ಗ್ರಾಮಗಳ ಮೇಲೆ ಕೊರೋನದ ಪರಿಣಾಮ
ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಕೊರೋನ ವೈರಸ್ ಪರಿಣಾಮಗಳನ್ನು ಕೆಲವು ಸಂಸ್ಥೆಗಳು ಅಂದಾಜು ಮಾಡಿ ವಿಶ್ಲೇಷಣೆ ಮಾಡಿವೆ. ಅವುಗಳಲ್ಲಿ ಮೋಡ್ಸಿ ಇನ್‌ವೆಸ್ಟರ್ ಸೇವಾ ಸಂಸ್ಥೆಯು ಒಂದು. ಈ ಸಂಸ್ಥೆಯ ಪ್ರಕಾರ ಮೊದಲ ಹಂತದ 21 ದಿನಗಳ ಲಾಕ್‌ಡೌನ್‌ನ್ನು ಪ್ರಧಾನ ಮಂತ್ರಿ ಪ್ರಕಟಿಸಿದ 10 ದಿನಗಳ ನಂತರ, ಭಾರತದ ಜಿಡಿಪಿ ಬೆಳವಣಿಗೆಯು ಶೇ.5.3 ರಿಂದ ಶೇ.2.5 ಕಡಿಮೆಯಾಗಲಿದೆ. ಇದರ ಪರಿಣಾಮಗಳು 2021ರ ಹಣಕಾಸು ವರ್ಷದ ಮೇಲೆ ಬಹಳ ದಟ್ಟವಾದ ಪರಿಣಾಮವನ್ನು ಹೂಡಿಕೆಯ ಮೇಲೆ, ಉತ್ಪಾದನಾ ವಲಯದ ಮೇಲೆ ಉಂಟು ಮಾಡುತ್ತದೆ.
ಕೊರೋನ ವೈರಸ್/ಕೋವಿಡ್-19 ದೇಶಿಯ ಹಾಗೂ ಜಾಗತಿಕ ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಸುನಾಮಿ ರೀತಿಯ ಬಿಕ್ಕಟ್ಟುಗಳನ್ನು ಉಂಟು ಮಾಡಿದೆೆ. ಜಾಗತಿಕ ಹಣಕಾಸು ಬಂಡವಾಳದ ಮಾರುಕಟ್ಟೆಯ ಹಾಗೂ ರಾಷ್ಟ್ರೀಯ ಬಂಡವಾಳ ಶಾಹಿಗಳ ಪ್ರಭಾವವನ್ನು ಮತ್ತು ಕನಸುಗಳನ್ನು ಒಟ್ಟಿಗೆ ತಣ್ಣಗೆ ಮಾಡುತ್ತಿದೆ. ಲಾಕ್‌ಡೌನ್ ನಮ್ಮ ದೇಶವನ್ನು ಪೂರ್ಣವಾಗಿ ಪ್ರವೇಶಿಸಿದೆ. ಇದರ ಪರಿಣಾಮವಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಒಂದು ಅಥವಾ ಎರಡು ಗಂಟೆಯಲ್ಲಿ ಜನರು ತಮ್ಮ ಅತ್ಯಂತ ಅಗತ್ಯ ವಸ್ತು ಪದಾರ್ಥಗಳನ್ನು ಖರೀದಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿವೆ. ಈ ಸಮಯದಲ್ಲಿ ಜಾಗತಿಕ ಮುಕ್ತ ಮಾರುಕಟ್ಟೆಯು ಇಂಧನಗಳನ್ನು ಸುಡುವುದನ್ನು ನಿಲ್ಲಿಸಿದಂತೆ ತೋರುತ್ತದೆ.
