ಬದಲಾಗಬೇಕಿದೆ ಜಲ ಸಂಪನ್ಮೂಲ ನಿರ್ವಹಣಾ ವಿಧಾನ

Update: 2020-04-09 17:24 GMT

ಭಾರತವು ಜಲಸಂಪನ್ಮೂಲದಲ್ಲಿ ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು ಕ್ಷೀಣಿಸುತ್ತಿರುವ ನೈಸರ್ಗಿಕ ಸರಬರಾಜು ಮತ್ತು ಹೆಚ್ಚುತ್ತಿರುವ ಬೇಡಿಕೆ. ಎರಡನೆಯದು ನೀರಿನ ಅಸಮಾನ ಹಂಚಿಕೆಯಿಂದಾದ ಜಲಸಂಘರ್ಷಗಳು. ಈ ಉಭಯ ಸಮಸ್ಯೆಗಳ ಪರಿಹಾರಕ್ಕಾಗಿ ಜಲನಿರ್ವಹಣಾ ತಂತ್ರಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಉದ್ದೇಶಗಳ ವ್ಯಾಪ್ತಿಗೆ ತರುವ ಹಾಗೂ ವೈಜ್ಞಾನಿಕ ದತ್ತಸಂಚಯಗಳ ಅಗತ್ಯವಿದೆ.
 


ಇಡೀ ಜಗತ್ತು ಕೊರೋನದ ಕರಿನೆರಳಿನಲ್ಲಿ ನರಳುತ್ತಿದೆ. ಭಾರತವೂ ಇದಕ್ಕೆ ಹೊರತಲ್ಲ. ಇಡೀ ದೇಶ ಕೊರೋನ ಓಡಿಸುವ ಬಗ್ಗೆ ಚಿಂತನೆ ನಡೆಸಿದೆ. ಕೊರೋನ ಓಡಿಸುವ ಧಾವಂತದಲ್ಲಿ ದೇಶದ ಗಂಭೀರ ಸಮಸ್ಯೆಗಳು ಮರೆಮಾಚುತ್ತಿವೆ. ಅದರಲ್ಲಿ ಜಲ ಸಮಸ್ಯೆಯೂ ಒಂದು. ಇಡೀ ದೇಶವಾಸಿಗಳು ಗೃಹಬಂಧಿಯಾಗಿರುವ ಹೊತ್ತಿನಲ್ಲಿ ಒಂದಿಷ್ಟು ಜಲಸಮಸ್ಯೆ ಮತ್ತು ಅದನ್ನು ನಿವಾರಿಸುವತ್ತ ಚಿತ್ತ ಹರಿಸಿದರೆ ಉತ್ತಮ ಎಂಬುದು ನನ್ನ ಭಾವನೆ.

ನಮ್ಮ ದೇಶದಲ್ಲಿ ಸಾಕಷ್ಟು ನದಿಗಳಿವೆ. ಆದರೆ ಜಲಾನಯನ ಪ್ರದೇಶಗಳ ನಿರ್ವಹಣೆ ತೀರಾ ಕೆಳ ಹಂತದಲ್ಲಿದೆ. ಜಲಾನಯನ ಪ್ರದೇಶಗಳನ್ನು ಜಲವಿಜ್ಞಾನ ಘಟಕಗಳಾಗಿ ಬಳಸುವುದಕ್ಕಿಂತ ಹೆಚ್ಚಾಗಿ ದೇಶದ ಜಲಯೋಜನೆ ಹಾಗೂ ಆಡಳಿತಾತ್ಮಕ ಅಭಿವೃದ್ಧ್ದಿಗಾಗಿ ಬಳಸುತ್ತಿದ್ದೇವೆ.

ಭಾರತವು ನವೀಕರಿಸಬಹುದಾದ ಸಂಪನ್ಮೂಲಗಳಲ್ಲಿ ವಿಶ್ವದ ಶೇ.4ರಷ್ಟು ಮಾತ್ರ ಹೊಂದಿದೆ. ದೇಶದ ಶುದ್ಧ ನೀರಿನ ಮೂಲ ಮಳೆನೀರು. ಭಾರತದಲ್ಲಿ ವಾರ್ಷಿಕವಾಗಿ ಸರಾಸರಿ 4,000 ಬಿಲಿಯನ್ ಘನ ಮೀಟರ್ ಮಳೆಯಾಗುತ್ತದೆ. ಆದಾಗ್ಯೂ ಶುದ್ಧ ನೀರಿನ ಹಂಚಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಏಕೆಂದರೆ ದೇಶದ ವಿವಿಧ ಪ್ರದೇಶಗಳಲ್ಲಿ ಬೀಳುವ ಮಳೆಯಲ್ಲಿ ವ್ಯಾಪಕ ವ್ಯತ್ಯಾಸಗಳಿವೆ.

