ಅಯೋಧ್ಯೆ ದೇಗುಲ ಟ್ರಸ್ಟ್‌ಗೆ ಒಬಿಸಿಗಳು ಅರ್ಹರಲ್ಲವೇ?
ಹಿಂದೂಧರ್ಮದಲ್ಲಿ ದ್ವಿಜರ ಯಜಮಾನಿಕೆ ವಿರುದ್ಧ ಅಂಬೇಡ್ಕರ್ ಸವಾಲೆಸೆದಂತೆ, ಶೂದ್ರ/ಒಬಿಸಿ ಚಿಂತನೆಯು ಆರೆಸ್ಸೆಸ್ ಸಿದ್ಧಾಂತಕ್ಕೆ ಸವಾಲೆಸೆಯದೆ ಇದ್ದಲ್ಲಿ ಆರೆಸ್ಸೆಸ್/ಬಿಜೆಪಿಯು ಶೂದ್ರ/ಒಬಿಸಿಗಳಿಗೆ ಆಧ್ಯಾತ್ಮಿಕ ವಿಶ್ವಾಸಾರ್ಹತೆಯನ್ನು ನೀಡುತ್ತಿಲ್ಲ. ತಮ್ಮದೇ ಆದ ಚೌಕಟ್ಟಿನಲ್ಲಿಯೂ ಸಹ ಕಲ್ಯಾಣ್‌ಸಿಂಗ್ ಅಥವಾ ಉಮಾಭಾರತಿ ಸೈದ್ಧಾಂತಿಕ ಚಿಂತಕರಾಗಿಲ್ಲ. ಶೂದ್ರರು/ ಒಬಿಸಿಗಳು ತಮ್ಮ ಕೃಷಿಕ ಮನಸ್ಥಿತಿಯೊಂದಿಗೆ ಇನ್ನೋರ್ವ ಅಂಬೇಡ್ಕರ್ ಅವರನ್ನು ಸೃಷ್ಟಿಸುವ ಅಗತ್ಯವಿದೆ.
ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ಟ್ರಸ್ಟ್ ರಚನೆಯನ್ನು ಘೋಷಿಸಿದ ಬಳಿಕ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಹಾಗೂ ಈ ಕೃತ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಉಮಾಭಾರತಿ ಅವರುಗಳು, ದಲಿತರಷ್ಟೇ, ಇತರ ಹಿಂದುಳಿದ ವರ್ಗಗಳವರು (ಒಬಿಸಿ) ಕೂಡಾ ರಾಮಭಕ್ತರಾಗಿದ್ದು, ಅವರಿಗೂ ಟ್ರಸ್ಟ್‌ನಲ್ಲಿ ಪ್ರಾತಿನಿಧ್ಯ ದೊರೆಯಬೇಕೆಂದು ಆಗ್ರಹಿಸಿದ್ದಾರೆ. ಬ್ರಾಹ್ಮಣರು, ಬನಿಯಾಗಳು ಹಾಗೂ ಕ್ಷತ್ರಿಯರಿಗಿಂತ, ಒಬಿಸಿಗಳು ವಿಶಿಷ್ಟತೆಯಿರುವ ರಾಮಭಕ್ತರಾಗಿದ್ದು, ಬಾಬರಿ ಮಸೀದಿ ಧ್ವಂಸಕ್ಕೆ ಬೇಕಾದ ಮಾನವಶಕ್ತಿಯನ್ನು ಒಬಿಸಿಗಳು ಹಾಗೂ ದಲಿತರು ನೀಡಿದ್ದಾರೆ ಎಂದವರು ಹೇಳಿದ್ದಾರೆ. ಹಿರಿಯ ನ್ಯಾಯವಾದಿ ಕೆ.