ಮಾಲಿನ್ಯವು ಕಡಿಮೆಯಾದಂತೆ ಕಾಣುತ್ತದೆ. ಆದರೆ ಇಡೀ ಜಗತ್ತು ಮತ್ತೊಂದು ರೀತಿಯಲ್ಲಿ ಕೊರೋನ ವೈರಸ್ ವಿಸ್ತರಣೆಯ ಮೂಲಕ ಸುಡುವ ಕುಲುಮೆಯಾಗಿ ಮಾರ್ಪಟ್ಟಿದೆ. ಹೊಸದೊಂದು ಮಾಲಿನ್ಯ ತೆಕ್ಕೆಗೆ ನಮ್ಮಂತಹ ದೇಶಗಳು ಸಿಲುಕಿಕೊಳ್ಳುತ್ತಿವೆ. ನಗರಗಳಿಗೆ ವಲಸೆ ಬಂದು, ಅಲ್ಲಿ ಬದುಕನ್ನು ಕಂಡುಕೊಂಡಿದ್ದ ಗ್ರಾಮೀಣ ಜನರು ಈಗ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಇವರ ಪ್ರವೇಶದಿಂದ ಗ್ರಾಮೀಣ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳ ಪೂರ್ಣ ಅಂದಾಜು ಇನ್ನಷ್ಟೇ ಸಿಗಬೇಕಿದೆ. ಗ್ರಾಮೀಣ ಸಮಾಜಗಳ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಅರಿಯಲು, ಒಟ್ಟಾರೆ ಜಾಗತಿಕ ಆರ್ಥಿಕ ಪರಿಸ್ಥಿತಿ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮಹತ್ವದಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೊರೋನ ವೈರಸ್ ಪರಿಣಾಮದಿಂದ ಜಾಗತಿಕ ಆರ್ಥಿಕತೆಯು ಟ್ರಿಲಿಯನ್‌ಗಟ್ಟಲೆ ಕುಸಿಯುವ ಮುನ್ಸೂಚನೆಯನ್ನು ನೀಡಿದೆ. ಹಣಕಾಸು ಬಂಡವಾಳಶಾಹಿಗಳ ಅಡಿಯಲ್ಲಿ ನಡೆಯುವ ದೈನಂದಿನ ವ್ಯವಹಾರದಲ್ಲಿ 1.4 ಬಿಲಿಯನ್ ಆಘಾತವನ್ನು ನೀಡಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸಾಂಕ್ರಾಮಿಕವು ಈಗಾಗಲೇ ಚೀನಾದ ಜಿಡಿಪಿ ಪ್ರತಿಶತ ಶೇ.5ರಷ್ಟು ನಿಧಾನವಾಗಿದೆ. ಈ ಬೆಳವಣಿಗೆಯ ದರವು ಕಳೆದ ಮೂರು ದಶಕಗಳಲ್ಲಿ ಅತ್ಯಂತ ಕಡಿಮೆ. ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಕೊರೋನ ವೈರಸ್ ಪರಿಣಾಮಗಳನ್ನು ಕೆಲವು ಸಂಸ್ಥೆಗಳು ಅಂದಾಜು ಮಾಡಿ ವಿಶ್ಲೇಷಣೆ ಮಾಡಿವೆ. ಅವುಗಳಲ್ಲಿ ಮೋಡ್ಸಿ ಇನ್‌ವೆಸ್ಟರ್ ಸೇವಾ ಸಂಸ್ಥೆಯು ಒಂದು. ಈ ಸಂಸ್ಥೆಯ ಪ್ರಕಾರ ಮೊದಲ ಹಂತದ 21 ದಿನಗಳ ಲಾಕ್‌ಡೌನ್‌ನ್ನು ಪ್ರಧಾನ ಮಂತ್ರಿ ಪ್ರಕಟಿಸಿದ 10 ದಿನಗಳ ನಂತರ, ಭಾರತದ ಜಿಡಿಪಿ ಬೆಳವಣಿಗೆಯು ಶೇ.5.3 ರಿಂದ ಶೇ.2.5 ಕಡಿಮೆಯಾಗಲಿದೆ. ಇದರ ಪರಿಣಾಮಗಳು 2021ರ ಹಣಕಾಸು ವರ್ಷದ ಮೇಲೆ ಬಹಳ ದಟ್ಟವಾದ ಪರಿಣಾಮವನ್ನು ಹೂಡಿಕೆಯ ಮೇಲೆ, ಉತ್ಪಾದನಾ ವಲಯದ ಮೇಲೆ ಉಂಟು ಮಾಡುತ್ತದೆ. ಈ ರೀತಿಯ ಆರ್ಥಿಕ ಏರಿಳಿತವನ್ನು ಅಂದಾಜಿಸಲು ಹಲವು ಜಾಗತಿಕ ಮಾನದಂಡಗಳಿವೆ. ಈ ಮಾನದಂಡಗಳು ಬಹುತೇಕ ಸಂಘಟಿತ ವಲಯವನ್ನು ಕೇಂದ್ರೀಕರಿಸಿರುತ್ತವೆ.
