ಕೆರೆ, ಕುಂಟೆಗಳನ್ನು ಎದೆಗಪ್ಪಿಕೊಳ್ಳುವ ಕಾಲ ಬಂದಿದೆ

Update: 2020-04-18 17:42 GMT

ಹಳ್ಳಿಗಳಿಗೆ ಹಿಂದಿರುಗಿರುವ ಲಕ್ಷಾಂತರ ಯುವಕರು ಮತ್ತು ಕುಟುಂಬಗಳು ಈಗ ಕೆಲಸಗಳಿಲ್ಲದೆ ಹಳ್ಳಿಗಳಲ್ಲಿ ಕಂಗಾಲಾಗಿದ್ದಾವೆೆ. ಒಂದು ವೇಳೆ ಕೋವಿಡ್-19 ಕಡಿಮೆಯಾದರೂ, ಸೋಂಕು ನಿಂತು ಹೋದರೂ ಮತ್ತೆ ಎಲ್ಲರೂ ಬೆಂಗಳೂರಿಗೆ/ನಗರಗಳಿಗೆ ಬಂದರೂ ಅವರು ಮಾಡುತ್ತಿದ್ದ ಕೆಲಸಗಳು ಅವರಿಗೆ ದೊರಕುವುದಿಲ್ಲ. ಕಾರಣ ಸಾವಿರಾರು ಕಂಪೆನಿಗಳು ನಷ್ಟಕ್ಕೆ ಒಳಗಾಗಿ ಮುಚ್ಚಿ ಹೋಗಿವೆ. ಹಾಗೆಯೇ ಇನ್ನೂ ನೂರಾರು ರೀತಿಯ ಕೆಲಸಗಳು ಕೂಡ ನಿಂತು ಹೋಗಿವೆ. ಅಂದರೆ ಅವರು ಮತ್ತೆ ಹೊಸದಾಗಿ ಜೀವನ ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಸರಕಾರ ಎಷ್ಟೇ ಸಹಾಯ ಮಾಡಿದರೂ ಅದಕ್ಕೂ ಒಂದು ಮಿತಿ ಇರುತ್ತದೆ ಎನ್ನುವುದು ಮರೆಯುವಂತಿಲ್ಲ. ಈಗ ಹಳ್ಳಿಗಳು ಐದು ದಶಕಗಳ ಹಿಂದಿನ ಹಳ್ಳಿಗಳಾಗಿ ಮಾರ್ಪಡುವುದು ತುರ್ತಿನ ಕೆಲಸವಾಗಿದೆ. 


