ಬೀದಿಗಿಳಿದ ಜನಸಾಮಾನ್ಯರು, ಪರಿಹಾರವಾಗದ ರೈತರ ಸಂಕಷ್ಟಗಳು!

Update: 2020-02-25 04:32 GMT

ಆದರೆ ದೇಶದ ಸರಕಾರಗಳು ಕೆಲವೇ ಭಾರೀ ಕಾರ್ಪೊರೇಟ್‌ಗಳ ಮರ್ಜಿಗೆ ತಕ್ಕಂತೆ ಆಡಳಿತ ನಡೆಸುತ್ತಾ ಬಂದಿರುವುದರ ಪರಿಣಾಮ ಈಗಿನ ಕ್ಷೋಭೆಯ ವಾತಾವರಣಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವಾಗಿಯೇ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ತೆಗೆದುಕೊಂಡು ಹೋಗುವ ಪ್ರಯತ್ನಗಳು ಈಗ ಹೆಚ್ಚಾಗುತ್ತಿದೆ. ದುಗ್ಗಾಣಿ ಬೆಲೆಗೆ ಸಾರ್ವಜನಿಕ ಆಸ್ತಿಗಳ ಮಾರಾಟ ಇಲ್ಲವೇ ಖಾಸಗೀಕರಣ, ಸಾಂವಿಧಾನಿಕ ಚೌಕಟ್ಟುಗಳ ಸಡಿಲಿಕೆ ಇಲ್ಲವೇ ಮಾರ್ಪಡಿಸುವಿಕೆಗಳು ಬಿರುಸಾಗಿವೆ. ಪೌರತ್ವ ತಿದ್ದುಪಡಿ ಕಾಯ್ದೆಗಳ ಜಾರಿ ಅದರ ಭಾಗವೇ ಆಗಿದೆ. ಸಮಾಜದ ಜನಸಾಮಾನ್ಯರ ಮೇಲೆ ಪುಂಡರ, ಕಳ್ಳಕಾಕರ, ದರೋಡೆಕೋರರ ಕಿರುಕುಳ ಹಾಗೂ ಹಾವಳಿ ಹೆಚ್ಚಾಗ ತೊಡಗಿವೆ. ಹೀಗಾಗಿ ಜನಸಾಮಾನ್ಯರು ಬೀದಿಗಿಳಿದು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಬಂದಿದೆ.

ಇಂಡಿಯಾದ ಬೀದಿಗಳು ಇಂದು ಮಹಿಳೆಯರ, ಅಲ್ಪಸಂಖ್ಯಾತರ, ವಿದ್ಯಾರ್ಥಿಗಳ, ಬುದ್ಧ್ದಿಜೀವಿಗಳ ಹೋರಾಟಗಳು, ಘೋಷಣೆಗಳಿಂದ, ಭಿತ್ತಿಪತ್ರಗಳಿಂದ ತುಂಬಿಹೋಗಿವೆ. ನಗರ, ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಪ್ರತಿಭಟನೆಗಳು, ಸಮಾವೇಶಗಳು ನಡೆಯಲಾರಂಭಿಸಿವೆ. ಕಾಶ್ಮೀರ, ಪಂಜಾಬ್, ಈಶಾನ್ಯದ ರಾಜ್ಯಗಳು, ದಿಲ್ಲಿ, ಉತ್ತರಪ್ರದೇಶ, ಬಿಹಾರಗಳಿಂದ ಹಿಡಿದು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಒಡಿಶಾ, ಪಶ್ಚಿಮಬಂಗಾಳ, ಹೀಗೆ ದೇಶದ ಎಲ್ಲೆಡೆಯೂ ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಚಾರಿತ್ರಿಕ ರೀತಿಯ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸರಕಾರ ಮತ್ತದರ ಪಡೆಗಳ ವ್ಯಾಪಕ ಕಿರುಕುಳಗಳು, ದಮನಕಾಂಡಗಳು, ಹಿಂಸಾಚಾರಗಳು, ಕಗ್ಗೊಲೆಗಳ ನಡುವೆಯೂ ಈ ಹೋರಾಟ ನಿರಂತರತೆಯನ್ನು ಕಾಪಾಡುತ್ತಾ ವ್ಯಾಪಕಗೊಳ್ಳುತ್ತಾ ಹೋಗುತ್ತಿರುವುದು. ಇದು ಸ್ವಾತಂತ್ರ್ಯ ಹೋರಾಟ ನಂತರದ ದಶಕಗಳಲ್ಲೇ ವಿರಳವಾದ ಸಾಮಾಜಿಕ ವಿದ್ಯಮಾನವಾಗಿದೆ.