ಆದರೆ ಈ ಎಲ್ಲ ಆರ್ಥಿಕ ಚಟುವಟಿಕೆಗಳ ಭಾಗವಾಗಿದ್ದ ಅಸಂಘಟಿತ ವಲಯದ ಕುರಿತು ಇನ್ನು ಚರ್ಚೆಗಳು ಪೂರ್ಣಪ್ರಮಾಣದಲ್ಲಿ ಆಗುತ್ತಿಲ್ಲ. ಆದರೆ, ಮೇಲ್ನೋಟಕ್ಕೆ ಕಾಣುವುದೇನೆಂದರೆ, ಕೊರೋನ ವೈರಸ್ ಲಾಕ್‌ಡೌನ್ ಮೂಲಕ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರ ದುಡಿಮೆಯ ಅವಕಾಶಗಳನ್ನು ಕಸಿದುಕೊಂಡಿದೆ. ಕಟ್ಟಡ ಕಾರ್ಮಿಕರು, ದಿನಗೂಲಿ ಕೆಲಸಗಾರರು, ಹೊಟೇಲ್, ಗಾರ್ಮೆಂಟ್, ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದವರು ತಮ್ಮ ದಿನನಿತ್ಯದ ದುಡಿಮೆಯ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಬಹುತೇಕರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿ ದುಡಿಯುತ್ತಿದ್ದಂತಹವರು. ಈಗ ಅಲ್ಲಿ ಇರಲು ನೆಲೆ ಇರದೆ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಪೂರ್ಣ ‘ಲಾಕ್‌ಡೌನ್’ ನಂತರ ಸಾರಿಗೆ ವ್ಯವಸ್ಥೆಗಳು ಇರದ ಕಾರಣ ಕೆಲವರು ತಮ್ಮ ಸ್ವಂತ/ಸ್ನೇಹಿತರ ವಾಹನಗಳಲ್ಲಿ ಬಂದಿದ್ದರೆ, ಬಹುತೇಕ ಜನರು ಕಷ್ಟಪಟ್ಟು, ನೂರಾರು ಕಿಲೋಮೀಟರ್ ನಡೆದು, ತಮ್ಮ ತಮ್ಮ ಹಳ್ಳಿಗಳಿಗೆ ಬಂದಿದ್ದಾರೆ. ಪ್ರತಿ ಹಳ್ಳಿಗೆ, ಪ್ರತಿ ಮನೆಗೆ ಎಷ್ಟು ಜನ ಬಂದಿದ್ದಾರೆ? ಎಲ್ಲಿಂದ ಬಂದಿದ್ದಾರೆ? ಅವರ ವಯೋಮಾನ, ಲಿಂಗ ಇತ್ಯಾದಿ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆಯಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸ್ಥಿತಿಗತಿಯನ್ನೇ ನೋಡೋಣ. ಈ ತಾಲೂಕಿನಲ್ಲಿ 145 ಹಳ್ಳಿಗಳಿವೆ.