ಮೊನ್ನೆ ಊರಿಗೆ ಫೋನ್ ಮಾಡಿ ನನ್ನ ತಮ್ಮನಿಗೆ ‘‘ಊರಿನಲ್ಲಿ ಎಲ್ಲರೂ ಹೇಗಿದ್ದಾರೆ?’’ ಎಂದು ಕೇಳಿದಾಗ ‘‘ಎಲ್ಲರೂ ಚೆನ್ನಾಗಿದ್ದಾರೆ’’ ಎಂದ. ‘‘ಬೆಂಗಳೂರಿನಿಂದ ಯಾರಾದರೂ ಬಂದಿದ್ದಾರೆಯೇ?’’ ಎಂದಾಗ, ‘‘ಅಯ್ಯಾ ಒಂದು ನೂರು ಹುಡುಗರು ಬಂದಿದ್ದಾರೆ’’ ಎಂದ. ‘‘ಲಾಕ್‌ಡೌನ್ ಆಗಿದೆಯಲ್ಲ?’’ ಎಂದರೆ, ‘‘ಎಲ್ಲರ ಹತ್ತಿರವೂ ಯಾವುದೊ ಒಂದು ವಾಹನ ಇದೆ. ರಾತ್ರೋರಾತ್ರಿ ಬಂದು ಬಿಟ್ಟಿದ್ದಾರೆ’’ ಎಂದ. ನಮ್ಮ ಹಳ್ಳಿ ಕೆಜಿಎಫ್ ಪಕ್ಕದಲ್ಲಿದ್ದು ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿದೆ. ನೂರಾಐವತ್ತು ಕುಟುಂಬಗಳಿರುವ ನಮ್ಮ ಊರಿಗೆ ನೂರು ಜನ ಯುವಕರು ಹಿಂದಿರುಗಿ ಬಂದಿದ್ದಾರೆಂದರೆ ಇನ್ನು ಬೆಂಗಳೂರಿನಿಂದ ಕರ್ನಾಟಕದಾದ್ಯಂತ ಎಷ್ಟು ಜನರು ತಮ್ಮತಮ್ಮ ಹಳ್ಳಿಗಳಿಗೆ ತಲುಪಿರಬಹುದು? ದೇಶಕ್ಕೆ ಸ್ವಾತಂತ್ರ ಬಂದನಂತರ ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರ ಜೊತೆಗೆ ಬಡತನ, ನಿರುದ್ಯೋಗವೂ ಕೂಡ ಹೆಚ್ಚುತ್ತಾ ಹೋಗಿ ಜನರು ಹಳ್ಳಿಗಳಿಂದ ನಗರಗಳ ಕಡೆಗೆ ಕೆಲಸ ಹುಡುಕುತ್ತಾ ಗುಳೆ ಹೋದರು. 80ರ ದಶಕದಲ್ಲಿ ಕೊಳವೆ ಬಾವಿಗಳು ಹಳ್ಳಿಗಳನ್ನು ತಲುಪಿ ಅವು ಮುಂದಿನ ಎರಡು ದಶಕಗಳಲ್ಲಿ ಬಾವಿ, ಕೆರೆ, ಕುಂಟೆ, ಕಲ್ಯಾಣಿಗಳನ್ನು ನುಂಗಿಕೊಂಡು ನೀರು ಪಾತಾಳಕ್ಕೆ ಇಳಿದು ಹೋಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಯಿತು. ನಗರಗಳು ಸರಿಯಾದ ಯೋಜನೆಗಳಿಲ್ಲದೆ ವಿಪರೀತವಾಗಿ ಬೆಳೆದು ಮಾಲಿನ್ಯ ತುಂಬಿಕೊಂಡು ರೋಗರುಜಿನಗಳಿಂದ ನರಳತೊಡಗಿದವು. ಹಳ್ಳಿಗಳಾದರೇನು ನಗರಗಳಾದರೇನು ಬಡವರು ಮಾತ್ರ ಬಡತನದಿಂದಲೇ ನರಳತೊಡಗಿದರು. ಅವರ ಕಷ್ಟಗಳು ಹೇಳತೀರದಾದವು. ಆದರೆ ಲಕ್ಷಾಂತರ ಹಳ್ಳಿಗರು ನಗರಗಳಲ್ಲಿ ಅವರಿಗೆ ತಕ್ಕ ಯಾವುದೋ ಒಂದು ಕೆಲಸವನ್ನು ಹುಡುಕಿಕೊಂಡು ಹೇಗೋ ಬದುಕು ನಡೆಸುತ್ತಿದ್ದರು. ಕೊರೋನ ಎಂಬ ಮಹಾಮಾರಿ ಚೀನಾದ ವುಹಾನ್ ಲ್ಯಾಬ್‌ನಿಂದ ತಪ್ಪಿಸಿಕೊಂಡು ಜಗತ್ತಿನ ಮೂಲೆ ಮೂಲೆಗೆ ಹರಡಿಕೊಂಡು ಇಡೀ ಜಗತ್ತಿನ ಜನರನ್ನು ಭಯಭೀತಿಗೆ ನೂಕಿಬಿಟ್ಟಿದೆ. ಪಟ್ಟಣಗಳಲ್ಲಿದ್ದ ಜನರು ವಿಶೇಷವಾಗಿ ಯುವಕರು ಎದ್ದೆವೊ ಬಿದ್ದೆವೊ ಎಂದು ಪಟ್ಟಣಗಳನ್ನು ಬಿಟ್ಟು ಹಳ್ಳಿಗಳ ಕಡೆಗೆ ರಾತ್ರೋರಾತ್ರಿ ಪಾಲಾಯನವಾಗಿ ಬಿಟ್ಟರು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಕೋವಿಡ್-19 ಉಪಶಮನ ಆಗುವುದಕ್ಕೆ ಎಷ್ಟು ದಿನಗಳಾಗುತ್ತೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆಧುನಿಕ ಜಗತ್ತು ಕಂಡ ಅತ್ಯಂತ ಭೀಕರವಾದ ಮಹಾಮಾರಿ ಈಗಾಗಲೇ ಜಗತ್ತಿನಾದ್ಯಂತ 1,50,000ಕ್ಕೂ ಅಧಿಕ ಜನರನ್ನು ಆಹುತಿ ತೆಗೆದುಕೊಂಡುಬಿಟ್ಟಿದೆ.

