ನೇತಾಜಿ ಸಂಬಂಧಿಗೆ ಬಂಗಾಳ ಬಿಜೆಪಿ ಕೊಕ್
ಕೊಲ್ಕತ್ತಾ, ಜೂ.2: ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ ಮರಿ ಅಳಿಯ ಚಂದ್ರ ಬೋಸ್ ಅವರನ್ನು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಪುನರ್ರಚಿತ ರಾಜ್ಯ ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಚಂದ್ರ ಬೋಸ್ ಹೆಸರು ಮಾಯವಾಗಿದೆ. ಹಲವು ತಿಂಗಳುಗಳಿಂದ ಬೋಸ್ ಪಕ್ಷದ ನಿಲುವಿನ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಇದುವರೆಗೆ ಚಂದ್ರ ಬೋಸ್ ರಾಜ್ಯ ಬಿಜೆಪಿಯ 12 ಮಂದಿ ಉಪಾಧ್ಯಕ್ಷರ ಪೈಕಿ ಒಬ್ಬರಾಗಿದ್ದರು.
ಸಿಎಎ ವಿವಾದ, ವಲಸೆ ಕಾರ್ಮಿಕರ ದುಸ್ಥಿತಿಯಂಥ ಹಲವು ವಿಷಯಗಳಲ್ಲಿ ಪಕ್ಷದ ನಿಲುವಿನ ವಿರುದ್ಧವಾಗಿ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಮುನಿಸಿಕೊಂಡಿರುವ ರಾಜ್ಯ ಬಿಜೆಪಿ ಮುಖಂಡರು ಚಂದ್ರಬೋಸ್ ಅವರನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಕೇಂದ್ರ ಹಾಗೂ ರಾಜ್ಯಗಳ ನಡುವಿನ ರಾಜಕೀಯದಿಂದಾಗಿ ನಷ್ಟವಾಗಿರುವುದು ವಲಸೆ ಕಾರ್ಮಿಕರಿಗೆ; ವಲಸೆ ಕಾರ್ಮಿಕರು ಮನೆ ಸೇರಿಕೊಳ್ಳಲು ಮೈಲುಗಟ್ಟಲೆ ನಡೆಯುತ್ತಿರುವ, ರೈಲು, ಬಸ್ಸಿನ ಅಡಿ ಬಿದ್ದು ಸಾಯುತ್ತಿರುವ ಭಯಾನಕ ದೃಶ್ಯಗಳು ಕಾಣಿಸುತ್ತಿವೆ. ಜನರಿಂದ, ಜನರಿಗಾಗಿ, ಜನರೇ ನಡೆಸುವ ಯಾವ ಸರ್ಕಾರದಿಂದಲೂ ಇದನ್ನು ನಿರೀಕ್ಷಿಸುವುದಿಲ್ಲ ಎಂದು ಬೋಸ್ ಮೇ 14ರಂದು ಟ್ವೀಟ್ ಮಾಡಿದ್ದರು.
ಪಕ್ಷದ ಸಂಘಟನೆ ಪುನಾರಚನೆ ಬಗ್ಗೆ ಯಾರೂ ತಮ್ಮೊಂದಿಗೆ ಚರ್ಚಿಸಿಲ್ಲ ಎಂದು ಬೋಸ್ ಸ್ಪಷ್ಟಪಡಿಸಿದ್ದಾರೆ. ನಾನು ನೇತಾಜಿಯವರ ಆದರ್ಶ ಪಾಲಿಸುತ್ತೇನೆ. ಇದಕ್ಕೆ ವಿರುದ್ಧವಾಗಿ ಯಾರದಾರೂ ಹೋದರೆ, ನನ್ನ ಧ್ವನಿ ಎತ್ತುತ್ತೇನೆ. ಎಲ್ಲರನ್ನೂ ಸೇರಿಸಿಕೊಳ್ಳುವ ರಾಜಕೀಯದಲ್ಲಿ ನನಗೆ ನಂಬಿಕೆ; ವಿಭಜನೆಯಲ್ಲಲ್ಲ. ನಾನು ಪಕ್ಷದಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.