ಕೊರೋನ ನಿಯಂತ್ರಣ ಮಕ್ಕಳ ಜವಾಬ್ದಾರಿಯಲ್ಲ ಎನ್ನಲು ಪೂರ್ಣ ಸಾಕ್ಷಿಗಳಿಲ್ಲ

Update: 2020-06-04 19:30 GMT

ಡಾ.ಶ್ರೀನಿವಾಸ ಕಕ್ಕಿಲ್ಲಾಯರು ‘ಕೊರೋನ ನಿಯಂತ್ರಣ ಮಕ್ಕಳ ಜವಾಬ್ದಾರಿಯಲ್ಲ, ಶಾಲೆಗಳನ್ನು ಮುಚ್ಚುವ ಅಗತ್ಯ ಇನ್ನಿಲ್ಲ’ ಎನ್ನುವ ಲೇಖನದಲ್ಲಿ ಶಾಲೆಗಳನ್ನು ತೆರೆಯುವ ಅಗತ್ಯತೆಯ ಕುರಿತು ಸಮರ್ಥವಾದ ವಾದವನ್ನು ಮಂಡಿಸುತ್ತಾರೆ (ವಾರ್ತಾಭಾರತಿ ಜೂನ್ 03, 2020). ಆದರೆ, ಶ್ರೀಯುತರು ಸಂಕೀರ್ಣವಾದ ಪ್ರಕ್ರಿಯೆಯನ್ನು ಸರಳವಾಗಿ ನೋಡಿದ್ದಾರೆಂದು ನನ್ನ ಗ್ರಹಿಕೆ. ಶ್ರೀಯುತರು ಉಲ್ಲೇಖಿಸಿರುವ ಆಕರಗಳ ಗಂಭೀರ ಅಧ್ಯಯನವೇ ಈ ಸಂಕೀರ್ಣತೆಯನ್ನು ಪೂರ್ಣವಾಗಿ ವಿವರಿಸುತ್ತವೆ.

ಶ್ರೀಯುತರು ನೀಡುವ ವೈದ್ಯ ಸಾಹಿತ್ಯದ ಮೇರು ನಿಯತಕಾಲಿಕಗಳಾದ ದಿ ಲಾನ್ಸೆಟ್ ಮತ್ತು ಜೆಎಎಂಎನ ಲೇಖನಗಳನ್ನು ಓದಿದಾಗ ಕೆಲವು ಪ್ರಶ್ನೆಗಳು ಮೂಡುತ್ತವೆ. ದಿ ಲಾನ್ಸೆಟ್‌ನಲ್ಲಿ ಪ್ರಕಟವಾಗಿರುವ ಲೇಖನವು ‘ಇದುವರೆಗೆ ಪ್ರಕಟಗೊಂಡ ಲೇಖನಗಳನ್ನು ಆಧರಿಸಿದ ಲೇಖನವಾಗಿದೆ’. ಶಾಲೆ ಮತ್ತು ಸೋಂಕು ಹರಡುವಿಕೆಯ ಕುರಿತು ಪ್ರಕಟಗೊಂಡಿರುವ 616 ಲೇಖನಗಳನ್ನು ಇಲ್ಲಿ ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಆರು ಲೇಖನಗಳು ಮಾತ್ರ ಕೋವಿಡ್-19ರ ಸೋಂಕಿನ ಸಮಯದಲ್ಲಿ ಶಾಲೆಗಳ ಪಾತ್ರದ ಕುರಿತು ಅಧ್ಯಯನ ಮಾಡಿದ್ದಂತಹವು. ಈ ಸಂಖ್ಯೆಯೇ ಕೋವಿಡ್-19 ಮತ್ತು ಶಾಲೆಗಳ ನಡುವಿನ ಸಹಸಂಬಂಧವನ್ನು ವಿವರಿಸುವ ಸಂಶೋಧನೆಯಾಧಾರಿತ ಜ್ಞಾನದ ತೀವ್ರ ಕೊರತೆಯಿರುವುದನ್ನು ಸೂಚಿಸುತ್ತದೆ.

