೊಳ್ಳದಿದ್ದರೆ ಮಾತ್ರ ಈ ಇಳಿಸಿದ ತೆರಿಗೆ ದರಗಳು ಅನ್ವಯವಾಗುತ್ತವೆ. ವಾಸ್ತವದಲ್ಲಿ ಸರಕಾರವು ಒಟ್ಟಾರೆ ಆದಾಯ ತೆರಿಗೆ ದರದ ಸ್ಥರದ ದರಗಳನ್ನು ಆರಕ್ಕೇರಿಸಿ ಇಡೀ ತೆರಿಗೆ ಸಂಗ್ರಹ ರಚನೆಯನ್ನೇ ಸಂಕೀರ್ಣಗೊಳಿಸಿದೆ. ಇದರ ಬದಲಿಗೆ ಸರಕಾರವು ಎಲ್ಲಾ ತೆರಿಗೆ ರಿಯಾಯಿತಿಗಳನ್ನು ಕಾಲಾನುಸಾರ ತೆಗೆದುಹಾಕಿ, ತೆರಿಗೆ ಸ್ಥರಗಳನ್ನು ಹಣದುಬ್ಬರಕ್ಕೆ ಟಂಕಿಸಿ ಸ್ಥರಗಳಾನುಸಾರ ತೆರಿಗೆ ದರಗಳನ್ನು ಇಳಿಸಬಹುದಿತ್ತು.
ಸೀಮಾಸುಂಕದ ಏರಿಕೆಯು ಸರಕಾರದ ‘‘ಭಾರತದಲ್ಲಿ ಉತ್ಪಾದಿಸೋಣ’’ ಘೋಷಣೆಗೆ ತಕ್ಕಂತಿದೆ. ಹಾಗಿದ್ದರೆ ನಾವು ‘‘ಆಮದು ಬದಲಿ-ಪರ್ಯಾಯ’’ ಕಾಲಕ್ಕೆ ಮರಳುತ್ತಿದ್ದೇವೆಯೇ? ದುರದೃಷ್ಟವಶಾತ್, ಕೇಂದ್ರದ ಈ ಬಗೆಯ ಕೆಟ್ಟ ಬಜೆಟ್ ನಿರ್ವಹಣೆಯು ರಾಜ್ಯಗಳ ಬಜೆಟ್ ನಿರ್ವಹಣೆಯ ಮೇಲೂ ಕೆಟ್ಟ ಪ್ರಭಾವವನ್ನೂ ಬೀರುತ್ತಿದೆ. ಮೊದಲನೆಯದಾಗಿ ತೆರಿಗೆ ಮರುಹಂಚಿಕೆ ವ್ಯವಸ್ಥೆಯ ಭಾಗವಾಗಿ ಕೇಂದ್ರವು ರಾಜ್ಯಗಳಿಗೆ ಕೊಡಮಾಡಬೇಕಿದ್ದ ತೆರಿಗೆಯಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳು ಖೋತಾ ಆಗಿದೆ. ಕೇಂದ್ರದಿಂದ ತಮಗೆ ಬರಬೇಕಿರುವ ತೆರಿಗೆ ಪಾಲನ್ನು ಲೆಕ್ಕಕ್ಕಿಟ್ಟುಕೊಂಡು ರಾಜ್ಯಗಳು ತಮ್ಮ ಬಜೆಟ್‌ಗಳನ್ನು ರೂಪಿಸುತ್ತವೆ. ಆದ್ದರಿಂದ ಕೇಂದ್ರದಲ್ಲಿ ಬರಬೇಕಿರುವ ತೆರಿಗೆ ಪಾಲಿನ ಇಳಿಕೆಯು ರಾಜ್ಯಗಳ ಬಜೆಟ್ ವೆಚ್ಚದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಮಾಡುತ್ತವೆ. ಹಾಗಾದಲ್ಲಿ, ರಾಜ್ಯಗಳ ಬಂಡವಾಳ ಹಾಗೂ ನಿರ್ವಹಣಾ ವೆಚ್ಚಗಳು ಕಡಿತಗೊಳ್ಳುತ್ತವೆ. ಎರಡನೆಯದಾಗಿ ತೆರಿಗೆ ಆದಾಯದಲ್ಲಿನ ಕೊರತೆಯಿಂದಾಗಿ ರಾಜ್ಯಗಳಲ್ಲಿ ಜಾರಿಯಾಗುವ ಕೇಂದ್ರದ ಯೋಜನೆಗಳ ಮೇಲಿನ ವೆಚ್ಚವು ಕಡಿತವಾಗುತ್ತದೆ. ಈ ಆಯೋಜಿತ ಕಡಿತಗಳು ರಾಜ್ಯಗಳ ವೆಚ್ಚದ ಉತ್ಪಾದಕತೆಯನ್ನು ನೇರವಾಗಿ ಪ್ರಭಾವಿಸುತ್ತವೆ. ಒಟ್ಟಿನಲ್ಲಿ ಈ ಬಜೆಟ್‌ನಿಂದ ಬಹಳಷ್ಟು ನಿರೀಕ್ಷಿಸಲಾಗಿತ್ತು. ಆದರೆ ದುರದೃಷ್ಟವಶಾತ್, ಬಂಡವಾಳ ಹೂಡಿಕೆಯ ವಾತಾವರಣ ಮರಳಿ ಅಭಿವೃದ್ಧಿ ದರ ಹೆಚ್ಚಾಗಲು ಇನ್ನು ಸಾಕಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.