ಹಳ್ಳಿಗಳಿಗೆ ಹಿಂದಿರುಗಿರುವ ಲಕ್ಷಾಂತರ ಯುವಕರು ಮತ್ತು ಕುಟುಂಬಗಳು ಈಗ ಕೆಲಸಗಳಿಲ್ಲದೆ ಹಳ್ಳಿಗಳಲ್ಲಿ ಕಂಗಾಲಾಗಿದ್ದಾವೆೆ. ಒಂದು ವೇಳೆ ಕೋವಿಡ್-19 ಕಡಿಮೆಯಾದರೂ, ಸೋಂಕು ನಿಂತು ಹೋದರೂ ಮತ್ತೆ ಎಲ್ಲರೂ ಬೆಂಗಳೂರಿಗೆ/ನಗರಗಳಿಗೆ ಬಂದರೂ ಅವರು ಮಾಡುತ್ತಿದ್ದ ಕೆಲಸಗಳು ಅವರಿಗೆ ದೊರಕುವುದಿಲ್ಲ. ಕಾರಣ ಸಾವಿರಾರು ಕಂಪೆನಿಗಳು ನಷ್ಟಕ್ಕೆ ಒಳಗಾಗಿ ಮುಚ್ಚಿ ಹೋಗಿವೆ. ಹಾಗೆಯೇ ಇನ್ನೂ ನೂರಾರು ರೀತಿಯ ಕೆಲಸಗಳು ಕೂಡ ನಿಂತು ಹೋಗಿವೆ. ಅಂದರೆ ಅವರು ಮತ್ತೆ ಹೊಸದಾಗಿ ಜೀವನ ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಸರಕಾರ ಎಷ್ಟೇ ಸಹಾಯ ಮಾಡಿದರೂ ಅದಕ್ಕೂ ಒಂದು ಮಿತಿ ಇರುತ್ತದೆ ಎನ್ನುವುದು ಮರೆಯುವಂತಿಲ್ಲ. ಈಗ ಹಳ್ಳಿಗಳು ಐದು ದಶಕಗಳ ಹಿಂದಿನ ಹಳ್ಳಿಗಳಾಗಿ ಮಾರ್ಪಡುವುದು ತುರ್ತಿನ ಕೆಲಸವಾಗಿದೆ. ನಾಲ್ಕೈದು ದಶಕಗಳ ಹಿಂದೆ ಹಳ್ಳಿಗಳಲ್ಲಿ ಪ್ರತಿ ಮನೆಗೆ ಇಬ್ಬರು ಆಳುಗಳಂತೆ ಬಾವಿ, ಕೆರೆ, ಕುಂಟೆ, ಕಲ್ಯಾಣಿಗಳನ್ನು ಸ್ವಚ್ಛ ಮಾಡುವುದು, ರಸ್ತೆಗಳನ್ನು ನವೀಕರಣಗೊಳಿಸುವುದು ಇತ್ಯಾದಿ ಕೆಲಸಗಳಲ್ಲಿ ಜನರು ತಮಗೆ ತಾವೇ ತೊಡಗಿಕೊಳ್ಳುತ್ತಿದ್ದರು. ಜೊತೆಗೆ ತಮ್ಮತಮ್ಮ ಹೊಲಗಳಲ್ಲಿ ಸಣ್ಣಸಣ್ಣ ಕಲ್ಲು/ಮಣ್ಣು ಒಡ್ಡುಗಳನ್ನು ನಿರ್ಮಿಸಿ ಮಳೆ ನೀರನ್ನು ನೆಲದೊಳಕ್ಕೆ ಇಂಗಿಸಿ ಸುತ್ತಲು ಗಿಡಮರಗಳನ್ನು ಬೆಳೆಸುತ್ತಿದ್ದರು. ಹಸು, ಆಡು, ಕುರಿಗಳು ನೀರು ಕುಡಿಯಲು ಹಳ್ಳಗಳನ್ನು ನಿರ್ಮಿಸುತ್ತಿದ್ದರು. ಸರಕಾರವು ಹಳ್ಳಿಗಳ ಸುತ್ತಮುತ್ತಲೂ ಕೆರೆ, ಕಟ್ಟೆ, ರಸ್ತೆಗಳನ್ನು ನವೀಕರಿಸುತ್ತಿತ್ತು. ಈಗ ಕೆರೆ ಕುಂಟೆಗಳೆಲ್ಲ ಒತ್ತುವರಿಯಾಗಿವೆ ಇಲ್ಲ ತಿಪ್ಪೆಗುಂಡಿಗಳಾಗಿವೆ.

