ವೈರಾಣು ಲೋಕದ ಬಲಾಢ್ಯನೇ ಈ ಕೋವಿಡ್-19?
ತಮ್ಮ ಮನೆಯಲ್ಲಿ ಅನ್ಯರಿಗೆ ಜಾಗ ಕೊಡುವುದು ಯಾರಿಗೇ ಆಗಲಿ ಕಷ್ಟವೇ ತಾನೆ? ವೈರಾಣುಗಳು ಆಶ್ರಯಿಸಿದ ಜೀವಿಗಳು ಅವುಗಳನ್ನು ಪ್ರತಿರೋಧಿಸುತ್ತವೆ. ಇವು ತಮಗೆ ಸಹ್ಯವಲ್ಲ ಎಂದು ಹೇಳುತ್ತವೆ. ಶರೀರಕ್ಕೆ ಸಹ್ಯವಾಗದೆ ಇರುವುದನ್ನೇ ‘ಕಾಯಿಲೆ’ ಎನ್ನುವುದು. ಅದರಲ್ಲೂ ಒಂದು ಜೀವಿ ಒಳಗೆ ಬಂದು ತನ್ನ ಕೋಶಗಳನ್ನೇ ಬಳಸಿಕೊಂಡು ಬದುಕುವುದನ್ನು ಯಾವ ಜೀವಿ ತಾನೇ ಒಪ್ಪೀತು? ಏಕೆಂದರೆ ಕೋಶಗಳನ್ನು ವೈರಾಣು ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಾ ಸಾಗಿದಂತೆ, ಜೀವಿಯಲ್ಲಿ ಅವುಗಳ ಕೊರತೆ ಉಂಟಾಗುತ್ತದೆ. ಹಾಗಾಗಿ ಅದು ತನ್ನ ಮನೆಯೊಳಗೆ ಬಂದು ಎಲ್ಲವನ್ನೂ ಆಕ್ರಮಿಸಿಕೊಳ್ಳಲು ಯತ್ನಿಸುವ ವೈರಾಣುವನ್ನು ಬಡಿದು ಓಡಿಸುತ್ತದೆ. ಇಂತಹ ಕೆಲಸಕ್ಕೇ ಮೀಸಲಾದ ಜೀವಕೋಶಗಳು ಎಲ್ಲಾ ಜೀವಿಗಳಲ್ಲೂ ಇರುತ್ತವೆ.
ಮಂಗನಿಂದ ಮಾನವ ಎಂಬುದು ಚಾರ್ಲ್ಸ್ ಡಾರ್ವಿನ್‌ನ ಸಿದ್ಧಾಂತ. ಇದು ನಾವು ಪಠ್ಯಪುಸ್ತದಲ್ಲಿ ಕಲಿತಿರುವ ಮಾನವ ವಿಕಾಸದ ಕಥೆ. ಇಂತಹುದೇ ಕಥೆ ವೈರಾಣುಗಳಿಗೂ ಇರಬಹುದಲ್ಲವೇ? ಇದ್ದರೆ ಆ ಕಥೆ ಹೇಗಿರಬಹುದು? ಮಾನವನ ವಿಕಾಸದ ಕಥೆಯಲ್ಲಿ ಅನೇಕ ರೋಚಕ ಅಂಶಗಳಿವೆ. ಮರಗಳಲ್ಲಿ ಜಿಗಿಯುತ್ತಾ ಓಡಾಡಿಕೊಂಡಿದ್ದ ಮಂಗ ನೆಲದ ಮೇಲೆ ಹೆಜ್ಜೆಯೂರಿದ್ದು ಕ್ರಾಂತಿಕಾರಕ ಹೆಜ್ಜೆಯಾಯಿತು. ಇದೇ ಜೀವಿ ಮುಂದೆ ದ್ವಿಪಾದಿಯಾದ ಮೇಲೆ ಹೊಸಸಾಧ್ಯತೆಗಳ ಲೋಕವೇ ತೆರೆದುಕೊಂಡಿತು. ಚಲನೆಯಲ್ಲಿ ಆಗುತ್ತಿದ್ದ ಬದಲಾವಣೆಗಳಿಗೆ ಪೂರಕವಾಗಿ ಮೆದುಳು ಹಿರಿದಾಗುತ್ತಾ ಬಂದಿತು. ಸಣ್ಣ ಶರೀರವಿದ್ದರೂ ಅದಕ್ಕೆ ಅಸಾಧ್ಯವಾದ ಸಾಮರ್ಥ್ಯಗಳನ್ನು ನೀಡಿದ ಮೆದುಳು ಮನುಷ್ಯನನ್ನು ಪ್ರಬಲ ಜೀವಿಯಾಗಿಸಿತು. ಎಷ್ಟರಮಟ್ಟಿಗೆ ಅಂದರೆ ಹತ್ತು ಸಾವಿರ ವರ್ಷಗಳ ಹಿಂದೆ ಒಂದಿಷ್ಟು ಸಾವಿರಗಳ ಸಂಖ್ಯೆಯಲ್ಲಿದ್ದ ಮಾನವ ಪ್ರಾಣಿ, ಈಗ ಏಳು ಬಿಲಿಯನ್ ಸಂಖ್ಯೆಯನ್ನು ಹೊಂದಿದೆ.
