ದೇಶ ವಿಭಜನೆಯಿಂದಲೇ ಭಾರತ ಒಂದಾಗಿ ಉಳಿಯಿತೇ?

Update: 2020-02-25 18:35 GMT

ಕಾಂಗ್ರೆಸ್ ಪಕ್ಷವು ವಿಭಜನೆಗೆ ಒಪ್ಪದೇ ಇರುತ್ತಿದ್ದಲ್ಲಿ ಭಾರತ ಒಂದು ದುರ್ಬಲ ಸರಕಾರವಾಗಿರುತ್ತಿತ್ತು ಹಾಗೂ ಒಂದು ವಿಭಜಿತ ದೇಶವಾಗಿರುತ್ತಿತ್ತು. ದೇಶದ ಎಲ್ಲ ಭಾಗಗಳನ್ನು ಒಟ್ಟಾಗಿ ಇಟ್ಟುಕೊಳ್ಳಲು ಅದು ಅಸಮರ್ಥವಾಗಿ ಸತತವಾಗಿ ಪತನದ ಅಂಚಿನಲ್ಲಿರುತ್ತಿತ್ತು ಎನ್ನುವುದನ್ನು ಐತಿಹಾಸಿಕ ಪುರಾವೆಗಳು ರುಜುವಾತು ಪಡಿಸುತ್ತವೆ. ದೇಶವು ತುಂಡು ತುಂಡಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷವು ವಿಭಜನೆಗೆ ಒಪ್ಪುವ ಮೂಲಕ ದೇಶಕ್ಕೆ ಒಂದು ದೊಡ್ಡ ಉಪಕಾರ ಮಾಡಿತ್ತು. ಇದು ಪೂರ್ವಾಗ್ರಹ ಪೀಡಿತ ಪ್ರಚಾರದಿಂದ ಅಲ್ಲಗಳೆಯಲಾಗದಂತಹ, ವಿರೋಧಿಸಲಾಗದಂತಹ ಐತಿಹಾಸಿಕವಾಗಿ ಖಚಿತಪಡಿಸಿ ಕೊಳ್ಳಬಹುದಾದ ಒಂದು ವಾಸ್ತವವಾಗಿದೆ.


ದೇಶದ ವಿಭಜನೆಗೆ ಕಾಂಗ್ರೆಸ್ ಪಕ್ಷವನ್ನು ಬೈಯುವುದು ಈಗ ಒಂದು ಫ್ಯಾಶನ್ ಆಗಿದೆ. ವಿಭಜನೆಯಿಂದ ನಿಜವಾಗಿ ಫಲಾನುಭವಿಗಳಾದ ಬಲಪಂಥದ ಕೆಲವು ವರ್ಗಗಳು, ಗುಂಪುಗಳು ಈ ವಾದದ ಪ್ರಬಲ ಪ್ರತಿಪಾದಕರಾಗಿವೆ. ಆದರೆ ದೇಶದ ವಿಭಜನೆ ಆಗದಿದ್ದಲ್ಲಿ ಅವಿಭಜಿತ ಭಾರತದ ಜನಸಂಖ್ಯಾ ಅನಿವಾರ್ಯತೆಗಳಿಂದಾಗಿ ಈಗ ಹಿಂದುತ್ವವನ್ನು ಮುಂದು ಮಾಡಿಕೊಂಡು ಫಲಾನುಭವಿಗಳಾಗಿರುವ ಪಕ್ಷಗಳು ಶಾಶ್ವತವಾಗಿ ಅಪ್ರಸ್ತುತವಾಗಿಬಿಡುತ್ತಿದ್ದವು. ಯಾಕೆಂದರೆ ಶೇ. 25ರಿಂದ ಶೇ. 30 ಮುಸ್ಲಿಮ್ ಜನಸಂಖ್ಯೆ; ಮುಸ್ಲಿಮ್ ಬಹುಸಂಖ್ಯಾತರಿರುವ ಐದು ಮತ್ತು ಪ್ರಾಯಶಃ ಆರು ಮುಸ್ಲಿಮ್ ಪ್ರಾಂತಗಳು, ಅವುಗಳಲ್ಲಿ ಬಂಗಾಲ ಮತ್ತು ಪಂಜಾಬ್ ಇರುವ ಅವಿಭಜಿತ ಭಾರತದಲ್ಲಿ ಹಿಂದುತ್ವವಾದಿ ಪಕ್ಷಗಳು ಅಪ್ರಸ್ತುತವಾಗದೆ ಇರುತ್ತಿರಲಿಲ್ಲ. ಈ ವಿಷಯ ಈಗ ಬೇಡ. ಕಾಂಗ್ರೆಸ್ ನಾಯಕತ್ವ, ವಿಶೇಷವಾಗಿ ಜವಾಹರ ಲಾಲ್ ನೆಹರೂ ದೇಶದ ವಿಭಜನೆಯನ್ನು ಒಪ್ಪಿಕೊಳ್ಳದೆ ಇರುತ್ತಿದ್ದಲ್ಲಿ ಭಾರತ ಇಂದು ನಾವು ಕಾಣುವಂತಹ ಭಾರತವಾಗಿ ಉಳಿಯದೆ ಹಲವು ತುಂಡುಗಳಾಗಿ ಇರುತ್ತಿದ್ದವು. ಯಾಕೆ? ಎನ್ನುವ ಪ್ರಶ್ನೆಗೆ ಕಾರಣಗಳು ಹೀಗಿವೆ.

