ಹಳ್ಳಿಗಳಲ್ಲಿ "ಸ್ಟೇ ಹೋಂ' ಸಾಧ್ಯವೇ?

Update: 2020-04-20 17:41 GMT

ಮನೆಯಲ್ಲಿರುವ ಸದಸ್ಯರ ಸಂಖ್ಯೆಗೂ, ಮನೆಯ ಅಳತೆಗೂ ವ್ಯತ್ಯಾಸವಿರುತ್ತದೆ. ಕುಟುಂಬದ ಸದಸ್ಯರು ಮನೆಯನ್ನು ಸರದಿ ಪ್ರಕಾರ ಬಳಸುತ್ತಾರೆ. ಕೆಲವರು ಊಟ ಮಾಡಿ ಎದ್ದು ಹೊರ ಬಂದರೆ, ಮತ್ತೆ ಕೆಲವರು ಒಳಹೋಗಿ ಊಟ ಮಾಡುತ್ತಾರೆ. ಕುಟುಂಬದ ಎಲ್ಲಾ ಸದಸ್ಯರಿಗೂ ರಾತ್ರಿ ಮನೆಯಲ್ಲಿ ಮಲಗಲು ಜಾಗವಿರುವುದಿಲ್ಲ. ಗಂಡ ಹೆಂಡಿರು, ವಯಸ್ಸಿನ ಹುಡುಗಿಯರು, ಚಿಕ್ಕ ಮಕ್ಕಳು, ವಯೋ ವೃದ್ಧರು ಮನೆಯೊಳಗೆ ಮಲಗಿದರೆ, ಉಳಿದವರೆಲ್ಲಾ ಮನೆ ಮುಂದಣ ಕಟ್ಟೆ, ಮಾಳಿಗೆ, ಶಾಲೆ, ದೇವಸ್ಥಾನ ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ಮಲಗುತ್ತಾರೆ. ನೀರಿಗೂ, ಸ್ನಾನಕ್ಕೂ, ಶೌಚಕ್ಕೂ ಹೊರ ಹೋಗಬೇಕು. ಕೊರೋನ ಕಾರಣಕ್ಕೆ ನಗರಗಳಿಂದ ಮರಳಿದ ಯುವಕರೆಲ್ಲಾ ಬಹುಪಾಲು ಮನೆ ಹೊರಗಿದ್ದೇ ಕಾಲ ಕಳೆಯಬೇಕು.