ಹೊಸ ರೀತಿಯ ಹೋರಾಟ ರೂಪ ಶಾಹೀನ್‌ಬಾಗ್‌ಗಳು ದೇಶದ ಹಲವೆಡೆಗಳಲ್ಲಿ ಆರಂಭವಾಗುತ್ತಾ ಮುನ್ನಡೆಯುತ್ತಲಿವೆ. ಈ ಮಧ್ಯೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ, ರಾಷ್ಟ್ರದ್ರೋಹದ ಪ್ರಕರಣಗಳನ್ನಾಗಿ ಮಾಡುವ ಕಾರ್ಯಗಳು ನಡೆಯುತ್ತಲೇ ಇವೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಕವಿಗಳು, ವಿದ್ಯಾರ್ಥಿಗಳು ಮೊದಲಾದ ದನಿಯೆತ್ತುವವರನ್ನು ಇಂತಹ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ. ಮಾಧ್ಯಮಗಳು ಸಾಮಾಜಿಕ ಹೋರಾಟಗಾರರ ತೇಜೋವಧೆಗಳಲ್ಲಿ ತೊಡಗಿವೆ. ಆದರೆ ನಡೆಯುತ್ತಿರುವ ಜನಹೋರಾಟಗಳ ಬಗ್ಗೆ, ದೇಶ ಹಾಗೂ ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ ಸಂದಿಗ್ಧತೆಗಳ ಕುರಿತು ಸುದ್ದಿ ಮಾಡುವ ಕನಿಷ್ಠ ವೃತ್ತಿಪರತೆಯನ್ನೂ ಇವುಗಳು ಪಾಲಿಸುತ್ತಿಲ್ಲ. ಬಹುತೇಕ ಕಾರ್ಪೊರೇಟ್‌ಮಯವಾಗಿರುವ ಈ ಮಾಧ್ಯಮಗಳು ಹೇಗಾದರೂ ಸರಿ ಲಾಭಗಳಿಸುವುದನ್ನೇ ಕಾಯಕ ಮಾಡಿಕೊಂಡು ಸುದ್ದಿಗಳನ್ನು ವಿಕೃತಗೊಳಿಸಿ, ರಂಜಿತಗೊಳಿಸಿ ಜನರನ್ನು ದಾರಿತಪ್ಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿವೆ. ಅದನ್ನೇ ಗಹನವಾಗಿ ತಮ್ಮದು ಇನ್ ಫೋಟೈನ್ಮೆಂಟ್ ವಾಹಿನಿಗಳು ಎಂದೆಲ್ಲಾ ಕರೆದುಕೊಳ್ಳುತ್ತಿವೆ. ಅವೈಜ್ಞಾನಿಕತೆ ಬಿತ್ತುತ್ತಾ ಜನರನ್ನು ಯಾಮಾರಿಸಿ ಲೂಟಿ ಹೊಡೆಯುವ ಜ್ಯೋತಿಷ್ಯ ಮೊದಲಾದವನ್ನು ತಮ್ಮ ವಾಹಿನಿಗಳ ಮೂಲಕ ಪ್ರಾಯೋಜನೆ ಮಾಡುತ್ತವೆ. ಗಂಟೆಯ ಲೆಕ್ಕದಲ್ಲಿ ಅವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆಯುತ್ತವೆ. ಯಾವುದೇ ಸಾಮಾಜಿಕ ಜವಾಬ್ದಾರಿಗಳನ್ನಾಗಲೀ, ಮಾಧ್ಯಮ ನೀತಿಗಳನ್ನಾಗಲೀ, ಮಾಧ್ಯಮ ವೃತ್ತಿಪರತೆಯನ್ನಾಗಲೀ ಕನಿಷ್ಠ ಮಟ್ಟದಲ್ಲೂ ಪಾಲಿಸಲಾಗದಂತಹ ಸ್ಥಿತಿಗೆ ಇವುಗಳು ತಲುಪಿವೆ. ಹೀಗಿರುವಾಗ ಇವುಗಳಿಗೆ ದೇಶ ಪ್ರೇಮವಾಗಲೀ ದೇಶದ ಜನರ ಬಗ್ಗೆ ಅಭಿಮಾನವಾಗಲೀ ಹೇಗೆ ಇರಲು ಸಾಧ್ಯ. ಕೇವಲ ಕಾರ್ಪೊರೇಟ್ ಅಭಿಮಾನ ಹಾಗೂ ಕಾರ್ಪೊರೇಟ್ ಕುರುಡುತನ ಮಾತ್ರ ಇರಲು ಸಾಧ್ಯ ತಾನೇ. ಇದು ಹಲವು ಮುದ್ರಣ ಮಾಧ್ಯಮಗಳಿಗೂ ಅನ್ವಯಿಸುತ್ತದೆ.

