​ಕೊರೋನ ವಾರ್ಡ್‌ಗೆ ನಿಯೋಜಿಸಿದ್ದಕ್ಕೆ ವೈದ್ಯ ದಂಪತಿ ರಾಜೀನಾಮೆ !

Update: 2020-03-25 04:03 GMT
ಸಾಂದರ್ಭಿಕ ಚಿತ್ರ

ಜೆಮ್‌ಶೆಡ್‌ಪುರ : ಕೊರೋನ ವಾರ್ಡ್ ಕರ್ತವ್ಯಕ್ಕೆ ನಿಯೋಜಿಸಿದ ಹಿನ್ನೆಲೆಯಲ್ಲಿ ವೈದ್ಯ ದಂಪತಿ ವೃತ್ತಿಗೆ ರಾಜೀನಾಮೆ ನೀಡಿರುವ ಪ್ರಕರಣ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಿಂದ ವರದಿಯಾಗಿದೆ. ವೈದ್ಯ ದಂಪತಿ ವಾಟ್ಸ್ಆ್ಯಪ್ ಸಂದೇಶದ ಮೂಲಕ ಮತ್ತು ಬಳಿಕ ಇ-ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ಆರೋಗ್ಯ ಕಾರ್ಯದರ್ಶಿ ಡಾ. ನಿತಿನ್ ಮದನ್ ಕುಲಕರ್ಣಿ ಅವರ ಸೂಚನೆಯಂತೆ ಕರ್ತವ್ಯಕ್ಕೆ ತಕ್ಷಣವೇ ಮರು ಹಾಜರಾಗುವಂತೆ 24 ಗಂಟೆಗಳ ಗಡುವು ನೀಡಿ ಡಾ. ಅಲೋಕ್ ತಿರ್ಕೆ ದಂಪತಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ. ಮಂಜು ದುಬೆ ಹೇಳಿದ್ದಾರೆ.

ರಾಜ್ಯ ಆರೋಗ್ಯ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ 24 ಗಂಟೆಗಳ ಒಳಗಾಗಿ ಕರ್ತವ್ಯಕ್ಕೆ ಮರು ಹಾಜರಾಗುವಂತೆ ಡಾ. ತಿರ್ಕೆ ಅವರಿಗೆ ನೋಟಿಸ್ ನೀಡಿದ್ದೇನೆ. ತಪ್ಪಿದಲ್ಲಿ ಜಾರ್ಖಂಡ್ ಸಾಂಕ್ರಾಮಿಕ ರೋಗ (ಕೋವಿಡ್-19) ನಿಬಂಧನೆಗಳು-2020 ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ- 1897ರ ಅನ್ವಯ ಎಫ್‌ಐಆರ್ ದಾಖಲಿಸಲಾಗುವುದು. ತಕ್ಷಣ ಕರ್ತವ್ಯಕ್ಕೆ ಮರಳದಿದ್ದಲ್ಲಿ ಅವರ ಎಂಸಿಐ ನೋಂದಣಿಯನ್ನು ಕೂಡಾ ರದ್ದುಪಡಿಸಲಾಗುವುದು ಎಂದು ದುಬೆ ಎಚ್ಚರಿಸಿದ್ದಾರೆ.

ಈ ಮೊದಲು ಜಿಲ್ಲಾ ಖನಿಜ ನಿಧಿ ಟ್ರಸ್ಟ್‌ನಲ್ಲಿ ಸೇವೆಯಲ್ಲಿದ್ದ ಅವರು ಹೊಸದಾಗಿ ಆರಂಭವಾದ ದುಮ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರುವ ಸಲುವಾಗಿ ರಾಜೀನಾಮೆ ನೀಡಿದ್ದರು. ಡಿಎಂಸಿಎಚ್‌ಗೆ ಕೂಡಾ ರಾಜೀನಾಮೆ ನೀಡಿದ ಅವರು ಸದರ್ ಅಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ಸೇರಿದ್ದರು. ಅವರನ್ನು ಮೂರು ದಿನಗಳ ಹಿಂದೆ ಕೊರೋನ ವೈರಸ್ ಐಸೊಲೇಶನ್ ವಾರ್ಡ್‌ಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ದಂಪತಿಯನ್ನು ಹೊರತುಪಡಿಸಿ ಕೊರೋನ ಕರ್ತವ್ಯಕ್ಕೆ ನಿಯೋಜಿಸಿದ 23 ವೈದ್ಯರಲ್ಲಿ ಯಾರೂ ರಾಜೀನಾಮೆ ನೀಡಿಲ್ಲ ಅಥವಾ ರಜೆ ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಾ. ತಿರ್ಕೆ ತಮ್ಮ ರಾಜೀನಾಮೆ ಪತ್ರದಲ್ಲಿ ಪತ್ನಿ ಡಾ. ಸೌಮ್ಯಾ ಅವರಿಗೆ ಆರೋಗ್ಯ ಸಮಸ್ಯೆಯ ಕಾರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News