ಮೇಲಿನ ಲೇಖನದಲ್ಲಿ ಚರ್ಚೆಗೆ ಒಳಗಾಗಿರುವ ಬಹುತೇಕ ಲೇಖನಗಳು ಸಾರ್ಸ್ ಮತ್ತು ಎಚ್1ಎನ್1 ಸೋಂಕಿನ ಪರಿಣಾಮವನ್ನು ಕುರಿತು ನಡೆದಂತಹ ಅಧ್ಯಯನಗಳ ಕುರಿತ ಲೇಖನಗಳಾಗಿವೆ. ಆದರೆ ಇಲ್ಲೊಂದು ತೊಡಕಿದೆ. ಸಾರ್ಸ್ ಸೋಂಕು ರೋಗ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಂಡ (ಸಿಂಪ್ಟೋಮ್ಯಾಟಿಕ್) ನಂತರವೇ ಇರುತಿತ್ತು. ಆದರೆ ಕೊರೋನ ಕಾಯಿಲೆಯು ಯಾವುದೇ ರೋಗದ ಲಕ್ಷಣಗಳು (ಸಿಂಪ್ಟೋಮ್ಯಾಟಿಕ್) ಇಲ್ಲದಿರುವ ವ್ಯಕ್ತಿಯಿಂದಲೂ ಸೋಂಕು ಹರಡುತ್ತದೆ. ಹಾಗಾಗಿ, ಸಾರ್ಸ್‌ಕಾಯಿಲೆಯ ಅಧ್ಯಯನಗಳನ್ನು ಕೊರೋನಕ್ಕೆ ವಿಸ್ತರಿಸಲು ಕಷ್ಟಸಾಧ್ಯವಾಗುತ್ತದೆ. ಇದೇ ಲೇಖನದಲ್ಲಿ ಇರುವ ಮತ್ತೊಂದು ಅಧ್ಯಯನದ ವಿವರಗಳು ಮುಖ್ಯವಾಗುತ್ತದೆ. ಚೀನಾದ ವುಹಾನ್‌ನಲ್ಲಿ ನಡೆದ ಶಾಲೆಗಳ ಮುಚ್ಚುವಿಕೆಯ ಪರಿಣಾಮದ ಅಧ್ಯಯನದ ಮಾಹಿತಿಗಳನ್ನು ತೆಗೆದುಕೊಂಡು ಫರ್ಗುಸನ್ ಮತ್ತವರ ಸಹೋದ್ಯೋಗಿಗಳು ‘ಮಾದರಿ ಅನ್ವಯ ಪ್ರಯೋಗವನ್ನು’ ಮಾಡುತ್ತಾರೆ. ಬ್ರಿಟನ್ ದೇಶದಲ್ಲಿರುವ ಶಾಲೆಗಳಿಗೆ ಮತ್ತು ವಿಶ್ವವಿದ್ಯಾನಿಲಯಗಳಿಗೆ ವುಹಾನ್ ಅಧ್ಯಯನದ ದತ್ತಾಂಶವನ್ನು ಅನ್ವಯಿಸುತ್ತಾರೆ. ಹೀಗೆ ದೊರೆತ ಫಲಿತಾಂಶದ ಪ್ರಕಾರ ಸಾಮಾನ್ಯ ಲಾಕ್‌ಡೌನ್ ಇಲ್ಲದಿರುವಾಗ ಶಾಲೆಯ ಮುಚ್ಚುವಿಕೆಯನ್ನು ಇಟ್ಟು ನೋಡಿದಾಗ, ಒಟ್ಟಾರೆ ಮರಣ ಪ್ರಮಾಣದಲ್ಲಿ ಶೇ.2-4 