ದೇಶದ ರೈತಾಪಿಗಳ ಬಗ್ಗೆ ಈಗ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿಲ್ಲ. ಕೃಷಿ ಬಿಕ್ಕಟ್ಟು ತಂದ ಆತ್ಮಹತ್ಯಾಕಾರಕ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. 2015ರಿಂದ ಸರಕಾರ ಕೂಡ ಆ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುವ, ದೇಶದ ಜನರಿಗೆ ಹೇಳುವ ಗೋಜಿಗೆ ಹೋಗುತ್ತಿಲ್ಲ. ಅಧಿಕೃತವಾಗಿಯೇ ಅಂತಹ ಅಂಕಿ ಅಂಶ ಕಲೆಹಾಕಿ ಪ್ರಕಟಿಸುವ ಕಾರ್ಯವನ್ನು ಸರಕಾರ ನಿಲ್ಲಿಸಿದೆ. ಹಸಿರು ಕ್ರಾಂತಿಯಿಂದ ಆರಂಭವಾದ ಕೃಷಿ ಬಿಕ್ಕಟ್ಟು ನಂತರ ಜಾಗತೀಕರಣ ಕಾಲದಲ್ಲಿ ರೈತಾಪಿಗಳನ್ನು ಉಸಿರುಗಟ್ಟಿಸುವ ಮಟ್ಟ ತಲುಪಿಸಿ ಲಕ್ಷಾಂತರ ರೈತರನ್ನು ಆತ್ಮಹತ್ಯೆಗಳಿಗೆ ದೂಡಿತು. ಕರ್ನಾಟಕದಲ್ಲೂ ನೂರಾರು ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಈ ಬಾರಿ ಕೇಂದ್ರ ಸರಕಾರದ ಆಯವ್ಯಯದಲ್ಲಿ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಫಾರ್ಮಿಂಗ್‌ನಡಿ ತರುವ ಯೋಜನೆಯನ್ನು ಹೇಳಿದೆ. ಅಂದರೆ ರೈತಾಪಿಗಳ ಭೂಮಿಗಳಲ್ಲಿ ಭಾರೀ ಕಾರ್ಪೊರೇಟ್‌ಗಳ ಆಣತಿಯಂತೆ ಬೆಳೆಗಳನ್ನು ಬೆಳೆದು ಅವರು ನಿಗದಿಪಡಿಸಿದ ಬೆಲೆಯಲ್ಲಿ ಅವರಿಗೇ ಕೊಡುವ ತಂತ್ರಪೂರಿತವಾಗಿ ರೈತಾಪಿಗಳನ್ನು ಹಾಗೂ ರೈತರ ಭೂಮಿಗಳನ್ನು ನಾಶಮಾಡಿ ಪೂರ್ಣವಾಗಿ ಹಿಂಡಿ ಹೊಸಕಿ ಹಾಕುವ ಯೋಜನೆಯಿದು. ಮೋದಿ ಸರಕಾರ ಈ ಹಿಂದೆ ಭಾರೀ ಪ್ರಚಾರದೊಂದಿಗೆ ಘೋಷಿಸಿದ್ದ ರೈತಾಪಿಗಳ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವ ಯೋಜನೆ ಜಾರಿ ಮಾಡಿದ್ದು ಕಾಣಲಿಲ್ಲ. 16 ಅಂಶಗಳ ಕಾರ್ಯ ಸೂಚಿಯನ್ನು ಅದಕ್ಕಾಗಿ ಇಟ್ಟುಕೊಳ್ಳಲಾಗಿದೆ ಎಂದಿದ್ದರೂ ಅದಕ್ಕಾಗಿ ಬೇಕಾದ ಯೋಜನೆಯಾಗಲೀ ಹಣ ಒದಗಿಸುವಿಕೆಯಾಗಲೀ ಇನ್ನೂ ಮಾಡಲಿಲ್ಲ. ಈಗ ನೋಡಿದರೆ ರೈತಾಪಿಗಳ ಆದಾಯ ಮತ್ತಷ್ಟು ಕುಸಿತಕ್ಕೊಳಗಾಗಿದೆ. ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ, ರಸಗೊಬ್ಬರ, ಕೀಟನಾಶಕ, ಕಳೆನಾಶಕ ಇತ್ಯಾದಿಗಳಿಗೆ ನೀಡುವ ಸಹಾಯಧನ ಮೊದಲಾದವುಗಳಿಗೆ ಒದಗಿಸಬೇಕಿದ್ದ ಹಣದ ಪ್ರಮಾಣವನ್ನು ರೂ. 25,000 ಕೋಟಿಗಳಷ್ಟು ಈ ಬಾರಿಯ ಆಯವ್ಯಯದಲ್ಲಿ ಕಡಿತಗೊಳಿಸಲಾಗಿದೆ. ಇನ್ನು ಎಲ್ಲಿಯ ರೈತಾಪಿಗಳ ಆದಾಯ ದ್ವಿಗುಣಗೊಳಿಸುವಿಕೆ ನಡೆಯಲು ಸಾಧ್ಯ?. ತನ್ನ ಚುನಾವಣಾ ಭರವಸೆಗಳಲ್ಲಿ ಬಿಜೆಪಿಯು ರೈತಾಪಿಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಲಾಗುವುದು ಎಂದೆಲ್ಲಾ ಹೇಳಿದ್ದರೂ ಅದಕ್ಕಾಗಿ 2018-19ರಲ್ಲಿ ತೆಗೆದಿರಿಸಿದ ಹಣ ಕೇವಲ ರೂ. 4,100 ಕೋಟಿಗಳಾಗಿತ್ತು. 2019-20ರ ಆಯವ್ಯಯದಲ್ಲಿ ಅದೂ ಮತ್ತೂ ಕಡಿಮೆಯಾಗಿ 1,500 ಕೋಟಿ ರೂಪಾಯಿಗಳಿಗಿಳಿಯಿತು. ಹಣಕಾಸು ಸಚಿವಾಲಯದ ಪರಿಷ್ಕರಣದ ಕಾರಣ ಅದು ಮತ್ತೆ ಕೇವಲ 321 ಕೋಟಿ ರೂಪಾಯಿಗಳಿಗೆ ಇಳಿಸಲ್ಪಟ್ಟಿತ್ತು. 2020-21ನೇ ಸಾಲಿನ ಆಯವ್ಯಯದಲ್ಲಿ ಕೇವಲ 500 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಇನ್ನು 2018-19ರಲ್ಲಿ ಭಾರೀ ಪ್ರಚಾರ ನೀಡಿದ್ದ ಗ್ರಾಮೀಣ ಕೃಷಿ ಮಾರುಕಟ್ಟೆ ವ್ಯವಸ್ಥೆ ಜಾರಿಗೇ ತರಲಿಲ್ಲ. ಅದಕ್ಕೆಂದು 2,000 ಕೋಟಿ ರೂಪಾಯಿಗಳನ್ನು ತೆಗೆದಿರಿಸುವುದಾಗಿ ಘೋಷಿಸಿದ್ದರೂ ಖರ್ಚು ಮಾಡಿದ್ದು ಕೇವಲ ಶೇ. 0.5ರಷ್ಟು ಮಾತ್ರ. ಮೋದಿ ಸರಕಾರ ತನ್ನ ಮೊದಲ ಅವಧಿಯ ಮಧ್ಯಭಾಗದಲ್ಲಿ ರೈತಾಪಿಗಳಿಗೆ ನೆರವಾಗಲೆಂದು ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ’ ಎಂಬ ಬೆಳೆ ವಿಮೆಯ ಯೋಜನೆಯೊಂದನ್ನು ಪ್ರಕಟಿಸಿ ಅದಕ್ಕಾಗಿ ಹಣ ತೆಗೆದಿರಿಸಿತ್ತು. ಆದರೆ ಆ ಬೆಳೆವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪೆನಿಗಳ ಸುಪರ್ದಿಗೆ ಒಪ್ಪಿಸಿ ಆ ಹಣ ನೇರವಾಗಿ ಆ ಕಾರ್ಪೊರೇಟ್‌ಗಳ ತಿಜೋರಿ ಸೇರುವಂತೆ ನೋಡಿಕೊಂಡಿತ್ತು. ರೈತಾಪಿಗಳಿಗೆ ಅದರ ಪ್ರಯೋಜನ ಕೇವಲ ನಾಮ ಮಾತ್ರದ್ದಾಯಿತೇ ಹೊರತು ಬೇರೇನೂ ಆಗಲಿಲ್ಲ. ಸರಕಾರ ನೀಡಿದ ಮಾಹಿತಿಯ ಪ್ರಕಾರವೇ 2018-19ರಲ್ಲಿ ಖಾಸಗಿ ವಿಮಾ ಕಂಪೆನಿಗಳು ಒಟ್ಟು 29,035 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದವು. ಇದರಲ್ಲಿ ರೈತರಿಂದ ವಿಮಾ ಕಂತಾಗಿ ಸಂಗ್ರಹಿಸಿದ್ದ ರೂ. 