ಕೊರೋನ ಪರಿಣಾಮ ‘ಸ್ಟೇ ಹೋಮ್’ ಎನ್ನುವ ಸುರಕ್ಷಿತ ಮಂತ್ರವನ್ನು ಪಠಿಸುತ್ತಿದ್ದೇವೆ. ಕೊರೋನ ಹರಡುವಿಕೆ ನಿಯಂತ್ರಿಸಲು ಇದು ಸದ್ಯದ ಅಗತ್ಯ ಕೂಡ. ಆದರೆ ಸ್ಟೇ ಹೋಮ್ ಎನ್ನುವಾಗಲೆ ಮನೆಯೇ ಇಲ್ಲದ ಕೋಟ್ಯಂತರ ಜನರ ಮನಸ್ಸಿನ ಪರಿಣಾಮವನ್ನೂ ಗಮನಿಸಬೇಕು. ‘ಸ್ಟೇ ಹೋಮ್’ ಎನ್ನುವ ಪದ ನಮ್ಮಲ್ಲಿ ಮೂಡಿಸುವ ಚಿತ್ರ ಒಂದು ಸುಸಜ್ಜಿತ ಮನೆಯದೇ ಆಗಿರುತ್ತದೆ. ಈ ಪದದಲ್ಲಿ ಬೀಗ ಜಡಿದುಕೊಂಡು ಮನೆಯ ಒಳಗೇ ಇರಿ ಎನ್ನುವ ಒತ್ತಾಯವಿಲ್ಲದಿದ್ದರೂ, ಮನೆ ಬಿಟ್ಟು ಸಾರ್ವಜನಿಕ ಸ್ಥಳಗಳಿಗೆ ಬರಬೇಡಿ ಎನ್ನುವ ಸೂಚನೆಯಂತೂ ಇದ್ದೇ ಇದೆ. ಇಂತಹ ಸಂದರ್ಭದಲ್ಲೇ ಕರ್ನಾಟಕದ ಗ್ರಾಮೀಣ ಭಾಗದ ‘ಮನೆ’ ಸ್ವರೂಪವನ್ನೂ, ವಸತಿ ರಹಿತರನ್ನೂ ಅರ್ಥಮಾಡಿಕೊಳ್ಳಬೇಕಿದೆ. ನಗರದ ಬಹುಸಂಖ್ಯಾತ ಮೇಲ್ಮಧ್ಯಮ ವರ್ಗದ ಜನರು ಇತರ ಜನರೊಂದಿಗೆ ಸಂಪರ್ಕ ಕಡಿದುಕೊಂಡಂತಹ ಸ್ವತಃ ‘ಕ್ವಾರಂಟೈನ್’ ಮಾದರಿ ಮನೆಗಳಲ್ಲಿ ವಾಸಿಸುತ್ತಾರೆ. ಬಹುಪಾಲು ಮೂಲಭೂತ ಅಗತ್ಯಗಳೂ ಮನೆಯ ಒಳಗೇ ಇರುತ್ತವೆ. ಇನ್ನು ಮಲೆನಾಡು, ಉತ್ತರಕನ್ನಡ ಮತ್ತು ಕೊಡಗಿನ ಕೆಲವು ಭಾಗದ ಒಂಟಿ ಮನೆ ವಾಸಿಗಳು, ಹೊಲಗಳಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿರುವವರು. ಸುಸಜ್ಜಿತ ಮನೆಗಳ ಹಳ್ಳಿಗಳ ಮೇಲ್ಮಧ್ಯಮ ವರ್ಗದವರು ಕೂಡ ಸ್ವತಃ ಪ್ರತ್ಯೇಕವಾಗಿಯೇ ಜೀವಿಸುತ್ತಾರೆ. ಇವರಿಗೆಲ್ಲಾ ಕ್ವಾರಂಟೈನ್ ಹೊಸದಲ್ಲ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ದಕ್ಷಿಣ ಕರ್ನಾಟಕವನ್ನೂ ಒಳಗೊಂಡಂತೆ ಬಹುಸಂಖ್ಯಾತ ಹಳ್ಳಿಗಳ ಕೆಳಜಾತಿ, ಕೆಳವರ್ಗ, ಹಿಂದುಳಿದ, ಅಲೆಮಾರಿ, ಬುಡಕಟ್ಟು, ದಲಿತ, ದಮನಿತರು ಪ್ರತ್ಯೇಕತೆಗಿಂತ ಸಮುದಾಯ ಸಹಭಾಗಿತ್ವದ ನೆಲೆಯ ಮನೆ ಮತ್ತು ಜೀವನ ವಿಧಾನವನ್ನು ರೂಢಿಸಿಕೊಂಡಿರುತ್ತಾರೆ. ಇವರುಗಳ ಜೀವನಶೈಲಿಗೆ ‘ಪ್ರತ್ಯೇಕತೆ’ ಎನ್ನುವುದೇ ವಿರುದ್ಧಪದವಾಗಿದೆ. ಹೀಗಿರುವಾಗ ‘ಮನೆಯಲ್ಲೇ ಆರಾಮಾಗಿರಿ’ ‘ಸ್ಟೇ ಹೋಮ್’ ಎನ್ನುವ ಮಾತುಗಳು ಇವರಿಗೆ ಮುಳ್ಳು ಚುಚ್ಚಿದಂತಾಗುತ್ತದೆ. ಇದಕ್ಕೆ ಅವರ ವಾಸ್ತವ ಜೀವನ ಸಹಕರಿಸುವುದಿಲ್ಲ.

