ಚೀನಾ ಭಾರತದ ಮೇಲೆ ದಾಳಿ ಮಾಡಿದ್ದು ಯಾಕೆ ಗೊತ್ತಾ ?

Update: 2020-06-27 17:26 GMT

ಬೂಬಾ ರಮ್‌ದೇವ್ ಅವರು ಕೊರೋನ ರೋಗಕ್ಕೆ ಔಷಧಿ ಕಂಡು ಹಿಡಿದಿದ್ದಾರೆನ್ನುವುದು ಗೊತ್ತಾದದ್ದೇ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಈ ಹಿಂದೆ ಇದೇ ಬೂಬಾ ರಮ್‌ದೇವ್ ‘ಕಿಂಭೋ’ ಆ್ಯಪ್‌ನ್ನು ಮಾರುಕಟ್ಟೆಗೆ ಬಿಟ್ಟಷ್ಟೇ ಮಹತ್ವದ ಸುದ್ದಿ ಇದು ಎನ್ನುವುದು ಎಂಜಲು ಕಾಸಿಗೆ ಮನವರಿಕೆಯಾಯಿತು. ಕಿಂಭೋ ಆ್ಯಪ್‌ನಿಂದಾಗಿ ಚೀನಾದ ಆರ್ಥಿಕತೆ ಸಂಪೂರ್ಣ ಹದಗೆಟ್ಟು, ಅದು ಭಾರತದ ಮೇಲೆ ತೀವ್ರ ಸಿಟ್ಟಾದ ಬಗ್ಗೆ ಸುಳ್ಳಿನ ಬೆಳೆ ಚಕ್ರವರ್ತಿಯ ಭಾಷಣದ ಮೂಲಕ ಕೇಳಿದ್ದ ಕಾಸಿ, ಇದೀಗ ರಮ್ ದೇವ್ ಅವರ ‘ಕೊರೋನ ನಿಲ್ಲು’ ಔಷಧಿಯನ್ನು ಚೀನಾದ ವಿರುದ್ಧ ಬಳಸುವ ಸಾಧ್ಯತೆಗಳ ಬಗ್ಗೆ ಸುಳ್ಳಿನ ಬೆಳೆಯ ಭಾಷಣಕ್ಕಾಗಿ ಕಾದು ಸುಸ್ತಾಗಿ ಕಾಸಿ ನೇರ ಬೂಬಾ ರಮ್‌ದೇವ್ ಅವರನ್ನೇ ಭೇಟಿಯಾಗೋಣ ಎಂದು ಹೊರಟ. ನೋಡಿದರೆ, ರಮ್ ದೇವ್ ಮುಖಕ್ಕೆ ಮಾಸ್ಕ್, ಕಣ್ಣಿಗೆ ಠಕ್ಕರ ಪಟ್ಟಿ, ಕಟ್ಟಿ ಕೂತಿದ್ದರು. ‘‘ಸಾರ್...ನೀವೇ ಕೊರೋನಕ್ಕೆ ಔಷಧಿ ಕಂಡು ಹುಡುಕಿದ್ದೀರಿ...ಮತ್ತೆ ಮುಖಕ್ಕೆ ಮಾಸ್ಕ್ ಎಂತದಕ್ಕೆ?’’ ಕಾಸಿ ಇಂಟರ್ಯೂ ಆರಂಭಿಸಿಯೇ ಬಿಟ್ಟ. ‘‘ನೋಡಿ...ಆ ಔಷಧಿಯನ್ನು ನಾನು ಕಂಡು ಹಿಡಿದಿರುವುದು ದೇಶದ ಜನರ ಹಿತಾಸಕ್ತಿಗಾಗಿ. ಅದನ್ನು ಕಂಡು ಹಿಡಿದವರು ಬಳಸಿದರೆ, ಪರಿಣಾಮ ಬೀರುವುದಿಲ್ಲ. ಆದುದರಿಂದ ನಾನು ಇನ್ನೂ ಚೀನಾದವರು ಕಂಡು ಹಿಡಿಯುವ ಔಷಧಿಗಾಗಿ ಕಾಯುತ್ತಾ ಇದ್ದೇನೆ...’’ ಬೂಬಾ ಹೇಳಿದರು.