 ಗೃಹೋಪಯೋಗಿ, ಕೈಗಾರಿಕೆ ಮತ್ತು ಕೃಷಿ ಬಳಕೆಗಳಿಗೆ ನಿತ್ಯವೂ ನೀರಿನ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಜಲಾನಯನ ಪ್ರದೇಶಗಳು ನೀರಿನ ಒತ್ತಡಕ್ಕೆ ಸಿಲುಕಿವೆ. ನೀರಿನ ಬೇಡಿಕೆ ಮತ್ತು ಹಂಚಿಕೆ ದೇಶಾದ್ಯಂತ ಅಸಮಾನವಾಗಿ ವಿತರಿಸಲ್ಪಟ್ಟಿದೆ. ದಿನೇ ದಿನೇ ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳು ಹಾಗೂ ಬೆಳೆಯುತ್ತಿರುವ ಜನಸಂಖ್ಯೆಯಿಂದ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. 2001ರಲ್ಲಿ ತಲಾ ವಾರ್ಷಿಕ ನೀರಿನ ಲಭ್ಯತೆಯ ಪ್ರಮಾಣ 1,816 ಘನ ಮೀಟರ್ ಇತ್ತು. 2011ಕ್ಕೆ ಅದು 1,544 ಘನಮೀಟರ್‌ಗೆ ಇಳಿಯಿತು. ಇಂದಿನ ದಿನಮಾನಕ್ಕೆ ಅದರ ಪ್ರಮಾಣ ಇನ್ನೂ ಕಡಿಮೆಯಾಗಿದೆ. ದೇಶವು ಈಗಾಗಲೇ ನೀರಿನ ಒತ್ತಡವನ್ನು ಅನುಭವಿಸುತ್ತಿದ್ದು, ಜಲ ಸಮೃದ್ಧ್ದ ಪ್ರದೇಶಗಳಲ್ಲಿ ಜಲಸಂರಕ್ಷಣೆಯ ಮೂಲಸೌಲಭ್ಯಗಳನ್ನು ಮತ್ತು ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ನೀರಿನ ಬೇಡಿಕೆ ನಿರ್ವಹಿಸುವ ಅವಶ್ಯಕತೆ ಇದೆ.

ಭಾರತದ ಆರ್ಥಿಕತೆಯಲ್ಲಿ ಅಂತರ್ಜಲವು ಪ್ರಮುಖ ಪಾತ್ರ ವಹಿಸುತ್ತದೆ. ಅಂತರ್ಜಲವು ಶೇ.85ರಷ್ಟು ಗ್ರಾಮೀಣ ಬೇಡಿಕೆಯನ್ನು, ಶೇ.50ರಷ್ಟು ನಗರದ ಬೇಡಿಕೆಯನ್ನು ಹಾಗೂ ಶೇ.60ರಷ್ಟು ನೀರಾವರಿ ಅಗತ್ಯಗಳನ್ನು ಪೂರೈಸುತ್ತದೆ. ನೀರಿನ ಅತಿಯಾದ ಬೇಡಿಕೆಯು ಅನಿಯಂತ್ರಿತ ಅಂತರ್ಜಲ ಹೊರತೆಗೆಯುವಿಕೆಗೆ ಕಾರಣವಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಭಾರತವು ನಿಯತಕಾಲಿಕವಾಗಿ ಪ್ರವಾಹ ಮತ್ತು ಬರ ಎರಡನ್ನೂ ಅನುಭವಿಸುತ್ತಿದೆ. ದೇಶದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗದಷ್ಟು ಜನರು ಬರ ಅನುಭವಿಸುತ್ತಿದ್ದರೆ ಶೇ.12 ರಷ್ಟು ಪ್ರದೇಶವು ಪ್ರವಾಹಕ್ಕೆ ತುತ್ತಾಗಿದೆ. ಜಾಗತಿಕ ತಾಪಮಾನದ ಪರಿಣಾಮವು ಮಳೆ, ಹಿಮ ಕರಗುವಿಕೆ ಮತ್ತು ನೀರಿನ ಲಭ್ಯತೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.