ಕರ್ನಾಟಕದಲ್ಲಿ ಶೇ.38ರಷ್ಟು ಜನರು ನಗರವಾಸಿಗಳಾಗಿದ್ದರೆ, ಶೇ.62ರಷ್ಟು ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ. ಹಾಗಾಗಿ ಸ್ಟೇ ಹೋಮ್ ಎನ್ನುವಾಗ ಈ ಶೇ.62 ರಷ್ಟಿರುವ ಜನರ ಕುಟುಂಬಗಳ ‘ಮನೆವಾಸದ’ ಬಗೆಗೆ ಗಮನಹರಿಸಬೇಕಿದೆ. 2011 ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿಯ ಕರ್ನಾಟಕದ ವಸತಿ ರಹಿತ ಕುಟುಂಬಗಳ ಜಿಲ್ಲಾವಾರು ಅಂಕಿ ಅಂಶಗಳನ್ನೊಮ್ಮೆ ಗಮನಿಸೋಣ. ಆಗ ಕರ್ನಾಟಕದ ಹಳ್ಳಿಗರ ಮನೆಯ ಚಿತ್ರಣಗಳು ಕಣ್ಮುಂದೆ ಬರುತ್ತವೆ. ಒಟ್ಟು ಕರ್ನಾಟಕದ ಗ್ರಾಮೀಣ ಭಾಗದ ಎಂಬತ್ತು ಲಕ್ಷದಷ್ಟು ಕುಟುಂಬಗಳಲ್ಲಿ 4,723 ಕುಟುಂಬಗಳಿಗೆ ವಾಸಿಸಲು ಯಾವುದೇ ರೀತಿಯ ಮನೆಗಳಿಲ್ಲ. ಹುಲ್ಲು, ತಡಿಕೆ, ಬಿದಿರು, ರಟ್ಟು, ತಗಡಿನಂತಹ ಸಾಮಾನುಗಳಿಂದ ಕಟ್ಟಿಕೊಂಡ ಮನೆಗಳ ಸಂಖ್ಯೆಯೇ ಮೂರು ಲಕ್ಷದಷ್ಟಿದೆ. ಪ್ಲಾಸ್ಟಿಕ್ ಶೀಟುಗಳಿಂದ ನೆರಳು ಮಾಡಿಕೊಂಡ ಮನೆಗಳ ಸಂಖ್ಯೆ ನಾಲ್ಕೂವರೆ ಸಾವಿರದಷ್ಟಿದೆ. ಒಂದು ಲಕ್ಷದ ಎಂಬತ್ತು ಸಾವಿರದಷ್ಟು ಮರದ ಹಲಗೆಗಳನ್ನು ಬಳಸಿ ಕಟ್ಟಿಕೊಂಡ ಮನೆಗಳಿವೆ. ಇಪ್ಪತ್ತು ಲಕ್ಷದಷ್ಟು ಮಣ್ಣಿನ ಮನೆಗಳಿವೆ. ಬರಿ ಕಲ್ಲಿನ ಗೋಡೆಗಳ ಮನೆಗಳ ಸಂಖ್ಯೆ ಹತ್ತು ಲಕ್ಷದಷ್ಟಿದೆ. ಐದೂವರೆ ಲಕ್ಷದಷ್ಟು ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಸ್ವಂತಕ್ಕೆ ಮನೆ ಇಲ್ಲದವರು. ರಾಜ್ಯದ 3ನೇ ಒಂದು ಭಾಗದಷ್ಟು ಕುಟುಂಬಗಳು ಕೇವಲ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದು, ಶೇಕಡ 30 ರಷ್ಟು ಕುಟುಂಬಗಳು ಎರಡು ಕೋಣೆಗಳ ಮನೆಗಳಲ್ಲಿ ವಾಸಿಸುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕುಟುಂಬಗಳು ಒಂದು ಅಥವಾ ಎರಡು ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಶೇ.13.9 ರಷ್ಟು ಸ್ಲಂ ವಾಸಿಗಳಿದ್ದಾರೆ. ಒಂದು ದಶಕದಲ್ಲಿ ಈ ಅಂಕಿ ಸಂಖ್ಯೆಗಳು ಏರುಪೇರಾಗಿದ್ದರೂ, ಇದು ರಾಜ್ಯದ ವಾಸ್ತವಕ್ಕೆ ದೂರವಿಲ್ಲದ ಸಂಗತಿ. ವಸ್ತುಸ್ಥಿತಿ ಹೀಗಿರುವಾಗ ‘ಮನೆಯಲ್ಲೇ ಇರಿ’ ಎನ್ನುವ ಸುರಕ್ಷಿತ ಮಂತ್ರದ ಎದುರು ಕಣ್ಣಿಗೆ ರಾಚುವ ಇಂತಹ ಸತ್ಯವನ್ನು ಅಡಗಿಸಲಾಗದು.