ಪರಾಶರನ್, ಜಗದ್ಗುರು ಶಂಕರಾಚಾರ್ಯ, ಅಲಹಾಬಾದ್‌ನ ಜ್ಯೋತಿಷ ಪೀಠಾಧೀಶ್ವರ ಸ್ವಾಮಿ ವಾಸುದೇವಾನಂದ ಸರಸ್ವತಿ, ಉಡುಪಿ ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದ ಜಿ ಮಹಾರಾಜ್, ಪುಣೆಯ ಸ್ವಾಮಿ ಗೋವಿಂದದೇವ ಗಿರಿ ಹಾಗೂ ಅಯೋಧ್ಯೆಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರನ್ನು ಟ್ರಸ್ಟ್‌ನ ಸದಸ್ಯರೆಂದು ಕೇಂದ್ರ ಸರಕಾರ ಘೋಷಿಸಿದೆ. ದಲಿತ ಸಮುದಾಯದವರಾದ ದೀನೇಂದ್ರ ದಾಸ್ ಟ್ರಸ್ಟ್ ನಲ್ಲಿರುವ ಇನ್ನೋರ್ವ ಸದಸ್ಯ. ಸರಕಾರದ ಕೆಲವು ಮಾಜಿ ಅಧಿಕಾರಿಗಳನ್ನು ಟ್ರಸ್ಟ್‌ನ ಇತರ ಪದಾಧಿಕಾರೇತರ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ. ಆದರೆ ಪಟ್ಟಿಯಲ್ಲಿ ಒಬನೇ ಒಬ್ಬ ಒಬಿಸಿ ಸದಸ್ಯನ ನೇಮಕವಾಗಿಲ್ಲವೆಂದು ಪಟ್ಟಿಯು ತೋರಿಸುತ್ತದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಮುಖ್ಯ ಕಾರಣರಾದ ಜಾಟರು, ಯಾದವರು, ಪಟೇಲರು, ಮರಾಠರು, ಲಿಂಗಾಯತರು ಹಾಗೂ ಒಕ್ಕಲಿಗರನ್ನು ಒಳಗೊಂಡ ಒಬಿಸಿ ಸಮುದಾಯಗಳಲ್ಲಿ ಟ್ರಸ್ಟ್‌ಗೆ ಸೇರ್ಪಡೆಗೊಳ್ಳುವಂತಹ ಅರ್ಹತೆ ಯಾಕೆ ಕಂಡುಬರಲಿಲ್ಲ?. ಇದಕ್ಕೆ ನಮ್ಮ ಮನಸ್ಸಿಗೆ ತಕ್ಷಣವೇ ಹೊಳೆಯುವಂತಹ ಕಾರಣವೇನೆಂದರೆ, ಬ್ರಾಹ್ಮಣ, ಬನಿಯಾ, ಕ್ಷತ್ರಿಯ ಮತ್ತು ದಲಿತ ಸಮುದಾಯಗಳಂತೆ ಶೂದ್ರರು/ಒಬಿಸಿಗಳು ಹೆಚ್ಚು ಸಂಘಟಿತರಾಗಿಲ್ಲವೆಂಬುದಾಗಿದೆ.
ಆಧುನಿಕ ಶೂದ್ರರು ಹಿಂದೂಧರ್ಮದ ಮುಖ್ಯವಾಹಿನಿ ಯಲ್ಲಿದ್ದರೂ ಮತ್ತು ಜಾತಿಶ್ರೇಣಿಯ ವ್ಯವಸ್ಥೆಯಲ್ಲಿ ಅಗಾಧವಾಗಿ ದಬ್ಬಾಳಿಕೆಗೆ ಒಳಗಾಗಿದ್ದರೂ, ಅವರು ತಮ್ಮ ಗುರುತನ್ನು ಯಾವತ್ತೂ ಬಲವಾಗಿ ಎತ್ತಿಹಿಡಿಯಲಿಲ್ಲ ಹಾಗೂ ಹಿಂದೂ ಆಧ್ಯಾತ್ಮಿಕ ವ್ಯವಸ್ಥೆಯಲ್ಲಿ ತಮ್ಮ ಪಾಲಿಗಾಗಿ ಆಗ್ರಹಿಸಿರಲಿಲ್ಲ. ಯಾವುದೇ ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ಬ್ರಾಹ್ಮಣರ ಉಪಸ್ಥಿತಿಯಷ್ಟೇ ಶೂದ್ರರ ಉಪಸ್ಥಿತಿಯಿರುತ್ತದೆ.
