ಕೊರೋನ ಸೋಂಕು: ದೇಶದಲ್ಲಿ ಒಂದೇ ದಿನ 15 ಸಾವಿರಕ್ಕೂ ಅಧಿಕ ಪ್ರಕರಣ

Update: 2020-06-21 04:05 GMT

ಹೊಸದಿಲ್ಲಿ, ಜೂ.21: ಕೊರೋನ ವೈರಸ್ ಸೋಂಕು ಭಾರತಕ್ಕೆ ದಾಳಿ ಇಟ್ಟ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಮೂರು ದಾಖಲೆಗಳು ಸೃಷ್ಟಿಯಾಗಿವೆ. ಶನಿವಾರ ಒಂದೇ ದಿನ 15,203 ಪ್ರಕರಣಗಳು ದೃಢಪಟ್ಟಿದ್ದು, ಇದು ದಿನವೊಂದರಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಅಂತೆಯೇ ದೇಶದ ಒಟ್ಟು ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ. ಮೊದಲ ಒಂದು ಲಕ್ಷ ಪ್ರಕರಣಗಳು ದಾಖಲಾಗಲು 109 ದಿನ ತಗುಲಿದ್ದರೆ, ಕೊನೆಯ ಒಂದು ಲಕ್ಷ ಪ್ರಕರಣಗಳು ಕೇವಲ ಎಂಟು ದಿನಗಳಲ್ಲಿ ದಾಖಲಾಗಿವೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ ಇದೀಗ 4,10,923.

ದೇಶದಲ್ಲಿ ಶನಿವಾರ 377 ಮಂದಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13 ಸಾವಿರದ ಗಡಿ ದಾಟಿದೆ. ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೋವಿಡ್- ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 13,183.

ದೇಶದ ಶೇಕಡ 25ರಷ್ಟು ಸೋಂಕು ಪ್ರಕರಣಗಳು ಹಾಗೂ ಶೇಕಡ 32.6ರಷ್ಟು ಸಾವು ಕಳೆದ ಎಂಟು ದಿನದಲ್ಲಿ ಸಂಭವಿಸಿದೆ ಎನ್ನುವುದು ಆತಂಕಕಾರಿ ವಿಚಾರ. ದಿಲ್ಲಿಯಲ್ಲಿ ಶನಿವಾರ 3,630 ಪ್ರಕರಣಗಳು ದಾಖಲಾಗಿದ್ದು, ಇದು ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಅಂತೆಯೇ ಮಹಾರಾಷ್ಟ್ರದಲ್ಲಿ 3,875 ಪ್ರಕರಣಗಳು ವರದಿಯಾಗಿವೆ. ದಿಲ್ಲಿಯಲ್ಲಿ 77 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 2,112ಕ್ಕೇರಿದೆ.

ದೇಶದಲ್ಲಿ 2,27,705 ಮಂದಿ ಚೇತರಿಸಿಕೊಂಡಿದ್ದು, ಶೇಕಡ 55.4ರಷ್ಟು ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,28,205ಕ್ಕೇರಿದ್ದು, 160 ಮಂದಿ ಶನಿವಾರ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 5,894ಕ್ಕೇರಿದೆ.

ತಮಿಳುನಾಡಿನಲ್ಲಿ ಶನಿವಾರ 38 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 704ಕ್ಕೇರಿದೆ. 2,396 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 56,845ಕ್ಕೇರಿದೆ. ಗುಜರತ್‌ನಲ್ಲಿ 539 ಹೊಸ ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಶನಿವಾರ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News