ಈ ತಾಲೂಕಿನ ಉಗ್ಗೇನಹಳ್ಳಿ ಎನ್ನುವ ಹಳ್ಳಿಯ ಒಟ್ಟು ಜನಸಂಖ್ಯೆ 169. ‘ಲಾಕ್‌ಡೌನ್’ ಪರಿಣಾಮವಾಗಿ ಈ ಹಳ್ಳಿಗೆ ನಗರ ಪ್ರದೇಶಗಳಿಂದ ಬಂದಿರುವ ಜನರ ಸಂಖ್ಯೆ 49. ಹಾಗೆಯೇ ಎಂ.ಕಾಮನಘಟ್ಟ ಹಳ್ಳಿಯ ಒಟ್ಟು ಜನಸಂಖ್ಯೆ 200. ಈ ಹಳ್ಳಿಗೆ ನಗರ ಪ್ರದೇಶದಿಂದ ಬಂದಿರುವ ಜನರ ಸಂಖ್ಯೆ 82. ಕೆ.ಕಾಮನಘಟ್ಟ ಎನ್ನುವ ಹಳ್ಳಿಯ ಒಟ್ಟು ಜನಸಂಖ್ಯೆ 147. ಈ ಹಳ್ಳಿಗೆ ನಗರ ಪ್ರದೇಶದಿಂದ ಬಂದಿರುವ ಜನರ ಸಂಖ್ಯೆ 12. ಅದೇ ಹಳ್ಳಿಗೆ ಹೊಂದಿಕೊಂಡಂತೆ ಇರುವ ಡಿ.ತುಮಕೂರು ಹಳ್ಳಿಯ ಒಟ್ಟು ಜನಸಂಖ್ಯೆ 804. ಈ ಹಳ್ಳಿಗೆ ನಗರ ಪ್ರದೇಶದಿಂದ ಬಂದಿರುವ ಜನರ ಸಂಖ್ಯೆ 162. ಒಟ್ಟು ಈ ನಾಲ್ಕು ಹಳ್ಳಿಗಳಿಗೆ ನಗರ ಪ್ರದೇಶದಿಂದ ಬಂದಿರುವ ಜನರ ಸಂಖ್ಯೆ 305. ಸರಾಸರಿ 75 ಜನರು ಈ ಹಳ್ಳಿಗಳಿಗೆ ನಗರ ಪ್ರದೇಶದಿಂದ ಬಂದಿರುತ್ತಾರೆ. ಇದು ನಾನು ಸಮೀಕ್ಷೆಯನ್ನು ನಡೆಸಿದ ಸಮಯದಲ್ಲಿ ಆ ಹಳ್ಳಿಗಳಿಗೆ ಬಂದ ಜನರ ಸಂಖ್ಯೆ. ಸಮೀಕ್ಷೆಯ ನಂತರವು ಅನೇಕ ಜನರು ಬಂದಿರುವ/ಬರುತ್ತಿರುವ ಮಾಹಿತಿ ಇದೆ. ಕರ್ನಾಟಕದಲ್ಲಿ 27,028 ಹಳ್ಳಿಗಳಿಗೆ ಸರಾಸರಿ ಇದೇ ಪ್ರಮಾಣದ ಜನರು ನಗರ ಪ್ರದೇಶಗಳಿಂದ ಬಂದಿರಬಹುದು. 305 ಜನರಲ್ಲಿ 10 ಜನರನ್ನು ಹೂರತುಪಡಿಸಿದ್ದರೆ, ಉಳಿದ 295 ಜನರು ಅಸಂಘಟಿತ ವಲಯದಲ್ಲಿ ಮೇಲೆ ತಿಳಿಸಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರ ಮಾಸಿಕ ಆದಾಯ ಅಂದಾಜು ಸರಾಸರಿ 15,000 ದಿಂದ 20,000 ರೂ. ಅಂದರೆ ನಗರ ಜೀವನ ಮಟ್ಟದೊಂದಿಗೆ ಹೋಲಿಸಿ ನೋಡಿದಾಗ, ಕೆಳ ಮಧ್ಯಮವರ್ಗಕ್ಕೆ ಸೇರಿದವರೆಂದು ಅಂದುಕೊಳ್ಳಬಹುದು (ಇದು ಕೂಡ ನಿರಂತರವಾಗಿ ನಿಯಮಿತವಾಗಿ ಆದಾಯ ಇದ್ದಾಗ ಮಾತ್ರ).
‘ಲಾಕ್‌ಡೌನ್’ ಪರಿಣಾಮವಾಗಿ ಹಳ್ಳಿಗಳಿಗೆ ಮರು ವಲಸೆ ಬಂದ ಪ್ರಕ್ರಿಯೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಮತ್ತು ಅದರ ಅಂತಿಮ ಪಥವನ್ನು ಊಹಿಸುವುದು ಕಷ್ಟ. ಆದರೆ ಈ ಕ್ಷಣವು ಈಗಾಗಲೇ ಸಮಾಜದ ಬಗ್ಗೆ ಪ್ರಶ್ನಿಸುವ ಮತ್ತು ಕಲಿಯುವ ಅಪರೂಪದ ಸಾಮೂಹಿಕ ಪ್ರಕ್ರಿಯೆಗೆ ನಮನ್ನು ತಂದು ನಿಲ್ಲಿಸಿದೆ. ಈ ಕ್ಷಣ ಭಯದಿಂದ ತುಂಬಿರುವಾಗ ಪ್ರತಿಯೊಬ್ಬರೂ ಏಕಕಾಲದಲ್ಲಿ ಕೆಲವು