ಜಾತಿವರ್ಣ ವ್ಯವಸ್ಥೆಯಲ್ಲಿ ಒಬಿಸಿಗಳು ಈಗಲೂ ವ್ಯಾಪಕವಾಗಿ ದಮನಕ್ಕೊಳಗಾಗಿದ್ದರೂ ಅಂಬೇಡ್ಕರ್ ಅವರ ನಾಯಕತ್ವದ ಉದಯದ ಬಳಿಕ, ದಲಿತರು ಸಮಾಜದಲ್ಲಿ ನೂತನ ಆಧ್ಯಾತ್ಮಿಕ ಸ್ಥಾನಮಾನ ಹಾಗೂ ಗುರುತನ್ನು ಪಡೆದುಕೊಂಡರು. ಶೂದ್ರರ ವಿರುದ್ಧ ಶ್ರೀರಾಮ ತಳೆದಿದ್ದ ನಿಲುವು (ಶೂದ್ರ ಶಂಭೂಕ ವಧೆ) ಕೂಡಾ ಅವರನ್ನು ಟ್ರಸ್ಟ್‌ನಿಂದ ಹೊರಗಿಡುವಲ್ಲಿ ಕಾರಣವಾಗಿರಲೂಬಹುದು. ಆದರೆ ದಲಿತರಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ರಾಮಾಯಣದಲ್ಲಿ ಉಲ್ಲೇಖವಾಗಿಲ್ಲ.
ಶ್ರೀರಾಮನ ಪರಂಪರೆಯೊಂದಿಗೆ ದ್ವಿಜ (ಬ್ರಾಹ್ಮಣ) ಸಮುದಾಯವು ಪೌರಾಣಿಕವಾಗಿದ್ದರೂ ಗಾಢವಾದ ನಂಟನ್ನು ಹೊಂದಿವೆ. ರಾಮಾಯಣದ ವ್ಯಾಖ್ಯಾನದಲ್ಲಿ ಶ್ರೀರಾಮನನ್ನು ದೇವರೆಂದು ಪರಿಗಣಿಸಲಾಗಿಲ್ಲ ಮತ್ತು ಬ್ರಾಹ್ಮಣರು ಆತನ ಗುರುಗಳಾಗಿದ್ದರು. ಆತ ಆಳುವ ಸಮುದಾಯವಾದ ಕ್ಷತ್ರಿಯ ಜಾತಿಗೆ ಸೇರಿದವನಾಗಿದ್ದನು. ಯೋಗಿ ಆದಿತ್ಯನಾಥ್ ಶ್ರೀರಾಮಚಂದ್ರನ ಪರಂಪರೆಯ ಜೊತೆ ಬಲವಾದ ನಂಟನ್ನು ಹೊಂದಿದ್ದಾರೆ. ಯಾಕೆಂದರೆ ಆದಿತ್ಯನಾಥ್ ಕ್ಷತ್ರಿಯ ಸಮುದಾಯದವರಾಗಿದ್ದಾರೆ. ಬ್ರಾಹ್ಮಣ ಗುರುಗಳ ಅನುಮೋದನೆಯಿಲ್ಲದೆ ಶ್ರೀರಾಮಚಂದ್ರ ಏನನ್ನೂ ಮಾಡಿಲ್ಲವೆಂದು ಬ್ರಾಹ್ಮಣರಿಗೆ ತಿಳಿದಿದೆ. ಯುದ್ಧದಲ್ಲಾಗಲಿ, ಶಾಂತಿ ಕಾಲದಲ್ಲಾಗಲಿ ವಸಿಷ್ಠ ಮಹರ್ಷಿಗಳು ಶ್ರೀರಾಮಚಂದ್ರನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಪ್ರಮುಖ ಸಲಹೆಗಾರರಾಗಿದ್ದರು. ತಪಸ್ಸನ್ನು ಆಚರಿಸಲು ಯತ್ನಿಸುವ ಮೂಲಕ ಶೂದ್ರ ಶಂಭೂಕನು ಬ್ರಾಹ್ಮಣ ಸ್ಥಾನ ಪಡೆಯಬಯಸಿದ್ದಕ್ಕಾಗಿ ಆತನನ್ನು ಶ್ರೀರಾಮಚಂದ್ರನು ವಶಿಷ್ಠರ ಆದೇಶದಂತೆ ಕೊಂದಿದ್ದನು. ಶಂಭೂಕ ವಧೆಯ ಕಥೆಯು ವೈದಿಕ ಪರಂಪರೆಯ ಭಾಗವಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಆರೆಸ್ಸೆಸ್ ಬಯಸುತ್ತಿದೆ.