ಇದನ್ನು ಇನ್ನೊಂದು ಮಗ್ಗಲಿನಿಂದ ನೋಡೋಣ. ಮೂಲಭೂತವಾಗಿ ‘ಸ್ಟೇ ಹೋಮ್’ ಎನ್ನುವಾಗ ಮನೆಯೊಳಗೆ ಎಲ್ಲಾ ಜೀವನಾವಶ್ಯಕ ಅಗತ್ಯ ಸೌಲಭ್ಯಗಳಿರಬೇಕು. ಆದರೆ ಗ್ರಾಮೀಣ ಭಾಗದ ಬಹುಪಾಲು ‘ಮನೆಗಳು’ ಈ ಎಲ್ಲಾ ಬಗೆಯ ಮೂಲಭೂತ ಸೌಲಭ್ಯಗಳಿಂದ ಹೊರಗಿರುತ್ತವೆ. ಎಷ್ಟೇ ಮನೆಯಲ್ಲಿರಿ ಎಂದರೂ ಇತರೆಲ್ಲಾ ಸೌಲಭ್ಯಗಳಿಗಾಗಿ ಹೊಸ್ತಿಲು ದಾಟಲೇಬೇಕು. ಹಾಗಾಗಿ ಬಹುತೇಕ ಗ್ರಾಮೀಣ ಭಾಗದ ಮನೆಗಳು‘ಸ್ಟೇ ಹೋಮ್’ ಕಲ್ಪನೆಗೆ ದೂರದಲ್ಲಿವೆ. ಮನೆಯಲ್ಲಿರುವ ಸದಸ್ಯರ ಸಂಖ್ಯೆಗೂ, ಮನೆಯ ಅಳತೆಗೂ ವ್ಯತ್ಯಾಸವಿರುತ್ತದೆ. ಕುಟುಂಬದ ಸದಸ್ಯರು ಮನೆಯನ್ನು ಸರದಿ ಪ್ರಕಾರ ಬಳಸುತ್ತಾರೆ. ಕೆಲವರು ಊಟ ಮಾಡಿ ಎದ್ದು ಹೊರ ಬಂದರೆ, ಮತ್ತೆ ಕೆಲವರು ಒಳಹೋಗಿ ಊಟ ಮಾಡುತ್ತಾರೆ. ಕುಟುಂಬದ ಎಲ್ಲಾ ಸದಸ್ಯರಿಗೂ ರಾತ್ರಿ ಮನೆಯಲ್ಲಿ ಮಲಗಲು ಜಾಗವಿರುವುದಿಲ್ಲ. ಗಂಡ ಹೆಂಡಿರು, ವಯಸ್ಸಿನ ಹುಡುಗಿಯರು, ಚಿಕ್ಕ ಮಕ್ಕಳು, ವಯೋವೃದ್ಧರು ಮನೆಯೊಳಗೆ ಮಲಗಿದರೆ, ಉಳಿದವರೆಲ್ಲಾ ಮನೆ ಮುಂದಣ ಕಟ್ಟೆ, ಮಾಳಿಗೆ, ಶಾಲೆ, ದೇವಸ್ಥಾನ ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ಮಲಗುತ್ತಾರೆ. ನೀರಿಗೂ, ಸ್ನಾನಕ್ಕೂ, ಶೌಚಕ್ಕೂ ಹೊರ ಹೋಗಬೇಕು. ಕೊರೋನ ಕಾರಣಕ್ಕೆ ನಗರಗಳಿಂದ ಮರಳಿದ ಯುವಕರೆಲ್ಲಾ ಬಹುಪಾಲು ಮನೆ ಹೊರಗಿದ್ದೇ ಕಾಲ ಕಳೆಯಬೇಕು.
 
ಈಗಿನ ಗ್ರಾಮೀಣ ಆರ್ಥಿಕತೆಯಲ್ಲಿ ಸ್ವಾವಲಂಬನೆಯ ಬದುಕು ಬಹುತೇಕ ಅಳಿವಿನಂಚಿನಲ್ಲಿದೆ. ವರ್ಷಕ್ಕೆ ಬೇಕಾಗುವಷ್ಟು ಕಾಳು ಕಡಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೈತರ ಮನೆಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಕಾರಣ ಹೊಲಗಳಲ್ಲಿ ದೈನಂದಿನ ಬದುಕಿನ ಅಗತ್ಯದ ಆಹಾರ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ದೈನಂದಿನ ಅಗತ್ಯದ ಆಹಾರ ಸಾಮಗ್ರಿಗಳಿಂದ ಹಿಡಿದು ಎಲ್ಲಾ ಅಗತ್ಯ ವಸ್ತುಗಳ ಶೇಖರಣೆಯ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೆಚ್ಚೆಂದರೆ ವಾರದ ಸಂತೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಮನೆಗಳಲ್ಲಿ ಅಗತ್ಯವಾದ ಸಾಮಾನುಗಳು ಒಂದಾದ ನಂತರ ಒಂದು ಖಾಲಿಯಾಗುತ್ತಲೇ ಇರುತ್ತವೆ. ಬೆಳಗಿನ ಟೀಗೆ ಕಾಲು ಕೆ.ಜಿ. ಸಕ್ಕರೆ ಬೆಲ್ಲದಿಂದ ಹಿಡಿದು ಸಣ್ಣಪುಟ್ಟ ವಸ್ತುಗಳಿಗಾಗಿ ಊರಮುಂದಣ ಗೂಡಂಗಡಿಗಳಿಗೆ ಎಡತಾಕಬೇಕು. ಊರಲ್ಲಿ ಸಿಗದಿದ್ದರೆ ನಗರಗಳಿಗೆ ಹೋಗಬೇಕು. ಹಳ್ಳಿಗಳಲ್ಲಿ ಬಹುಪಾಲು ಬೆಳಗ್ಗೆ ತೆರೆದ ಮನೆಯ ಬಾಗಿಲು ರಾತ್ರಿ ಮಲಗುವ ತನಕವೂ ಮುಚ್ಚುವುದಿಲ್ಲ. ಈ ಮಧ್ಯೆ ಮನೆ ಒಳಗೂ-ಹೊರಗೂ ಓಡಾಟವಿರುತ್ತದೆ. ‘ಬಾಗ್ಲಾಕ್ಕೊಂಡು ಮನೇಲಿ ಗೂಬೆ ತರ ಕೂತಿರ್ತಾವೆ’ ಎಂದು ನಗರಿಗರನ್ನು ಗ್ರಾಮೀಣರು ಈ ಕಾರಣಕ್ಕೆ ಜರಿಯುತ್ತಾರೆ.