ಆಳವಾದ ಪ್ರಶ್ನೆಗಳನ್ನು ಕೇಳಲು ಕಾರಣವಾಗಿದೆ. ನನಗೆ ಏನಾಗುತ್ತದೆ? ನನ್ನ ಮಕ್ಕಳು, ಕುಟುಂಬ ಮತ್ತು ಸ್ನೇಹಿತರಿಗೆ ಏನಾಗುತ್ತದೆ? ನಮಗೆ ಸಾಕಷ್ಟು ಆಹಾರವಿದೆಯೇ? ನಾನು ಹಣ ಪಡೆಯುತ್ತೇನೆಯೇ? ನಾನು ಬಾಡಿಗೆ ನೀಡುತ್ತೇನೆಯೇ? ನನ್ನ ದುಡಿಮೆಗೆ ಮುಂದಿನ ದಾರಿ ಯಾವುದು? ನಾನು ಬ್ಯಾಂಕ್ ಸಾಲ ತಿರಿಸುವುದು ಹೇಗೆ? ಕೈಸಾಲವನ್ನು ತೀರಿಸುವುದು ಹೇಗೆ? ಬಡ್ಡಿ ನೀಡುವುದು ಹೇಗೆ? ಅವರಿಗೆ ಯಾವ ಕಾರಣ ನೀಡಲಿ? ಈ ಎಲ್ಲದಕ್ಕೂ ಯಾರು ಹೊಣೆ? ಭವಿಷ್ಯದಲ್ಲಿ ದುಡಿಮೆಗೆ ಎಲ್ಲಿಗೆ ಹೋಗುವುದು? ಯಾವ ಕೆಲಸ ಮಾಡುವುದು? ವಿಚಿತ್ರವಾದ ರೀತಿಯಲ್ಲಿ, ವ್ಯಕ್ತಿನಿಷ್ಠೆ ಅನುಭವವು ಸ್ವಲ್ಪಮಟ್ಟಿಗೆ ಸಾಮೂಹಿಕ ಮುಷ್ಕರದಂತೆಯೇ ಇರುತ್ತದೆ. ಆದರೆ ಅದು ಸ್ವಯಂ ಪ್ರೇರಿತವಲ್ಲದ, ಮೇಲಿನಿಂದ ಕೆಳಗಿಳಿಯುವ ಹೈಪರ್ ಪರಮಾಣುಕರಣವಾಗಿದೆ. ಹಿಂದಿನ ಶತಮಾನದ ನಿಜವಾದ ಸಾಮೂಹಿಕ ಮುಷ್ಕರಗಳು ಆ ಯುಗದ ವಿರೋಧಾಭಾಸಗಳನ್ನು ಸ್ಪಷ್ಟ್ಟಪಡಿಸಿದಂತೆ. ಜನಸಾಮಾನ್ಯರ ಕತ್ತು ಹಿಸುಕಿದ ರಾಜಕೀಯ ವರ್ತಮಾನದ ಮತ್ತು ಅದರ ರಾಜಕೀಯ ಆರ್ಥಿಕತೆಯ ಹುಚ್ಚುತನವನ್ನು ಸ್ಪಷ್ಟ್ಟವಾಗಿ ವಿವರಿಸುತ್ತದೆ. ಕ್ವಾರಂಟೈನ್ ಅದರ ಕೋಮು ಲಕ್ಷಣಗಳಿಂದ ಕೂಡಿದ ಮುಷ್ಕರದಂತೆ ಕಾಣುತ್ತದೆ.
ಆದರೆ ಇಡೀ ಪ್ರಕ್ರಿಯೆ ಜನರ ಮನಸ್ಸಿನ ಮತ್ತು ಆರ್ಥಿಕತೆ ಎರಡಕ್ಕೂ ಆಳವಾದ ಆಘಾತವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಪರಿಸ್ಥಿತಿಯು ಈಗಾಗಲೇ ಸಂಭವಿಸಿರುವ ಭೂತಕಾಲದ ಅಭಿವೃದ್ಧಿ ಪರಿಣಾಮಗಳನ್ನು ಮತ್ತು ವರ್ತಮಾನದ ಸವಾಲುಗಳನ್ನು ಅರಿಯುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಜೊತೆಗೆ ಭವಿಷ್ಯದಲ್ಲಿ ದುಡಿಮೆಯ ಅನಿಶ್ಚಿತತೆಯನ್ನು ನಾವು ಎದುರಿಸಬೇಕಾಗಿದೆ. ಒಂದು ಕಡೆ ನಾವು ಸಾರ್ವತ್ರಿಕವಾಗಿ ದಟ್ಟವಾದ ಹಸಿವು, ಅಪೌಷ್ಟಿಕತೆ, ಬಡತನ ಮತ್ತು ನಿರುದ್ಯೋಗವನ್ನು