‘‘ಸಾರ್...ಈ ಔಷಧಿಗೆ ಪ್ರತಿಕ್ರಿಯೆ ಹೇಗಿದೆ?’’ ಕಾಸಿ ಕೇಳಿದ.
‘‘ನನ್ನ ಕಿಂಭೋ ಆ್ಯಪ್‌ನ ಮೂಲಕ ಇದನ್ನು ವಿಶ್ವಾದ್ಯಂತ ತಲುಪಿಸುತ್ತಿದ್ದೇನೆ....ವ್ಯಾಪಕ ಪ್ರತಿಕ್ರಿಯೆ ಬರುತ್ತಿದೆ...’’ ಬೂಬಾ ಕಣ್ಣು ಮಿಟುಕಿಸಿ ಹೇಳಿದರು.
‘‘ಆದರೆ ನಿಮ್ಮ ಕಿಂಭೋ ಆ್ಯಪ್ ಮಾರುಕಟ್ಟೆಯಲ್ಲೇ ಇಲ್ಲ ಎಂದು ಹೇಳುತ್ತಿದ್ದಾರಲ್ಲ....?’’ ಕಾಸಿ ಗೊಂದಲದಿಂದ ಕೇಳಿದ.
‘‘ನೋಡಿ...ನನ್ನ ಕಿಂಭೋ ಆ್ಯಪ್ ವೇದಕಾಲದಷ್ಟು ಪ್ರಾಚೀನವಾದುದು. ಪಾಂಡವರು, ಕೌರವರೆಲ್ಲ ಇದೇ ಆ್ಯಪ್ ಬಳಸಿ ಸರ್ವನಾಶವಾದರು. ಇದೀಗ ಕಿಂಭೋ ಆ್ಯಪ್ ಮತ್ತು ನನ್ನ ಕೊರೋನ ನಿಲ್ಲು ಔಷಧಿ...ದೇಶವನ್ನು ವಿಶ್ವಗುರುವನ್ನಾಗಿಸಿದೆ...’’ ಬೂಬಾ ವಿವರಿಸಿದರು.

‘‘ಸಾರ್...ನಿಮ್ಮ ಔಷಧಿ ವಿಶ್ವದಲ್ಲಿ ಎಷ್ಟು ಜನರನ್ನು ಗುಣ ಪಡಿಸಿದೆ....?’’ ಕಾಸಿ ಅಂಕಿ ಅಂಶ ಕೇಳಿದ. ‘‘ಈಗಾಗಲೇ ಭಾರತದಲ್ಲಿ ಗುಣವಾದವರೆಲ್ಲ ನಮ್ಮ ಔಷಧಿಯನ್ನು ಸೇವಿಸಿಯೇ ಗುಣವಾಗಿರುವುದು...’’ ಬೂಬಾ ಸ್ಪಷ್ಟಪಡಿಸಿದರು.