ಇನ್ನೊಂದೆಡೆ ಆರೆಸ್ಸೆಸ್ ಶ್ರೀಕೃಷ್ಣನ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ತಾಳಿದೆ. ಶ್ರೀಕೃಷ್ಣನು ಯಾವತ್ತೂ ಬ್ರಾಹ್ಮಣರ ಗುರುತನವನ್ನು ಒಪ್ಪಿಕೊಂಡಿರಲಿಲ್ಲ ಹಾಗೂ ಆತ ಸ್ವತಃ ತನ್ನನ್ನೇ ದೇವರೆಂಬುದಾಗಿ ಘೋಷಿಸಿಕೊಂಡಿದ್ದ. ಆತ ಶೂದ್ರ ವಂಶಾವಳಿಯನ್ನು ಹೊಂದಿದವನಾಗಿದ್ದಾನೆ. ಬಹುಶಃ, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು 1925ರಿಂದಲೇ ಹಿಂದೂ ರಾಷ್ಟ್ರದ ಚಿಂತನೆಯನ್ನು ರಾಮರಾಜ್ಯದ ಪರಿಕಲ್ಪನೆಯೊಂದಿಗೆ ಪ್ರಚಾರಕ್ಕೆ ತಂದಿತ್ತು. ಆದರೆ ಶ್ರೀಕೃಷ್ಣನು ಹಿಂದೂಗಳಲ್ಲಿ ಭಗವಂತನೆಂಬುದಾಗಿಯೂ, ದ್ವಾರಕಾದ ದೊರೆಯೆಂದು ಪರಿಗಣಿಸಲ್ಪಟ್ಟಿದ್ದರೂ, ಕೃಷ್ಣರಾಜ್ಯದ ಚಿಂತನೆಯನ್ನು ಅದು ಯಾವತ್ತೂ ಬಳಸಿಕೊಳ್ಳಲಿಲ್ಲ.