ನಾವೀಗ ವೈರಾಣು ಲೋಕದೆಡೆಗೆ ನೋಡುವ. ವೈರಾಣುಗಳು ಅವಲಂಬಿತ ಜೀವಿಗಳು. ಅವುಗಳಿಗೆ ಅವುಗಳದ್ದೇ ಆದ ಅಸ್ತಿತ್ವವಿರುವುದಿಲ್ಲ. ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಗಳಿಗಿಂತಲೂ ನಿಸ್ಸಾಹಯಕ ಪ್ರಾಣಿ ಇದು. ಮೊಟ್ಟೆಯಿಂದ ಹೊರ ಬಂದ ಮೇಲಾದರೂ ಸ್ವತಂತ್ರ ಬದುಕಿಗೆ ಕೋಗಿಲೆಗಳಿಗೆ ಅವಕಾಶವಿರುತ್ತದೆ. ಆದರೆ ವೈರಾಣುಗಳಿಗೆ ಅಂತಹ ಅವಕಾಶವಿರುವುದಿಲ್ಲ. ಇವು ಇತರ ಜೀವಿಗಳ ಜೀವಕೋಶವನ್ನೇ ಪೂರ್ಣವಾಗಿ ಅವಲಂಬಿಸಬೇಕು. ತಮ್ಮ ಮನೆಯಲ್ಲಿ ಅನ್ಯರಿಗೆ ಜಾಗ ಕೊಡುವುದು ಯಾರಿಗೇ ಆಗಲಿ ಕಷ್ಟವೇ ತಾನೆ? ವೈರಾಣುಗಳು ಆಶ್ರಯಿಸಿದ ಜೀವಿಗಳು ಅವುಗಳನ್ನು ಪ್ರತಿರೋಧಿಸುತ್ತವೆ. ಇವು ತಮಗೆ ಸಹ್ಯವಲ್ಲ ಎಂದು ಹೇಳುತ್ತವೆ. ಶರೀರಕ್ಕೆ ಸಹ್ಯವಾಗದೆ ಇರುವುದನ್ನೇ ‘ಕಾಯಿಲೆ’ ಎನ್ನುವುದು. ಅದರಲ್ಲೂ ಒಂದು ಜೀವಿ ಒಳಗೆ ಬಂದು ತನ್ನ ಕೋಶಗಳನ್ನೇ ಬಳಸಿಕೊಂಡು ಬದುಕುವುದನ್ನು ಯಾವ ಜೀವಿ ತಾನೇ ಒಪ್ಪೀತು? ಏಕೆಂದರೆ ಕೋಶಗಳನ್ನು ವೈರಾಣು ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಾ ಸಾಗಿದಂತೆ, ಜೀವಿಯಲ್ಲಿ ಅವುಗಳ ಕೊರತೆ ಉಂಟಾಗುತ್ತದೆ. ಹಾಗಾಗಿ ಅದು ತನ್ನ ಮನೆಯೊಳಗೆ ಬಂದು ಎಲ್ಲವನ್ನೂ ಆಕ್ರಮಿಸಿಕೊಳ್ಳಲು ಯತ್ನಿಸುವ ವೈರಾಣುವನ್ನು ಬಡಿದು ಓಡಿಸುತ್ತದೆ. ಇಂತಹ ಕೆಲಸಕ್ಕೇ ಮೀಸಲಾದ ಜೀವಕೋಶಗಳು ಎಲ್ಲಾ ಜೀವಿಗಳಲ್ಲೂ ಇರುತ್ತವೆ.