‘ರಾಷ್ಟ್ರೀಯ ಜಲ ನೀತಿ-2012’ಯು ದೇಶದ ನೀರಿನ ಸಂಪನ್ಮೂಲ ಸಂರಕ್ಷಣೆ, ಅಭಿವೃದ್ಧ್ದಿ ಮತ್ತು ಸುಧಾರಿತ ನಿರ್ವಹಣೆಗಾಗಿ ಹಲವಾರು ಶಿಫಾರಸುಗಳನ್ನು ಮಾಡಿದೆ. ‘‘ನೀರಿನ ಒಟ್ಟಾರೆ ಕೊರತೆ ಮತ್ತು ನೀರಿನ ಮೌಲ್ಯದ ಬಗ್ಗೆ ಕಡಿಮೆ ಪ್ರಜ್ಞೆಯು ನೀರಿನ ವ್ಯರ್ಥ ಮತ್ತು ಅಸಮರ್ಥ ಬಳಕೆಗಳಿಗೆ ಕಾರಣವಾಗಿದೆ’’ ಎಂದು ರಾ.ಜ.ನೀ-2012 ಒತ್ತಿ ಹೇಳುತ್ತದೆ. ಭಾರತದ ನದಿ ಜಲಾನಯನ ಪ್ರದೇಶಗಳನ್ನು ಜಲವಿಜ್ಞಾನ ಘಟಕಗಳಾಗಿ ಬಳಸಿದ್ದಕ್ಕಿಂತ ಜಲಯೋಜನೆ ಮತ್ತು ಅಭಿವೃದ್ಧ್ದಿಯ ಆಡಳಿತಕ್ಕಾಗಿ ಬಳಸಿದ್ದೇ ಹೆಚ್ಚು. ಭಾರತದ ಜಲಯೋಜನೆಗಳು ಮುನ್ನೋಟದ ದೃಷ್ಟಿಯಿಂದ ರಚಿತವಾಗುತ್ತಿಲ್ಲ. ಬಹುತೇಕ ಜಲಯೋಜನೆಗಳನ್ನು ಆಡಳಿತಾತ್ಮಕ ಗಡಿಯ ಪ್ರಕಾರ ಮಾಡಲಾಗಿದೆ. ಹೆಚ್ಚಿನ ನದಿ ಜಲಾನಯನ ಪ್ರದೇಶಗಳನ್ನು ಹಲವಾರು ರಾಜ್ಯಗಳು ಹಂಚಿಕೊಂಡಿರುವುದರಿಂದ ನೀರಿನ ಸಂಘರ್ಷಕ್ಕೆ ಕಾರಣವಾಗಿವೆ. ಇಂದು ಪ್ರತಿ ರಾಜ್ಯದ ಆಂತರಿಕ ನೀರಿನ ಬೇಡಿಕೆ ಹೆಚ್ಚುತ್ತಿದೆ. ಕೃಷಿ, ನಗರೀಕರಣ ಮತ್ತು ಕೈಗಾರಿಕೆಗಳಿಗೆ ನೀರಿನ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ನದಿ ನಿರ್ವಹಣಾ ಯೋಜನೆಗಳು ನಿರ್ವಹಣಾ ವೈಫಲ್ಯದಿಂದ ಸಮಸ್ಯೆಗಳು ತೀವ್ರಗೊಂಡಿವೆ. ಭಾರತೀಯ ಸಂವಿಧಾನದ ಪ್ರಕಾರ ನೀರು ಎಂಬ ವಿಷಯವು ರಾಜ್ಯ ಪಟ್ಟಿಯಲ್ಲಿದೆ. ಆದಾಗ್ಯೂ ಅಂತರ್‌ರಾಜ್ಯ ನದಿಗಳ ಬಳಕೆಯ ಮೇಲಿನ ಘರ್ಷಣೆಯನ್ನು ಪರಿಹರಿಸಲು ಕೇಂದ್ರಕ್ಕೆ ಅವಕಾಶವಿದೆ. ಏಕೆಂದರೆ ಕೇಂದ್ರವು ಜಲಯೋಜನೆ ಮತ್ತು ಜಲಹಂಚಿಕೆಯನ್ನು ಯೋಜಿಸುತ್ತದೆ. ಕುಡಿಯುವ ನೀರು, ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಕೇಂದ್ರವು ತಾಂತ್ರಿಕ ನೆರವು ನೀಡುತ್ತದೆ. ಹಾಗಾಗಿ ಕೇಂದ್ರವು ರಾಜ್ಯ ರಾಜ್ಯಗಳ ನಡುವಿನ ಜಲಕಲಹಗಳನ್ನು ಬಗೆಹರಿಸಲು ಮಧ್ಯೆ ಪ್ರವೇಶ ಮಾಡುವುದು ಅನಿವಾರ್ಯವಾಗುತ್ತಿದೆ.