ಆರೆಸ್ಸೆಸ್ ಗುರುಪರಂಪರೆಯನ್ನು ಬಲವಾಗಿ ನಂಬುತ್ತಿದ್ದು, ಆ ವ್ಯವಸ್ಥೆಯಲ್ಲಿ ಬ್ರಾಹ್ಮಣ ಗುರುವಿಗೆ ಅತ್ಯುನ್ನತವಾದ ಸ್ಥಾನಮಾನವನ್ನು ನೀಡಲಾಗುತ್ತಿದೆ. ರಾಮನ ಜೊತೆ ಬನಿಯಾ ಸಮುದಾಯದ ನಂಟು ತೀರಾ ಇತ್ತೀಚಿನದಾಗಿದೆ. ಮಹಾತ್ಮಾಗಾಂಧೀಜಿಯವರು ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಿದ್ದರೂ, ಒಮ್ಮೆ ಹಿಂದೂ ಮಹಾಸಭಾ ಹಾಗೂ ಆರೆಸ್ಸೆಸ್ ರಾಮರಾಜ್ಯದ ಕಲ್ಪನೆಯನ್ನು ಯಾವಾಗ ಬಳಸಿಕೊಳ್ಳಲು ಆರಂಭಿಸಿತೋ, ಅವರು ಕೂಡಾ ಅದನ್ನೇ ಬಳಸಿಕೊಳ್ಳತೊಡಗಿದರು. ಸ್ವಾತಂತ್ರ ಹೋರಾಟದಲ್ಲಿ ಜನಾಂದೋಲನ ರೂಪಿಸುವಾಗ ಗಾಂಧೀಜಿಯವರು ಭಗವದ್ಗೀತೆಯನ್ನು ಬನಿಯಾಗಳು ಹಾಗೂ ಇತರ ಶೂದ್ರ ಸಮುದಾಯಕ್ಕೂ ಸ್ವೀಕಾರಾರ್ಹವಾಗುವಂತೆ ಮಾಡಿದರು. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಆರೆಸ್ಸೆಸ್ ನಡೆಸಿದ ಜನಾಂದೋಲನಕ್ಕೆ ಶೂದ್ರ ತಳಹದಿಯು ಅತ್ಯಂತ ಉಪಯುಕ್ತವಾಗಿತ್ತು. ಕೇವಲ ಅಂಬೇಡ್ಕರ್ ಮಾತ್ರವೇ ದಲಿತ ಸಮಾಜವನ್ನು ಬ್ರಾಹ್ಮಣಶಾಹಿ ಹಿಡಿತದಿಂದ ದೂರವಿಟ್ಟಿದ್ದರು ಹಾಗೂ ಶ್ರೀರಾಮ ಮಂದಿರ ಟ್ರಸ್ಟ್‌ನಲ್ಲಿ ಸ್ಥಾನ ನೀಡುವ ಮೂಲಕ ದಲಿತ ಸಮುದಾಯದ ಅಸ್ಮಿತೆಯನ್ನು ಸಮಾಧಾನಪಡಿಸುವುದಷ್ಟೇ ಆರೆಸ್ಸೆಸ್‌ಗೆ ಬೇಕಾಗಿತ್ತು. ಹಿಂದೂ ಬ್ರಾಹ್ಮಣವಾದದಲ್ಲಿ ಶೂದ್ರರು/ಒಬಿಸಿಗಳನ್ನು ಅಸಮಾನರೆಂದು ಪರಿಗಣಿಸುವ ಜೊತೆಗೆ ಅವರನ್ನು ಅಧೀನಕ್ಕೊಳಪಟ್ಟ ಸಾಮಾಜಿಕ ಶಕ್ತಿ ಎಂದು ಪರಿಗಣಿಸಲಾಗುತಿದೆ.
ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ರಚಿಸುವಾಗ ಶೂದ್ರ/ಒಬಿಸಿಗಳನ್ನು ಪ್ರಧಾನಿಯವರು ಕಡೆಗಣಿಸಿದ್ದಾರೆ. ಯಾಕೆಂದರೆ, ಬಿಜೆಪಿಯ ಅಧಿಕಾರಕ್ಕಾಗಲಿ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಅದರ ಧಾರ್ಮಿಕ ಸಿದ್ಧಾಂತಕ್ಕಾಗಲಿ, ಒಬಿಸಿಗಳು ಯಾವತ್ತೂ ಬೆದರಿಕೆಯಾಗಿ ಉಳಿದಿಲ್ಲ. ಸಾಮಾಜಿಕವಾಗಲಿ, ಕೃಷಿ ಕ್ಷೇತ್ರದಲ್ಲಾಗಲಿ ಆ ಸಮುದಾಯವನ್ನು ತಮಗೆ ಬೇಕಾದಂತೆ ಬಳಸಿಕೊಂಡಿತು. ಶೂದ್ರ ಅಥವಾ ಒಬಿಸಿಗಳು ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ರಾಜಕೀಯ ನಿಯಂತ್ರಣವನ್ನು ಹೊಂದಿದ್ದರಾದರೂ, ಅವರು ಹಿಂದುತ್ವ ಸಿದ್ಧಾಂತಕ್ಕೆ ತಮ್ಮದೇ ಆದ ಸ್ವತಂತ್ರ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸವಾಲೆಸೆಯಲಿಲ್ಲ. ಇನ್ನೊಂದೆಡೆ ದಲಿತರು, ಧಾರ್ಮಿಕ ಪರ್ಯಾಯ ಶಕ್ತಿಗಳಾಗಿ ಬೌದ್ಧ ಧರ್ಮ ಹಾಗೂ ಕ್ರೈಸ್ತ ಧರ್ಮವನ್ನು ಬಳಸಿಕೊಂಡರು. ಇದು ಹಿಂದೂ ಧರ್ಮಕ್ಕೆ ನೇರವಾದ ಬೆದರಿಕೆಯಾಗಿತ್ತು. ಆರೆಸ್ಸೆಸ್/ಬಿಜೆಪಿಯ ದ್ವಿಜ ನಾಯಕತ್ವವು ಮತಾಂತರದ ಬೆದರಿಕೆಯ ಬಗ್ಗೆ ಚಿಂತಿತವಾಗಿತ್ತು. ದಲಿತರು ಈಗ ಜಾಗತಿಕವಾಗಿ ಮಾನ್ಯತೆ ಹಾಗೂ ಅನುಕಂಪವನ್ನು ಪಡೆಯಲು ತೊಡಗಿದ್ದುದು, ಆಡಳಿತಾರೂಢ ಆರೆಸ್ಸೆಸ್/ಬಿಜೆಪಿ ನಾಯಕತ್ವವನ್ನು ಚಿಂತೆಗೀಡು ಮಾಡಿತ್ತು. ಶೂದ್ರ/ ಒಬಿಸಿಗಳು ಆಧ್ಯಾತ್ಮಿಕ ವಿಷಯಗಳಲ್ಲಿ ಹಿಂದೂ ದ್ವಿಜ ಶಕ್ತಿಗಳಿಗೆ ಯಾವತ್ತೂ ಸವಾಲೆಸೆದಿಲ್ಲ. ಕಲ್ಯಾಣ್‌ಸಿಂಗ್ ಹಾಗೂ ಉಮಾಭಾರತಿ ಉತ್ತರ ಭಾರತದ ಎರಡು ದೊಡ್ಡ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದುದರಿಂದ ಹಾಗೂ ಬಾಬರಿ ಮಸೀದಿ ಧ್ವಂಸ ಘಟನೆಯಲ್ಲಿ ಭಾವನಾತ್ಮಕವಾಗಿ ಶಾಮೀಲಾಗಿದ್ದ ಕಾರಣ ಅವರಿಬ್ಬರೂ ಸಣ್ಣ ಮಟ್ಟದಲ್ಲಿ ಆಂತರಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.