ಮಾತ್ರ ಕಡಿಮೆಯಾಗುತ್ತದೆ. ಇದನ್ನು ಶ್ರೀಯುತರು ಸ್ಪಷ್ಟವಾಗಿ ತಮ್ಮ ಲೇಖನದಲ್ಲಿ ನಮೂದಿಸುತ್ತಾರೆ. ಆದರೆ, ವುಹಾನ್‌ನಲ್ಲಿ ಅಧ್ಯಯನ ನಡೆಯುವ ವೇಳೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ(ಜನವರಿ 2020). ಹಾಗಾಗಿ ಲಾಕ್‌ಡೌನ್ ಅವಧಿಯ ಅಧ್ಯಯನವನ್ನು ಲಾಕ್‌ಡೌನ್‌ರಹಿತ ಸನ್ನಿವೇಶಕ್ಕೆ ಅಳವಡಿಸಿ ನೋಡುವುದರ ವೈಜ್ಞಾನಿಕತೆ ಎಷ್ಟು ಎನ್ನುವ ಪ್ರಶ್ನೆ ಮೂಡುತ್ತದೆ. ಇನ್ನೂ ಮುಖ್ಯವಾಗಿ, ಈ ಅಧ್ಯಯನಗಳು ಸಹದ್ಯೋಗಿಗಳ ವಿಮರ್ಶೆಗೆ (ಪೀರ್ ರಿವ್ಯೆವ್) ಒಳಪಟ್ಟಿಲ್ಲ. ಪೀರ್ ರಿವ್ಯೆವ್‌ಗೆ ಒಳಪಟ್ಟ ಮೇಲೆ ಇಂತಹ ಅಧ್ಯಯನಗಳು ನಂಬಿಕೆಗೆ ಅರ್ಹವೇ ಅಲ್ಲವೇ ಎನ್ನುವುದು ನಿಖರವಾಗಿ ತಿಳಿಯುವುದು ಸಾಧ್ಯವಾಗುತ್ತದೆ.

ಇನ್ನು ಶ್ರೀಯುತರು ಅವಲಂಬಿಸುವ ಅಮೆರಿಕನ್ ಜರ್ನಲ್ ಆಫ್ ಪೀಡ್ಯಾಟ್ರಿಕ್ಸ್‌ನ ಲೇಖನವು ಇನ್ನಷ್ಟು ಪ್ರಶ್ನೆಗಳನ್ನು ಮುಂದಿರಿಸುತ್ತದೆ. ವರ್ಮಂಟ್ ವಿಶ್ವವಿದ್ಯಾನಿಲಯದ ವಿಲಿಯಂ ರಾಸಕ್ ಅವರ ಲೇಖನವು (ಪೀರ್ ರಿವ್ಯೆವ್ ಆಗಿಲ್ಲ) ಕೋವಿಡ್-19ರ ಸೋಂಕು ಅಮೆರಿಕದ ಮಕ್ಕಳಲ್ಲಿ ಅಷ್ಟಾಗಿ ಹರಡುತ್ತಿಲ್ಲ ಎನ್ನುವುದನ್ನು ಗುರುತಿಸುವುದರ ಜೊತೆಗೆ ಕವಾಸಾಕಿ ಕಾಯಿಲೆ ಎನ್ನುವ ಮತ್ತೊಂದು ಕಾಯಿಲೆ ವೇಗವಾಗಿ ಹರಡುತ್ತಿರುವುದನ್ನು ದಾಖಲಿಸುತ್ತದೆ. ಕವಾಸಾಕಿ ಕಾಯಿಲೆಯು ಮಕ್ಕಳ ಶರೀರದಲ್ಲಿ ಬಹು