ಜನರು, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ಹಣ ಎಷ್ಟು ಸಿಗುತ್ತದೆ ಎನ್ನುವುದನ್ನು ಮಾತ್ರ ನೋಡುತ್ತಾರೆ. ನೀರು ದೊರಕುವ ಕಡೆ ಅಗಾಧ ನೀರನ್ನು ಪೋಲು ಮಾಡಿ ಸಾವಿರಾರು ಎಕರೆಗಳಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಭತ್ತ, ಕಬ್ಬು ಬೆಳೆದು ನಷ್ಟ ಮಾಡಿಕೊಳ್ಳುವ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಈಗ ಹಳ್ಳಿಗಳನ್ನು ತಲುಪಿರುವ ಯುಜನಾಂಗವನ್ನು ಹಳ್ಳಿಗಳಲ್ಲಿ ಉಳಿಸಿಕೊಳ್ಳಬೇಕಾದರೆ ಮಹಾತ್ಮಾ ಗಾಂಧಿ ಅವರು ಕಂಡ ಕನಸನ್ನು ನನಸು ಮಾಡಬೇಕಿದೆ. ಅಂದರೆ ಹಳ್ಳಿಗಳು ಉಳಿದುಕೊಳ್ಳಬೇಕಾದರೆ ನೀರಿನ ಸಂಪನ್ಮೂಲಗಳನ್ನು ಪುನರುಜ್ಜೀವನ ಮಾಡಬೇಕಿದೆ. ಬಾವಿ, ಕೆರೆ, ಕುಂಟೆ, ಕಲ್ಯಾಣಿಗಳು, ಒಡ್ಡುಗಳಲ್ಲಿ ಮಳೆನೀರನ್ನು ಮಳೆಕೊಯ್ಲು ಮೂಲಕ ಸಂಗ್ರಹಿಸಿ ಕೃಷಿ ಮಾಡುವ ವಿಧಾನಗಳನ್ನು ಅತಿ ಶೀಘ್ರದಲ್ಲಿ ಕಂಡುಕೊಳ್ಳಬೇಕಿದೆ. ಇದು ಮಾಡಬೇಕಾದರೆ ಕನಿಷ್ಠ ಹತ್ತು ವರ್ಷಗಳಾದರು ಬೇಕಾಗುತ್ತದೆ. ಅಂತಹ ಒಂದು ಯಶೋಗಾಥೆಯ ಉದಾಹರಣೆ ಇಲ್ಲಿದೆ.