ಈ ವ್ಯವಸ್ಥೆಯನ್ನು ರೋಗನಿರೋಧಕ ವ್ಯವಸ್ಥೆ ಎನ್ನಲಾಗುತ್ತದೆ. ಇಲ್ಲೊಂದು ಸಮಸ್ಯೆಯಿದೆ. ವೈರಾಣು ಒಂದು ಜೀವಿಯಾಗಿ ಎರಡು ಗುರಿಗಳನ್ನು ಇಟ್ಟುಕೊಂಡಿರುತ್ತದೆ. 1. ತಾನು ಬದುಕಬೇಕು. 2. ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದನ್ನು ಸಾಧಿಸಲು ತನಗಿರುವ ಸ್ವತಂತ್ರ ಅಸ್ತಿತ್ವವಿಲ್ಲದ ಮಿತಿಯನ್ನು ಅದು ಮೀರಬೇಕು. ಇದನ್ನು ಮೀರದಿದ್ದರೆ ಅದಕ್ಕೆ ಬದುಕುಳಿಯಲು ಅವಕಾಶವಿರುವುದಿಲ್ಲ. ಅದರ ವಿನಾಶ ಖಂಡಿತ. ಮನುಷ್ಯ ತನ್ನ ಕೃಶ ಶರೀರದ ಮಿತಿಯನ್ನು ಬಲವಾದ ಬುದ್ಧಿಶಕ್ತಿಯಿಂದ ಮೀರಿದಂತೆ, ವೈರಾಣು ಅನ್ಯ ಜೀವಿಗಳಿಗೆ ಅಪಾಯ ತರದೆ ಅವುಗಳೊಂದಿಗೆ ಬದುಕುವ ಉಪಾಯವನ್ನು ಕಂಡುಕೊಂಡಿತು. ತನ್ನ ಉಳಿವಿಗೆ ಎಷ್ಟು ಬೇಕೋ ಅಷ್ಟು ಸಂಖ್ಯೆಯಲ್ಲಿ ಇರುತ್ತಾ, ತಾನು ಆಶ್ರಯಿಸಿರುವ ಜೀವಿಯ (ರೋಗನಿರೋಧಕ) ಸೈನಿಕರಲ್ಲಿ ಆತಂಕ ಮೂಡಿಸದೇ ಇರುವ ಬದುಕನ್ನು ಕಟ್ಟಿಕೊಂಡಿತು. ಹೀಗೆ ‘ಬದುಕಲು ಕಲಿತ’ ವೈರಾಣುಗಳು ಬದುಕಿದವು. ಕಲಿಯದ ವೈರಾಣುಗಳು ವಿನಾಶ ಹೊಂದಿದವು. ಹೀಗೆ ಬದುಕುಳಿಯಲು ಕಲಿತ ವೈರಾಣುಗಳಲ್ಲಿ ಕೊರೋನ ಕೂಡ ಒಂದು. ಇವು ಸಸ್ತನಿಗಳಲ್ಲಿ ಮನೆ ಮಾಡಿಕೊಂಡು ಇರುವಂತಹವು. ಅದರಲ್ಲೂ ಬಾವಲಿಗಳಲ್ಲಿ ಇವು ಹೆಚ್ಚು ನೆಮ್ಮದಿಯಿಂದ ಬದುಕುತ್ತವೆ. ಜೀವಿಗಳಿಗೆ ಯಾವಾಗಲೂ ವಿಸ್ತರಿಸಿಕೊಳ್ಳುವ ತುಡಿತ ಸಹಜವಾಗಿ ಇರುತ್ತದೆ. ಇದ್ದ ಜಾಗದಲ್ಲಿ ಅವು ಇರುವುದಿಲ್ಲ.