ಭಾರತದ ಮುಂದಿರುವ ಜಲಸವಾಲುಗಳು ಭಾರತವು ಜಲಸಂಪನ್ಮೂಲದಲ್ಲಿ ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು ಕ್ಷೀಣಿಸುತ್ತಿರುವ ನೈಸರ್ಗಿಕ ಸರಬರಾಜು ಮತ್ತು ಹೆಚ್ಚುತ್ತಿರುವ ಬೇಡಿಕೆ. ಎರಡನೆಯದು ನೀರಿನ ಅಸಮಾನ ಹಂಚಿಕೆಯಿಂದಾದ ಜಲಸಂಘರ್ಷಗಳು. ಈ ಉಭಯ ಸಮಸ್ಯೆಗಳ ಪರಿಹಾರಕ್ಕಾಗಿ ಜಲನಿರ್ವಹಣಾ ತಂತ್ರಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಉದ್ದೇಶಗಳ ವ್ಯಾಪ್ತಿಗೆ ತರುವ ಹಾಗೂ ವೈಜ್ಞಾನಿಕ ದತ್ತಸಂಚಯಗಳ ಅಗತ್ಯವಿದೆ. ದೇಶದ ಜಲನಿರ್ವಹಣಾ ಕ್ಷೇತ್ರವು ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದರೆ ನೀರಿನ ಬಜೆಟ್, ಹಂಚಿಕೆಯ ಯೋಜನೆ ಮತ್ತು ನಿರ್ವಹಣಾ ನಿರ್ಧಾರ ತೆಗೆದುಕೊಳ್ಳಲು ಬೇಕಾದ ಸಾಕಷ್ಟು ವೈಜ್ಞಾನಿಕ ಮಾಹಿತಿ ಲಭ್ಯತೆ ಇಲ್ಲದಿರುವುದು. ನೀರಿನ ಬೇಡಿಕೆಯ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಇದೆ. ಹಳ್ಳಿಗಳು, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆಗಳ ಬೇಡಿಕೆಗಳಲ್ಲಿ ವ್ಯತ್ಯಾಸಗಳಿವೆ. ತಲಾ ನೀರಿನ ಬಳಕೆ, ಜಾನುವಾರು ನೀರಿನ ಬಳಕೆ, ಕೃಷಿ ನೀರಿನ ಬಳಕೆ ಮತ್ತು ಕೈಗಾರಿಕಾ ನೀರಿನ ಬಳಕೆಗಳಲ್ಲಿ ವ್ಯತ್ಯಾಸಗಳಿದ್ದು ಎಲ್ಲಿ ಎಷ್ಟು ಪ್ರಮಾಣದ ನೀರು ಬಳಸಲಾಗುತ್ತದೆ ಎಂಬ ನಿಖರವಾದ ಅಂಕಿ-ಅಂಶಗಳಿಲ್ಲ.

ನೀರಿನ ಸರಬರಾಜು ಮೇಲ್ಮೈ ನೀರು ಮತ್ತು ಅಂತರ್ಜಲಗಳ ಪ್ರಮಾಣವನ್ನು ಅವಲಂಬಿಸಿದೆ. ಸರಾಸರಿ ವಾರ್ಷಿಕ ರಿಚಾರ್ಜ್ ಆಧಾರದ ಮೇಲೆ ಸರಬರಾಜು ನಿರ್ಧರಿತವಾಗುತ್ತದೆ. ನೀರಿನ ರಿಚಾರ್ಜ್ ಬಹುತೇಕವಾಗಿ ಮಾನ್ಸೂನ್‌ಗಳನ್ನು ಅವಲಂಬಿಸಿದೆ. ಸರಿಯಾದ ಸಮಯಕ್ಕೆ ಸಾಕಷ್ಟು ಮಳೆಯಾಗದ ಕಾರಣ ಹಾಗೂ ರಿಚಾರ್ಜ್ ವಿಧಾನಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಕಾರಣಗಳಿಗಾಗಿ ಜಲಮರುಪೂರಣ ಸಮರ್ಪಕವಾಗಿ ಆಗುತ್ತಿಲ್ಲ. ಸರಕಾರಿ ಅಂಕಿ ಅಂಶಗಳಿಗೂ ಹಾಗೂ ವಾಸ್ತವ ಸ್ಥಿತಿಗತಿಗೂ ಸಾಕಷ್ಟು ಅಂತರವಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಜಲಸಮಸ್ಯೆಗಳು ತಲೆದೋರುತ್ತಲೇ ಇವೆ.

ಜಲಾನಯನ ಪ್ರದೇಶದ ಹೊರಹರಿವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಹಾಗೂ ಅದನ್ನು ಸಂಗ್ರಹಿಸಿಕೊಳ್ಳುವ ಯೋಜನೆಗಳು ಮತ್ತು ಕಾರ್ಯತಂತ್ರಗಳು ದೇಶದಲ್ಲಿ ವಿಫಲವಾಗಿವೆ. ನದಿ ನೀರಿನ ಸದ್ಬಳಕೆ ಹಾಗೂ ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಧಾನಗಳಲ್ಲಿ ನಾವು ಸೋತಿದ್ದೇವೆ. ಪ್ರತಿಕ್ಷಣವೂ ಅಪಾರ ಪ್ರಮಾಣದ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೂರದೃಷ್ಟಿ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ನೀರಿನ ಅಸಮಾನ ಹಂಚಿಕೆಯು ಬಹುದೊಡ್ಡ ಸವಾಲಾಗಿದೆ. ವ್ಯರ್ಥವಾಗಿ ಪೋಲಾಗುತ್ತಿರುವ ನೀರು ಒಂದೆಡೆಯಾದರೆ ಇನ್ನೊಂದೆಡೆ ಕುಡಿಯಲು ಹನಿ ನೀರಿಗೂ ತತ್ವಾರ ಅನುಭವಿಸುವ ಪರಿಸ್ಥಿತಿ ಇದೆ. ಭಾರತವು ವಿಭಿನ್ನ ಭೌಗೋಳಿಕ ಲಕ್ಷಣಗಳುಳ್ಳ ಪ್ರದೇಶಗಳನ್ನು ಹೊಂದಿರುವುದರಿಂದ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸಗಳು ಸಹಜ. ಆದರೆ ಅಗತ್ಯವಿರುವ ಪ್ರದೇಶಗಳಿಗೆ ಕನಿಷ್ಠ ಪ್ರಮಾಣದ ಹಂಚಿಕೆಯು ನಡೆಯದಿರುವುದು ಜಲಸಂಘರ್ಷಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ನೀರಿನ ಗುಣಮಟ್ಟದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ನಿರ್ದಿಷ್ಟವಾದ ಗುಣಮಟ್ಟದ ಮಾನಕಗಳಿಲ್ಲದಿರುವುದು ದೇಶದ ಬಹುದೊಡ್ಡ ದುರಂತವಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗೊಂದು ನೀರಿನ ಗುಣಮಟ್ಟ ಪರೀಕ್ಷಣಾ ಕೇಂದ್ರವಿರಬೇಕೆಂದು ತಜ್ಞರು ಹೇಳಿದ್ದಾರೆ. ಆದರೆ ಕನಿಷ್ಠ ತಾಲೂಕಿಗೊಂದು ಪರೀಕ್ಷಣಾ ಕೇಂದ್ರಗಳೂ ಸಹ ಇಲ್ಲದಿರುವುದು ದುರಂತವಲ್ಲವೇ? ಸಾಧ್ಯತೆಗಳು ಜಲನಿರ್ವಹಣೆಗೆ ಮುಖ್ಯವಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ದತ್ತಾಂಶ ಸಂಚಯ ಕೋಶ ಇಡಬೇಕು. ಪ್ರತಿ 3 ತಿಂಗಳಿಗೊಮ್ಮೆ ಅದನ್ನು ಪರಿಷ್ಕರಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಎಲ್ಲ ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆಗಳು ಸೇರಿದಂತೆ ಎಲ್ಲ ಸ್ಥಳೀಯ ಸರಕಾರಗಳು ನೀರಿನ ಬಜೆಟ್ ತಯಾರಿಸಬೇಕು. ಅದನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು.