1985ರಲ್ಲಿ ರಾಜೇಂದ್ರ ಸಿಂಗ್ ಮತ್ತು ನಾಲ್ವರು ಯುವಕರು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಥನಾಗಾಜಿ ತಾಲೂಕಿನಲ್ಲಿ ಸ್ಥಳೀಯರನ್ನು ಕಟ್ಟಿಕೊಂಡು ‘ತರುಣ್ ಭಾರತ್ ಸಂಘ್’(ಟಿಬಿಎಸ್)ವನ್ನು ಸ್ಥಾಪಿಸಿ ಅದರ ಸಂಚಾಲಕರಾದ ರಾಜೇಂದ್ರ ಸಿಂಗ್ ಒಣಗಿ ಹೋಗಿದ್ದ ಹಳ್ಳಕೊಳ್ಳ ನದಿಗಳನ್ನು ಪುನಶ್ಚೇತನ ಮಾಡುವ ಕಾರ್ಯದಲ್ಲಿ ತೊಡಗಿಕೊಂಡರು. ಅವರು ಮಾಡಿದ ಮೊದಲ ಕೆಲಸವೆಂದರೆ ಅಲ್ಪಸ್ವಲ್ಪ ಬೀಳುತ್ತಿದ್ದ ಮಳೆ ನೀರನ್ನು ಹರಿದು ಹೋಗದಂತೆ ಸಣ್ಣಸಣ್ಣ ಒಡ್ಡು ಮತ್ತು ಕಟ್ಟೆಗಳನ್ನು ಕಟ್ಟಿ ಹಳ್ಳಿಗಳ ಜನರಿಗೆ ಕುಡಿಯುವ ನೀರನ್ನು ಸಂಗ್ರಹಿಸಿದ್ದು. ಜೈಪುರ ಜಿಲ್ಲೆಯ ಜಾಮ್ವ-ರಾಮಗಢ ತಾಲೂಕಿನ ನೀಮ್ಬೀ ನೀರಿಲ್ಲದೆ ಎದೆಯ ಮೇಲೆ ಬರ ತುಂಬಿಕೊಂಡ ಹಳ್ಳಿ. ಈ ಹಳ್ಳಿಯ ಜನ ಟಿಬಿಎಸ್ ಸಹಾಯದಿಂದ 1994ರಲ್ಲಿ 50 ಸಾವಿರ ರೂ. ಖರ್ಚು ಮಾಡಿ ಒಣಗಿ ಹೋಗಿದ್ದ ನದಿಗೆ ಅಡ್ಡವಾಗಿ ಎರಡು ಮಣ್ಣಿನ ಒಡ್ಡುಗಳನ್ನು ಕಟ್ಟಿದರು. ಯಾವಾಗಲೂ ಬರದಿಂದ ತತ್ತರಿಸುತ್ತಿದ್ದ ಈ ಹಳ್ಳಿಯಲ್ಲಿ ಈಗ ವರ್ಷಕ್ಕೆ 3 ಕೋಟಿಗಿಂತ ಹೆಚ್ಚು ಬೆಲೆಯ ತರಕಾರಿ, ಹಾಲನ್ನು ಉತ್ಪಾದಿಸುತ್ತಿದ್ದಾರೆ. ರೂಪರೇಲ್, ಅರ್ವಾರಿ, ಸರಸ್, ಭಾಗಿನಿ, ಜಹಾಜ್ವಾಲಿ ನದಿಗಳು ಪುನಶ್ಚೇತನವಾದ ಮೇಲೆ ದಶಕಗಳಿಂದ ನಿರಂತರವಾಗಿ ಬರಗಳಿಂದ ತತ್ತರಿಸಿ ಹೋಗಿದ್ದ ಜನರು ಗುಳೆ ಎದ್ದು ಹೋಗಿ ಬಿಕೋ ಎನ್ನುತ್ತಿದ್ದ ಹಳ್ಳಿಗಳು ಮತ್ತೆ ಕೃಷಿ, ಹೈನುಗಾರಿಕೆ ಚಟುವಟಿಕೆಗಳಿಂದ ತುಂಬಿಕೊಂಡವು. ಟಿಬಿಎಸ್ ಮೂಲಕ ಸ್ಥಾಪನೆಗೊಂಡ ಗ್ರಾಮ ಸಭೆಗಳು, ಜನ ಸಮುದಾಯಗಳ ಸಂಪೂರ್ಣವಾಗಿ ನೀರಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತವೆ. ಅರ್ವಾರಿ ನದಿ ಮರು ಹುಟ್ಟು ಪಡೆದಿದ್ದು ಒಂದು ಪವಾಡ. 1996ರಲ್ಲಿ ಭನೋಟ-ಕೊಲಿಯಾಲ ಹಳ್ಳಿಗಳ ಜನರು ಟಿಬಿಎಸ್ ಜೊತೆಗೂಡಿ ಅರ್ವಾರಿ ನದಿ ಮೂಲದಲ್ಲಿ ಮೊದಲಿಗೆ ಒಂದು ಒಡ್ಡನ್ನು ನಿರ್ಮಿಸಿದರು. ಅದರ ಜೊತೆಗೆ ನದಿಯ ಉದ್ದಕ್ಕೂ ಜಲಾನಯನದಲ್ಲಿ ಸಣ್ಣಸಣ್ಣ ಮಣ್ಣಿನ ಒಡ್ಡುಗಳನ್ನು ಕಟ್ಟುತ್ತಾ ಹೋದರು. ಒಡ್ಡುಗಳ ಸಂಖೆ 375 ಮುಟ್ಟುತ್ತಿದ್ದಂತೆ ದಶಕಗಳಿಂದಲೂ ನೀರು ಕಾಣದೆ ಒಣಗಿಹೋಗಿದ್ದ ನದಿಯಲ್ಲಿ ನೀರು ಕಾಣಿಸಿಕೊಂಡಿತು. ಆ ಕ್ಷಣಗಳನ್ನು ಜ್ಞಾಪಿಸಿಕೊಂಡ ರಾಜೇಂದ್ರ ಸಿಂಗ್ ‘‘ನಾವೆಲ್ಲ ಆಶ್ಚರ್ಯಚಕಿತರಾದೆವು. ನಾವು ನಮ್ಮ ಕನಸಿನಲ್ಲೂ ಇದನ್ನು ನಿರೀಕ್ಷಿಸಿರಲಿಲ್ಲ’’ ಎನ್ನುತ್ತಾರೆ.

