ಲಾಕ್‌ಡೌನ್ ವಿಫಲವಾಗಿದೆ,ಮುಂದೇನು? ಕೇಂದ್ರಕ್ಕೆ ರಾಹುಲ್ ಪ್ರಶ್ನೆ
ಹೊಸದಿಲ್ಲಿ,ಮೇ 26: ಮುಂಬರುವ ದಿನಗಳಲ್ಲಿ ಕೊರೋನ ವೈರಸ್ ನಿಯಂತ್ರಿಸಲು ಕೇಂದ್ರ ಸರಕಾರದ ಯೋಜನೆ ಏನು ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಕೊರೋನ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸರಕಾರದ ನಿರೀಕ್ಷೆ ಹುಸಿಯಾಗಿದೆ ಎಂದು ಬೆಟ್ಟು ಮಾಡಿದರು.
ಮೇ ಅಂತ್ಯದ ವೇಳೆಗೆ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.ಆದರೆ, ಈಗಿನ ಸೋಂಕಿತರ ಸಂಖ್ಯೆಯು ಅವರ ಹೇಳಿಕೆಗೆ ಪೂರಕವಾಗಿಲ್ಲ ಎಂದರು.
ರಾಷ್ಟ್ರವ್ಯಾಪಿ ಘೋಷಿಸಿರುವ ಲಾಕ್‌ಡೌನ್ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಕೊರೋನ ಕಾಯಿಲೆಯು ತೀವ್ರವಾಗಿ ಏರುತ್ತಿದ್ದು, ಕೇಂದ್ರ ಸರಕಾರದ ಮುಂದಿನ ಯೋಜನೆ ಏನು? ನಾಲ್ಕು ಹಂತಗಳ ಲಾಕ್‌ಡೌನ್ ಪ್ರಧಾನಮಂತ್ರಿ ನಿರೀಕ್ಷಿಸಿರುವ ಫಲಿತಾಂಶವನ್ನು ತಂದುಕೊಟ್ಟಿಲ್ಲ ಎಂದು ಮಂಗಳವಾರ ಬೆಳಗ್ಗೆ ಮಾಧ್ಯಮ ಸಂವಾದದಲ್ಲಿ ರಾಹುಲ್ ತಿಳಿಸಿದರು.
ಕೊರೋನ ವೈರಸ್ ಹೆಚ್ಚಾಗುತ್ತಿರುವ ಸಮಯದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಎರಡು ತಿಂಗಳ ಹಿಂದೆ ಲಾಕ್‌ಡೌನ್ ಘೋಷಿಸಿದ್ದ ಪ್ರಧಾನಮಂತ್ರಿ ಮೋದಿ 21 ದಿನಗಳಲ್ಲಿ ಕೊರೋನ ವೈರಸ್ ವಿರುದ್ಧ ನಾವು ಜಯಶಾಲಿಯಾಗುತ್ತೇವೆ ಎಂದಿದ್ದರು. ಇದೀಗ 60 ದಿನಗಳು ಕಳೆದಿವೆ. ಪ್ರತಿದಿನವೂ ಕೊರೋನ ಸೋಂಕಿತರ ಸಂಖ್ಯೆ ಏರುತ್ತಿದೆ. ಲಾಕ್‌ಡೌನ್ ಈ ವೈರಸ್‌ನ್ನು ಸೋಲಿಸಲಾರದು. ಸರಕಾರದ ಮುಂದಿನ ಯೋಜನೆ ಏನು ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದರು.
ಮಾ.26ರಂದು ಪ್ರಧಾನಿ ಮೋದಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದರು. ಆಗ ದೇಶದಲ್ಲಿ 496 ಪಾಸಿಟಿವ್ ಕೇಸ್‌ಗಳಿದ್ದವು. 9 ರೋಗಿಗಳು ಮೃತಪಟ್ಟಿದ್ದರು. ಇದೀಗ ಸೋಂಕಿತರ ಸಂಖ್ಯೆ 1.4 ಲಕ್ಷಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,000 ಗಡಿ ದಾಟಿದೆ.
ದೇಶವು ಆರೋಗ್ಯ ಹಾಗೂ ಆರ್ಥಿಕತೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿಕೆಯ ಬಳಿಕ ರಾಜ್ಯ ಸರಕಾರಗಳು ಎಪ್ರಿಲ್ ತಿಂಗಳಿಂದ ಲಾಕ್‌ಡೌನ್ ಸಡಿಲಿಸುತ್ತಾ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್, "ಭಾರತವನ್ನು ಲಾಕ್‌ಡೌನ್‌ನಿಂದ ತೆರವುಗೊಳಿಸುವ ವಿಚಾರಕ್ಕೆ ಸರಕಾರದ ರಣನೀತಿ ಏನು? ರೋಗವನ್ನು ಹತೋಟಿಗೆ ತರಲು ಸರಕಾರ ಏನು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ? ವಲಸೆ ಕಾರ್ಮಿಕರಿಗೆ ಯಾವ ರೀತಿಯ ಸಹಾಯ ನೀಡಲಾಗುತ್ತಿದೆ? ರಾಜ್ಯ ಸರಕಾರಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೇಗೆ ಬೆಂಬಲ ನೀಡುತ್ತಿದ್ದೀರಿ?''ಎಂದು ಪ್ರಶ್ನಿಸಿದರು.