ಕೋವಿಡ್-19 ವರದಿ ಮಾಡಿದ್ದಕ್ಕಾಗಿ 55 ಪತ್ರಕರ್ತರ ವಿರುದ್ಧ ಎಫ್‌ಐಆರ್

Update: 2020-06-17 05:37 GMT

ಹೊಸದಿಲ್ಲಿ : ಅಶ್ವಿನಿ ಸೈನಿ, ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸುದ್ದಿ ಪ್ರಕಟಿಸುವ ಫೇಸ್‌ಬುಕ್ ಪೇಜ್ ಒಂದರ ವರದಿಗಾರ್ತಿ. ದೈನಿಕ್ ಜಾಗರಣ್ ಪತ್ರಿಕೆಗೆ ಹವ್ಯಾಸಿ ಬರಹಗಾರ್ತಿ ಕೂಡಾ. ಫೇಸ್‌ಬುಕ್ ಪುಟದಲ್ಲಿ ಎ. 8ರಂದು ಮಂಡಿ ಲೈವ್ ಎಂಬ ವೀಡಿಯೊ ಪ್ರಸಾರ ಮಾಡಿದರು. ಸುಂದರನಗರದಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರಿಗೆ ಪಡಿತರ ವಿತರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದನ್ನು ವರದಿ ಬಿಂಬಿಸಿತ್ತು.

ಆದರೆ ಸುಂದರನಗರ ಉಪವಿಭಾಗಾಧಿಕಾರಿ ರಾಹುಲ್ ಚೌಹಾಣ್ ಅವರು ಸೈನಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವ ಆರೋಪದಡಿ ವಿಕೋಪ ನಿರ್ವಹಣೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದರು. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರಿಗೆ ಸೈನಿ ಪತ್ರ ಬರೆದು, ಅಧಿಕಾರಿಗಳು ಪತ್ರಿಕೆ ದಮನಿಸುತ್ತಿದ್ದಾರೆ ಎಂದು ಆಪಾದಿಸಿದರು.

ಪರಿಣಾಮವೆಂದರೆ ಸೈನಿ ವಿರುದ್ಧ ಮೂರು ಹೆಚ್ಚುವರಿ ಎಫ್‌ಐಆರ್ ದಾಖಲಾದದ್ದು. ವಿಚಲಿತರಾಗದ ಸೈನಿ ಹಾಗೂ ದಿವ್ಯ ಹಿಮಾಚಲದ ಮತ್ತೊಬ್ಬ ಪತ್ರಕರ್ತರು ಇನ್ನೊಂದು ವರದಿ ಪ್ರಕಟಿಸಿದರು. ಉಪವಿಭಾಗದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ, ಇಟ್ಟಿಗೆ ಭಟ್ಟಿ ಚಟುವಟಿಕೆಗಳು ನಡೆಯುತ್ತಿರುವ ಬಗೆಗೆ ಇದು ವಿವರಿಸಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಇಟ್ಟಿಗೆ ಭಟ್ಟಿ ಮುಚ್ಚಿಸಿದರು; ಆದರೆ ಸೈನಿ ವಿರುದ್ಧ ಐಪಿಸಿಯ ಹಲವು ಕಾಯ್ದೆಗಳಡಿ ಪ್ರಕರಣ ದಾಖಲಿಸಿದರು.

ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರು ವರದಿಗಾರಿಕೆಗೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಯಿತು. ಬಿಜೆಪಿ ಆಡಳಿತದ ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಒಟ್ಟು ಸೈನಿ ವಿರುದ್ಧ 5 ಎಫ್‌ಐಆರ್ ದಾಖಲಾಗಿವೆ.

ಹಿಮಾಚಲದ ಮತ್ತೊಬ್ಬ ಪತ್ರಕರ್ತ ಓಂ ಶರ್ಮಾ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ರಾಷ್ಟ್ರೀಯ ವಾಹಿನಿಯ ವರದಿಗಾರ ವಿಶಾಲ್ ಆನಂದ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಹುತೇಕ ಎಲ್ಲವೂ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಆರೋಪ ಹೊರಿಸಿದ ಪ್ರಕರಣಗಳು.

ಇಂಡಿಯಾ: ಮೀಡಿಯಾಸ್ ಕ್ರ್ಯಾಕ್‌ಡೌನ್ ಡ್ಯೂರಿಂಗ್ ಕೋವಿಡ್-19 ಲಾಕ್‌ಡೌನ್ ಎಂಬ ವರದಿಯಲ್ಲಿ ಇಂಥ ಹಲವು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ದೆಹಲಿ ಮೂಲದ ರಿಸ್ಕ್ ಅನಾಲಿಸಿಸ್ ಗ್ರೈಪ್ ಈ ವರದಿ ಸಿದ್ಧಪಡಿಸಿದ್ದು, ಮಾ. 25ರಿಂದ 31 ಅವಧಿಯಲ್ಲಿ ಕೋವಿಡ್-19 ವರದಿ ಮಾಡಿದ್ದಕ್ಕಾಗಿ ದೇಶಾದ್ಯಂತ ಇಂಥ 55 ಎಫ್‌ಐಆರ್‌ಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಲಾಗಿದೆ ಅಥವಾ ಎಫ್‌ಐಆರ್ ದಾಖಲಿಸಲಾಗಿದೆ ಇಲ್ಲವೇ ಸಮನ್ಸ್ ಅಥವಾ ಶೋಕಾಸ್ ನೋಟಿಸ್ ನೀಡಲಾಗಿದೆ. ದೈಹಿಕ ಹಲ್ಲೆ, ಆಸ್ತಿ ನಾಶ ಮತ್ತು ಬೆದರಿಕೆಯ ಪ್ರಕರಣಗಳೂ ನಡೆದಿವೆ.

ಉತ್ತರ ಪ್ರದೇಶದಲ್ಲಿ ಪತ್ರಕರ್ತರ ವಿರುದ್ಧ ಗರಿಷ್ಠ (11) ಹಲ್ಲೆ ಪ್ರಕರಣಗಳು ವರದಿಯಾಗಿವೆ. ಜಮ್ಮುಕಾಶ್ಮೀರ (6), ಹಿಮಾಚಲ ಪ್ರದೇಶ (5), ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಮಹಾರಾಷ್ಟ್ರ (ತಲಾ 4) ದಲ್ಲೂ ಪ್ರಕರಣ ದಾಖಲಾಗಿದೆ. ಪಂಜಾಬ್, ದೆಹಲಿ, ಮಧ್ಯಪ್ರದೇಶ ಹಾಗೂ ಕೇರಳದಲ್ಲಿ ತಲಾ 2, ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಗುಜರಾತ್, ಛತ್ತೀಸ್‌ಗಢ, ನಾಗಾಲ್ಯಾಂಡ್, ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಹಲ್ಲೆ ಪ್ರಕರಣಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News