ಸಸ್ಯಗಳು ಎಷ್ಟು ದೂರದವರೆಗೆ ಬೀಜಗಳನ್ನು ಪಸರಿಸಲು ಸಾಧ್ಯವೋ ಅಷ್ಟು ದೂರ ಪಸರಿಸುವುದರ ಮೂಲಕ ತಮ್ಮ ಲೋಕವನ್ನು ವಿಸ್ತರಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿರುತ್ತವೆ. ಕೊರೋನ ಗುಂಪಿನ ವೈರಾಣುಗಳು ಇದನ್ನೇ ಮಾಡಿದವು. ಬಾವಲಿಗಳ ಜೊತೆಗೆ ಸಿಗುವ ಇತರ ಪ್ರಾಣಿಗಳಾದ ಭಿನ್ನ ಭಿನ್ನವಾದ ಹಕ್ಕಿಗಳು, ಬೆಕ್ಕುಗಳು, ಹಂದಿಗಳು, ಒಂಟೆ, ಜಿಂಕೆ, ಹಾವು ಹೀಗೆ ಅನೇಕ ಪ್ರಾಣಿಗಳ ಶರೀರವನ್ನು ಪ್ರವೇಶಿಸಿ ಅಲ್ಲಿ ಪುಟ್ಟದೊಂದು ಮನೆ ಮಾಡಿಕೊಂಡವು. ಹಾಗಾಗಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಇವು ಆರಿಸಿಕೊಂಡ ದಾರಿ ಎಷ್ಟು ಸಾಧ್ಯವೋ ಅಷ್ಟು ಜೀವಿಗಳಲ್ಲಿ ತಮ್ಮ ತಾಣವನ್ನು ಸ್ಥಾಪಿಸಿಕೊಳ್ಳುವುದು! ಒಂದರ್ಥದಲ್ಲಿ ಕೊರೋನ ವೈರಾಣುಗಳು ನಿಜವಾದ ವಿಶ್ವ ಜೀವಿಗಳು(ವಿಶ್ವ ಮಾನವರು). ಇವುಗಳ ಪ್ರಕಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ಇವರಿಗೆ ಆಶ್ರಯ ನೀಡಲು ಇರುವಂತಹ ಜೀವಿಗಳೇ! ತಮ್ಮ ಮೈಮೇಲೆ ಸೂಜಿ ಮೊನೆಗಳ ಹಾಗಿರುವ ಉದ್ದದ ರಚನೆಗಳನ್ನು ಹೊಂದಿರುವ ಈ ವೈರಾಣು ‘ಕಿರೀಟ’ಧಾರಿಯಾಗಿರುವಂತೆ ಕಾಣುತ್ತದೆ.
ಸೂಕ್ಷ್ಮ ದರ್ಶಕದಲ್ಲಿ ಇದನ್ನು ನೋಡಿದ ವಿಜ್ಞಾನಿಗಳು ಇದಕ್ಕೆ ‘ಕೊರೋನ’ ಅಂದರೆ ‘ಕಿರೀಟ’ ಎಂದು ನಾಮಕರಣ ಮಾಡಿದರು. ಇದೊಂದು ವೈರಾಣುಗಳ ಕುಟುಂಬ. ಇದರ ಕೆಲವು ಸದಸ್ಯರು ಬಹಳ ಹಿಂದೆ ಅಂದರೆ ಸಾವಿರಾರು ವರ್ಷಗಳ ಹಿಂದೆ ಮನುಷ್ಯರ ನಡುವೆ ಇರುವುದನ್ನು ಕಲಿತುಕೊಂಡವು. ಈ ‘ನಾಡು ಕೊರೋನಗಳು’ ಮನುಷ್ಯರ ಶರೀರವನ್ನು ಪ್ರವೇಶಿಸಿದ ಕೂಡಲೇ ಮನುಷ್ಯರಲ್ಲಿರುವ ಸೈನಿಕ ಕೋಶಗಳು