ಬಾಬರಿ ಮಸೀದಿ ಧ್ವಂಸದ ಸಂದರ್ಭ, ಅಯೋಧ್ಯೆ ಚಳವಳಿಯಲ್ಲಿ ಒಬಿಸಿ ತೀವ್ರವಾಗಿದ್ದುದರಿಂದ, ಸಂಘಪರಿವಾರದಲ್ಲಿ ಅದಕ್ಕೆ ವ್ಯಾಪಕವಾದ ಮನ್ನಣೆಯಿತ್ತು. ಆ ಮಾನ್ಯತೆಗಾಗಿ ಶೂದ್ರ/ ಒಬಿಸಿ ಸಮುದಾಯಗಳು ಪೈಪೋಟಿಗಿಳಿದಿದ್ದವು. ಬಾಬರಿ ಮಸೀದಿ ಧ್ವಂಸ ಘಟನೆಯ ಬಳಿಕ ಕಲ್ಯಾಣ್‌ಸಿಂಗ್ ಸರಕಾರ ವಜಾಗೊಳಿಸಲ್ಪಟ್ಟಿತು ಹಾಗೂ ಅವರು ಜೈಲು ಸೇರಿ, ‘ಹೀರೋ’ ಎಂದೆನಿಸಿಕೊಂಡರು. ಉಮಾಭಾರತಿ ‘ಔರ್‌ಏಕ್ ಧಕ್ಕಾ ಮಾರೋ’ ಎಂಬ ಘೋಷಣೆಯೊಂದಿಗೆ ಬಾಬರಿ ಮಸೀದಿ ಧ್ವಂಸ ದಳಗಳ ನೇತೃತ್ವ ವಹಿಸಿದ್ದರು. ಆ ನೆಲೆಯಲ್ಲಿ ಮುಸ್ಲಿಮರಿಗೆ ಇನ್ನೂ ಹೆಚ್ಚಿನ ಬೆದರಿಕೆಯೆಂಬಂತೆ ಅವರು ಮಧ್ಯಪ್ರದೇಶದ ಪ್ರಪ್ರಥಮ ಒಬಿಸಿ ಮಹಿಳಾ ಮುಖ್ಯಮಂತ್ರಿಯಾದರು. ತನ್ನ ಬೆಂಕಿ ಕಾರುವ ಭಾಷಣಗಳಿಂದ ಸಂಘಪರಿವಾರದ ಇನ್ನೋರ್ವ ನಾಯಕಿಯಾಗಿ ಸಾಧ್ವಿ ರಿತಾಂಬರ ಹೊರಹೊಮ್ಮಿದರು. ಇಂತಹ ವಾತಾವರಣದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಒಬಿಸಿ ಸರ್ಟಿಫಿಕೇಟ್, ರಾಜಕೀಯರಂಗದಲ್ಲಿ ಅನುರಣನಗೊಂಡಿತು.
ಕಲ್ಯಾಣ್‌ಸಿಂಗ್ ಹಾಗೂ ಉಮಾಭಾರತಿ ಆಧ್ಯಾತ್ಮಿಕ ಚಿಂತಕರಾಗಿರಲಿಲ್ಲ. ಅವರು ಗಲಭೆ ಪ್ರಚೋದಕರಾಗಿದ್ದರು. ಈತನಕ ಆರೆಸ್ಸೆಸ್ ಒಬ್ಬನೇ ಒಬ್ಬ ಶೂದ್ರ/ಒಬಿಸಿ ಆಧ್ಯಾತ್ಮಿಕ ತತ್ವಜ್ಞಾನಿಯನ್ನು ಸೃಷ್ಟಿಸಿಲ್ಲ. ಸಂಘಪರಿವಾರದೊಳಗೂ ಸಹ ಆಧ್ಯಾತ್ಮಿಕ ಅಥವಾ ತತ್ವಜ್ಞಾನದ ಗ್ರಂಥಗಳ ನಿರಂತರ ಪಠಣವು ಶೂದ್ರ ಅಥವಾ ಒಬಿಸಿಯ ಕೆಲಸವೆಂದು ಈಗಲೂ ಪರಿಗಣಿಸಲಾಗಿಲ್ಲ. ಯಾಕೆಂದರೆ ಅದು ಹಿಂದೂ ಪರಂಪರೆಗೆ ವಿರುದ್ಧವಾದುದಾಗಿದೆ. ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಸರಸಂಘಚಾಲಕರು ಹಿಂದೂ ಪರಂಪರೆಯನ್ನು ಸಂರಕ್ಷಿಸುವುದನ್ನು ಪದೇ ಪದೇ ಒತ್ತಿ ಹೇಳುತ್ತಿರುತ್ತಾರೆ.