ವಿಭಜನೆಗೆ ಬದಲಿಯಾಗಿ (ಆಲ್ಟರ್ನೇಟಿವ್) ದೇಶದ ಮುಂದೆ ಇದ್ದದ್ದು 1946ರ ಕ್ಯಾಬಿನೆಟ್ ಮಿಶನ್ ಪ್ಲಾನ್ ಯೋಜನೆ. ಈ ಯೋಜನೆಯ ಪ್ರಕಾರ ಒಂದು ದುರ್ಬಲ ಕೇಂದ್ರ ಸರಕಾರವಿದ್ದ ಒಂದು ಸಡಿಲವಾದ ಫೆಡರಲ್ ಚೌಕಟ್ಟು ಅಸ್ತಿತ್ವಕ್ಕೆ ಬರುತ್ತಿತ್ತು. ಈ ಯೋಜನೆ ಧಾರ್ಮಿಕ ಬಹುಸಂಖ್ಯಾತರ ಆಧಾರದಲ್ಲಿ ರಾಜ್ಯಗಳನ್ನು ರಚಿಸಿದಷ್ಟೇ ಅಲ್ಲದೆ ರಾಜರ ಆಡಳಿತದ ರಾಜ್ಯಗಳ ಪ್ರಶ್ನೆಯನ್ನು, ಭವಿಷ್ಯವನ್ನು ರಾಜರುಗಳ ಮತ್ತು ದುರ್ಬಲ ಕೇಂದ್ರದ ನಡುವಿನ ಒಂದು ಪ್ರಶ್ನೆಯಾಗಿ ಉಳಿಯುವಂತೆ ಮಾಡುತ್ತಿತ್ತು. ಆಗ ಕುಟಿಲ ಬುದ್ಧಿಯ ರಾಜರನ್ನು, ಹಿಂದೂ ಮತ್ತು ಮುಸ್ಲಿಮ್ ಎರಡೂ ಕಡೆಯ ದೊರೆಗಳನ್ನು ನಿಭಾಯಿಸುವುದು, ನಿಯಂತ್ರಿಸುವುದು ದುರ್ಬಲ ಕೇಂದ್ರದ ಅಧಿಕಾರಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ, ಕ್ಯಾಬಿನೆಟ್ ಮಿಶನ್ ಯೋಜನೆಯನ್ನು ಒಪ್ಪಿಕೊಂಡ ಮುಸ್ಲಿಮ್ ಲೀಗ್‌ನ ನಿಲುವಳಿ ಹಾಗೂ ಇತರ ದಾಖಲೆಗಳು ಈ ಯೋಜನೆಯು ಅಂತಿಮವಾಗಿ ಪಾಕಿಸ್ತಾನದ ರಚನೆಗೆ ಒಂದು ಹಾದಿಯಾಗುತ್ತದೆ ಎನ್ನುವ ನಂಬಿಕೆಯಿಂದಲೇ ಮುಸ್ಲಿಮ್ ಲೀಗ್ ಈ ಯೋಜನೆಯನ್ನು ಒಪ್ಪಿಕೊಂಡಿತ್ತೆಂಬುದನ್ನು ರುಜುವಾತು ಪಡಿಸುತ್ತವೆ. ಯಾವುದೇ ಪ್ರಾಂತ ತನ್ನ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ಬಹುಮತದ ಮೂಲಕ ಸಂವಿಧಾನದ ವಿಧಿ/ನಿಯಮಗಳನ್ನು ಪುನರ್ ಪರಿಶೀಲಿಸಬಹುದು ಎಂದು ಈ ಯೋಜನೆಯಲ್ಲಿ ಹೇಳಲಾಗಿತ್ತು. ಯೋಜನೆ ಅನುಷ್ಠಾನಕ್ಕೆ ಬಂದ ಮೊದಲ ಹತ್ತು ವರ್ಷಗಳ ಬಳಿಕ ಮತ್ತು ಆ ಬಳಿಕ ಪ್ರತೀ ಹತ್ತು ವರ್ಷಗಳ ಮಧ್ಯವಿರಾಮದ (ಇಂಟರ್‌ವೆಲ್) ಬಳಿಕ ಯಾವುದೇ ಪ್ರಾಂತ ಹೀಗೆ ಸಂವಿಧಾನದ ವಿಧಿ ನಿಯಮಗಳ ಪುನರ್ ಪರಿಶೀಲನೆಗೆ ಒತ್ತಾಯಿಸಬಹುದೆಂದು ಯೋಜನೆಯಲ್ಲಿ ಹೇಳಲಾಗಿತ್ತು.