ಇವುಗಳ ಮೇಲೆ ದಾಳಿ ನಡೆಸಿ ಹೊರದೂಡಲು ಯತ್ನಿಸುತ್ತವೆ. ಇದು ಮನುಷ್ಯರಲ್ಲಿ ನೆಗಡಿ ಜ್ವರಕ್ಕೆ ಕಾರಣವಾಗುತ್ತದೆ. ಪ್ರತಿ ವರ್ಷವೂ ಇದು ನಿರಂತರವಾಗಿ ನಡೆಯುತ್ತದೆ. ಪ್ರತೀ ವರ್ಷ ಒಂದು ಹೊಸ ವೇಶ ಧರಿಸಿಕೊಂಡು ಕೊರೋನ ವೈರಾಣು ಒಳಬರಲು ಯತ್ನಿಸುತ್ತದೆ. ಇದರ ಕರಾಮತ್ತು ತಿಳಿದಿರುವ ಶರೀರದೊಳಗಿರುವ ಸೈನಿಕರು ಇದನ್ನು ಕೂಡಲೇ ಬಡಿದು ಹೊರಗಟ್ಟುತ್ತಾರೆ. ಹೀಗೆ ಇವು ಮನುಷ್ಯರ ನಡುವೆ ಬದುಕುತ್ತಾ ಸಾಕಷ್ಟು ‘ನಾಗರಿಕ’ ವರ್ತನೆಯನ್ನು ಕಲಿತುಬಿಟ್ಟಿವೆ. ಒಬ್ಬ ಮನುಷ್ಯನಿಗೆ ಸ್ವಲ್ಪ ಕಿರಿಕಿರಿ ಮಾಡಿ ಅವನು ಸೀನಿದಾಗ ಪಕ್ಕದಲ್ಲಿರುವವನ ಶರೀರವನ್ನು ಪ್ರವೇಶಿಸಲು ದಾರಿ ಮಾಡಿಕೊಂಡು ಜಾಗ ಖಾಲಿ ಮಾಡುತ್ತವೆ. ಯಾವುದೇ ಕಾರಣಕ್ಕೂ ಮನುಷ್ಯನನ್ನು ಕೊಲ್ಲುವುದಿಲ್ಲ. ಇದೇ ಸಮಯದಲ್ಲಿ ಇವುಗಳ ದಾಯಾದಿಗಳಾದ ‘ಕಾಡು ಕೊರೋನಗಳು’ ಕಾಡಿನಲ್ಲಿ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಜಿಗಿಯುತ್ತಾ ಇದ್ದವು. ಎಲ್ಲೋ ಅಪರೂಪಕ್ಕೆ ಊರೊಂದರ ಮೇಲೆ ಹಾರುತ್ತಿದ್ದಾಗ ಕಾಡು ಹಕ್ಕಿ ಹಾಕಿದ ಹಿಕ್ಕೆಯಲ್ಲಿ ಉಳಿದುಕೊಂಡಿದ್ದ ವೈರಾಣುವಿಗೆ ನಾಡಿನ ಕೋಳಿಯನ್ನೋ ಹಂದಿಯನ್ನೋ ಪ್ರವೇಶಿಸುವ ಅವಕಾಶ ಸಿಕ್ಕರೂ ಅಷ್ಟೇನು ಪ್ರಯೋಜನವಾಗುತ್ತಿರಲಿಲ್ಲ.
ಊರುಗಳ ಸಂಖ್ಯೆಯೇ ಕಡಿಮೆ ಇದ್ದ ಸಂದರ್ಭದಲ್ಲಿ ವಿಸ್ತರಣೆಗೆ ಬೇಕಾದ ಸ್ಥಳಾವಕಾಶವೇ ಇರುತ್ತಿರಲಿಲ್ಲ. ಆದರೆ ಕಳೆದ ಎರಡು ಶತಮಾನಗಳಿಂದ ಬೇರೊಂದು ರೀತಿಯ ಅವಕಾಶಗಳು ಸೃಷ್ಟಿಯಾದವು. ಮನುಷ್ಯರ ಸಂಖ್ಯೆ ಹೆಚ್ಚಾದಂತೆ ಕಾಡಿನ ಪ್ರಮಾಣ ಕಡಿಮೆಯಾಯಿತು. ಕಾಡು ಕಡಿಮೆಯಾದಂತೆ ಕಾಡು ಕೊರೋನ ವೈರಾಣುಗಳಿಗೆ ಆಶ್ರಯ ನೀಡಿದ್ದ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಮಾಡು ಇಲ್ಲವೇ ಮಡಿ ಸಮಯ ಬಂದಿತು. ಯಥೇಚ್ಛವಾಗಿ ಇರುತ್ತಿದ್ದ ಬೆಕ್ಕು, ಚಿಪ್ಪುಹಂದಿ, ಬಾವಲಿ ಮುಂತಾದವುಗಳ ಜಾಗದಲ್ಲಿ ಈಗ ಮನುಷ್ಯರಿದ್ದಾರೆ. ಅನಿವಾರ್ಯವಾಗಿ ಕಾಡು ಕೊರೋನಗಳು ಮನುಷ್ಯರನ್ನು ಪ್ರವೇಶಿಸಿದವು. ಆದರೆ ಆಗಿದ್ದೇನು? ಅಲ್ಲಿದ್ದ ಸೈನಿಕರು ಇವುಗಳನ್ನು ಹಿಗ್ಗಾಮುಗ್ಗಾ ಬಡಿದು ಹಾಕಲು ಯತ್ನಿಸಿದವು. ಎಷ್ಟರಮಟ್ಟಿಗೆ ಅಂದರೆ ವೈರಾಣುಗಳಿಗೆ ಹೊಡೆಯಲು ಹೋಗಿ ತಮ್ಮ ಜೀವಕೋಶಗಳಿಗೆ ಅಸಾಧ್ಯವಾದ ಘಾಸಿಯನ್ನು ಮಾಡಿ, ಇಡೀ ಶರೀರವನ್ನೇ ಕೊಂದು ಬಿಟ್ಟವು. ಇದರಿಂದ ಕಾಡು ಕೊರೋನಗಳಿಗೆ ಸಮಸ್ಯೆಯಾಯಿತು. ಒಂದು ಮನುಷ್ಯ ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಜಿಗಿಯುವ ದಾರಿಗಳು ಸುಲಭವಾಗಿರಲಿಲ್ಲ. ಮನುಷ್ಯರು ಮನುಷ್ಯರ ಮಲ ತಿನ್ನುವುದಿಲ್ಲ. ಅವರು ಮನುಷ್ಯನ ಮಾಂಸವನ್ನು ತಿನ್ನುವುದಿಲ್ಲ. ಕಾಡಿನಲ್ಲಿ ಪ್ರಾಣಿಗಳೊಳಗೆ ಪ್ರವೇಶ ಪಡೆಯಲು ಇದ್ದ ಅವಕಾಶಗಳು ನಾಡಿನಲ್ಲಿ ದೊರೆಯದೇ ಇದ್ದುದು ತುಸು ಕಷ್ಟವನ್ನು ಕಾಡು ಕೊರೋನಗಳಿಗೆ ತಂದಿಟ್ಟವು.
ಇಂತಹ ಪ್ರಯತ್ನಗಳನ್ನೇ ನಾವು ಅಂದರೆ ಮನುಷ್ಯರು ಸಾರ್ಸ್, ಮೆನಾರ್ಸ್ ಎಂದೆಲ್ಲಾ ಗುರುತಿಸುತ್ತೇವೆ. 2003ರಲ್ಲಿ ಕಾಡು ಕೊರೋನಗಳು ಬದುಕಲೇ ಬೇಕೆಂದು ಮಾಡಿದ ಗಂಭೀರ ಪ್ರಯತ್ನವೇ ‘ಸಾರ್ಸ್’ ಆಗಿತ್ತು. ಇದಾದ ಮೇಲೆ ಅವುಗಳು ತಮ್ಮ ಬದುಕು ಕಟ್ಟಿಕೊಳ್ಳುವ ಯತ್ನವನ್ನು ಮುಂದುವರಿಸಿದ್ದವು. ಸುಮಾರು ಹದಿನೇಳು ವರ್ಷಗಳ ನಂತರ ಕಾಡು ಕೊರೋನ ತನ್ನ ಇನ್ನೊಂದು ಪ್ರಯತ್ನವನ್ನು 2019ರ ಡಿಸೆಂಬರ್‌ನಲ್ಲಿ ಆರಂಭಿಸಿತು. ಚೀನಾದಲ್ಲಿ ಮನುಷ್ಯರನ್ನು ಅದು ಪ್ರವೇಶಿಸಿತು. ಈ ಬಾರಿ ಮನುಷ್ಯರಿಂದ ಮನುಷ್ಯರಿಗೆ ಹಬ್ಬುವ ಅವಕಾಶವನ್ನು ಕಂಡುಕೊಂಡಿತ್ತು. ಯಾವುದೇ ಜೀವಕೋಶದ ಆಶ್ರಯವಿಲ್ಲದೆ ಒಂದಷ್ಟು ಗಂಟೆಗಳವರೆಗೆ ಗಾಳಿಯಲ್ಲೇ ತೇಲಾಡುವ ಸಾಮರ್ಥ್ಯವನ್ನು ಗಳಿಸಿಕೊಂಡಿತ್ತು. ಮನುಷ್ಯ ಸೀನಿದಾಗ, ಇಲ್ಲವೇ ಕೆಮ್ಮಿ ಉಗುಳಿದಾಗ ಅವನ ಶರೀರದಿಂದ ಬಿಡುಗಡೆ ಪಡೆದು ಮತ್ತೊಂದು ಶರೀರದ ಸಂಪರ್ಕಕ್ಕಾಗಿ ಕಾಯುತ್ತಾ ಕೂರುವ ಅವಕಾಶವನ್ನು ಸೃಷ್ಟಿಸಿಕೊಂಡಿತು. ಈ ಬಾರಿ ಇದರ ತಯಾರಿ ಎಷ್ಟಿತ್ತೆಂದರೆ, ಮನುಷ್ಯ ತನ್ನ ಮೂಗನ್ನು ಉಜ್ಜಿಕೊಂಡ ಕೈಗಳನ್ನು ಆಶ್ರಯಿಸಿ, ಅದು ಮುಟ್ಟಿದ ಕಡೆಯಲ್ಲಾ ಹರಡಿಕೊಳ್ಳುವ ಶಕ್ತಿಯನ್ನು ಬೆಳಸಿಕೊಂಡಿತ್ತು.
ಡಾರ್ವಿನ್ ಪ್ರತಿಪಾದಿಸಿದಂತೆ ಮಂಗಮಾನವರ ಕುಟುಂಬಕ್ಕೆ ಸೇರಿದ ಮನುಷ್ಯ ಹೇಗೆ ನೆಲದ ಮೇಲೆ ಹೆಜ್ಜೆ ಊರಿ, ದ್ವಿಪಾದಿಯಾಗಿ ನಡೆದಾಡುತ್ತಾ, ಬೆಂಕಿಯನ್ನು ಬಳಸಿಕೊಂಡು ಕೃಷಿ ಮಾಡುತ್ತಾ ಕೊನೆಗೆ ಆಕಾಶದಲ್ಲಿರುವ ಚಂದ್ರನ ಮೇಲೆ ಇಳಿದು ನಿಂತಿರುವನೋ, ಹಾಗೆಯೇ ಕೊರೋನ ವೈರಾಣು ಕುಟುಂಬದ ಸದಸ್ಯನಾದ ಕೋವಿಡ್-19 ಏಳು ಬಿಲಿಯನ್ ಸಂಖ್ಯೆಯಲ್ಲಿರುವ ಮನುಷ್ಯರಲ್ಲಿ ಮನೆಕಟ್ಟುವ ಮೂಲಕ ಮಹತ್ತರ ಸಾಧನೆಯನ್ನು ಮಾಡಿದೆ. ಇದು ಕೋವಿಡ್-19ರ ಕಥೆ. ಎಲ್ಲಾ ಕಥೆಗಳಲ್ಲಿರುವ ಹೀರೋಗಳು ಪ್ರತಿಕೂಲ ಸನ್ನಿವೇಶಗಳನ್ನು ನಿಭಾಯಿಸುತ್ತಾ ತಮ್ಮ ಸಾಮರ್ಥ್ಯಗಳನ್ನು ಗೆಲುವಿಗೆ ಪೂರಕವಾಗಿ ಬಳಸಿಕೊಳ್ಳುತ್ತಾ, ಅಂತಿಮವಾಗಿ ತಮ್ಮನ್ನು ನಂಬಿದವರ ಜೀವವನ್ನು ರಕ್ಷಿಸುತ್ತಾರೆ. ಈ ಕೋವಿಡ್-19 ಕೊರೋನ ಕುಟುಂಬದ ಹೊಸ ಹೀರೋ ಆಗಿ ವೈರಾಣು ಲೋಕದ ಎಲ್ಲರ ಮೆಚ್ಚುಗೆ ಪಡೆದಿರಬಹುದಲ್ಲವೇ? ಇರಬಹುದು.