ಕಾಂಗ್ರೆಸ್ ಪಕ್ಷದಲ್ಲೂ ಸಹ ಶಶಿತರೂರ್ ಅವರಂತಹ ಶೂದ್ರ ಚಿಂತಕರು ಹಿಂದೂಧರ್ಮದಲ್ಲಿರುವ ಅಸಮಾನತೆಯ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಎತ್ತಬಲ್ಲವರಾಗಿದ್ದರೂ, ಅವರು ಕೂಡಾ ತನ್ನ ಪುಸ್ತಕ ಕೃತಿ ‘ವೈ ಐ ಆ್ಯಮ್ ಎ ಹಿಂದೂ’ನಲ್ಲಿ ಜಾತಿ ಹಾಗೂ ಶ್ರೇಣಿಕೃತ ವ್ಯವಸ್ಥೆಯನ್ನು ಪ್ರಶ್ನಿಸಿಲ್ಲ. ಇತ್ತೀಚೆಗೆ ನಡೆದ ಕೇರಳ ಸಾಹಿತ್ಯ ಉತ್ಸವದ ವೇಳೆ ನನ್ನೊಂದಿಗೆ ಖಾಸಗಿಯಾಗಿ ತರೂರ್, ಕೇರಳದ ನಾಯರ್‌ಗಳು ಜನಿವಾರಧಾರಿಗಳಾದ ದ್ವಿಜರಲ್ಲವಾದರೂ, ಅವರು ತಮ್ಮನ್ನು ಶೂದ್ರರೆಂದು ಪರಿಗಣಿಸುವುದಿಲ್ಲ. ನಾಯರ್‌ಗಳು ಹಲವಾರು ಧಾರ್ಮಿಕ ನಾಯಕರನ್ನು ಸೃಷ್ಟಿಸಿದ್ದರಾದರೂ, ಅವರು ಜಾತಿಭೇದರಹಿತ ದೃಷ್ಟಿಕೋನದಲ್ಲಿ ಹಿಂದೂಧರ್ಮವನ್ನು ನೋಡುತ್ತಿದ್ದರು. ಹೀಗಾಗಿ ಕೇರಳದಲ್ಲಿ ಕಮ್ಯೂನಿಸ್ಟರು ಕೂಡಾ ಕಲ್ಯಾಣ ಸಿಂಗ್ ಹಾಗೂ ಉಮಾಭಾರತಿ ಅವರಂತೆ ಜಾತಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿಲ್ಲ ಎಂದು ಅವರು ಹೇಳಿದ್ದರು.
ಹಿಂದೂಧರ್ಮದಲ್ಲಿ ದ್ವಿಜರ ಯಜಮಾನಿಕೆ ವಿರುದ್ಧ ಅಂಬೇಡ್ಕರ್ ಸವಾಲೆಸೆದಂತೆ, ಶೂದ್ರ/ಒಬಿಸಿ ಚಿಂತನೆಯು ಆರೆಸ್ಸೆಸ್ ಸಿದ್ಧಾಂತಕ್ಕೆ ಸವಾಲೆಸೆಯದೆ ಇದ್ದಲ್ಲಿ ಆರೆಸ್ಸೆಸ್/ಬಿಜೆಪಿಯು ಶೂದ್ರ/ಒಬಿಸಿಗಳಿಗೆ ಆಧ್ಯಾತ್ಮಿಕ ವಿಶ್ವಾಸಾರ್ಹತೆಯನ್ನು ನೀಡುತ್ತಿಲ್ಲ. ತಮ್ಮದೇ ಆದ ಚೌಕಟ್ಟಿನಲ್ಲಿಯೂ ಸಹ ಕಲ್ಯಾಣ್‌ಸಿಂಗ್ ಅಥವಾ ಉಮಾಭಾರತಿ ಸೈದ್ಧಾಂತಿಕ ಚಿಂತಕರಾಗಿಲ್ಲ. ಶೂದ್ರರು/ ಒಬಿಸಿಗಳು ತಮ್ಮ ಕೃಷಿಕ ಮನಸ್ಥಿತಿಯೊಂದಿಗೆ ಇನ್ನೋರ್ವ ಅಂಬೇಡ್ಕರ್ ಅವರನ್ನು ಸೃಷ್ಟಿಸುವ ಅಗತ್ಯವಿದೆ.
ಕೃಪೆ: countercurrents.org