ಅಲ್ಲದೆ, 1946ರ ಸೆಪ್ಟಂಬರ್‌ನಲ್ಲಿ ರಚಿತವಾದ ಮಧ್ಯಂತರ ಸರಕಾರದ ಕಾರ್ಯ ವಿಧಾನವು ಮುಸ್ಲಿಮ್ ಲೀಗ್ ಆ ಸರಕಾರದ ಸುಗಮ ಮುನ್ನಡೆಗೆ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಮಧ್ಯಂತರ ಸರಕಾರವು ಎರಡು ವಿಭಿನ್ನ ದಿಕ್ಕುಗಳಲ್ಲಿ ಎಳೆಯಲ್ಪಡುವ ರಥದ ಹಾಗೆ ಎಂಬ ಭಾವನೆಯೇ ಭಾರತವು ಒಂದು ಅಸ್ತವ್ಯಸ್ತ ಆಡಳಿತದ ದೇಶವಾಗುವುದರಿಂದ ಅದನ್ನು ಉಳಿಸಲು ದೇಶದ ವಿಭಜನೆ ಒಂದೇ ಮಾರ್ಗ ಎನ್ನುವುದನ್ನು ಪಟೇಲರಿಗೆ ಮನವರಿಕೆ ಮಾಡಿಸಿತು. ಪಟೇಲರ ಪ್ರಸಿದ್ಧ ಮಾತುಗಳಲ್ಲಿ ಹೇಳುವುದಾದರೆ, ‘‘ಭಾರತವನ್ನು ಒಂದಾಗಿ (ಒಂದೇ ದೇಶವಾಗಿ) ಉಳಿಸಬೇಕಾದರೆ ಅದನ್ನು ವಿಭಜಿಸಲೇಬೇಕು.’’
ಶಾಶ್ವತವಾಗಿ ಚೂರು ಚೂರಾದ, ತುಂಡು ತುಂಡಾದ ಒಂದು ಭಾರತಕ್ಕಿಂತ ದೇಶದ ವಿಭಜನೆಯೇ ಉತ್ತಮ ಎಂದು ನೆಹರೂ ಅವರಿಗೆ ಮನವರಿಕೆ ಮಾಡಿಸಿದವರೇ ಸರ್ದಾರ್ ಪಟೇಲ್.
ದೇಶದ ವಿಭಜನೆಗೆ ನೆಹರೂರವರ ವಿರೋಧವು ಜಾತ್ಯತೀತತೆಗೆ ಅವರ ಸಂಪೂರ್ಣ ಬದ್ಧತೆಯನ್ನಾಧರಿಸಿದ್ದ ವಿರೋಧವಾಗಿತ್ತು. ಅವರು ಕೂಡ ಪಂಜಾಬ್ ಮತ್ತು ಬಂಗಾಳದಲ್ಲಿ ಮುಸ್ಲಿಮ್ ಲೀಗ್ ಅಧಿಕಾರದಲ್ಲಿರುವಾಗ, ಬಲಿಷ್ಠವಾದ, ಆಧುನಿಕವಾದ ಭಾರತದ ತನ್ನ ಕನಸು, ದರ್ಶನ ನನಸಾಗಲಾರದೆಂದು ಅಂತಿಮವಾಗಿ ಮನಗಂಡರು.
ವಿಭಜನೆಯ ಅವಶ್ಯಕತೆಯ ಬಗ್ಗೆ ನೆಹರೂ ಮತ್ತು ಪಟೇಲರಿಗೆ ಒಮ್ಮೆ ಮನವರಿಕೆಯಾದ ಬಳಿಕ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಹಾಗೂ ಮೌಲಾನಾ ಆಝಾದ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಎಲ್ಲರೂ ದೇಶದ ವಿಭಜನೆಯನ್ನು ಒಪ್ಪಿಕೊಂಡರು. ಖಾನ್ ಅಬ್ದುಲ್ ಗಫ್ಫಾರ್ ಖಾನ್ ವಿಭಜನೆ ವಿರುದ್ಧ ಮತ ಚಲಾಯಿಸಿದ್ದರು ಮತ್ತು ಮೌಲಾನಾ ಆಝಾದ್ ಮತವನ್ನು ಚಲಾಯಿಸಿರಲಿಲ್ಲ.