ವಿಧದ ಊತಗಳಿಗೆ ಕಾರಣವಾಗುತ್ತದೆ. ಇದರ ಕುರಿತು ವೈದ್ಯ ವಿಜ್ಞಾನಕ್ಕೆ ಇರುವ ಜ್ಞಾನ ತುಂಬಾ ಕಡಿಮೆ. ಶರೀರದ ರೋಗನಿರೋಧಕ ವ್ಯವಸ್ಥೆಯ ಏರುಪೇರಿನಿಂದ ಉಂಟಾಗುವ ಈ ಕಾಯಿಲೆಗೂ ಕೋವಿಡ್-19ಕ್ಕೂ ಇರುವ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ. (ಇದು ಸ್ಪಷ್ಟವಾಗದ ಹೊರತು ಶಾಲೆಗಳನ್ನು ಆರಂಭಿಸುವುದು ಅತ್ಯಂತ ಅಪಾಯಕಾರಿ ಕ್ರಮವಾಗುತ್ತದೆಂದು ಅಲ್ಲಿನ ಪ್ರಮುಖ ವಿಜ್ಞಾನಿ ಡಾ. ಫೌಚಿ ಅಭಿಪ್ರಾಯಪಡುತ್ತಾರೆ). ಈ ಲೇಖನದಲ್ಲಿ ಮಕ್ಕಳಿಂದ ಮಕ್ಕಳಿಗೆ ಕೋವಿಡ್-19 ಏಕೆ ಹರಡುವುದಿಲ್ಲ ಎನ್ನುವುದರ ಕುರಿತು ಸ್ಪಷ್ಟವಾದ ಮಾಹಿತಿಯಿಲ್ಲ ಎನ್ನುವುದು ದಾಖಲಾಗಿರುತ್ತದೆ. ಇವರು ನೀಡುವ ಎರಡು ಸಂಭವನೀಯ ಕಾರಣಗಳು ಹೀಗಿವೆ: 1. ಮಕ್ಕಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಿರುವ ಕಾರಣ ಅವರಿಂದ ಹೊರಗೆ ಬರುವ ವೈರಾಣುಗಳ ಪ್ರಮಾಣವು ಕಡಿಮೆಯಿರಬಹುದು. 2. ಶಾಲೆಗಳನ್ನು ಲಾಕ್‌ಡೌನ್‌ನೊಂದಿಗೆ ಮುಚ್ಚಿದ ಕಾರಣ, ಮಕ್ಕಳು-ಮಕ್ಕಳ ನಡುವೆ ಸಂಪರ್ಕಗಳು ಕಡಿಮೆಯಿರುವುದರ ಪರಿಣಾಮವೂ ಇರಬಹುದು. ಒಂದು ವೇಳೆ ಮೊದಲ ಕಾರಣವೇ ಹೆಚ್ಚು ಸತ್ಯವಾಗಿದ್ದರೆ ಶಾಲೆಗಳನ್ನು ತೆರೆಯುವುದು ಸರಿ. ಆದರೆ ಎರಡನೇ ಅಂಶವು ಸತ್ಯವಾಗಿದ್ದರೆ, ಶಾಲೆಯನ್ನು ತೆರೆಯುವುದು ಅಪಾಯಕಾರಿಯಾದ ಕ್ರಮವಾಗುತ್ತದೆ.