ನಗರಗಳು ಸೇರಿದಂತೆ ಪ್ರತಿ ಹಳ್ಳಿಯ ಎಲ್ಲ ಮನೆಗಳಲ್ಲೂ ಜಲಸಂರಕ್ಷಣೆಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಕೊಳವೆ ಬಾವಿಗೂ ಕಡ್ಡಾಯವಾಗಿ ರಿಚಾರ್ಜ್ ವ್ಯವಸ್ಥೆಯನ್ನು ಅಳವಡಿಸಬೇಕು. ಇದನ್ನು ಸ್ಥಳೀಯ ಸರಕಾರಗಳು ಇದರ ಉಸ್ತುವಾರಿ ವಹಿಸಬೇಕು ಹಾಗೂ ಸಂಬಂಧಿತ ವ್ಯಕ್ತಿ, ಸಂಸ್ಥೆಯು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕು. ಪ್ರತಿ ಕೃಷಿ ಜಮೀನಿನಲ್ಲೂ ಕಡ್ಡಾಯವಾಗಿ ಕೃಷಿ ಹೊಂಡ ನಿರ್ಮಾಣವಾಗಬೇಕು. ಇದು ಕೇವಲ ಬಿಲ್ ಪಡೆಯುವ ಹಂತಕ್ಕೆ ಮಾತ್ರ ಸೀಮಿತವಾಗದೇ ಜಲಸಂಪನ್ಮೂಲ ಸಂರಕ್ಷಣೆಯ ಉದ್ದೇಶಕ್ಕೆ ಬಳಕೆಯಾಗಬೇಕು.

ನದಿ ನೀರಿನ ಸದ್ಬಳಕೆ ಹಾಗೂ ನದಿ ನೀರಿನ ಸಂಗ್ರಹಣೆ ತಂತ್ರಗಳನ್ನು ಅಭಿವೃದ್ಧ್ದಿಪಡಿಸಬೇಕು. ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರನ್ನು ಸಂಗ್ರಹಿಸುವ ಹಾಗೂ ಬಳಸುವ ಯೋಜನೆಗಳು ಕಾರ್ಯಗತಗೊಳ್ಳಬೇಕು. ನೀರಿನ ಅಸಮಾನ ಹಂಚಿಕೆಯನ್ನು ಹೋಗಲಾಡಿಸಲು ನದಿಜೋಡಣೆಯಂತಹ ಯೋಜನೆಗಳು ಜಾರಿಗೆ ಬರಬೇಕು. ಜೊತೆಗೆ ಸ್ಥಳೀಯವಾಗಿರುವ ಎಲ್ಲ ನೀರಿನ ಸಂಪನ್ಮೂಲಗಳನ್ನು ಅಂದರೆ ಕೆರೆ ಕಟ್ಟೆಗಳನ್ನು ಜಲಪೂರಣಗೊಳಿಸುವ ಕಾರ್ಯವಾಗಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಗಂಭೀರ ಚಿಂತನೆಗಳು ಮತ್ತು ಕಾರ್ಯಗಳು ಆಗಬೇಕಿದೆ. ಭಾರತದ ವಿವಿಧ ಪ್ರದೇಶಗಳ ಮಳೆಯ ವ್ಯತ್ಯಾಸ ಹಾಗೂ ಜಲಮರುಪೂರಣದ ಅಸಮಾನತೆಯಿಂದ ಜಲ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲನಿರ್ವಹಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಭಾರತವು ನೀರನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಜಲ ಸಂಪನ್ಮೂಲವನ್ನು ಕೇವಲ ಸರಕಾರ ಹಾಗೂ ಕಾನೂನಾತ್ಮಕವಾಗಿ ನಿರ್ವಹಿಸಲಾಗದು. ಇದು ಪ್ರತಿಯೊಬ್ಬ ಪ್ರಜೆಯ ಕಾಳಜಿಯಾಗಬೇಕು. ಜಲ ನಿರ್ವಹಣೆಯ ತತ್ವಗಳು ಮತ್ತು ತಂತ್ರಗಳು ಪಠ್ಯದ ಭಾಗವಾಗಬೇಕು. ಆ ಮೂಲಕ ಮುಂದಿನ ಪೀಳಿಗೆಯಲ್ಲಿ ಜಲ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿ ಅವರನ್ನು ಜಾಗೃತರನ್ನಾಗಿಬಹುದು. ಜಗದರಿವಿನ ಜೊತೆಗೆ ಜಲದರಿವನ್ನು ಎಲ್ಲರೂ ಹೊಂದಲೇಬೇಕಾದುದು ಅನಿವಾರ್ಯ ಅಲ್ಲವೇ?

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News