ಕಾಂಗ್ರೆಸ್ ಪಕ್ಷವು ವಿಭಜನೆಗೆ ಒಪ್ಪದೇ ಇರುತ್ತಿದ್ದಲ್ಲಿ ಭಾರತ ಒಂದು ದುರ್ಬಲ ಸರಕಾರವಾಗಿರುತ್ತಿತ್ತು ಹಾಗೂ ಒಂದು ವಿಭಜಿತ ದೇಶವಾಗಿರುತ್ತಿತ್ತು. ದೇಶದ ಎಲ್ಲ ಭಾಗಗಳನ್ನು ಒಟ್ಟಾಗಿ ಇಟ್ಟುಕೊಳ್ಳಲು ಅದು ಅಸಮರ್ಥವಾಗಿ ಸತತವಾಗಿ ಪತನದ ಅಂಚಿನಲ್ಲಿರುತ್ತಿತ್ತು ಎನ್ನುವುದನ್ನು ಐತಿಹಾಸಿಕ ಪುರಾವೆಗಳು ರುಜುವಾತು ಪಡಿಸುತ್ತವೆ. ದೇಶವು ತುಂಡು ತುಂಡಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷವು ವಿಭಜನೆಗೆ ಒಪ್ಪುವ ಮೂಲಕ ದೇಶಕ್ಕೆ ಒಂದು ದೊಡ್ಡ ಉಪಕಾರ ಮಾಡಿತ್ತು. ಇದು ಪೂರ್ವಾಗ್ರಹ ಪೀಡಿತ ಪ್ರಚಾರದಿಂದ ಅಲ್ಲಗಳೆಯಲಾಗದಂತಹ, ವಿರೋಧಿಸಲಾಗದಂತಹ ಐತಿಹಾಸಿಕವಾಗಿ ಖಚಿತಪಡಿಸಿ ಕೊಳ್ಳಬಹುದಾದ ಒಂದು ವಾಸ್ತವವಾಗಿದೆ.

(ಲೇಖಕರು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)
ಕೃಪೆ: thehindu

Writer - ಮುಹಮ್ಮದ್ ಅಯ್ಯೂಬ್

contributor

Editor - ಮುಹಮ್ಮದ್ ಅಯ್ಯೂಬ್

contributor

Similar News