ಎಷ್ಟೋ ಮನೆಗಳು ಗಾಳಿ ಬೆಳಕಿರದೆ ಗವ್ವನೆ ಗವಿಯಂತಿರುತ್ತವೆ. ಈಗಿನ ವಿದ್ಯುತ್ ಬಲ್ಬ್, ಫ್ಯಾನು ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಬಗೆಹರಿಸಿದ್ದರೂ ಇದನ್ನು ಸಾರ್ವತ್ರಿಕಗೊಳಿಸುವಷ್ಟಿಲ್ಲ. ಎಷ್ಟೋ ರೈತಾಪಿ ಮನೆಯೊಳಗಿನ ಗೋದಲಿಯಲ್ಲಿ ಈಗಲೂ ಎತ್ತು, ಎಮ್ಮೆ, ಆಡು, ಕುರಿ ಕಟ್ಟುವುದಿದೆ. ಈ ಸೆಗಣಿ ಗಂಜಲದ ವಾಸನೆಯಿಂದಲೂ ಮನೆಯೊಳಗಿರಲಾಗದು. ಈ ಬೇಸಿಗೆ ಕಾಲದಲ್ಲಿ ಸಿಮೆಂಟ್ ಶೀಟ್ ಮತ್ತು ತಗಡಿನ ಮೇಲ್ಛಾವಣಿಯ ಮನೆಯೊಳಗಿರುವುದನ್ನು ಕಲ್ಪಿಸಿಕೊಂಡರೂ ಬೆವರೊಡೆಯುತ್ತದೆ. ಮೊದಲಿಗೆ ಉಲ್ಲೇಖಿಸಿದಂತೆ ಹಳ್ಳಿಗಳ ಮೇಲ್ಜಾತಿ ಮತ್ತು ಮೇಲ್ವರ್ಗದ ಮನೆಗಳ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಬಹುಸಂಖ್ಯಾತ ಗ್ರಾಮೀಣರ ‘ಮನೆ’ ಸ್ವರೂಪ ‘ಸ್ಟೇ ಹೋಮ್’ ಗೆ ಸಹಕಾರಿಯಾಗಿಲ್ಲ ಎಂಬುದನ್ನು ಅರಿಯಬೇಕಿದೆ. ಒಂದು ವೇಳೆ ಕೊರೋನ ಮೂರು ಮತ್ತು ನಾಲ್ಕನೇ ಹಂತಕ್ಕೆ ಹಳ್ಳಿಗಳಿಗೆ ಪ್ರವೇಶಿಸಿದರೆ ಅದರ ನಿಯಂತ್ರಣ ಬಹಳ ಕಷ್ಟವಿದೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗದಂತೆ ತಡೆಯಲು ‘ಸ್ಟೇ ವಿಲ್ಲೇಜ್’ ಮಾಡಬಹುದು. ಇಲ್ಲವೇ ಒಂದು ಓಣಿ, ಗಲ್ಲಿ, ವಠಾರ, ಕಾಲನಿಗಳಿಂದ ಇನ್ನೊಂದು ಓಣಿ, ಗಲ್ಲಿ, ವಠಾರ, ಕಾಲನಿಗೆ ಚಲಿಸದಂತೆ ‘ಸ್ಟೇ ಓಣಿ’ ‘ಸ್ಟೇ ಕಾಲನಿ’ ತರಹದ ಪ್ರತ್ಯೇಕತೆಯನ್ನು ಮಾಡಬೇಕಾಗುತ್ತದೆ.

Writer - ಅರುಣ್ ಜೋಳದಕೂಡ್ಲಿಗಿ

contributor

Editor - ಅರುಣ್ ಜೋಳದಕೂಡ್ಲಿಗಿ

contributor

Similar News