ಶ್ರೀಯುತು ಉಲ್ಲೇಖಿಸುವ ಮೂರನೆಯ ಲೇಖನ ಇಟಲಿ ದೇಶದ ಸುಸನ್ ಎಸ್ಪಾಸಿಟೋ ಅವರದ್ದು. ಇವರ ಲೇಖನವು ಮೇಲೆ ಚರ್ಚಿಸಿದ ದಿ ಲಾನ್ಸೆಟ್ ಲೇಖನವನ್ನು ಉಲ್ಲೇಖ ಮಾಡುತ್ತಾ ಶಾಲೆಗಳನ್ನು ಮುಚ್ಚುವುದರಿಂದ ಆಗುವ ಲಾಭ ಕಡಿಮೆ ಎಂದು ವಾದಿಸುತ್ತದೆ. ತೈವಾನ್ ದೇಶವು ಯಶಸ್ವಿಯಾಗಿ ಶಾಲೆಗಳನ್ನು ನಡೆಸುತ್ತಿರುವುದರ ಕುರಿತು ಚರ್ಚಿಸುವ ಲೇಖಕರು ಇಟಲಿಯ ಬಡ ಕುಟುಂಬಗಳಲ್ಲಿ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಬೇಕಾದ ಪರಿಕರಿಗಳಾದ ಸ್ಮಾರ್ಟ್ ಫೋನ್‌ಗಳಾಗಲೀ ಅಥವಾ ಟ್ಯಾಬ್ಲೆಟ್‌ಗಳಾಗಲೀ ಇರದಿರುವುದನ್ನು ದಾಖಲಿಸುತ್ತಾರೆ. ದಿ ಲಾನ್ಸೆಟ್ ಲೇಖನವು ಶಾಲೆಗಳನ್ನು ಮುಚ್ಚುವುದರಿಂದ ಆಗುವ ಬಹುಮುಖ್ಯವಾದ ಸಮಸ್ಯೆಯೆಡೆಗೆ ಗಮನ ಸೆಳೆಯುತ್ತದೆ: ವೈದ್ಯಕೀಯ ಸೇವೆಯಲ್ಲಿರುವವರ ಮಕ್ಕಳ ೆಷಣೆಯ ಸಮಸ್ಯೆ. ಅಮೇರಿಕದ ವೈದ್ಯಕೀಯ ಸೇವೆಯಲ್ಲಿರುವ ಶೇ.9 ಜನರಿಗೆ ಮಕ್ಕಳ ಶಾಲೆ ಮುಚ್ಚಿರುವುದು ನಿರ್ವಹಣೆಯ ಸಮಸ್ಯೆಯನ್ನು ನೀಡಿದೆ. ಹಾಗೆಯೇ ಬ್ರಿಟನ್ ದೇಶದ ಶೇಕಡ 16ರಷ್ಟು ಮಂದಿ ಇದೇ ಸಮಸ್ಯೆಯಿಂದ ಪೀಡಿತರಾಗಿದ್ದಾರೆ. ಶಾಲೆಗಳ ಅನುಪಸ್ಥಿತಿಯು ಮಕ್ಕಳ ಸುರಕ್ಷತೆಯ ಅಂಶವನ್ನು ಸವಾಲಾಗಿಸುತ್ತದೆ. ಹಾಗೆಯೇ ಮಕ್ಕಳು ಮನೆಯಲ್ಲಿರುವ ಸಂದರ್ಭದಲ್ಲಿ ದೈಹಿಕವಾದ ಮತ್ತು ಮಾನಸಿಕವಾದ ಹಲ್ಲೆಗಳಿಗೆ ಒಳಗಾಗುವ ಹೆಚ್ಚಿನ ಅಪಾಯವಿರುತ್ತದೆ ಎನ್ನುವುದು ಸಹಾ ಸತ್ಯವೇ.
ಇದಕ್ಕೊಂದು ಸೂಕ್ತ ಪರಿಹಾರವಂತೂ ಬೇಕೇಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇದಕ್ಕೆ ಶಾಲೆಗಳನ್ನು ಪೂರ್ಣವಾಗಿ ತೆರೆಯುವುದು ಉಚಿತವಾದ ಪರಿಹಾರವಲ್ಲ ಎನ್ನುವುದು ನನ್ನ ಗ್ರಹಿಕೆ. ಇದಕ್ಕೆ ಕಾರಣಗಳು ಹೀಗಿವೆ:

1. ಮಕ್ಕಳಿಂದ ಮಕ್ಕಳಿಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಿರುವುದಕ್ಕೆ ನಂಬಲರ್ಹವಾದ ಜ್ಞಾನ ದೊರೆಯದ ಹೊರತು, ಲಭ್ಯವಿರುವ ದತ್ತಾಂಶ ನಿಷ್ಪ್ರಯೋಜಕವಾಗಿರುತ್ತದೆ (ಸೋಂಕಿನ ಪ್ರಮಾಣ ಕಡಿಮೆಯಿದೆ ಎನ್ನುವ ಅಂಕಿಸಂಖ್ಯೆ).