‘‘ಆದರೂ ಎಲ್ಲಿ? ಹೇಗೆ? ಎಷ್ಟು? ಎನ್ನುವುದರ ಬಗ್ಗೆ ದಾಖಲೆ ಇದೆಯ?’’ ‘‘ನೋಡಿ....ಪಾಕಿಸ್ತಾನದಲ್ಲಿ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಇದೇ ರೀತಿ, ಎಲ್ಲಿ? ಹೇಗೆ? ಎಷ್ಟು? ಎಂದು ಲೆಕ್ಕ ಕೇಳಿದರು. ಇಂತಹ ಪ್ರಶ್ನೆಯನ್ನು ಕೇಳುವುದು ದೇಶದ್ರೋಹಿಗಳು ಮಾತ್ರ. ಭಾರತೀಯ ಸೇನೆಗೆ ಮಾಡುವ ಅವಮಾನ ಇದು. ಅದೇ ರೀತಿ, ಭಾರತೀಯ ಸಂಸ್ಥೆಯೊಂದು ಕೊರೋನಕ್ಕೆ ಔಷಧಿ ಕಂಡು ಹುಡುಕಿದಾಗ ಅದರ ಬಗ್ಗೆ ಸಾಕ್ಷಿ ಕೇಳುವುದು ಭಾರತಕ್ಕೆ ಮಾಡುವ ಅವಮಾನ. ಅವರೆಲ್ಲ ಚೀನಾದ ಏಜೆಂಟರು...’’ ಬೂಬಾ ರಮ್‌ದೇವರು ಎರಡೂ ಕಣ್ಣುಗಳನ್ನು ಈಗ ಮಿಟುಕಿಸತೊಡಗಿದರು.
‘‘ಆದರೂ....’’
‘‘ಆದರೂ ಇಲ್ಲ, ಗೀದರೂ ಇಲ್ಲ....ಇನ್ನೂ ಕೊರೋನಕ್ಕೆ ಔಷಧಿ ಕಂಡು ಹುಡುಕಿಲ್ಲವಾದರೂ ಸೋಂಕಿತರೆಲ್ಲರೂ ಯಾಕೆ ಸಾಯಲಿಲ್ಲ? ಯಾಕೆಂದರೆ ನನ್ನ ಸಂಸ್ಥೆ ಗುಟ್ಟಾಗಿ ಅವರ ಮೇಲೆ ಈ ಔಷಧಿಯನ್ನು ಪ್ರಯೋಗ ಮಾಡಿತು. ಆ ಕಾರಣಕ್ಕಾಗಿ ಅವರೆಲ್ಲ ಬದುಕಿಕೊಂಡರು. ಇಷ್ಟಕ್ಕೂ ಭಾರತದ ಮೇಲೆ ಚೀನಾ ಏಕಾಏಕಿ ಈ ಕೊರೋನಾ ಕಾಲದಲ್ಲೇ ಯಾಕೆ ದಾಳಿ ಮಾಡಿದೆ ಗೊತ್ತಿದೆಯಾ?’’
‘‘ಇಲ್ಲ ಸಾರ್...’’ ಕಾಸಿ ಉತ್ತರಿಸಿದ.
‘‘ಭಾರತದ ಸತ್ತಂಜಲಿ ಸಂಸ್ಥೆ ಕಂಡು ಹುಡುಕಿದ ಕೊರೋನಾ ಔಷಧಿಯನ್ನು ವಶಪಡಿಸುವುದಕ್ಕಾಗಿಯೇ ಅವಸರವಸರವಾಗಿ ಭಾರತದ ಮೇಲೆ ಚೀನಾ ದಾಳಿ ಮಾಡುತ್ತಿದೆ....ಚೀನಾಕ್ಕೆ ತುರ್ತಾಗಿ ಈ ಔಷಧಿ ಬೇಕಾಗಿದೆ....ಚೀನಾವನ್ನು ಈ ಔಷಧಿಯ ಮೂಲಕವೇ ನಾವು ಗೆಲ್ಲಬಹುದು....’’ ಬೂಬಾ ಹೇಳಿದಾಗ ಕಾಸಿ ಬೆಚ್ಚಿ ಬಿದ್ದ.
‘‘ಹೌದಾ ಸಾರ್...? ಇದು ಗೊತ್ತೇ ಇರಲಿಲ್ಲ....ಚೀನಾವನ್ನು ಗೆಲ್ಲುವುದು ಹೇಗೆ ಸಾರ್?’’
‘‘ಸತ್ತಂಜಲಿ ಸಂಸ್ಥೆಯ ಎಲ್ಲ ಔಷಧಿಯನ್ನು ಸರಕಾರ ಕೊಂಡುಕೊಳ್ಳಬೇಕು...ಮತ್ತು ಅದನ್ನು ಯಾವ ಕಾರಣಕ್ಕೂ ಚೀನಾಕ್ಕೆ ಕೊಡಬಾರದು. ಆಗ ಚೀನಾದ ಎಲ್ಲರೂ ಔಷಧಿ ಸಿಗದೆ ಸಾಯುತ್ತಾರೆ....’’
‘‘ಕೊಂಡು ಕೊಂಡ ಔಷಧಿಯನ್ನು ಸರಕಾರ ಏನು ಮಾಡಬೇಕು?’’ ಕಾಸಿ ಅರ್ಥವಾಗದೆ ಕೇಳಿದ.
‘‘ಕೊಂಡು ಕೊಂಡ ಔಷಧಿಯನ್ನು ಈ ದೇಶದ ಎಲ್ಲ ವಲಸೆ ಕಾರ್ಮಿಕರಿಗೆ ಪುಕ್ಕಟೆಯಾಗಿ ನೀಡಬೇಕು....’’ ಬೂಬಾ ಸಲಹೆ ನೀಡಿದರು.
