ಹೋಂ ಕ್ವಾರಂಟೈನ್ ನಲ್ಲಿರುವವರು ಬಳಸಿದ ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ಹೇಗೆ ?

Update: 2020-04-04 14:31 GMT

ಕೇಂದ್ರ ಸರ್ಕಾರ ಕೊರೋನ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿದೆ. ಅದರಲ್ಲಿ ಬಹುತೇಕ ಜನರಲ್ಲಿ ಯಾವುದೇ ಲಕ್ಷಣ ಕಂಡು ಬಂದಿರುವುದಿಲ್ಲ. ಇದುವರೆಗೂ ನಡೆದ  ಪರೀಕ್ಷೆಯಲ್ಲೂ ಬಹುತೇಕ ನೆಗೆಟಿವ್ ವರದಿಗಳೇ ಬಂದಿವೆ.

ಈ ನಡುವೆ ಹೋಂ ಕ್ವಾರಂಟೈನ್ ನಲ್ಲಿ ಇರುವ  ವ್ಯಕ್ತಿಗಳು ಬಳಸುವ ಬಯೋ ಮೆಡಿಕಲ್ ತ್ಯಾಜ್ಯ ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು 28 ದಿನ ಮನೆಯಲ್ಲಿ ಇರಬೇಕಾಗುತ್ತದೆ. ಅವರು ಬಳಸಿದ ಯಾವುದೇ ವಸ್ತುಗಳನ್ನು ಮರುಬಳಕೆ ಮಾಡುವುದು ಅಪಾಯಕಾರಿ ಅಥವಾ ಅವರು ಬಳಸಿದ ಔಷಧಿ ಹೊರಗೆಸೆಯಲು ಅವಕಾಶ ಇಲ್ಲ.

ಕೊರೋನ ಬಯೋ ಮೆಡಿಕಲ್ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಧೆಗಳಿಗೆ ಒಂದು ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬ ಸಲಹೆಗಳಿವೆ.

ಹೋಂ ಕ್ವಾರಂಟೈನ್ ನಲ್ಲಿರುವವರ ಮನೆ ಬಾಗಿಲಿಗೆ ಹೋಗಿ ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಸೂಚಿಸಿದ ರೀತಿಯಲ್ಲಿ ಹಳದಿ ಬಣ್ಣದ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಕೆಲಸ ನಿರ್ವಹಿಸುವವರಿಗೆ ತರಬೇತಿ ನೀಡಿ ಪೂರ್ಣ ಸುರಕ್ಷತಾ ಸಾಧನಗಳೊಂದಿಗೆ ಕಳುಹಿಸಬೇಕು. ಅವರಿಗೆ ಪಿಪಿಇ ಮತ್ತು ಎನ್ 95 ಮಾಸ್ಕ್ ನೀಡಬೇಕು. ಕೇಂದ್ರ ಸರ್ಕಾರ ಇದನ್ನು ಅವಶ್ಯ ಸೇವೆ ಅಡಿಯಲ್ಲಿ ತಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಸೂಚನೆಯಲ್ಲಿ ಕ್ವಾರಂಟೈನ್ ಕ್ಯಾಂಪ್ ಮತ್ತು ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಸಂಪರ್ಕದಲ್ಲಿ ಇರುವ ಎಲ್ಲರನ್ನು ಕನಿಷ್ಟ ಹದಿನಾಲ್ಕು ದಿನ ಹೋಂ ಕ್ವಾರಂಟೈನ್ ನಿಗಾದಲ್ಲಿರಿಸಲು ಸೂಚಿಸಿದೆ. ಅವರು ಬಳಸಿದ ವಸ್ತುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಸಂಪೂರ್ಣವಾಗಿ ನಾಶ ಪಡಿಸಲು ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಸುರಕ್ಷತಾ ಕ್ರಮ ಜರುಗಿಸಿದ ಬಗ್ಗೆ ಎಲ್ಲೂ ಕಾಣುತ್ತಿಲ್ಲ. ಸರ್ಕಾರ ದಿನ ನಿತ್ಯ ನಡೆಸುವ ಯಾವುದೇ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿರುವುದಿಲ್ಲ. ಸರ್ಕಾರ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮತ್ತು ಔಷಧಿಗಳನ್ನು ಸೂಕ್ತ ರೀತಿಯಲ್ಲಿ ನಾಶಪಡಿಸುವ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ಸಣ್ಣ ತಪ್ಪು ಮಹಾ ದುರಂತಕ್ಕೆ ಕಾರಣವಾದೀತು.

Writer - ಎಂ.ಯೂಸುಫ್ ಪಟೇಲ್

contributor

Editor - ಎಂ.ಯೂಸುಫ್ ಪಟೇಲ್

contributor

Similar News