2. ಭಾರತದ ಸಾಮಾಜಿಕ ವ್ಯವಸ್ಥೆ ಚೀನಾ, ತೈವಾನ್, ಹಾಂಕಾಂಗ್, ಸ್ವೀಡನ್ ದೇಶಗಳಿಗಿಂತ ಭಿನ್ನವಾಗಿರುವುದರಿಂದ, ಅವುಗಳ ಅನುಭವದ ಆಧಾರದ ಮೇಲೆ ಇಲ್ಲಿ ನಿರ್ಧಾರ ಕೈಗೊಳ್ಳುವುದು ಸಮಸ್ಯೆಯನ್ನು ತರಬಹುದು.

3. ನಗರ ಪ್ರದೇಶದಲ್ಲಿರುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಗಾಳಿ-ಬೆಳಕಿನ ತೀವ್ರ ಕೊರತೆಯಿರುವ (ಇಕ್ಕಟ್ಟಾದ ತರಗತಿಗಳು ಇತ್ಯಾದಿ) ಸನ್ನಿವೇಶವಿರುವುದರಿಂದ ಸೋಂಕು ವೇಗವಾಗಿ ಹರಡುವ ಸನ್ನಿವೇಶವಿರುತ್ತದೆ. (ಆಟದ ಮೈದಾನಗಳ ಕೊರತೆಯಿದ್ದಾಗ, ಮನೆಯಲ್ಲಿರುವುದಕ್ಕೂ ಶಾಲೆಯಲ್ಲಿರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ)
4. ಹಲವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡಿಮೆ ಸಂಖ್ಯೆಯ (ಒಬ್ಬರು/ಇಬ್ಬರು) ಶಿಕ್ಷಕರಷ್ಟೇ ಇರುತ್ತಾರೆ. ಇವರಲ್ಲಿ ಒಬ್ಬರು ಸೋಂಕು ಪೀಡಿತರಾಗಿ ಕೆಲಸದಿಂದ ದೂರವುಳಿದರೆ, ಮಕ್ಕಳ ಸುರಕ್ಷತೆಯು ಬಹು ಮುಖ್ಯ ಸವಾಲಾಗುತ್ತದೆ.
5. ಇದುವರೆಗಿನ ಲಾಕ್‌ಡೌನ್ ಅವಧಿಯಲ್ಲಿ ಭಾರತೀಯ ಮಕ್ಕಳ ಒಟ್ಟಾರೆ ಆರೋಗ್ಯದ ಸ್ಥಿತಿಗತಿ ಹೇಗಿದೆ ಎನ್ನುವುದರ ಮಾಹಿತಿ ಲಭ್ಯವಿಲ್ಲ. ಅಮೆರಿಕದಲ್ಲಿ ಕವಾಸಾಕಿ ಕಾಯಿಲೆಯನ್ನು ಗುರುತಿಸದಷ್ಟು ವೇಗವಾಗಿ ಮತ್ತು ನಿಖರವಾಗಿ ಕಾಯಿಲೆಗಳನ್ನು ಗುರುತಿಸಬೇಕಾದ ಏಮ್ಸ್‌ನಂತಹ (ವಿಶೇಷ ಪರಿಣತಿಯಿರುವ ಮೂರನೇ ಹಂತದ ಆಸ್ಪತ್ರೆಗಳು) ಪ್ರಮುಖ ಆಸ್ಪತ್ರೆಗಳು ಕೋವಿಡ್-19ರ ಸೋಂಕಿನ ನಿರ್ವಹಣೆಯಲ್ಲಿ ಪೂರ್ಣವಾಗಿ ತೊಡಗಿಕೊಂಡಿರುವುದರಿಂದ ನಮ್ಮ ಮಕ್ಕಳ ಆರೋಗ್ಯದ ವಸ್ತುಸ್ಥಿತಿಯ ಪೂರ್ಣ ಚಿತ್ರಣ ದೊರೆಯದೆಯೂ ಇರಬಹುದು. ಹೀಗೆ ತಿಳಿಯದಿರುವುದೇ ಹೆಚ್ಚಿರುವಾಗ ಈಗಿರುವ ಸ್ಥಿತಿಯನ್ನೇ ಮುಂದುವರಿಸುವುದು ಕ್ಷೇಮವಲ್ಲವೇ?