‘‘ನೀಡಿದರೆ?’’
‘‘ನೀಡಿದರೆ ಸರಕಾರಕ್ಕೆ ವಲಸೆ ಕಾರ್ಮಿಕರ ಸಮಸ್ಯೆ ಶಾಶ್ವತವಾಗಿ ಇಲ್ಲವಾಗುತ್ತದೆ....ಹಾಗೆಯೇ ದೇಶದಲ್ಲಿ ಕೊರೋನ ಸೋಂಕಿತರ ಸಮಸ್ಯೆಯೂ ಕಡಿಮೆಯಾಗುತ್ತದೆ. ಯಾಕೆಂದರೆ ಅವರೆಲ್ಲ ಅದಾಗಲೇ ಸತ್ತಿರುತ್ತಾರೆ....ಈ ಔಷಧಿಯಲ್ಲಿ ಪರೋಕ್ಷವಾಗಿ ಜನಸಂಖ್ಯಾ ಸ್ಫೋಟಕ್ಕೆ ಬೇಕಾದ ಔಷಧಿಯೂ ಇದೆ....’’ ಬೂಬಾ ರಮ್‌ದೇವ್ ವಿವರಿಸಿದರು.
‘‘ಸಾರ್...ನೀವು ಬಾಯಿಯ ಜೊತೆಗೆ ಕಣ್ಣಿಗೂ ಕಳ್ಳರು ಕಟ್ಟಿಕೊಳ್ಳುವ ಪಟ್ಟಿ ಕಟ್ಟಿಕೊಂಡಿದ್ದೀರಿ....ಇದು ಯಾಕೆ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡಿ...ಇದು ಸತ್ತಂಜಲಿ ಸಂಸ್ಥೆಯ ವಿಶೇಷ ಕಣ್ಣಿನ ಮಾಸ್ಕ್. ಈಗಾಗಲೇ ಈ ಔಷಧಿಯ ವಿರುದ್ಧ ಹಲವರು ದೂರು ನೀಡಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುವುದಕ್ಕೆ ಇದು ಅನುಕೂಲವಾಗುತ್ತದೆ...’’ ಬೂಬಾ ರಹಸ್ಯವನ್ನು ಸ್ಫೋಟಿಸಿದರು. ‘‘ಸಾರ್...ಈ ಔಷಧಿಯಿಂದ ಕೊರೋನ ಹೋಗಿಯೇ ಹೋಗುತ್ತದೆ ಎಂದು ನೀವು ಪ್ರಯೋಗಾಲಯದಲ್ಲಿ ಹೇಗೆ ನಿರೂಪಿಸಿದಿರಿ?’’ ಕಾಸಿ ನಿಜವಾದ ವಿಷಯಕ್ಕೆ ಬಂದ.
‘‘ನೋಡಿ...ಇದಕ್ಕಾಗಿ ನಾವು ಹಲವು ವರ್ಷ ಶ್ರಮಿಸಿದ್ದೇವೆ. ಮೊದಲು ಸತ್ತಂಜಲಿ ಕಂಪೆನಿಯಿಂದ ಸೋಪ್ ತಯಾರಿಸಿದೆವು. ದೇಶದ ಜನರ ಕೂದಲೇ ಹೋಯಿತು. ಆಮೇಲೆ ಟೂಥ್ ಪೇಸ್ಟ್ ತಯಾರಿಸಿದೆವು. ಆಗ ಜನರ ಹಲ್ಲೇ ಬಿದ್ದು ಹೋಯಿತು. ಆ ಆಧಾರದಲ್ಲಿ ಕೊರೋನ ಔಷಧಿ ಸೇವಿಸಿದರೆ ರೋಗ ಹೋಗದೇ ಇದ್ದರೂ ಸೇವಿಸಿದವರೇ ಹೋದರೆ ಪರೋಕ್ಷವಾಗಿ ರೋಗವೂ ಹೋದಂತೆಯೇ ಅಲ್ಲವೇ? ಆ ಮೂಲಕ ಸೋಂಕು ಹರಡುವುದನ್ನು ತಡೆದಂತಾಗುವುದಿಲ್ಲವೇ?’’ ಬೂಬಾ ತಮ್ಮ ತರ್ಕವನ್ನು ಮುಂದಿಟ್ಟರು.
‘‘ನಿಜ ಸಾರ್...’’ ಕಾಸಿ ಒಪ್ಪಿಕೊಂಡ.
‘‘ನಿಮಗೆ ಏಳುದಿನಕ್ಕಾಗುವಷ್ಟು ಔಷಧಿಯನ್ನು ಕೊಡಲೇ....’’ ಈಗ ಬೂಬಾ ಮೆಲ್ಲಗೆ ಕಾಸಿಯ ಕಿವಿಯ ಬಳಿ ಸಾರಿ ಕೇಳಿದರು.
ಅದನ್ನು ಕೇಳಿದ್ದೇ....ಪತ್ರಕರ್ತ ಕಾಸಿ ಬೂಬಾರವರ ಕಿಂಭೋ ಆ್ಯಪ್‌ನಲ್ಲಿ ಏಕಾಏಕಿ ಲೀನವಾಗಿ ಹೋದ.

Writer - ಚೇಳಯ್ಯ, chelayya@gmail.com

contributor

Editor - ಚೇಳಯ್ಯ, chelayya@gmail.com

contributor

Similar News