ಅಂದಿನಿಂದ ಜನರು ಅವರನ್ನು ‘‘ವಾಟರ್ ಮ್ಯಾನ್/ಪವಾಡ ಪುರುಷ’’ ಎಂದು ಕರೆದರು. ಮುಂದಿನ ದಿನಗಳು ಎಲ್ಲವೂ ಇತಿಹಾಸ ಆಗಿಹೋಯಿತು. ಅರ್ವಾರಿ ಜಲಾನಯನದಲ್ಲಿ ಬರುವ 72 ಹಳ್ಳಿಗಳ ಜನರು ಗಾಂಧೀಜಿ ಅವರ ಕನಸಿನ ‘‘ಗ್ರಾಮ ಸ್ವರಾಜ್ಯ’’ದ ಪರಿಕಲ್ಪನೆಯ ಮೇಲೆ ‘‘ಅರ್ವಾರಿ ಗ್ರಾಮ ಸಂಸತ್ತು’’ ಮಾಡಿಕೊಂಡರು. ಇವರೆಲ್ಲ 11 ಅಂಶಗಳ ಆಧಾರದ ಮೇಲೆ ಕಾನೂನು ಮಾಡಿಕೊಂಡು ಕಬ್ಬು ಭತ್ತ ಬೆಳೆದು ನೀರನ್ನು ಪೋಲು ಮಾಡಿಕೊಳ್ಳದೆ ಎಷ್ಟು ನೀರಿದೆ ಅದಕ್ಕೆ ತಕ್ಕಂತೆ ಕುಡಿಯಲು ನೀರು ಉಳಿಸಿಕೊಂಡು ಯಾವಯಾವ ಬೆಳೆಯನ್ನು ಎಷ್ಟೆಷ್ಟು ಬೆಳೆಯಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಕಬ್ಬು ಬೆಳೆಯುವುದನ್ನು ನಿಷೇಧಿಸಿ ಎಮ್ಮೆಗಳನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಯಾರೂ ಮರಗಿಡಗಳನ್ನು ಕಡಿಯುವಂತಿಲ್ಲ. ಹೊರಗಿನ ಜನರು ಹಸು ಕುರಿಗಳನ್ನು ತಂದು ಈ ಪ್ರದೇಶದಲ್ಲಿ ಹುಲ್ಲು ಮೇಯಿಸಲು ಬಿಡುವುದಿಲ್ಲ. ರಾಜೇಂದ್ರ ಸಿಂಗ್ ಅವರ ಕನಸು ಈಗ ರಾಜಸ್ಥಾನವಲ್ಲದೆ ಇತರ ರಾಜ್ಯಗಳಿಗೂ ನಿಧಾನವಾಗಿ ಹರಡಿಕೊಳ್ಳುತ್ತಿದೆ. ‘‘ಸಮುದ್ರದ ಮೇಲೆ ಏಳುವ ಮೋಡಗಳು ಪರ್ವತಗಳವರೆಗೂ ಸಾಗಿ ಮರಳುಗಾಡಿನ ಕಡೆಗೆ ಹೋಗದೆ ಅಲ್ಲೆ ನಿಂತುಬಿಡುತ್ತವೆ. ಅರ್ವಾರಿ ನದಿಯನ್ನು ಪುನಶ್ಚೇತನಗೊಳಿಸಿದ ಮೇಲೆ ಅಲ್ಲೆಲ್ಲ ತೇವಾಂಶ ಮತ್ತು ಮರಗಿಡಗಳು ಬೆಳೆದು ಮೋಡಗಳು ಅಲ್ಲಿಯವರೆಗೂ ಹಾರಿ ಬಂದು ಮಳೆಯನ್ನು ಸುರಿಸುತ್ತವೆ. ಈಗ ರಾಜಸ್ಥಾನದಲ್ಲೂ ಮಳೆ ಬೀಳುತ್ತದೆ. ಅಂದರೆ ತಾಳ ತಪ್ಪಿಹೋದ ಹಾವಾಮಾನವನ್ನು ಜನರೇ ಬದಲಾಯಿಸಬಹುದು ಎನ್ನುವ ಸಂದೇಶವನ್ನೂ ರಾಜೇಂದ್ರ ಸಿಂಗ್ ಸರಳವಾಗಿ ತೋರಿಸಿದರು. ಇದು ನೀರನ್ನು ಕಾಪಾಡಿಕೊಳ್ಳುವ ನಮ್ಮ ದೇಶಿಯ ಹಳೆ ಪದ್ಧತಿಯೇ ವಿನಹಃ ಹೊಸದೇನೂ ಅಲ್ಲ.

ಈ ಸಂದರ್ಭದಲ್ಲಿ ನಮ್ಮ ದೇಶದ ಜನ ಸಮುದಾಯಗಳು ಇದು ನಮ್ಮ ಬಾವಿ, ನಮ್ಮ ಕೆರೆ, ನಮ್ಮ ನದಿ ಎಂಬುದಾಗಿ ಎದೆಗೆ ಅಪ್ಪಿಕೊಳ್ಳಬೇಕಿದೆ. ಕೇವಲ 40/50 ವರ್ಷಗಳ ಹಿಂದೆ ಜನ ಸಮುದಾಯಗಳು ಬಾವಿ, ಕೆರೆ, ಕುಂಟೆ, ಕಲ್ಯಾಣಿಗಳನ್ನು ಇದೇ ರೀತಿ ಕಾಪಾಡಿಕೊಂಡಿದ್ದವು. ಇದನ್ನು ಮತ್ತೆ ನಾವು ಮುಂದುವರಿಸಿಕೊಂಡು ಹೋಗಬೇಕಿದೆ. ಸರಕಾರ ಇದರ ಬಗ್ಗೆ ತೀವ್ರವಾಗಿ ಯೋಜನೆಗಳನ್ನು ಮಾಡಿ ಜನರನ್ನು ತೊಡಗಿಸಿ ಗ್ರಾಮ ಸ್ವರಾಜ್ಯವನ್ನು ಕಟ್ಟಬೇಕಿದೆ. ಇಲ್ಲವೆಂದರೆ ಹಳ್ಳಿಗಳನ್ನು ಸೇರಿಕೊಂಡಿರುವ ಯುವಜನಾಂಗದಿಂದ ಬೇರೆ ರೀತಿಯ ತೊಂದರೆಗಳು ಪ್ರಾರಂಭವಾಗಬಹುದು.

Writer - ಡಾ.ಎಂ.ವೆಂಕಟಸ್ವಾಮಿ

contributor

Editor - ಡಾ.ಎಂ.ವೆಂಕಟಸ್ವಾಮಿ

contributor

Similar News