ಕೊನೆಯದಾಗಿ, ಶ್ರೀಯುತರು ಲೇಖನದಲ್ಲಿ ಬಹುಮುಖ್ಯವಾದ ವಿಷಯವನ್ನು ಚರ್ಚೆಗೆ ತರುತ್ತಾರೆ. ಅದು ಶಾಲೆಗಳೇ ಅನವಶ್ಯಕ ಎನ್ನುವ ವಾದಕ್ಕೆ ಸಿಕ್ಕಿರುವ ಮಾನ್ಯತೆಯ ವಿಷಯ. ಖಂಡಿತವಾಗಿಯೂ ಶಾಲೆಗಳು ಅನಗತ್ಯ ಎನ್ನುವುದು ಮೂರ್ಖತನದ ವಾದವಾಗಿದೆ. ಮಕ್ಕಳ ಬೆಳವಣಿಗೆಗೆ ಶಾಲೆಯ ಪರಿಸರ ಸಾಕಷ್ಟು ಪೂರಕವಾಗಿರುತ್ತದೆ. ಅದೇ ಸಮಯದಲ್ಲಿ ಇಂತಹ ವಾದದ ಹಿಂದಿರುವ ಮತ್ತೊಂದು ಮುಖವನ್ನು ಕಾಣಬೇಕಿದೆ. ಅತಿಯಾದ ವ್ಯಾಪಾರೀಕರಣಕ್ಕೆ ಒಳಗಾಗಿರುವ ಶಿಕ್ಷಣ ಸಂಸ್ಥೆಗಳ ಕಪಿಮುಷ್ಟಿಯಿಂದ ದೂರವಿರುವ ಸಾಧ್ಯತೆಯನ್ನು ಆನ್‌ಲೈನ್ ಶಿಕ್ಷಣ ತೋರಿಸಿದೆ. ಇದೊಂದು ಎರಡು ಅಂಚಿನ ಕತ್ತಿಯ ಸ್ಥಿತಿ. ಹಣ ಮತ್ತು ಸಂಪನ್ಮೂಲಗಳಿರುವ ಪೋಷಕರಿಗೆ ಇದೊಂದು ಸಾಧ್ಯತೆಯಾದರೆ, ಇವರೆಡೂ ಇರದಿರುವ ಪೋಷಕರಿಗೆ ಇದೊಂದು ಶಾಪವಾಗುತ್ತದೆ. ಈ ಪ್ರಶ್ನೆಯನ್ನು ಸೋಂಕಿನೊಂದಿಗೆ ತಳುಕು ಹಾಕದೆ ಪ್ರತ್ಯೇಕವಾಗಿ ನೋಡುವ ಅಗತ್ಯವಿದೆ. ಇದನ್ನು ಕೇವಲ ಭಾವನಾತ್ಮಕವಾಗಿ ನೋಡುವುದು ಸೀಮಿತ ಆಲೋಚನೆಗೆ ಕಾರಣವಾಗಿ ಇನ್ನಷ್ಟು ಅಪಾಯಗಳನ್ನು ಉಂಟು ಮಾಡುತ್ತದೆ. ಒಟ್ಟಿನಲ್ಲಿ, ಮಕ್ಕಳು ಸೋಂಕಿನ ಹರಡುವಿಕೆಗೆ ಜವಾಬ್ದಾರಲ್ಲವೆಂದು ನಮಗೆ ಖಚಿತವಾಗಿ ತಿಳಿಯುವವರೆಗೂ ಎಚ್ಚರದಿಂದಿರುವುದೇ ನಮಗಿರುವ ಉಚಿತ ಆಯ್ಕೆಯಾಗುತ್ತದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News