4,889 ಕೋಟಿಗಳು ಸೇರಿವೆ. ಉಳಿದದ್ದು ಸರಕಾರ ನೀಡಿದ ಬೆಳೆ ವಿಮಾ ಹಣ. ಇನ್ನು ಭಾರೀ ಪ್ರಚಾರ ನೀಡಿದ ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯಿರುವ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ಖಾತ್ರಿಗೊಳಿಸುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕತೆ ಕೂಡ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾದ ಯೋಜನೆ. ಯಾಕೆಂದರೆ ನವಂಬರ್ 2019ರ ಸರಕಾರಿ ಮಾಹಿತಿಯಂತೆ ಕೇವಲ ನೋಂದಾಯಿಸಿಕೊಂಡ ಶೇ. 26ರಷ್ಟು ರೈತರು ಮಾತ್ರ ವಾರ್ಷಿಕ ಪೂರ್ಣ ಹಣವನ್ನು ಪಡೆದಿದ್ದಾರೆ. ಅಂದರೆ ಕೇಂದ್ರ ಸರಕಾರದ ಈ ಎಲ್ಲಾ ಘೋಷಣೆಗಳು ಕೇವಲ ಆಕ್ರೋಶಗೊಂಡಿರುವ ರೈತರನ್ನು ತಮ್ಮ ವೋಟಿನ ಬುಟ್ಟಿಗೆ ಬೀಳಿಸುವ ತಂತ್ರ ಮಾತ್ರ ಎನ್ನುವುದು ಅರ್ಥವಾಗುವ ವಿಚಾರ. ಈ ಎಲ್ಲಾ ಯೋಜನೆಗಳಿಗೆಂದು ತೆಗದಿರಿಸುವ ಹಣ ಅವುಗಳ ಪ್ರಚಾರದ ಜಾಹೀರಾತಿಗೆ ಬಳಕೆಯಾಗುವುದೇ ವಿನಹ ರೈತರ ಬಳಿ ತಲುಪುವುದೇ ಇಲ್ಲವೆನ್ನಲು ಹೆಚ್ಚಿನ ಸಂಶೋಧನೆಯ ಅಗತ್ಯವಿಲ್ಲ ತಾನೇ. ಇನ್ನು ಕೃಷಿ ಸಾಲಕ್ಕೆಂದು ತೆಗೆದಿರಿಸುವ ಹಣ ನೇರವಾಗಿ ಭಾರೀ ಕೃಷಿ ಹೆಸರಿನ ಕಾರ್ಪೊರೇಟ್‌ಗಳ ತಿಜೋರಿಗೆ ಸೇರುತ್ತಿವೆ. ಕೃಷಿ ಸಹಾಯಧನವೂ ಅದಕ್ಕೆ ಹೊರತಲ್ಲ. ಕೃಷಿ ಸಾಲಗಳನ್ನು ಈ ಕಾರ್ಪೊರೇಟ್‌ಗಳೇ ನೇರವಾಗಿ ಬ್ಯಾಂಕುಗಳಿಂದ ಪಡೆಯುತ್ತಿವೆ. ಹಾಗಾಗಿ ನಿಜವಾದ ಕೃಷಿಕರಿಗೆ ಬ್ಯಾಂಕ್ ಸಾಲ ಸೌಲಭ್ಯ ದೊರೆಯುವುದು ಮರೀಚಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿ ಬ್ಯಾಂಕುಗಳು ದಿವಾಳಿಯ ಹಂತ ತಲುಪಿರುವ ಈ ಸಂದರ್ಭದಲ್ಲಿ ರೈತಾಪಿಗಳ ಪರಿಸ್ಥಿತಿ ಮತ್ತೂ ಗಂಭೀರವಾಗಿದೆ. ಆಶ್ಚರ್ಯ ಅನಿಸಿದರೂ ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಿಲಯನ್ಸ್ ಕ್ಯಾಪಿಟಲ್, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್‌ನಂತಹ ಕೃಷಿಯೇತರ ಕಾರ್ಪೊರೇಟುಗಳಿಗೆ ಸಾಲ ನೀಡಿದ್ದಲ್ಲದೇ ಆ ಸಾಲಗಳನ್ನು ಅನುತ್ಪಾದಕ ಆಸ್ತಿ (ಎನ್‌ಪಿ ಎ) ಎಂದು ಘೋಷಿಸಿಕೊಂಡಿವೆ. ಅದರಲ್ಲಿ ರಿಲಯನ್ಸ್ ಕ್ಯಾಪಿಟಲ್ ನದೇ 1,100 ಕೋಟಿ ರೂಪಾಯಿಗಳಷ್ಟಿದೆ. ಅಂದರೆ ರೈತರ ಹೆಸರಿನ ಹಣಕಾಸು ಸಂಸ್ಥೆಗಳು, ಯೋಜನೆಗಳ ಜಾರಿಯ ಹಿಂದೆ ಇರುವವರು ಭಾರೀ ಕಾರ್ಪೊರೇಟ್‌ಗಳೇ ಅನ್ನುವುದು ಸ್ಪಷ್ಟ. ಹೀಗಿರುವಾಗ ಗ್ರಾಮೀಣ ರೈತಾಪಿಗಳು ಅನುಭವಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರ ಎಲ್ಲಿಂದ ಸಾಧ್ಯ. ಇವನ್ನೆಲ್ಲಾ ಮರೆಮಾಚಲು ಕಾರ್ಪೊರೇಟ್ ಫಾರ್ಮಿಂಗ್ ಎನ್ನುವ ಮತ್ತೂ ಅಪಾಯಕಾರಿ ಯೋಜನೆಗಳ ಜಾರಿಗೆ ಸರಕಾರ ಮುಂದಾಗಿದೆ. ಇದು ಅಳಿದುಳಿದ ಕೃಷಿ ಮತ್ತು ರೈತರನ್ನು ಸರ್ವನಾಶ ಮಾಡುವ ಕಾರ್ಪೊರೇಟ್ ಪ್ರಾಯೋಜಿತ ಯೋಜನೆಯಾಗಿದೆ. ರೈತರು ತಮ್ಮ ಜಮೀನಿನಲ್ಲೇ ಜೀತಗಾರರ ರೀತಿ ದುಡಿಯ ಬೇಕಾದ ಪರಿಸ್ಥಿತಿಗೆ ತರುತ್ತದೆ. ಕೊನೆಗೆ ತಮ್ಮ ಭೂಮಿಯನ್ನು ಕೂಡ ಕಳೆದುಕೊಳ್ಳಬೇಕಾದ ಸ್ಥಿತಿ.

ಈಗಾಗಲೇ ವೆನಿಲ್ಲಾ, ಟೊಮ್ಯಾಟೊ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಬೆಳೆಯುವ ರೈತರು ಅಂತಹ ಯೋಜನೆಗಳಿಗೆ ಸಿಲುಕಿ ಸರ್ವನಾಶವಾಗಿ ಹೋಗಿರುವ ಉದಾಹರಣೆಯಿದೆ. ಒಂದು ಅಥವಾ ಎರಡು ಅವಧಿಗೆ ಮಾತ್ರ ಸೀಮಿತಗೊಳಿಸಿಕೊಂಡ ಕೆಲವರು ಅದರಿಂದ ಹಣಕಾಸು ಲಾಭಗಳನ್ನು ಗಳಿಸಿರಬಹುದು ಬಿಟ್ಟರೆ ಒಟ್ಟಾರೆಯಾಗಿ ಅದು ಮಾರಣಾಂತಿಕ ಹೊಡೆತಗಳನ್ನೇ ರೈತಾಪಿಗಳಿಗೆ ಕೊಡುತ್ತದೆ. ಇದರಿಂದ ಕೆಲವು ಭಾರೀ ಕಂಪೆನಿಗಳು ಕಡಿಮೆ ಖರ್ಚು ಮಾಡಿ ಲಾಭಗಳನ್ನು ಕೊಳ್ಳೆ ಹೊಡೆಯುತ್ತವೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News