ಫ್ಯಾಕ್ಟ್ ಚೆಕ್: 'ಚಪ್ಪಾಳೆಯ ಕಂಪನದಿಂದ ಕೊರೋನ ವೈರಸ್ ನಾಶ' ಎನ್ನುವ ಸುದ್ದಿ ಸುಳ್ಳು

Update: 2020-03-23 13:12 GMT

ಮುಂಬೈ: 'ರವಿವಾರ ಜನತಾ ಕರ್ಫ್ಯೂ ಸಂದರ್ಭ ಜನರು ಜತೆಯಾಗಿ ಚಪ್ಪಾಳೆ ತಟ್ಟುವುದರಿಂದ ವಾತಾವರಣದಲ್ಲಿ ವೈಬ್ರೇಶನ್ ಅಥವಾ ಕಂಪನ ಸೃಷ್ಟಿಯಾಗಿ ಅದರಿಂದ ಕೊರೋನವೈರಸ್ ನಾಶವಾಗುವುದು' ಎಂದು ಟ್ವೀಟ್ ಮಾಡಿರುವ ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವಿಟರಿಗರಿಂದ ತರಾಟೆಗೊಳಗಾಗಿದ್ದಾರೆ. ತರಾಟೆಗೊಳಗಾಗುತ್ತಿದ್ದಂತೆಯೇ ಅಮಿತಾಭ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಪ್ರೆಸ್ ಇನ್ಫಾರ್ಮೇಶನ್ ಬ್ಯುರೋದ ಫ್ಯಾಕ್ಟ್ ಚೆಕ್ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಈ ಚಪ್ಪಾಳೆ ಕಂಪನ ಸಿದ್ಧಾಂತ ಸರಿಯಲ್ಲ ಎಂದು ಹೇಳಿರುವ ಹೊರತಾಗಿಯೂ ಹಿರಿಯ ನಟ ಅಂತಹ ಟ್ವೀಟ್ ಮಾಡಿರುವುದು ಟ್ವಿಟ್ಟರಿಗರನ್ನು ಆಕ್ರೋಶಕ್ಕೀಡು ಮಾಡಿದೆ.

"ಟಿ 3479 - ಒಂದು ಅಭಿಪ್ರಾಯ: ಸಂಜೆ 5 ಗಂಟೆಗೆ ಮಾರ್ಚ್ 22, ಅಮಾವಾಸ್ಯೆ, ತಿಂಗಳಿನ ಅತ್ಯಂತ ಕಗ್ಗತ್ತಲಿನ ರಾತ್ರಿ. ಬ್ಯಾಕ್ಟೀರಿಯಾ ಕೆಟ್ಟ ಶಕ್ತಿಗಳು ತಮ್ಮ ಗರಿಷ್ಠ ಸಾಮರ್ಥ್ಯದಲ್ಲಿರುತ್ತವೆ. ಚಪ್ಪಾಳೆಯಿಂದ ಉಂಟಾಗುವ ಕಂಪನಗಳು ವೈರಾಣುವಿನ ಸಾಮರ್ಥ್ಯವನ್ನು ನಾಶಗೊಳಿಸುವುದು. ಚಂದ್ರ ಹೊಸ ನಕ್ಷತ್ರ ರೇವತಿಯತ್ತ ಸಾಗುತ್ತದೆ. ಜತೆಯಾಗಿ ನಡೆಸುವ ಈ ಚಪ್ಪಾಳೆ ಪ್ರಕ್ರಿಯೆ ರಕ್ತ ಸಂಚಲನವನ್ನು ಉತ್ತಮಗೊಳಿಸುವುದು'' ಎಂದು ಟ್ವೀಟ್‍ನಲ್ಲಿ ಅಮಿತಾಬ್ ಹೇಳಿದ್ದರು. ಜತೆಗೆ ಮೂರು ಪ್ರಶ್ನೆಯ ಚಿಹ್ನೆಗಳನ್ನೂ ಹಾಕಿರುವ ಬಿಗ್ ಬಿ ಇಲ್ಲಿ ತಮ್ಮ ಸ್ವಂತ ಅಭಿಪ್ರಾಯ ಶೇರ್ ಮಾಡಿದ್ದರೋ ಅಥವಾ ಇನ್ನೊಬ್ಬರ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದರೋ ಎಂಬುದು ತಿಳಿದಿಲ್ಲ.

ಅಮಿತಾಭ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಬಚ್ಚನ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಯಿತಲ್ಲದೆ ಇಂತಹ ಅಂಧಶ್ರದ್ಧೆಗಳನ್ನು ಪ್ರೋತ್ಸಾಹಿಸಿದ್ದಕ್ಕೆ ಹಲವರು ಅವರ ವಿರುದ್ಧ ಕಿಡಿಕಾರಿದ್ದಾರೆ.

ಇದೇ ರೀತಿಯ ಹೇಳಿಕೆಯನ್ನು ಮಲಯಾಳಂ ನಟ ಮೋಹನ್ ಲಾಲ್ ಕೂಡ ನೀಡಿದ್ದರು. ಮನೋರಮಾ ನ್ಯೂಸ್ ಜೊತೆ ಮಾತನಾಡಿದ್ದ ಅವರು, "ಒಟ್ಟಾಗಿ ಚಪ್ಪಾಳೆ ತಟ್ಟುವುದು ದೊಡ್ಡ ಪ್ರಕ್ರಿಯೆ. ಇದರ ಶಬ್ಧವು ಮಂತ್ರದಂತಿರಲಿದ್ದು, ಹಲವು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಸಾಯುತ್ತವೆ" ಎಂದಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ ಕೇರಳದಲ್ಲಿ ಕೊರೋನ ವೈರಸ್ ಕುರಿತು ಮೋಹನ್ ಲಾಲ್ ಚಾನೆಲ್ ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News