ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿಯ ಧಾರ್ಮಿಕ ನಿಂದನೆಗೈದು ರಕ್ತ ಒರೆಸುವಂತೆ ಹೇಳಿದ ಆಸ್ಪತ್ರೆ ಸಿಬ್ಬಂದಿ: ಆರೋಪ
ರಾಂಚಿ, ಎ.19: ಕೊರೋನ ವೈರಸ್ ಹರಡುತ್ತಿದ್ದಾಳೆ ಎಂದು ಆರೋಪಿಸಿ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಧರ್ಮದ ಆಧಾರದಲ್ಲಿ ನಿಂದಿಸಿ ಅವಮಾನಿಸಿದ ಘಟನೆ ಜಾರ್ಖಂಡ್‌ನ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ರಿಝ್ವಾನಾ ಎಂಬ ಮಹಿಳೆ ಆಸ್ಪತ್ರೆಯಲ್ಲಿ ತನಗೆ ಆದ ಅಪಮಾನ ವಿವರಿಸಿ ಮತ್ತು ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲಿದ್ದ ತನ್ನ ಮಗು ಮೃತಪಟ್ಟಿದೆ ಎಂದು ಆರೋಪಿಸಿ, ಈ ಬಗ್ಗೆ ಗಮನ ಹರಿಸುವಂತೆ ಕೋರಿ ಜಾರ್ಖಂಡ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ತಾನು ತೀವ್ರ ರಕ್ತಸ್ರಾವದ ಸಮಸ್ಯೆಯಿಂದ ಎಪ್ರಿಲ್ 16ರಂದು ಜಮ್ಶೆಡ್‌ಪುರದ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಆಸ್ಪತ್ರೆಯವರು ತನ್ನನ್ನು ನಿಂದಿಸಿ ಅವಮಾನಿಸಿದ್ದಲ್ಲದೆ ನೆಲದ ಮೇಲೆ ಹರಿದಿದ್ದ ರಕ್ತವನ್ನು ಸ್ವತಃ ಒರೆಸಿ ತೆಗೆಯುವಂತೆ ಬಲವಂತ ಮಾಡಿದ್ದಾರೆ. ಅಲ್ಲದೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇದರಿಂದ ಭೀತಿಗೊಂಡು ಸಮೀಪದಲ್ಲಿದ್ದ ಖಾಸಗಿ ನರ್ಸಿಂಗ್ ಹೋಂಗೆ ಧಾವಿಸಿದ್ದೆ. ಆದರೆ ಮಗು ಮೃತಪಟ್ಟಿರುವುದಾಗಿ ಅಲ್ಲಿದ್ದ ವೈದ್ಯರು ತಿಳಿಸಿದರು. ಎಂಜಿಎಂ ಆಸ್ಪತ್ರೆಯವರ ನಿರ್ಲಕ್ಷದಿಂದ ತಾನು ಮಗುವನ್ನು ಕಳೆದುಕೊಳ್ಳುವಂತಾಗಿದೆ ಎಂದು ರಿಝ್ವಾನಾ ದೂರಿದ್ದಾರೆ.
ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಮ್ಮಲ್ಲಿ ಹಣವಿರಲಿಲ್ಲ. ಆದ್ದರಿಂದ ಎಂಜಿಎಂ ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿ ನಮ್ಮ ಹೆಸರು ಕೇಳಿದ ತಕ್ಷಣ ಮುಖ ಸಿಂಡರಿಸಿದ ಅಲ್ಲಿನ ಸಿಬ್ಬಂದಿ, ಕೊರೋನ ವೈರಸ್ ಹರಡುತ್ತಿರುವವರು ಇವರೇ ಎಂದು ತಮ್ಮನ್ನು ಅವಮಾನಿಸಿದರು ಎಂದು ರಿಝ್ವಾನಾರ ತಾಯಿ ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಾರ್ಖಂಡ್‌ನ ಜಿಲ್ಲಾಧಿಕಾರಿ ಹೇಳಿದ್ದಾರೆ.