ಕಾಣುತ್ತಿದ್ದೇವೆ. ಮತ್ತೊಂದೆಡೆ ಎಲ್ಲ ಕ್ಷೇತ್ರಗಳಲ್ಲಿ ಅನಿಯಮಿತ ಹಣಕಾಸು ಬಂಡವಾಳದ ಪ್ರಭಾವವನ್ನು ಕಾಣುತ್ತಿದ್ದೇವೆ. ಇದಕ್ಕೆ ಜಾಗತೀಕರಣವು ತನ್ನ ಸುಗಮ ಕಾರ್ಯಾಚರಣೆಗೆ ಸರಕಾರಗಳು ದುರ್ಬಲವಾಗುವುದು ಅಗತ್ಯ. ಇದಕ್ಕೆ ಸರಕಾರಗಳು ಎಲ್ಲ ರೀತಿಯ ಅಧಿಕಾರವನ್ನು ವಿಕೇಂದ್ರೀಕರಿಸಿಕೊಳ್ಳಬೇಕು. ಅದೇನೇ ಇರಲಿ, ಈಗ ನಮ್ಮ ಸರಕಾರಗಳು ಹಣಕಾಸು ಬಂಡವಾಳಶಾಹಿ ಮಾರುಕಟ್ಟೆಯ ಶಕ್ತಿಗಳತ್ತ ವಾಲಿವೆ. ಇಂತಹ ದ್ವಂದ್ವ ಬೆಳವಣಿಗೆಗಳನ್ನು ಕುರಿತು ಆರ್ಥಿಕ ತಜ್ಞ johen kenneth galbrait's ಅವರು ಹೀಗೆ ಹೇಳುತ್ತಾರೆ. ‘‘ಈ ನಂಬಿಕೆ ಹೇಗಿದೆ ಎಂದರೆ, ಜೂಜು ಕುದುರೆಗಳಿಗೆ ಅತ್ಯಂತ ಉತ್ತಮವಾದ ಹುರುಳಿಯನ್ನು ತಿನ್ನಿಸುವುದು. ಗುಬ್ಬಿಗಳು ತಮ್ಮ ಆಹಾರಕ್ಕೆ ಕುದುರೆಯ ಲದ್ದಿಯನ್ನು ತನ್ನ ಕೊಕ್ಕಿನಿಂದ ಕೆದಕಿ ಹುಡುಕಿಕೊಳ್ಳಬೇಕಿವೆ’’. ಅತ್ಯಂತ ಸವಾಲಿನ ಪರಿಸ್ಥಿತಿಯಿದು ಎನ್ನುವುದು ಸತ್ಯವಾಗಿದ್ದರೂ ಸೂಕ್ತ ಪರಿಹಾರಗಳು ಇಲ್ಲವೆಂದೇನಲ್ಲ. ಭಾರತದ ಮಟ್ಟಿಗೆ, ಮಾರುಕಟ್ಟೆ ಶಕ್ತಿಗಳ ಕೈಗೇ ಸಂಪೂರ್ಣ ಅಧಿಕಾರ ನೀಡುವ ಮೊದಲೇ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದು ಅತ್ಯಗತ್ಯವಾಗಿದೆ. ಬುದ್ಧ, ಬಸವ, ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆಗಳ ಕುರಿತು ಮತ್ತೆ ಮತ್ತೆ ಮಾತನಾಡಬೇಕಿದೆ. ಆ ಮೂಲಕ ಸಂವಿಧಾನದ ಆಶಯದಲ್ಲಿ ರೂಪುಗೊಳ್ಳುವ ಯಾವುದೇ ಅಭಿವೃದ್ಧಿ ಮಾದರಿಯಿರಲಿ, ಅದು ಆಯಾ ಪ್ರದೇಶದ ದಮನಿತರ ಬದುಕುಗಳಿಗೆ ಹೊಸ ಶಕ್ತಿಯನ್ನು ತುಂಬುವಂತಿರಬೇಕು. ಆ ಪ್ರದೇಶದ ಬಡವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿಗಳೇ ಸರಕಾರಗಳ ಪ್ರಪ್ರಥಮ ಆದ್ಯತೆಯಾಗಬೇಕು. ಆಗ ಮಾತ್ರ ಜಾಗತೀಕರಣ ತಂದೊಡ್ಡಿರುವ ಕೋವಿಡ್-19 ಲಾಕ್‌ಡೌನ್‌ನ ಸವಾಲುಗಳನ್ನು ನಾವು ಎದುರಿಸಬಹುದು.